ತಾಪತ್ರಯಾದಿಗಳಳಿಯವು; ಕೋಪ ಮೋಹಾದಿಗಳ ಸುಟ್ಟುರುಹಲರಿಯರು; ಅಷ್ಟಮದಂಗಳ ಹಿಟ್ಟುಗುಟ್ಟಲರಿಯರು. ಬಟ್ಟಬಯಲ ತುಟ್ಟಿ ತುದಿಯಣ ಮಾತನೇಕೆ ನುಡಿವಿರಣ್ಣ? ಕರಕಷ್ಟ ಕರಕಷ್ಟ ಕಾಣಿಭೋ! ಇಂದ್ರಿಯಂಗಳ ಮುಸುಕುನುಗಿಯದೆ ವಿಷಯಂಗಳ ಶಿರವನರಿಯದೆ ಕರಣಂಗಳ ಕಳವಳವ ಕೆಡಿಸದೆ ಕರ್ಮೇಂದ್ರಿಯಂಗಳ ಮೂಲದ ಬೇರ ಕಿತ್ತು ಭಸ್ಮವ ಮಾಡದೆ ಕಷ್ಟಕಾಮನ ನಷ್ಟವ ಮಾಡಲರಿಯದೆ ಲಿಂಗನಿಷ*ರೆಂಬ ಕಷ್ಟವನೇನೆಂಬೆನಯ್ಯ? ಮೃತ್ಯುಗಳ ಮೊತ್ತವ ಕಿತ್ತೆತ್ತಿ ಕೆದರದೆ ಸತ್ವರಜತಮಂಗಳ ನಿವೃತ್ತಿಯ ಮಾಡದೆ ನಿತ್ಯ ನಿಶ್ಚಿಂತ ನಿರ್ಮಲರೆಂಬ ಕಷ್ಟಯೋಗಿಗಳನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.