ಗುರುಪ್ರಸಾದವೆಂಬಿರಿ
ಲಿಂಗಪ್ರಸಾದವೆಂಬಿರಿ
ಅಚ್ಚಪ್ರಸಾದವೆಂಬಿರಿ
ಭರಿತಬೋನವೆಂಬಿರಿ. ಗುರುಪ್ರಸಾದವೆಂಬುದನು ಲಿಂಗಪ್ರಸಾದವೆಂಬುದನು ಅಚ್ಚಪ್ರಸಾದವೆಂಬುದನು ಭರಿತಬೋನವೆಂಬುದನು ಅರಿವವರು ನೀವು ಕೇಳಿರೆ; ಶ್ರೀಗುರುಕಾರುಣ್ಯವುಳ್ಳ ಶಿವಭಕ್ತರು ಆ ಶ್ರೀಗುರುಲಿಂಗಕ್ಕೆ ತನುಕ್ರೀಯಿಂದ ಪಾದಾರ್ಚನೆಯ ಮಾಡಿ ಪಾದತೀರ್ಥಮಂ ಕೊಂಡು
ಷಡುಸಮ್ಮಾರ್ಜನೆಯ ಮಾಡಿ ರಂಗವಾಲಿಯನಿಕ್ಕಿ
ಶ್ರೀಗುರುವ ಲಿಂಗಾರ್ಚನೆಗೆ ಕುಳ್ಳಿರಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರವಂ ಮಾಡಿ ಪುರುಷಾಹಾರ ಪ್ರಮಾಣಿನಿಂದ ನೀಡಿ
ತೆರಹು ಮರಹಿಲ್ಲದೆ ಆ ಶ್ರೀಗುರುವಾರೋಗಣೆಯಂ ಮಾಡಿದ ಬಳಿಕ ಹಸ್ತಮಜ್ಜನಕ್ಕೆರೆದು
ಒಕ್ಕುಮಿಕ್ಕುದ ಕೊಂಡುಂಬುದು ಗುರುಪ್ರಸಾದ. ಇಂತಲ್ಲದೆ ಕೈಯೊಡ್ಡಿ ಬೇಡುವಾತ ಗುರುದ್ರೋಹಿ
ಕೈ ನೀಡಿದಡೆ ಇಕ್ಕುವಾತ ಶಿವದ್ರೋಹಿ. ಇನ್ನು ಲಿಂಗಪ್ರಸಾದವನರಿವ ಪರಿ; ಹಿಂದಣ ಪರಿಯಲಿ ಪುರುಷಾಹಾರ[ವ] ಪ್ರಮಾಣಿನಿಂದ ತೆರಹು ಮರಹಿಲ್ಲದೆ ಭರಿತಬೋನವಾಗಿ ಗಡಣಿಸಿ
ತಟ್ಟುವ ಮುಟ್ಟುವ ಮರ್ಮವನರಿತು
ಸಂಕಲ್ಪ ವಿಕಲ್ಪವಿಲ್ಲದೆ ಭಾವಶುದ್ಧನಾಗಿ
ಏಕಚಿತ್ತದಿಂದ ಮನಮುಟ್ಟಿ ಲಿಂಗಕ್ಕೆ ನೈವೇದ್ಯಮಂ ತೋರಿ
ಸೀತಾ?ಮಂ ಕೊಟ್ಟು
ಸೆಜ್ಜೆಯರಮನೆಗೆ ಬಿಜಯಂಗೈಸಿಕೊಂಡು ಪಂಚೇಂದ್ರಿಯ ಸಪ್ತಧಾತು ತೃಪ್ತರಾಗಲ್ಕೆ
ಪ್ರಸಾದಭೋಗವಂ ಮಾಡುವುದು ಲಿಂಗಪ್ರಸಾದ. ಅಖಂಡಿತವಾದಡೆ ಇರಿಸಿ ಲಿಂಗಪ್ರಸಾದಿಗಳಿಗೆ ಕೊಡುವುದು. ಕೊಡದೆ ಛಲಗ್ರಾಹಕತನದಲ್ಲಿ ಕೊಂಡು ಒಡಲ ಕೆಡಿಸಿಕೊಂಡಡೆ ಪಂಚಮಹಾಪಾತಕ. ಅವನ ಮುಖವ ನೋಡಲಾಗದು ಕೂಡಲಚೆನ್ನಸಂಗಯ್ಯ.