೬
ಸಂಜೆ ಶಾಲೆ ಬಿಟ್ಟ ಮೂವರು ಉಪಾಧ್ಯಾಯರೂ ಹೊರಟಾಗ, ಹಾದಿಯಲ್ಲಿ ಆ ಊರಿನ ಪ್ರಾಥಮಿಕ ಶಾಲೆಯ ಉಪಾಧ್ಯಾಯರಿಬ್ಬರು ಕಾಣಲು ದೊರೆತರು. ಒಬ್ಬರು ಅದೇ ಊರಿನ ನಿವಾಸಿ. ಇನ್ನೊಬ್ಬರ ಸ್ಮಳ, ಐದು ಮೈಲುಗಳಾಚೆಯ ಹಳ್ಳಿ.
“ಹಳ್ಳಿಗೆ ಹೊರಟ್ರಾ, ತಿಮ್ಮಯ್ಯನವರೇ?
ಸುಖದುಃಖ ವಿಚಾರಿಸುವ ಧ್ವನಿಯಲ್ಲಿ ರಂಗರಾಯರು ಕೇಳಿದರು.
“ಹೂಂ ಸಾರ್. ಇನ್ನು ಬಿರ್ಬಿರ್ನೆ ಮನೆ ಸೇರಿದ್ರೂ ಕಷ್ಟ. ಎಷ್ಟೊತ್ಗೆ ಮಳೆ ಬರ್ತದೋ ಎಂಗೇಳೋಣ?”
ಪ್ರಾಥಮಿಕ ಶಾಲೆಯ ಆ ಇಬ್ಬರು ಉಪಾಧ್ಯಾಯರಿಗೂ ವಯಸ್ಕಾ ಗಿತ್ತು, ೨೫-೧-೫೪ ರ ಜಾತಿ. ಆಗ ನಾಲ್ವತ್ತನ್ನ ಸಮೀಪಿಸಿತ್ತೇನೋ ಸಂಬಳ....
ಇನ್ನೊಬ್ಬ ಉಪಾಧ್ಯಾಯರು,ಕೊಳೆಯಾಗಿದ್ದ ರುಮಾಲನ್ನು ಹಣೆಯು ಕೆಳಕ್ಕೆ ಸರಿಸಿದರು. ಮಾಸಿದ ಕೋಟಿನ ಜೇಬಿನೊಳಗಿಂದ ಹೊರತೆಗೆದರು. ನಶ್ಯ. .
ಇವರಲ್ಲಿ ಮುಖ್ಯೋಪಾಧ್ಯಾಯರು ಯಾರಿರಬಹುದು ಎಂದು ತರ್ಕಿಸಿದ ಜಯದೇವ, ಊಹಿಸುವುದು ಸುಲಭವಾಗಿರಲಿಲ್ಲ, ಯಾವ ವ್ಯತ್ಯಾಸವೂ ಇರಲಿಲ್ಲ ಅವರಿಬ್ಬರೊಳಗೆ ಯಾರು ಮುಖ್ಯೋಪಾಧ್ಯಾಯರಾದರೂ ಒಂದೇ ಎನಿಸಿತು ಜಯದೇವನಿಗೆ.
ನಶ್ಯ, ಮೂಗಿಗೇರಿಸಿದವರು ಜಯದೇವನನ್ನು ನೆಟ್ಟ ದೃಷ್ಟಿಯಿಂದ ನೋಡಿ ಕೇಳಿದರು :
“ಇವರು ಯಾರು?"
ನಂಜುಂಡಯ್ಯನಿಗೆ ಆ ಸರಸಸಂಭಾಷಣೆಯೇನೂ ಮೆಚ್ಚುಗೆಯಾದಂತೆ ತೋರಲಿಲ್ಲ. ಯಾರೋ ಬಡ ಸಂಬಂಧಿಕರ ಬಳಿ ಇದ್ದಂತೆ ಅವರು ನಿಂತಿದ್ದರು. ಉತ್ತರವಿತ್ತವರು ರಂಗರಾಯರೇ...
“ಇವರು ಜಯದೇವ ಅಂತ.. ಬೆಂಗಳೂರೊರು. ಹೊಸ ಉಪಾ ಧಾಯರಾಗಿ ಬಂದಿದ್ದಾರೆ.”
