ಗುರು ಪಾದವ ತನ್ನ ಕರದಲ್ಲಿ ಧರಿಸಿ
ಗುರು ಮುದ್ರೆಗಳ ತನ್ನಂತರಂಗ ಬಹಿರಂಗದಲ್ಲಿರಿಸಿ
ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದವ ನಿರಂತರ ಸಾವಧಾನಿಯಾಗಿ ಕೊಂಡು ಕೃತಾರ್ಥರಾಗಲರಿಯದೆ
ಮತ್ತೆ ಬೇರೆ ಗುರುಚರ ಪರದೈವಂಗಳ ದಂಡ ಕಮಂಡಲ ಕಂಥೆ ಕಕ್ಷದಾರ ಭಿಕ್ಷಾಪಾತ್ರೆ ಹಾವುಗೆ ತೀರ್ಥಕುಂಭ ಭಸ್ಮದುಂಡೆ ಎಂಬಿವು ಆದಿಯಾದ ಮುದ್ರೆ ಧಾರಣ ದ್ರವ್ಯ ಪಾದೋದಕಂಗಳ ಗದ್ದುಗೆಯ ಪೂಜೆಯ ಬೋಳುಕರಂತೆ ಇದಿರಿಟ್ಟು ಆರಾಧಿಸುವ ಅನಾಚಾರಿಗಳಿಗೆ ಗುರುವಿಲ್ಲ
ಲಿಂಗವಿಲ್ಲ
ಜಂಗಮವಿಲ್ಲ
ಪಾದೋದಕವಿಲ್ಲ
ಪ್ರಸಾದವಿಲ್ಲ. ಇಂತೀ ಪಂಚಾಚಾರಕ್ಕೆ ಹೊರಗಾದ ಪಾತಕರನು ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವ