೧೨

ವೆಂಕಟರಾಯರು ಮನೆ ಮಾಡಿದರು ಕೊನೆಗೊಮ್ಮೆ .. ದೊಡ್ಡ ಸಂಸಾರ. ಹಿರಿಯ ಮಗನಿಗೆ ಕೆಲಸ ದೊರೆತಿತ್ತು. ಅನಂತರದ ಮಗಳು ಗಂಡನ ಮನೆಗೆ ಹೋಗಿದ್ದಳು. ಉಳಿದವರಿಬ್ಬರು ಮೈಸೂರಿನ ಕಾಲೇಜಿನಲ್ಲಿ ಓದುತಿದ್ದರು. ಅವರಾದ ಮೇಲೆ ನಡುವೆ ಅಂತರವಿದ್ದ ಹಾಗೆ ತೋರಿತು-ಸಾವಿನ ಸರ್ಪ ಫೂತ್ಕರಿಸಿ ನಿರ್ಮಿಸಿದ್ದ ಅಂತರ. ಅದರ ಬಳಿಕ, ನಾಲ್ವರು ಮಕ್ಕಳಿದ್ದರು-ಅವರಲ್ಲಿ ಮೂವರು ಹುಡುಗಿಯರು. ಕೊನೆಯದಿನ್ನೂ ಅಂಬೆಗಾಲಿಡುತಿದ್ದ ಹಸುಳೆ, ಇಷ್ಟು ಸಾಲದೆಂದು ವೆಂಕಟರಾಯರ ಕೈ ಹಿಡಿದ ಆ ಮಹಾತಾಯಿ ಮತ್ತೆ ಗರ್ಭಿಣಿಯಾಗಿದ್ದಳು. ಗಂಡನ ಮನೆಗೆ ಹೋದ ಮಗಳಿಗೂ ಈ ತಾಯಿಗೂ ಏಕಕಾಲದಲ್ಲೇ ಪ್ರಸವವಾಗುವ ಸನ್ನಿವೇಶ.

ಸಾಮಾನ್ಯವಾಗಿ ಇಷ್ಟೊಂದು ಸಂಸಾರ ಭಾರದ ನೊಗ, ಎಂತಹ ಹೋರಿಯನ್ನಾದರೂ ಬಡಕಲು ಗೊಳಿಸಲೇಬೇಕು. ಆದರೆ ವೆಂಕಟರಾಯರು ಅದಕ್ಕೆ ಅಪವಾದವಾಗಿದ್ದರು.

ಅವರೇನೂ ಆಸ್ತಿವಂತರಾಗಿರಲಿಲ್ಲ, ಬರುತ್ತಿದ್ದುದಂತೂ 'ಹೊಟ್ಟೆಗಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲ.' ಎನ್ನುವಂತಹ ಅಲ್ಪ ಸಂಬಳ. ಆದರೂ ಈ ಸಂಸಾರ ರಥ ಸಾಗಿದ್ದ ರೀತಿ ಸೋಜಿಗದ ವಿಷಯವೇ ಆಗಿತ್ತು.

ಆದರೆ ದಿನ ಕಳೆದಂತೆ ಜಯದೇವನಿಗೆ ಹೊಸ ಮುಖ್ಯೋಪಾಧ್ಯಾಯರ ಜೀವನ ಕ್ರಮದ ನಿಜ ಪರಿಚಯವಾಗತೊಡಗಿತು.

ಊರಲ್ಲಿ ಶ್ರೀಮಂತರು ಯಾರಾದರೂ ಕಾಹಿಲೆ ಬಿದ್ದರೆ ವೆಂಕಟರಾಯರು, ಆ ರೋಗವನ್ನು ಗುಣಪಡಿಸಬಲ್ಲ ಮೈಸೂರಿನ ಒಬ್ಬರೇ ಒಬ್ಬರಾದ ನಿಷ್ಣಾತ ಡಾಕ್ಟರರ ಹೆಸರು ಹೇಳುತಿದ್ದರು. ಪರಿಚಯದ ಕಾಗದ ದೊಡನೆ ಕಳುಹಿಸಿ ಕೊಡುತಿದ್ದರು.

ಊರಲ್ಲಿ ಯಾವುದಾದರೂ ಲೇವಾದೇವಿ-ವ್ಯವಹಾರ ನಡೆದು ರಂಪವಾದರೆ, ಹೆಚ್ಚು ಹಣವಂತರಾದವರನ್ನು ಕರೆದು, ಬೆಂಗಳೂರಿನ ಪ್ರಮುಖ ಲಾಯರೊಬ್ಬರನ್ನು ಕಂಡು ಬರುವಂತೆ ಸಲಹೆ ಮಾಡುತಿದ್ದರು.

ಈ ಪರೋಪಕಾರದಿಂದ ಅವರಿಗೂ ಲಾಭವಿದ್ದುದು ಸ್ಪಷ್ಟವಾಗಿತ್ತು.

ವಿದ್ಯಾರ್ಥಿಗಳಿಗಲ್ಲದೇ ಹೋದರೂ ವೆಂಕಟರಾಯರು ಬೇಗನೆ ಊರಿನವರಿಗೆ ಬೇಕಾದವರಾದರು. ಬ್ರಾಹ್ಮಣರು ಕೆಲವರ ದೃಷ್ಟಿಯಲ್ಲಿ ಅವರು, 'ಸಮರ್ಥನಾದ ಸ್ವಜಾತಿ ಬಾಂಧವ' ಬೇರೆ ಹಲವರ ದೃಷ್ಟಿಯಲ್ಲಿ– ಬಾಹ್ಮಣನಾದರೂ ಒಳ್ಳೆ ನಂಬಿಗಸ್ಠ' ಹೀಗೆಲ್ಲಾ ಒಂದೆಳೆ ಹಗ್ಗದ ಮೇಲೆ ಒಂಟಿ ಕಾಲಿನಲ್ಲಿ ನಿಂತು ಡೊಂಬರಾಟವಾಡಲು ಅಸಾಮಾನ್ಯವಾದ. ಬುದ್ಧಿವಂತಿಕೆ ಅಗತ್ಯವಿತ್ತು ಅದನ್ನು ಸಾಧಿಸಿಕೊಂಡಿದ್ದ ವೆಂಕಟರಾಯರಿಗೆ ಜೀವನ ನಿರ್ವಹಣ ದೊಡ್ಡ ಸಮಸ್ಯೆಯಾಗಿರಲಿಲ್ಲ.

ತರಗತಿಗಳಲ್ಲಿ ದಡ್ಡರಾಗಿದ್ದ ಹುಡುಗರೇನಾದರೂ ಶ್ರೀಮಂತರಾಗಿದ್ದರೆ ಅವರ ಮನೆಗಳಿಂದ ತರಕಾರಿ ಹಣ್ಣುಹಂಪಲು ಅದು-ಇದು, ಬರುತಿದ್ದುವು.

ಅಷ್ಟರಲ್ಲೆ ಚಿಕ್ಕ! ಪರೀಕ್ಷೆ ಹತ್ತಿರ ಬಂತು. ಒಮ್ಮೆಲೆ ಮುಖ್ಯೋಪಾಧ್ಯಾಯರು, ರಂಗರಾಯರ ಆಡಳಿತದ ಕಾರಣದಿಂದಾಗಿ ವಿದ್ಯಾರ್ಥಿಗಳ ಮಟ್ಟ ಏನೇನೂ ತೃಪ್ತಿಕರವಾಗಿಲ್ಲ ಎಂಬ ಅಂಶವನ್ನು ಕಂಡು ಹಿಡಿದರು. ಅವರ ಮನಸ್ಸಿನಲ್ಲಿ ಏನಿತ್ತೆಂಬುದು ಮೊದಮೊದಲು ಜಯದೇವನಿಗೆ ಗೊತ್ತಾ ಗಲಿಲ್ಲ, ನಂಜುಂಡಯ್ಯನೊಬ್ಬನೇ ತಮ್ಮೊಳಗೆ ನಕ್ಕು ಸಿಗರೇಟು ಸುಟ್ಟರು.

“ನಮ್ಮನೇಲಿ ಮೂರನೆ ಮತ್ತು ನಾಲ್ಕನೆ ತರಗತಿ ಹುಡುಗರಿಗೆ ಎರಡು ಸ್ಪೆಷಲ್ ಕೋಚಿಂಗ್ ಕ್ಲಾಸು ಇಟ್ಟುಕೊಳ್ಳೋಣಾಂತ ಮಾಡಿದೀನಿ” ಎಂದು ವೆಂಕಟರಾಯರು ಕೆಲವು ದಿನಗಳಲ್ಲಿ ಆಫೀಸು ಕೊಠಡಿಯಲ್ಲಿ ಜಾಹೀರು ಮಾಡಿದರು.

ಹೊಗೆಯುಗುಳಿ ನಸು ನಕ್ಕರು ನಂಜುಂಡಯ್ಯ;

“ನಿಮ್ಮ ಸಹನೆ ಮೆಚ್ಚಬೇಕಾದದ್ದೆ. ಖಂಡಿತವಾಗಿ ಮಾಡಿ ಸಾರ್. ನನಗೆ ಮಾತ್ರ, ಪ್ರತ್ಯೇಕ ಪಾಠ ಹೇಳ್ಕೊಡೋದೂಂದ್ರೆ ತಲೆನೋವು.”

“ಮೊದಲ್ನೆ ಎರಡ್ನೆ ತರಗತಿ ಹುಡುಗರು ಯಾರಾದ್ರೂ ಬೇಕು ಅಂದ್ರೆ ನೀವೂ ಒಂದೆರಡು ಪಾಠ ಇಟ್ಟೊಳ್ಳಿ ಜಯದೇವ.”

ಜಯದೇವ ತಲೆದೂಗಿ ಸುಮ್ಮನಾದ. ಇದು ವಿಶೇಷ ಸಂಪಾದನೆಯ ಮಾರ್ಗವೆಂಬುದು ಅವನಿಗೆ ತಿಳಿಯಿತು. ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕು ದೊರೆಯಬೇಕಾದರೆ, ಇಲ್ಲವೆ ತೇರ್ಗಡೆಯಾದರೂ ಆಗಬೇಕಾದರೆ, ಅ ಉಪಾಧ್ಯಾಯರಿಂದಲೇ ಪಾಠ ಹೇಳಿಸಿಕೊಳ್ಳಬೇಕು. .. ಹುಡುಗರು ಖಾಸಗಿಯಾಗಿ ಪಾಠ ಹೇಳಿಸಿಕೊಳ್ಳುವಂತೆ ಮಾಡಬೇಕಾದರೆ, ತರಗತಿಯಲ್ಲಿ ಚೆನ್ನಾಗಿ ಹೇಳಿಕೊಡಬಾರದು! ಶಾಲೆಯಲ್ಲಿ ದೊರೆಯುವ ಸಂಬಳಕ್ಕಿಂತಲೂ ಹೆಚ್ಚನ್ನು ಖಾಸಗಿ ಪಾಠಗಳಿಂದಲೇ ಸಂಪಾದಿಸುವ ಉಪಾಧ್ಯಾಯರೆಷ್ಟೊಂದು ಜನರಿಲ್ಲ!...ಜಯದೇವ ಇಂಟರ್ ಓದುತಿದಾಗ ಲೊಮ್ಮೆ ನಾಲಾರು ಹುಡುಗರ ಮುಂದೆ ಭೌತಶಾಸ್ತ್ರದ ಪ್ರಾಧಾಪಕರು ನಗೆಯಾಡುತ್ತ ಹೇಳಿದ್ದರು: ನಾವೆಲ್ಲ ನಿಶಾಂತಿ ತಗೋಳೋಕೆ ಇಲ್ಲಿಗೆ ಬಲ್ತಿವಿ. ನಾವು ಪಾಠ ಹೇಳೋದೆಲಾ ಕಾಸಿಗೆ ಬರೋಕುರಿಚೆ ಮತು శాసు నెుగిడిల్."

ಹಿಂದೆ ಜಯದೇವನೂ ಖಾಸಗಿಯಾಗಿ ಪಾಠ ಹೇಳಿಕೊಟ್ಟುದಿತ್ತು. ಆದರೆ ಶಾಲಾ ಉಪಾಧ್ಯಾಯಸಾಗಿ ಆತ ಹಾಗೆ ಮಾಡಿರಲಿಲ್ಲ.

ವೆಂಕಟರಾಯರಾದರೋ ತಾತ್ವಿಕ ಮಟ್ಟದಲ್ಲೇ ಇದ್ದರು :

“ವಿದ್ಯಾರ್ಥಿಗಳ ಸಂಖ್ಯೆ ಬೆಳೀತಾ ಇದೆ. ವೈಯಕ್ತಿಕವಾಗಿ ಒಬ್ಬೊಬ್ಬ ವಿದ್ಯಾರ್ಥಿಯ ವಿಷಯದಲ್ಲೂ ಗಮನ ಕೊಡೋದಕ್ಕೆ ಆಗೋದೇ ಇಲ್ಲ.”

“ಹೌದು, ಹೌದು."

ಆದರೆ ಅದಕ್ಕಿದ್ದ ಪರಿಹಾರವೇನು? ಹಣದ ದೃಷ್ಟಿಯಿಂದ ನಡೆಯುವ ಮನೆ-ಪಾಠಗಳೆ ?

ಹುಡುಗರೇನೋ ಬಂದು ಜಯದೇವನನ್ನು ಕೇಳಿದರು :

“ಸಾರ್, ಟ್ಯೂಷನ್ ಹೇಳ್ಕೊಡೋಕೆ ಆಗುತ್ಯೆ ಸಾರ್?”

“ನನಗೆ ಪುರಸತ್ತಿಲ್ಲ, ಕ್ಲಾಸ್ನಲ್ಲೇ ಕೇಳಿ, ಹೇಳ್ತೀನಿ. ಬೇಕಾದ್ರೆ ಶಾಲೆ ಬಿಟ್ಮೇಲೆ ಇಲ್ಲೇ ಕೇಳಿ."

...ಮಧಾಹ್ನದ ಬಿಡುವಿನಲ್ಲಿ ನಾಲ್ಕನೆ ತರಗತಿಯ ಪ್ರಭಾಮಣಿ ಬಂದಳು-ಪ್ರತಿಭಾವಂತೆ. ಅವಳಿಗೇನೂ ಮನೆ-ಪಾಠ ಬೇಕಾಗಿರಲಿಲ್ಲ. ಆದರೆ...

“ಮನೇಗ್ಬಂದು ಪಾಠ ಹೇಳ್ಕೊಡೋಕೆ ಆಗುತ್ಯೆ ಅಂತ ಇಂದಿರಾನ ತಾಯಿ ಕೇಳಿದ್ದು ಸಾರ್.”

