ಗುರುವಾದಡೂ ತನ್ನ ಶಿಷ್ಯನ ಕೈಯ(ಕೈಯಿಂದ?) ಜಂಗಮಕ್ಕೆ ಸೇವೆಯ ಮಾಡಿಸದೆ
ತಾ ಮಾಡಿಸಿಕೊಂಡನಾದಡೆ ಶ್ವಾನ ಒಡಲ ಹೊರೆದಂತೆ. ಅದು ಹೇಗೆಂದಡೆ; ತನ್ನ ಲಿಂಗವನಾ ಶಿಷ್ಯಂಗೆ ಕೊಟ್ಟು
ತಾನು ವ್ರತಗೇಡಿಯಾಗಿ ಹೋಹಲ್ಲಿ
ಆ ಜಂಗಮವೆ ಸಾಕ್ಷಿಯಾಗಿರ್ದು ವಿಭೂತಿವೀಳೆಯವ ತೆಗೆದುಕೊಂಡು ಗುರು ಶಿಷ್ಯರಿಬ್ಬರ ಪೂರ್ವಾಶ್ರಯವ ಕಳೆದರಾಗಿ
ಆ ಜಂಗಮಕ್ಕೆ ಮಾಡಿಸುವುದು. ಗುರುವಾದಡಾಗ ಲಿಂಗವಾದಡಾಗಲಿ ಜಂಗಮ ತಾನಾದಡೂ ಆಗಲಿ ಜಂಗಮ ಪಾದೋದಕ ಪ್ರಸಾದವಿಲ್ಲದವರನೊಲ್ಲೆನೊಲ್ಲೆ. ಅವರು ಬರುಕಾಯರೆಂಬೆ
ಬರುಮುಖಿಗಳೆಂಬೆ
ಅಂಗಹೀನರೆಂಬೆ ಲಿಂಗಹೀನರೆಂಬೆ. ಜಂಗಮದಲ್ಲಿ ಗುಣವ ನೋಡದೆ
ಅವಗುಣವ ನೋಡದೆ ರೂಪವ ನೋಡದೆ
ನಿರೂಪವ ನೋಡದೆ
ಕೋಪವ ನೋಡದೆ
ಶಾಂತವ ನೋಡದೆ
ವಿವೇಕವ ನೋಡದೆ
ಅವಿವೇಕವ ನೋಡದೆ
ಮಲಿನವ ನೋಡದೆ
ಅಮಲಿನವ ನೋಡದೆ
ರೋಗವ ನೋಡದೆ
ನಿರೋಗವ ನೋಡದೆ
ಕುಲವ ನೋಡದೆ
ಛಲವ ನೋಡದೆ
ಆಶೆಯ ನೋಡದೆ
ನಿರಾಶೆಯ ನೋಡದೆ
ಅಂಗದ ಮೇಲಣ ಲಿಂಗವನೆ ನೋಡಿ
ಜಂಗಮಕ್ಕೆ ಮಾಡಿ ನೀಡಿ
ಪಾದೋದಕ ಪ್ರಸಾದವ ಕೊಂಬ ಶರಣನ ಬಸವಣ್ಣನೆಂಬೆ ಕಾಣಾ ಕೂಡಲಚೆನ್ನಸಂಗಮದೇವಾ.