ಜಯದೇವ ಸೂಕ್ಷ್ಮವಾಗಿ ಅವರಿಬ್ಬರನ್ನೂ ಗಮನಿಸಿದ. ತನ್ನ ಹೆಸರು ಕಿವಿಗೆ ಬಿದ್ದೊಡನೆ ಅವರ ಮನಸ್ಸಿನಲ್ಲಿ ಏನು ತರ್ಕ ನಡೆದಿರಬಹುದೆಂಬುದನ್ನು ಊಹಿಸುವುದು ಆತನಿಗೆ ಕಷ್ಟವಾಗಲಿಲ್ಲ....ಮತ....ಜಾತಿ. ತನ್ನ ಹೆಸರು ಕೇಳಿ ತನ್ನನ್ನು ನೋಡಿ, ಎಷ್ಟೋ ಜನ ವಿಧವಿಧವಾಗಿ ಯೋಚಿಸುವ ಪ್ರಮೇಯವನ್ನು ನೆನೆಸಿ ಜಯದೇವನಿಗೆ ನಗು ಬಂತು.
ಆ ಉಪಾಧ್ಯಾಯರಿಬ್ಬರೂ ನಮಸ್ಕರಿಸಿದರೆಂದು ಜಯದೇವನೂ ಪ್ರತಿ ನವುಸ್ಕಾರ ಮಾಡಿದ.
"೬೦-೫-೯೦ ರವರೋ, ೪೦-೨-೫೦ ರವರೋ?"
ಅಷ್ಟು ವರ್ಷಗಳ ಉಪಾಧ್ಯಾಯ ವೃತ್ತಿಯ ಬಳಿಕವೂ ತಿಮ್ಮಯ್ಯ ಮೇಷ್ಟಲ್ಲಿ ಹಾಸ್ಯ ಪ್ರವೃತ್ತಿಯ ಕಿಡಿ ಜೀವಂತವಾಗಿ ಉಳಿದಿದ್ದಂತೆ ಕಂಡಿತು.
ಆ ಮಾತು ನಂಜುಂಡಯ್ಯನಿಗೆ ಏನೇನೂ ಇಷ್ಟವಾಗಲಿಲ್ಲವೆಂಬುದನ್ನು ಸಾರಿ ಹೇಳಿತು ಅವರ ಮುಖಮುದ್ರೆ, ರಂಗರಾಯರು ಮಾತ್ರ ತಿಮ್ಮಯ್ಯ ಮೇಷ್ಟ್ರ ಮಾತು ಕೇಳಿ ನಕ್ಕರು.
"ಇಂಟರ್ ಮಿಡಿಯೆಟ್ ಮುಗಿಸಿದಾರೆ."
“ತಪ್ಪು ತಿಳ್ಕೊಬೇಡೀಪ್ಪಾ... ನಾವು ಹಳ್ಳಿಯೋರು.....ಬೆಂಗಳೂರ್ನೋರ್ಜತೇಲಿ ಮಾತನಾಡಿ ಅಭ್ಯಾಸ ಇಲ್ಲಾ...”
ನಾಟಕದ ಒಬ್ಬ ಪಾತ್ರಧಾರಿಯ ಹಾಗಿದ್ದರು ತಿಮ್ಮಯ್ಯ,
ಆ ವೃತ್ತಿ ಭಾಂಧವರನ್ನು ಬೀಳ್ಕೊಟ್ಟಮೇಲೆ, ಮುಂದೆ ನಡೆಯುತ್ತಾ ರಂಗರಾಯರೆಂದರು :
“ಆ ತಿಮ್ಮಯ್ಯನಿಗೆ ನಾಟಕದ ಖಯಾಲಿ ಜಾಸ್ತಿ, ಜಯದೇವ್.”
“ಅವರ್ನ ನೋಡ್ದಾಗ ನನಗೂ ಹಾಗೇ ಅನಿಸ್ತು.”
ನಂಜುಂಡಯ್ಯ ಮಾತ್ರ ಕಟುವಾಗಿ ಅ೦ದರು :
'ನಾಟಕ ! ಹು೦ ! ಶಾಲೆಗೆ ರಜಾ ಕೊಟ್ಟು, ಹುಡುಗರ ಮನೆಗೆ ಕಳಿಸಿ, ನಾಟಕದ ಮಜಾ ಈ ಮೇಷ್ಟಿಗೆ...ಇಂಥವರಿಂದಾನೇ ಈಗಿನ ವಿದ್ಯಾಭ್ಯಾಸ ಕೆಟ್ಟಿರೋದು.”