ಇಂದಿರಾ–ದೊಡ್ಡ ಹುಡುಗಿ. ಆಕೆಯ ನೋಟದೆದುರು ಹಲವೊಮ್ಮೆ ಜಯದೇವ ಅಧೀರನಾಗಿದ್ದ, ಹಾಜರಿ ಪುಸ್ತಕದಲ್ಲಿ ಹುಡುಗಿಯರ ಹೆಸರುಗಳನ್ನು ಓದಬೇಕಾಗಿ ಬಂದಾಗಲೂ ಅಷ್ಟೆ, ಇಂದಿರೆಯ ಹೆಸರಿದ್ದುದು ಕೊನೆಯಲ್ಲಿ. 'ಪಿ.ಇಂದಿರಾ' ಎಂದು ಕರೆದರೂ ತಲೆಯೆತ್ತಿ ಆಕೆಯನ್ನು ನೋಡುತ್ತಿರಲಿಲ್ಲ. ಸ್ವರ ಕೇಳಿದೊಡನೆ ಹಾಜರಿಯ ಗುರುತು ಹಾಕುತಿದ್ದ. ಉತ್ತರ ಬರದೇ ಇದಾಗ ಮಾತ್ರ ತಲೆಯೆತ್ತಿ ಕೇಳುತಿದ್ದ:

“ಯಾಕ್ಟಂದಿಲ್ಲ? ರಜೆ ಅರ್ಜಿಯಾದರೂ ಕಳಿಸ್ಬಾರ್ದೆ?"

ಈಗ ಅದೇ ಹುಡುಗಿಯ ತಾಯಿ ಹೇಳಿ ಕಳುಹಿಸಿದ್ದರು:

“ನಮ್ಮ ಮನೆಗೆ ಬಂದು ಪಾಠ ಹೇಳಿ ಕೊಡಬಹುದೇ?"

ಆ ವರೆಗೂ ಪುರಸೊತ್ತಿಲ್ಲವೆನ್ನುತ್ತ ಬಂದಿದ್ದ ಜಯದೇವನ ಮನಸ್ಸು ಹೇಳಿತು:

ಒಪ್ಪಿಕೋ....ಒಪ್ಪಿಕೋ....

ಮನಸಿನೊಳಗೆ ಕ್ಷಣಕಾಲ ನಡೆದ ದ್ವಂದ್ವ, ಆ ವಿಚಾರಗಳ ನಡುವೆ ಸುನಂದೆಯ ಮುಖ ಕಾಣಿಸುತಿತ್ತು... ವಯಸ್ಸಿನಲ್ಲಿ ದೊಡ್ಡವಳಾಗಿದ್ದ ಹುಡುಗಿಯೊಬ್ಬಳಿಗೆ ಪಾಠ ಹೇಳಿಕೊಡುವ ಅವಕಾಶ.. ಆ ಸಾಮಿಪ್ಯ.. ಇಂದಿರೆಯ ಚಂಚಲ ದೃಷ್ಟಿ... ... ಜಯದೇವನ ಮನಸು ಕುತೂಹಲಿಯಾಗಿತ್ತು, ಅದೊಂದು ಪ್ರಯೋಗ–ಒಪ್ಪಿಕೊ, ಎನ್ನುತಿತ್ತು. ಜತೆಯಲ್ಲೆ, ಹುಡುಗಿಗೆ ಪಾಠ ಹೇಳಿಕೊಡಲು ಹಿಂಜರಿಯುವ ತಾನೇನು ಹಳೆಯ ಕಾಲದ ಮಡಿ ಸಂಪ್ರದಾಯವಂತನೆ–ಎಂದು ಪ್ರಶ್ನಿಸಿತು. ಆದರೆ ಆತನ ಒಳದೃಷ್ಟಿ ಸುನಂದೆಯ ಮುಖವನ್ನೇ ನಿರೀಕ್ಷಿಸುತ್ತಾ 'ಏನು ಮಾಡಲಿ?” ಎಂದು ಕೇಳುತಿತ್ತು. ಆಕೆ ಮಾತ್ರ ಮೌನವಾಗಿದ್ದಳು. ಮುಗ್ದ ತುಟಿಗಳು ಅರಳದ ಮೊಗ್ಗುಗಳಾಗಿ ಬಿಗಿದುಕೊಂಡು ಸುಮ್ಮನಿದ್ದರೂ ಕಣ್ಣುಗಳು ನಗುತಿದ್ದುವು.

