೧೭

ಜಯದೇವ ಮೇಷ್ಟು ಕಾಲೇಜು ವಿದ್ಯಾಭಾಸವನ್ನು ಪೂರ್ತಿಗೊಳಿಸಲೆಂದು ಹೊರಟು ಹೋಗಲು ನಿರ್ಧರಿಸಿದ ಸುದ್ದಿ ಊರಲ್ಲಿ ಹಬ್ಬಿತು. ರಜೆ ಬಂದಾಗ ಶಾಲೆಯನ್ನೇ ಮರೆತಿದ್ದ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಜಯದೇವನ ಕೊಠಡಿಗೆ ಬಂದು ಹೋದರು. ಬೀಳ್ಕೊಡುಗೆಯ ಮಾತುಗಳು ಆತನನ್ನ ಮೂಕನಾಗಿ ಮಾಡಿದುವು.

ಹುಡುಗರ ಕಣ್ಣತಪ್ಪಿಸಿ ಬಿಡುವು ದೊರಕಿಸಿಕೊಂಡು, ಪರೀಕ್ಷೆಯ ಉತ್ತರ ಪತ್ರಿಕೆಗಳನ್ನೆಲ್ಲ ತಿದ್ದಿ ಮುಗಿಸಿ ಜಯದೇವ ನಂಜುಂಡಯ್ಯನವರ ಮೂಲಕ ಮುಖ್ಯೋಪಾಧ್ಯಾಯರಿಗೆ ಕಳುಹಿಸಿಕೊಟ್ಟ.

ತಿಮ್ಮಯ್ಯನವರ ಜತೆಯಲ್ಲಿ ಅವರ ಹಳ್ಳಿಗೆ ಹೋಗಿ ಒಂದು ದಿನವೆಲ್ಲ ಅಲ್ಲಿದ್ದ.

ತಿಮ್ಮಯ್ಯ ನಿರ್ಮಲ ನಗೆಯೊಡನೆ ಹೇಳಿದರು :

“ನೀವಿನ್ನು ಡಿಗ್ರಿ ಮನುಷ್ಯರಾಗ್ತೀರಿ!”

ತಿಮ್ಮಯ್ಯನನ್ನು ನೋಡುತ್ತಲಿದ್ದಂತೆ ಒಂದು ವಿಷಯ ಜಯದೇವನಿಗೆ ಹೊಳೆಯಿತು.

“ತಿಮ್ಮಯ್ಯ, ವಾಪಸು ಬಂದ್ಮೇಲೆ ನಾನು ಪ್ರಾಥಮಿಕ ಶಾಲಾ ಉಪಾಧ್ಯಾಯನಾಗ್ಲೇನ್ರಿ?”

ತಿಮ್ಮಯ್ಯ ಗಟ್ಟಿಯಾಗಿ ನಕ್ಕರು.

“ತಮಾಷೆಯಲ್ಲ ತಿಮ್ಮಯ್ಯ ನಾನೂ ನನ್ನ ಹೆಂಡತೀನೂ ಇಬ್ಬರೂ ಉಪಾಧ್ಯಾಯರಾಗ್ತೀವಿ."

“ಮದುವೆಯಾದ್ಯೇಲೆ ಮಕ್ಕಳಾಗ್ತಾರೆ ಗೊತ್ತೆ ಸ್ವಾಮಿ?

“ಆಗಲಿ, ಅದಕ್ಕೇನು?

“ತಾಯಿ ತಂದೆ ಇಬ್ಬರೂ ಸೇರಿ ನಿಮ್ಮ ಮಕ್ಕಳಿಗೆ ನೀವೇ ಪಾಠ ಹೇಳ್ಕೊಡ್ಬೇಕೂಂತ ಮಾಡಿದೀರೊ?”

ತಮಾಷೆಯಲ್ಲ, ಇದು ತನ್ನ ಕನಸು, ಎನ್ನುವ ರೀತಿಯಲ್ಲಿ

೧೬೨
ದೂರದ ನಕ್ಷತ್ರ
ಜಯದೇವ ವಿವರಿಸಿದ. ಹುಟ್ಟಿದ ಮಗುವಿನ ವಿಕಾಸವೇ ಅತ್ಯಂತ ಮಹತ್ವದ ಘಟ್ಟ... ಆಗ ಸರಿಯಾಗಿ ಪಾಠಹೇಳಬಲ್ಲವನೇ ವಿದ್ಯಾ ವಿಚಕ್ಷಣ.

“ಏನೋಪ್ಪ ವಿದೂಷಕ ಸ್ಥಾನದಲ್ಲಿರೋ ಉಪಾಧ್ಯಾಯನಿಗೆ ರಾಜಾ ಪಾರ್ಟು ಕೊಡ್ತಿದೀರಿ ನೀವು” ಎಂದರು ತಿಮ್ಮಯ್ಯ, ಆದರೆ ನಗಲಿಲ್ಲ. ಅವರೂ ಯೋಚಿಸುವಂತೆ ತೋರಿತು.