ಜಯದೇವನಿಗೆ ಆ ಖಂಡನೆ ಒಪ್ಪಿಗೆಯಾಗಲಿಲ್ಲ. ಹಾಗೆಂದು ಸ್ಪಷ್ಟ ವಾಗಿ ಹೇಳಬೇಕೆನ್ನಿಸಿತು. ಆದರೆ ವಿರಸಕ್ಕೆ ಎಡೆಯಾಗುವುದೇನೋ ಎಂದು ಆತ ಸುಮ್ಮನಾದ. ರಂಗರಾಯರು ಮಾತ್ರ ಸುಮ್ಮನಿರುವಂತೆ ತೋರಲಿಲ್ಲ.
“ಹುಡುಗರ ವಿದ್ಯಾಭ್ಯಾಸ ಕೆಡೋದಕ್ಕೆ ನಾಟಕ ಕಾರಣ ಅಂತ ಹ್ಯಾಗೆ ಹೇಳ್ತೀರಿ ನಂಜುಂಡಯ್ಯ? ನಾಟಕವೇ ಬೇಡ ಅಂದ್ರೆ ಸಾಂಸ್ಕೃತಿಕ ಚಟುವಟಿಕೆ ಅನ್ನೋದಾದ್ರೂ ಎಲ್ಲಿರುತ್ತೆ? ಏನೋಪ್ಪಾ, ನಿಮ್ಮ ಮಾತು ಸರೀಂತ ನನಗೆ ತೋರೋಲ್ಲ.”
ಇದೊಂದೇ ಭಿನಾಭಿಪ್ರಾಯವಾಗಿದ್ದರೆ, ಅದಕ್ಕೆ ಮಹತ್ವ ಕಲ್ಪಿಸಬೇಕಾದ ಅಗತ್ಯವಿರಲಿಲ್ಲ, ಆದರೆ ಅದರ ಹಿಂದೆ ಬೇರೆ ಕಹಿ ವಿಚಾರಗಳೆಲ್ಲ ಹೊಗೆಯಾಡುತ್ತಿದುವು. ಮುಂದೆ ಮಾತು ಹೇಗೆ ಬೆಳೆಯುವುದೋ ಎಂದು ಜಯದೇವನಿಗೆ ಕಾತರವೆನಿಸಿತು.
ನಂಜುಂಡಯ್ಯನೆಂದರು .
“ಆ ಮಾತು ಅಷ್ಟಕ್ಕೆ ಬಿಟ್ಬಿಡೋಣ ಸಾರ್. ಅದೇನೂ ಹೊಸ ವಿಷಯ ಅಲ್ವಲ್ಲ, ಎಷ್ಟು ಸಲ ಚರ್ಚೆ ಮಾಡಿದೀವೊ ಏನೋ.”
“ಹಾಗೇ ಆಗ್ಲಿ, ನೀವಾಗಿಯೇ ನಾಟಕದ ಮಾತೆತ್ತಿದ್ರಲ್ಲಾಂತ ನಾನು ಹಾಗಂದೆ.”
ನಂಜುಂಡಯ್ಯ ಮೌನವಾಗಿದ್ದು, ಅಲ್ಲಿಂದ ಮತ್ತೆಲ್ಲಿಗೋ ಬೆಳೆಯ ಬಹುದಾಗಿದ್ದ ಆ ಸಂಭಾಷಣೆಯ ಪ್ರಕರಣವನ್ನು ಆ ರೀತಿ ಚುಟುಕಾಗಿ ಮುಕ್ತಾಯಗೊಳಿಸಿದರು.
ಆನಂದ ವಿಲಾಸದಲ್ಲಿ ಸಂಜೆಯ ಕಾಫಿಯಾಗುತ್ತಿದ್ದಂತೆ ನಂಜುಂಡಯ್ಯ ಕೇಳಿದರು;
“ನಮ್ಮ ಪಂಚಾಯತ ಬೋರ್ಡು ಅಧ್ಯಕ್ಷರ ಮನೆಗೆ ಹೋಗೋಣ್ವೆ?
“ಹೋಗೋಣ, ಮೊನ್ನೆ ತಾನೆ ಕೇಳಿದ್ರು- ಹೊಸ್ಮೇಷ್ಟ್ರು ಯಾವಾಗ ಬರ್ತಾರೇಂತ.”
ಅಧ್ಯಕ್ಷರೇ ಆ ಊರಿನ ಪ್ರಮುಖರು. ಊರಿನ ಇನ್ನೊಬ್ಬ ಹಿರಿಯರೆಂದರೆ ಸಬ್ಇನ್ಸ್ಪೆಕ್ಟರು. ಹಾಗೆ, ಊರಿನ ಇಬ್ಬರು ಮುಖ್ಯಸ್ಥರಲ್ಲಿ ಒಬ್ಬರನ್ನು ನೋಡಲು ಮೂವರು ಉಪಾಧ್ಯಾಯರೂ ಹೊರಟರು.
... ಮನೆಗೆ ಬರುತ್ತಿದ್ದ ಆ ಮೂವರಿಗೂ ಸಾಗತ ಬಯಸಿದರು ಅಧ್ಯಕ್ಷ ಶಂಕರಪ್ಪ,
“ಬನ್ನಿ!! ಬನ್ನಿ!! ದಯಮಾಡ್ಸಿ!”
ಧೋತರದ ಮೇಲೆ ತೆಳುವಾದ ಬನೀನು.. ಬಿಳಿಯು ಕೂದಲು ಸೇರಿಕೊಂಡಿದ್ದ ನುಣುಪಾದ ಕ್ರಾಪು, ಗಾತ್ರದ ಮೈ, ನಂಜುಂಡಯ್ಯನವರಷ್ಟೇ ವಯಸ್ಸು ಮುಖದ ಮೇಲಿನ ನಗೆ ಸಹಜವಾಗಿರಲಿಲ್ಲ.
ರಂಗರಾಯರತ್ತ ನೋಡಿ ಅವರೆಂದರು :
“ಏನು ಇಷ್ಟು ದೂರ ದಯಮಾಡಿಸಿದ್ರಿ ಹೆಡ್ಮೇಷ್ಟ್ರೇ?"
ಜಯದೇವನನ್ನು ನೋಡುತ್ತ ನಂಜುಂಡಯ್ಯನೊಡನೆ ಕೇಳಿದರು:
"ಇವರೇ ನಿಮ್ಮ ಹೊಸ್ಮೇಷ್ಟ್ರೋ?"
"ಹೌದು, ಹೌದು"
“ಸಂತೋಷ... ಸಂತೋಷ... ಯಾವಾಗ ಬರೋಣ್ವಾಯ್ತು?"
“ನಿನ್ನೇನೇ”
–ಎಂದ ಜಯದೇವ, ವಂದನೆ-ಪ್ರತಿವಂದನೆಯ ಉಪಚಾರವನ್ನು ಮುಗಿಸುತ್ತ. *
“ಸ್ಕೂಲು ಚೆನ್ನಾಗಿ ನಡೀತಾ ಇದೆಯೊ ರಂಗರಾಯರೇ? "
'ತಕ್ಕಮಟ್ಟಿಗಿದೆ ಶಂಕರಪ್ಪನವರೇ, ಇನ್ನೇನು, ಹೆಚ್ಚಿಗೆ ಒಬ್ಬರು ಉಪಾಧ್ಯಾಯರು ಬ೦ದ ಹಾಗಾಯ್ತಲ್ಲ, ನೀವು ಶಿಫಾರಸು ಮಾಡಿ ಒಬ್ಬ ಜವಾನನ್ನೂ ಕೊಡಿಸಿದರೆ--"
“ಆ ಮೇಲೆ ಇನ್ನೂ ಒಬ್ಬ ಉಪಾಧ್ಯಾಯರು ಬೇಕು ಅಂತೀರೇನೊ?”
“ಮಿಡ್ಲ್ ಸ್ಕೂಲು ಅಂದ್ಮೇಲೆ ನಾಲ್ಕು ಜನ ಇರ್ಬೇಡ್ವೆ?"
“ಸರಿ, ಸರಿ... ಈ ಖರ್ಚುಗಳೆಲ್ಲಾ ಹ್ಯಾಗಪ್ಪಾ ಸರ್ಕಾರ ನೋಡ್ಕೊಳ್ಳೋದು?”