ಪ್ರಭಾಮಣಿಗೆ ತಿಳಿಯದಂತೆಯೇ ನಿಟ್ಟುಸಿರು ಬಿಟ್ಟ ಜಯದೇವನೆಂದ:

“ನನಗೆ ಬಿಡುವೇ ಇಲ್ಲ ಪ್ರಭಾ, ಅಲ್ದೆ, ನಾಲ್ಕನೆ ತರಗತಿಯವರಿಗೆ ಹೆಡ್ಮಷ್ಟೇ ಕೋಚಿಂಗ್ ಕಾಸ್ ತಗೋತಾರೆ.”

“ಅದು ಅವರ್ಮನೇಲಿ. ಅಲ್ಲಿಗೆಲ್ಲಾ ಇಂದಿರಾನ ಕಳಿಸಿಕೊಡಲ್ವಂತೆ. ನೀವು ಅವರ ಮನೆಗೇ ಬಂದು ಪಾಠ ಹೇಳ್ಬೇಕಂತೆ. ನೀವು ಕೇಳಿದ ಫೀಸು ಕೊಡ್ತಾರಂತೆ. ಸಾಧ್ಯವೆ ಸಾರ್? ಕೂಗ್ಲಾ, ಇಂದಿರಾನ?”

“ಬೇಡ ಪ್ರಭಾ, ನಿಜವಾಗ್ಲೂ ನನಗೆ ಪುರಸತ್ತಿಲ್ಲ.”

“ಯಾಕೆ, ನೀವೂ ಪರೀಕ್ಷೆ ಕಟ್ಟಿದೀರಾ ಸಾರ್?”

“ಹೂ೦..ಹೂಂ.. ಪರೀಕ್ಷೆ ಕಟ್ಟಿದೀನಿ.”

ತುಂಟ ಹುಡುಗಿ ಪ್ರಭಾಕೇಳಿದಳು :

“ಎಷ್ಟು ರೂಪಾಯಿ ಪರೀಕ್ಷೆ ಸಾರ್?”

“ಎಷ್ಟು ರೂಪಾಯಿದ್ದೂಂತ ಹೇಳೋ ಹಾಗೇ ಇಲ್ಲ ಪ್ರಭಾ!”

ಹೆಚ್ಚು ತಡವಿಲ್ಲದೆ ವೆಂಕಟರಾಯರ ವಿಶೇಷ ತರಗತಿಗಳು ಆರಂಭ ವಾದುವು. ಜಯದೇವ ಮಾತ್ರ ಸುಮ್ಮನಿದ್ದ.

ನಂಜುಂಡಯ್ಯ ಕೆದಕಿ ಕೇಳಿದರು:

“ನಿಮ್ಮದು ಬರೇ ಆದರ್ಶವಾದ ಜಯದೇವ.”

“ಇದ್ದೀತು.”

“ಈ ರೀತಿಯ ಮನೆಪಾಠಗಳಿಂದ ವಿದ್ಯಾಭ್ಯಾಸ ಪದ್ಧತಿ ಸುಧಾರಿಸೋದಿಲ್ಲ ಅನ್ನೋದು ನಿಮ್ಮ ಅಭಿಪ್ರಾಯ, ಅಲ್ವೇ?”

"ಹೌದು ಸಾರ್."

“ಹಾಗಾದ್ರೆ ಇಂಥ ಪರಿಸ್ಮಿತೀಲಿ ನೀವು ಯಾಕೆ ಉಪಾಧ್ಯಾಯರಾದಿರಿ ಹೇಳಿ?"

“ಈ ಪ್ರಶ್ನೆಗೆ ಉತ್ತರ ಸುಲಭವಲ್ಲ.”