ಯಾವ ದಿನ ಹೊರಡುವುದೆಂಬುದನ್ನು ಜಯದೇವ ಯಾರಿಗೂ ಹೇಳಲಿಲ್ಲ, ತಾನು ಗೊತ್ತುಮಾಡಿದ್ದ ದಿನದ ಹಿಂದಿನ ಸಂಜೆ ಆಕಸ್ಮಿಕವಾಗಿ ಇಂದಿರೆಯ ಮನೆಗೆ ಹೋದ.

“ನಾನು ಈ ಊರಿಂದ ಹೊರಡ್ತೀನಿ. ಹೇಳಿಹೋಗೋಣಾಂತ ಬಂದೆ.”

ಇಂದಿರಾ ಬಾಗಿಲ ಮರೆಯಲ್ಲಿ ಅಡಗಿದಳು. ಆಕೆಯ ತಾಯಿ ಕಾಫಿ ತಂದುಕೊಟ್ಟರು.

“ಕೆಟ್ಟ ಊರು ನಮ್ಮದು. ಇಲ್ಲದ್ದೆಲ್ಲಾ ಕೇಳಿದಿರಿ.”

“ಏನಿಲ್ಲ! ಕೋರ್ಸ್ ಮುಗಿಸಿ ಇಲ್ಲಿಗೇ ವಾಪಸು ಬರಬೇಕೂಂತಿದೀನಿ..”

ಆ ತಾಯಿಗೆ ಅದನ್ನು ನಂಬುವುದೇ ಕಷ್ಟವಾಯಿತು.

“ಆದರೆ ಇನ್ನೊಂದ್ಸಲ ಬರುವಾಗ ಒಬ್ಬನೇ ಬರೋದಿಲ್ಲ!”

ಇಂದಿರಾ ಹೊರಗೆ ಇಣಿಕಿ ನೋಡಿ ಮೆಲ್ಲನೆ ನಕ್ಕಳು. ಆಕೆಯ ಕಣ್ಣು ಗಳು ಹನಿಯೂಡುತಿದ್ದುವು. ಇಂದಿರೆಯ ತಾಯಿ ಹೇಳಿದರು :

'ನಿಮ್ಮ ಕೈ ಹಿಡಿಯೋ ಹುಡುಗಿ ಭಾಗ್ಯವಂತೆ ಇಬ್ಬರೂ ಬಂದಾಗ ನಮ್ಮನೇಗೆ ಊಟಕ್ಕೆ ಬನ್ನಿ"

ಅಲ್ಲಿಂದ ಹೊರಡುತ್ತ ಜಯದೇವ ಕೇಳಿದ:

“ಇಂದಿರೇನ ಮುಂದಕ್ಕೆ ಓದಿಸೊಲ್ವೆ?"

“ಇಲ್ಲೇ ಹೈಸ್ಕೂಲಾದರೆ ಓದಿಸ್ಬೇಕು. ಹೊರಗೆ ಹ್ಯಾಗೆ ಕಳಿಸೋಣ? ನಾವು ಹೆಣ್ಣು ಹೆಂಗಸರು.”

ಜಯರಾಮಶೆಟ್ಟರು ಮನೆಯಲ್ಲಿರಲಿಲ್ಲ, ಅವರಾಕೆ ತುಂಬ ಆದರದಿಂದ ಉಪಚರಿಸಿದಳು. ನಾಗರಾಜ ಅಳುಮೋರೆಯೊಡನೆ ಹೇಳಿದ : -

ದೂರದ ನಕ್ಷತ್ರ
೧೬೩

“ನೀವು ಹೊರಟೇ ಬಿಡ್ತೀರ ಸಾರ್? ನಮ್ಮಕ್ಕನೂ ಹೋದವಾರವೇ ಭಾವನ ಮನೆಗೆ ಹೊರಠೋದ್ಲು.*

ಶ್ಯಾಮಲಾ ಅಲ್ಲಿರಲಿಲ್ಲ, ಹುಡುಗನನ್ನು ಆತ ಕೇಳಿದ:

“ಓದೋಕೆ ಯಾವ ಊರಿಗೆ ಹೋಗ್ರಿಯಪ್ಪಾ ಮುಂದಿನ ವರ್ಷ?"

“ಹಾಸನಕ್ಕೆ ಕಳಿಸ್ತಾರಂತೆ.”

ನಂಜುಂದಯ್ಯ ಕೈಕುಲುಕಿದರು.

"ಊಟಕ್ಕೆ ಇಲ್ಲೇ ಎದ್ಬಿಡಿ.”

“ಊಟವಾಯ್ತು ನಂಜುಂಡಯ್ಯನವರೆ.”