ತಾವೇ ಸರ್ಕಾರ ಎನ್ನುವಂತೆ ಶಂಕರಪ್ಪ ಮಾತನಾಡುತಿದ್ದರು. ಜಯದೇವ ಅವರ ಬಟ್ಟೆಬರೆಯತ್ತ ದೃಷ್ಟಿ ಹಾಯಿಸಿದ. ಅದು ಖಾದಿಯಾಗಿರಲಿಲ್ಲ.. ಸರ್ಕಾರ-ಪಂಚಾಯತ ಬೋರ್ಡು ಎಂದೆಲ್ಲ ಕೇಳುತ್ತಲೇ ರಾಜಕಾರಣದ ವಿಚಾರಗಳು ಜಯದೇವನ ಬಳಿ ನುಸುಳಿದುವು. ನುಸುಳಿ ಹಾಗೆಯೇ ಮರೆಯಾದುವು. ಆ ವಿಷಯದಲ್ಲಿ ಅವನಿಗೆ ಆಸಕ್ತಿ ಇರಲಿಲ್ಲ.
ಆದರೆ ಶಂಕರಪ್ಪ ಆ ಮಾತನ್ನೆ ಪ್ರಸ್ತಾಪಿಸಿದರು.
“ನೀವು ಯಾವ ಪಕ್ಷ ಇವರೆ?”
ಜಯದೇವನನ್ನು ಉದ್ದೇಶಿಸಿ ಆ ಪ್ರಶ್ನೆ ಬಂತು. ಯಾವ ಪಕ್ಷ, ಆತ? ಅದೇನೂ ಅವನಿಗೆ ತಿಳಿದಿರಲಿಲ್ಲ, ಆದರೆ ಸದ್ಯ ನೀವು ಯಾವ ಜಾತಿ? ಎಂದು ಅವರು ಕೇಳಲಿಲ್ಲವಲ್ಲ! ಅದು ಸಮಾಧಾನದ ವಿಷಯವಾಗಿತ್ತು.
“ನಾನು ಈವರೆಗೆ ಯಾವ ಪಕ್ಷಕ್ಕೂ ಸೇರಿಲ್ಲ.”
“ಹೂಂ.. ಉಪಾಧ್ಯಾಯರು ಅಂದ್ಮೇಲೆ ನೀವು ಹಾಗೆಲ್ಲ ಸೇರೋ ಹಾಗೂ ಇಲ್ಲಾಂತನ್ನಿ.”
ಆ ವಿಷಯ ಜಯದೇವನಿಗೆ ಆವರೆಗೆ ತಿಳಿದಿರಲಿಲ್ಲ. 'ಹಾಗೇನು?' ಎಂದು ಕೇಳಿ ಅಜ್ನ್ಯಾನ ಪ್ರದರ್ಶಿಸಬಾರದೆಂದು ಆತ ಸುಮ್ಮನಾದ.
ಆದರೆ ಶಂಕರಪ್ಪ ಸುಮ್ಮನಿರಲಿಲ್ಲ.
ಪ್ರತ್ಯಕ್ಷವಾಗಿ ಯಾವುದೇ ಪಕ್ಷ ಸೇರದೆ ಇದ್ರೂ ಮನಸ್ಸಲ್ಲಿ ಒಂದು ಪಕ್ಷ ಅಂತ ಇರೋದಿಲ್ವೆ? ಉದಾಹರಣೆಗೆ ರಂಗರಾಯರೆ ತಗೊಳ್ಳಿ—”
ರಂಗರಾಯರು ನಡುವೆ ಬಾಯಿ ಹಾಕಿದರು;
“ಏನಾದರೂ ಅನ್ಬಾರದು ಶಂಕರಪ್ಪನವರೇ.”
“ಏನಾದರೂ ಯಾಕನ್ಲಿ? ಹೋದ ಸಾರೆ ಸಾರ್ವತ್ರಿಕ ಚುನಾವಣೇಲಿ ನಮ್ಮ, ಕ್ಷೇತ್ರದಿಂದ ನೀವು ಯಾರ ಪರವಾಗಿ ಕೆಲಸ ಮಾಡಿದ್ರಿ ಅನ್ನೋದು ನಮಗೆ ಗೊತ್ತಿಲ್ವೆ? ಜನಕ್ಕೆ ಗೊತ್ತಿಲ್ವೆ?