ನಂಜುಂಡಯ್ಯ ಸಿಗರೇಟು ಹಚ್ಚಿ ಹೊಗೆಯನ್ನೆ ದಿಟ್ಟಿಸುತ್ತಾ ಯೋಚಿಸಿ ಹೇಳಿದರು:

“ನಿಮ್ಮ ಮನಸ್ನಲ್ಲಿ ಏನಿದೆ ಅನ್ನೋದನ್ನ ನಾನು ಬಲ್ಲೆ. ನನ್ನ ಅಭಿಪ್ರಾಯವೂ ನಿಮ್ಮ ಅಭಿಪ್ರಾಯವೂ ಒಂದೇ ಎಂದರೆ ನಿಮಗೆ ಆಶ್ಚರ್ಯವಾದರೂ ಆದೀತು.”

ಜಯದೇವನಿಗೆ ಆಶ್ಚರ್ಯವಾಗದೆ ಇರಲಿಲ್ಲ. ಅವನ ಮುಖ ಮುದ್ರೆಯನ್ನು ಗಮನಿಸಿ ನಂಜುಂಡಯ್ಯ ಮಾತು ಮುಂದುವರಿಸಿದರು.

“ಆದರೆ ಇದೆಲ್ಲಾ ಸುಧಾರಣೆಯಾಗೋದು ಸಾಧ್ಯವೇ ಇಲ್ಲಾಂತ ನನ್ನ ಅಭಿಪ್ರಾಯ. ಉಪಾಧ್ಯಾಯ ಸಂತೃಪ್ತ ಜೀವಿಯಾಗಿ ಇರ್ಬೇಕಾದ್ದು ಮೊದಲನೇದು, ಈಗ ಸಿಗೋ ಅಲ್ಪ ವೇತನದಲ್ಲಿ ಅದು ಹೇಗೆ ಸಾಧ್ಯ? ದುಡ್ಡಿಲ್ಲ-ಅನ್ನುತ್ತೆ ಸರಕಾರ, ಹಾಗಾದರೆ ಉಪಾಧ್ಯಾಯನಾದ ಮನುಷ್ಯ ಉಪವೃತ್ತಿ ಇಟ್ಟುಕೊಳ್ಲೇಬೇಕು. ಪರಿಣಾಮ ಗೊತ್ತೇ ಇದೆ.ಈಗ ನಿಮ್ಮ ವಿಷಯಾನೇ ತಗೊಳ್ಳಿ. ನೀವು ಒಬ್ಬಂಟಿಗ. ಸಾಯೋವರೆಗೂ ಹೀಗೇ ಇರ್ತೀರೇನು? ನಾಳೆ ಮದುವೆ ಆಗ್ತೀರ, ಆಗ ಎಲ್ಲಿಗೆ ಸಾಕು ನಿಮಗೆ ಬರೋ ೪೦+೧೫. ಆಗ್ಲೂ ಟ್ಯೂಷನ್ ಒಲ್ಲೇಂತ ಹಟ ತೊಡ್ರೀರೇನು?

ಜಯದೇವನಿಂದ ಉತ್ತರವನ್ನು ನಿರೀಕ್ಷಿಸಿ ನಂಜುಂಡಯ್ಯ ಮಾತು ತಡೆದರು. ಅನುಭವ ಅವರ ಬಾಯಲ್ಲಿ ಸತ್ಯಾಂಶವನ್ನೇ ನುಡಿಸಿತ್ತು, ಅದನ್ನು ಜಯದೇವ ಅಲ್ಲಗಳೆಯುವುದು ಸಾಧ್ಯವಿತ್ತೆ ? ಆತ ನಿರುತ್ತರನಾದುದನ್ನು ಕಂಡು ಸಂತೋಷಪಡುತ್ತ ನಂಜುಂಡಯ್ಯನೆಂದರು.