“ಮನಸ್ನಲ್ಲೇನೂ ಇಟ್ಕೋಬೇದಿ ಜಯದೇವ."

“ನಾನೂ ಅದನ್ನೇ ಹೇಳೋಣಾಂತ ಬಂದೆ.”

ಮುಂದಿನ ವರ್ಷ ಬೆಂಗಳೂರಿಗೆ ಹೋಗಲು ನಿರ್ಧರಿಸಿದ್ದ ವಿರೂಪಾಕ್ಷ ಕೊಠಡಿಯವರೆಗಗೂ ಜಯದೇವನ ಹಿಂದೆಯೇ ಬಂದ.

ರಾತ್ರೆಯೇ ಆನಂದವಿಲಾಸದ ಲೆಕ್ಕ ತೀರಿಸಿದ್ದ ಜಯದೇವ, ಮುಂಜಾವದಲ್ಲೆ ಎದ್ದು ಹೊರಡುವ ಸಿದ್ಧತೆ ಮಾಡಿದ. ಆ ತೀರ್ಮಾನ ಮಾಡಿದಂದಿನಿಂದ ಬೆಂಗಳೂರು, ವೇಣು, ಸುನಂದಾ ಹೆಚ್ಚು ಹೆಚ್ಚು ಸಮಿಾಪವಾಗಿದ್ದರು. ಕಾನ ಕಾನಹಳ್ಳಿಯೂ ಕರೆಯತೊಡಗಿತ್ತು,

ಆನಂದ ವಿಲಾಸದಲ್ಲಿ ಗೆದ್ದಲು ಕಾಟವೆಂದುಕೊಂಡು ತಂದಿದ್ದ ಪುಟ್ಟ ಟ್ರಂಕಿನಲ್ಲಿ ಬಟ್ಟೆಬರೆಗಳನ್ನೂ ಪುಸ್ತಕಗಳನ್ನೂ ಆತ ತುರುಕಿದ. ಹಾಸಿಗೆಯನ್ನು ಜಮಖಾನದೊಳಗೆ ಸುರುಳಿಸುತ್ತಿದ. ಬರುವಾಗ ಧರಿಸಿದ್ದು ಪಾಯಜಾಮ-ಷರಟು ; ಈಗ ಧೋತರ-ಜುಬ್ಬ, ಹಳ್ಳಿಯಲ್ಲಿ ಉಪಾಧ್ಯಾಯನಾಗಿ ತಾನು ಹೊಂದಿದ ರೂಪಾಂತರವನ್ನು ಸುನಂದಾ ಕಾಣಬೇಕೆಂಬ ಆಸೆ ಜಯದೇವನಿಗೆ.

ಬೆಳಗಾಗುವುದಕ್ಕೆ ಮುಂಚೆಯೇ ಹೊರಡುವ ಮೋಟಾರು ಹಿಡಿಯಬೇಕೆಂದು ಜಯದೇವ ತನ್ನ ಸಾಮಾನುಗಳನ್ನೆತ್ತಿಕೊಂಡು ಬೀದಿಗಿಳಿದ.

ಪ್ರಕೃತಿ ಪ್ರಶಾಂತವಾಗಿತ್ತು, ಅವನ ಹೃದಯದಲ್ಲೂ ಶಾಂತಿ ನೆಲೆಸಿತ್ತು.

೧೬೪
ದೂರದ ನಕ್ಷತ್ರ

ಒಂದು ವರ್ಷದಲ್ಲೇ ಐದು ವರ್ಷಗಳ ಬದುಕನ್ನು ತಾನು ಅನುಭವಿಸಿದಂತೆ ಜಯದೇವನಿಗೆ ತೋರಿತು.

ವಾಸ್ತವತೆ ಅಣಕಿಸಿದ್ದರೂ ಆತ ಸೋತಿರಲಿಲ್ಲ, ಜೀವನ, ಕಟುಸತ್ಯ ಗಳನ್ನು ತಿಳಿಸಿಕೊಟ್ಟು ಆತನ ದೃಷ್ಟಿಯನ್ನು ಸ್ವಚ್ಛಪಡಿಸಿತ್ತು.

ಹೃದಯದಲ್ಲಿ ಹುಮ್ಮಸಿತ್ತು ; ಬಲವಿತ್ತು ಬಾಹುಗಳಲ್ಲಿ.

'ತನ್ನ ಬದುಕಿನ ಗುರಿ ದೂರವಿದ್ದಂತೆ-ಬಲು ದೂರವಿದ್ದಂತೆ-ಆತನಿಗೆ ಕಂಡರೂ ಹಾದಿಯನ್ನು ನಾನು ಬಲ್ಲೆ : ಗುರಿ ಸೇರಬಲ್ಲೆ ಎಂದು ಆತ್ಮ ವಿಶಾಸದಿಂದ ಒಳದನಿ ಉಸುರುತಿತ್ತು.'