ಆ ಸ್ವರ ಗಡುಸಾಗಿತು, ರಂಗರಾಯರು ಉಗುಳು ನುಂಗಿ ಸುಮ್ಮನಾದರು ತಮ್ಮ ಮಾತಿನಿಂದಾದ ಪರಿಣಾಮವನ್ನು ಗಮನಿಸಿ ಸಂತುಷ್ಟರಾಗಿ ಶಂಕರಪ್ಪ ಜಯದೇವನತ್ತ ತಿರುಗಿದರು:
“ಬೆಂಗಳೂರಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಇದಾವೆ. ನಿಮಗೆ ಯಾರಾದರೂ ಮುಖಂಡರ ಪರಿಚಯ ಉಂಟೇನೋಂತ ಕೇಳ್ದೆ.”
“ಇಲ್ಲ, ಇಲ್ಲ, ನನಗೆ ರಾಜಕೀಯದವರ ಪರಿಚಯ ಇಲ್ಲ.”
ಶಂಕರಪ್ಪನಿಗೆ ಅತೃಪ್ತಿಯಾಯಿತು. “ನೀವು ಒಳ್ಳೆ ಅವಕಾಶ ಕಳಕೊಂಡ್ರಿ, ಬೆಂಗಳೂರಲ್ಲೇ ಇದ್ಕೊಂಡು ಹೀಗಾದ್ರೆ–... ನನ್ನ ಸಲಹೆ ತಗೊಳ್ಳಿ.. ಬಹಿರಂಗವಾಗಿ ನೀವು ಯಾವುದೇ ಪಕ್ಷ ಸೇರದೇ ಇದ್ರೂವೆ, ನಿಮ್ಮಷ್ಟಕ್ಕೆ ನೀವು ಎಲ್ಲಾ ವಿಷಯ ತಿಳ್ಕೊಂಡು ತೀರ್ಮಾನಕ್ಕೆ ಬರಬೇಕು.”
ಜಯದೇವ ಮೌನವಾಗಿಯೆ ಇದು ಹೌದೆಂದು ತಲೆದೂಗಿದ.
ಶಂಕರಪ್ಪನ ಮನೆಯಲ್ಲೂ ಉಪಾಧ್ಯಾಯರಿಗೆ ಕಾಫಿಯಾಯಿತು, ಅದು ಮುಗಿಯುತ್ತ ಆ ಅಧ್ಯಕ್ಷರು ಕೇಳಿದರು :
“ಹೊಸ ಮೇಷ್ಟ್ರ, ಊಟ-ವಸತಿ–..?
“ಹೋಟ್ಲಲ್ಲಿ ಊಟ ಮಾಡ್ತಾರಂತೆ. ಸದ್ಯ ಶಾಲೆಯಲ್ಲೇ ವಸತಿ ಮಾಡ್ಕೊಳ್ಲಿಂತ'
ಹಾಗೆ ಹೇಳಿದವರು ನಂಜುಂಡಯ್ಯ. ಹೇಳಿದ ಮೇಲೆ ಅವರು ರಂಗರಾಯರತ್ತ ನೋಡಿ ಕೇಳಿದರು :
“ಆಗದೆ ಸಾರ್?”
ನಂಜುಂಡಯ್ಯನೇ ಮುಖ್ಯೋಪಾಧ್ಯಾಯರ ಪಾತ್ರವಹಿಸಿ ಮಾತನಾಡಿದ ಹಾಗಿತ್ತು.
“ಓಹೋ.. ಆಗದೇನು?
"ಬರ್ತಾ ಇರಿ ಆಗಾಗ್ಗೆ. ನಮ್ಮನೆಗೆ ಎಲ್ಲಾ ಪೇಪರುಗ್ಳೂ ಬರ್ತವೆ...”
ಎಂದರು ಶಂಕರಪ್ಪ, ಉಪಾಧ್ಯಾಯತ್ರಯರನ್ನು ಬೀಳ್ಕೋಡುತ್ತಾ.
ರಂಗರಾಯರ ಮನೆಯಲ್ಲಿ ರಾತ್ರೆ ಮಲಗಲೆಂದು ಜಯದೇವ ಸಿದ್ಧತೆ ಮಾಡಿಕೊಳ್ಳುತಿದ್ದಾಗ, ಮುಖ ಬಾಡಿಸಿಕೊಂಡು ಬೀಸಣಿಕೆಯಿಂದ ಗಾಳಿ ಹಾಕಿಕೊಳ್ಳುತಿದ್ದ ಆ ಮುಖ್ಯೋಪಾಧ್ಯಾಯರೆಂದರು :
“ನೀವು ನಂಜುಂಡಯ್ಯನ ವಿಶ್ವಾಸಗಳಿಸ್ಕೊಂಡ್ರಿ, ನಿಮ್ಮನ್ನ ಅಭಿನಂದಿಸ್ಬೇಕು ಜಯದೇವ.”