“ನನ್ನ ವಿಷಯವೇ ತಗೊಳ್ಳಿ, ನನಗೇನೋ ಆಸ್ತಿಪಾಸ್ತಿ ಇದೆ. ಈ ಸಂಬ೪ಾನ ನಾನು ನೆಚ್ಕೊಬೇಕಾದ್ದಿಲ್ಲ, ಆದರೆ ನಾಳೆ ದಿವಸ ನಾವು ಖಾಸಗಿಯಾಗಿ ಹೈಸ್ಕೂಲು ಷುರು ಮಾಡ್ದಾಗ? ನಾನು ಗೌರವದ ಕೆಲಸಾಂತ ಮುಖ್ಯೋಪಾಧ್ಯಾಯನಾಗ್ಬಹುದು. ಬೇರೆಯವರೂ ಹಾಗೆ ಬರ್ತಾರೇನು? ಅವರಿಗೆ ನ್ಯಾಯವಾಗಿಯೇ ಸಂಬಳ ಕೊಡ್ಬೇಕು. ಆದರೆ ಎಷ್ಟೂಂತ ಕೊಡೋದಕ್ಕಾದೀತು? ಖಾಸಗಿ ಸಂಸ್ಕೆ, ಸರಕಾರದ ಕೈಲಿ ಇರೋವಷ್ಟು ದುಡ್ಡು ನಮ್ಕೈಲಿ ಇರೋದಿಲ್ಲ ಆಗ?... ಹೀಗಿದೆ ನೋಡಿ ವಿಷಯ...”

ಹಾಗಿತ್ತು ವಿಷಯ. ಮಾತು ಎಲ್ಲಿಗೋ ಸಾಗಿ ಮುಂದೆ ನಂಜುಂಡಯ್ಯನವರ ನೇತೃತ್ವದಲ್ಲಿ ಎಂದಾದರೊ೦ದು ದಿನ ಸ್ಠಾಪಿತವಾಗಬೇಕಾದ ಹೈಸ್ಕೂಲಿನ ತನಕ ಬಂದು ನಿಂತಿತು.

ಆ ಚರ್ಚೆ ಅಷ್ಟು ಸಾಕೆಂದು ನಂಜುಂಡಯ್ಯನೂ ಭಾವಿಸಿದರು. ಗುಣದಲ್ಲಿ, ವಿದ್ವತ್ತಿನಲ್ಲಿ, ವೆಂಕಟರಾಯರಿಗಿಂತ ತಾವು ಮೇಲು ಎಂದು ಅವರು ಜಯದೇವನಿಗೆ ತೋರಿಸಿ ಕೊಟ್ಟಿದ್ದರು. ಅಷ್ಟರಿಂದಲೇ ಅವರಿಗೆ ತೃಪ್ತಿಯಾಯಿತು. ಗೆಳೆತನಕ್ಕೂ ತನ್ನ ಹೃದಯದಲ್ಲಿರುವ ಸ್ಠಾನ ಕಡಮೆಯಾದುದೇನೂ ಅಲ್ಲವೆಂಬುದನ್ನು ತೋರಿಸುವಂತೆ ನಂಜುಂಡಯ್ಯ ಕೇಳಿದರು:

“ನೀವು ಬಹಳ ಇಳಿದ್ದೋಗ್ಬಿಟ್ಟಿದೀರಿ ಜಯದೇವ್.”

"ಹೌದೆ ಸಾರ್?"

“ಹೌದು. ಯಾಕೆ, ಮೈ ಚೆನಾಗಿಲ್ವೆ?

“ಇದೆಯಲ್ಲ !”

“ಮತ್ತೆ, ಹೋಟ್ಲಿನ ಊಟ ಸೇರೊಲ್ವೆ?”

“ಸೇರದೆ ಏನು? ತಕ್ಕಮಟ್ಟಿಗೆ ಚೆನಾಗಿಯೇ ಮಾಡ್ತಾರೆ.”

“ಹಾಗಾದರೆ, ಜಯರಾಮ ಶೆಟ್ಟರ ಮನೇಲಿ ಅನುಕೂಲವಾಗಿಲ್ವೇನೊ?”

“ఓ? ಅಲ್ಲೇನ್ಸಾರ್ ಅನುಕೂಲವಿಲ್ದೆ!"

“ಏನೋಪ್ಪ!”