“ಯಾಕೆ ಹೇಳ್ತೀರಿ ಸಾರ್, ಹಾಗೆ?
“ಅಲ್ವೆ! ಅದೇನು ಸಾಮಾನ್ಯ ವಿಷಯವೆ? ಸದ್ಯ ಶಾಲೆಯಲ್ಲೆ ಮಲಕೊಳ್ಳೀಂತ ನಾನೇ ಹೇಳೋಣಾಂತಿದ್ದೆ. ಆದರೆ ನಂಜುಂಡಯ್ಯನಿಗೆ ಹೆದರಿ ಹೇಳ್ಲಿಲ್ಲ, ಈಗ ನೋಡಿ...!”
ಜಯದೇವನಿಗೆ ವ್ಯಥೆಯಾಯಿತು. ರಂಗರಾಯರೇ ಮಾತು ಮುಂದುವರಿಸಿದರು :
“ನಂಜುಂಡಯ್ಯ ನಿಮಗೆ ಹೇಳಿದ್ರೂ ಹೇಳಿರ್ಬಹುದು. ನನಗೆ ವರ್ಗವಾಗೋ ಹಾಗಿದೆ. ಆ ಶಂಕರಪ್ಪ ನನ್ಮೇಲೆ ದೂರು ಕೊಟ್ಟ, ಬೆಂಗಳೂರುವರೆಗೂ ಹೋಗಿ ಬಂದು--"
“ಶಂಕರಪ್ಪನವರೇ! ಅವರೂಂತ ನಂಜುಂಡಯ್ಯ ಹೇಳಲಿಲ್ಲ.”
“ಅವರೆಲ್ಲಾ ಒಂದೇ ಜಯದೇವ, ಹೋದ ಚುನಾವಣೇಲಿ ನಮ್ಮ ಗುರುತಿನವರು ಒಬ್ಬರಿಗೆ ಸಹಾಯ ಮಾಡ್ದೆ, ಅವರು ಹಿಂದೆ ಕಾಂಗ್ರೆಸಿನಲ್ಲಿದ್ದರೂ ಆ ಸಲ ಸ್ವತಂತ್ರರಾಗಿ ನಿಂತಿದ್ರು, ಶಂಕರಪ್ಪ ಕಾಂಗ್ರೆಸ್ ಭಕ್ತರು.ಸ್ವತಂತ್ರರೇನೋ ಸೋತರೂಂತಿಟ್ಕೊಳ್ಲಿ. ಆದರೂ--"
“ಯಾಕೆ? ಬೇಕಾದವರಿಗೆ ಬೆಂಬಲ ಕೊಡೋ ಹಕ್ಕು ನಮಗಿಲ್ವೆ?"
ಜಯದೇವನ ಪ್ರಶ್ನೆ ಕೇಳಿ, ರಂಗರಾಯರು ನಕ್ಕರು.
“ಹಕ್ಕು? ಅದೆಲ್ಲಾ ಇರೋದು ರಾಜ್ಯಾಂಗದಲ್ಲಿ! ನಿಮಗಿನ್ನೂ ತಿಳಿದು ಜಯದೇವ.”
“ಚುನಾವಣೇಲಿ ನೀವು ಕಾಂಗ್ರೆಸ್ ವಿರೋಧಿಯಾಗಿದ್ದಿರೀಂತ ದೂರು ಕೊಟ್ರೆ?"
“ಹಾಗೆ ಕೊಡೋದಕ್ಕಾಗುತ್ಯೆ? ಬೇರೆ ಆರೋಪ ಸೃಷ್ಟನೆಮಾಡಿದರು.”
“ಬೇಜಾರು...”
“ಈಗಲೇ ಬೇಜಾರು ಅಂದರೆ ಹೇಗೆ ಜಯದೇವ? ಸ್ವಲ್ಪ ದಿವಸ ಕಳೀಲಿ-ನಿಮಗೇ ಗೊತ್ತಾಗುತ್ತೆ.”