ಕೊನೆಯವರೆಗೂ ಪ್ರಯೋಗ ಮಾಡಲು ಹೊರಟ ರಂಗರಾಯರು ಆಮೇಲೆ ಆ ಊರಲ್ಲಿದ್ದುದು ಎರಡು ತಿಂಗಳ ಕಾಲ ಮಾತ್ರ.

ಆ ಅವಧಿಯಲ್ಲಿ ಸಾಕು ಸಾಕೆನಿಸುವಷ್ಟು ಮಳೆ ಸುರಿಯಿತು. ಆ ಪುಟ್ಟ ಊರಿನ ರಸ್ತೆಗಳು ನದಿಗಳಾದುವು, ಮರದ ಕೊಂಬೆಯೊಂದು ಗಾಳಿಗೆ ಮುರಿದು ಶಾಲೆಯ ಛಾವಣಿಯ ಮೂಲೆಗೆ ಬಿದ್ದು ಕೆಲವು ಹೆಂಚುಗಳು ಒಡೆದು ಚೂರಾದುವು. ಸುತ್ತುಮುತ್ತಲಿನ ಪ್ರದೇಶವೆಲ್ಲ ಜಲಮಯವಾಯಿತು

ಆಗ ಶಾಲೆಯಲ್ಲಿ ಪಾಠವಾಗುತ್ತಿರಲಿಲ್ಲವೆಂದರೂ ಸರಿಯೆ. ತರಗತಿಗಳಿಗೆ ಬರುತಿದ್ದ ಹುಡುಗರಿಗಿಂತಲೂ ಬರದೇ ಇದ್ದವರ ಸಂಖ್ಯೆಯೇ ಹೆಚ್ಚು. ಅದಕ್ಕೆ ಹಲವು ಕಾರಣಗಳಿದುವು. ಹಳ್ಳಿಗಳಿಂದ ನಡೆದು ಬರುತಿದ್ದ ಹುಡುಗರು ಆ ಮಳೆಯಲ್ಲಿ ಸುರಕ್ಷಿತವಾಗಿ ಹಿಂತಿರುಗುವರೆಂಬ ಭರವಸೆ ಇರಲಿಲ್ಲ, ಅದಕ್ಕಿಂತಲೂ ಹೆಚ್ಚಾಗಿ ಎಷ್ಟೋ ವಿದ್ಯಾರ್ಥಿಗಳು ತಮ್ಮ ಹಿರಿಯರಿಗೆ ಕೃಷಿ ಕೆಲಸದಲ್ಲಿ ಮನೆಗೆಲಸದಲ್ಲಿ ನೆರವಾಗಬೇಕಾಗುತಿತ್ತು. ಛತ್ರಿ ಹಿಡಿದು ಶಾಲೆಗೆ ಬರುತ್ತಿದ್ದವರ ಸಂಖ್ಯೆ ಎಷ್ಟೊಂದು ಕಡಮೆ ! ಕೆಲವು ದಿನ ಬಿಟ್ಟು ಆ ಮೇಲೆ ಬಂದವರನ್ನು ಗದರಿಸುವುದು ಅವಶ್ಯವಾಗಿತ್ತು. ಆದರೆ ಹಾಗೆ ಗದರಿಸುವುದು ತನ್ನಿಂದಂತೂ ಆಗದ ಕೆಲಸವೆಂದು ಜಯದೇವ ಮನಗಂಡ.

ಅಂತಹ ಒಂದು ಮಳೆ ಮಧ್ಯಾಹ್ನ, ನಡು ಎತ್ತರದ, ವಯಸ್ಸಾಗಿದ್ದರೂ ಹೃಷ್ಟಪುಷ್ಟರಾಗಿದ್ದ, ಒಬ್ಬರು ಹಾಸಿಗೆ ಟ್ರಿಂಕುಗಳೊಡನೆ ಬಂದಿಳಿದರು. ಆ ಮುಖದ ಮೇಲೆ ನಗುವಿರಲಿಲ್ಲ, ಆ ಕಣ್ಣುಗಳಲ್ಲಾದರೋ ಸಂಶಯ ಮನೆಮಾಡಿತ್ತು, ಮಾತು, ಆಡಿದರೆ ಮುತ್ತು ಸುರಿಯುವುದೇನೋ ಎನ್ನುವ ಹಾಗೆ-'ಹಾಂ' 'ಹೂಂ' 'ಐ ಸೀ.' -

ಆತ ಬಂದಿಳಿದಾಗ, ಹೊಸ, ಇನ್ಸ್ ಪೆಕ್ಟರಿರಬಹುದೇನೋ-ಎಂದು ರಂಗರಾಯರು ಕೂಡಿಸಿ ಕಳೆದರು. ನಂಜುಂಡಯ್ಯ, ಶಂಕರಪ್ಪನ ಅರ್ಜಿಯ ವಿಚಾರಣೆಗೆ ಯಾರಾದರೂ ಬಂಧಿರಬಹುದೆ–ಎಂದು ಯೋಚಿಸಿದರು. ಜಯದೇವನಿಗೆ ಏನೂ ಹೊಳೆಯಲಿಲ್ಲ, ಆದರೂ ಗಂಭೀರವಾದುದೇನೊ ಇದೆ ಎಂದು ಅವನ ಮನಸ್ಸು ಮಿಡುಕಿತು.

ಆಫೀಸು ಕೊಠಡಿಯತ್ತ ಹೋಗುತಿದ್ದ ನಂಜುಂಡಯ್ಯ ಅಲ್ಲೆ ತಡೆದು ನಿಂತು ಬಂದವರನ್ನು ಇದಿರ್ಗೊಂಡರು.

ಮೊದಲು ಮಾತನಾಡಿದವರು ಆ ವ್ಯಕ್ತಿಯೇ.

“ಇಲ್ಲಿ ಎಚ್. ಎಂ. ರಂಗರಾಯರು ಯಾರು?”

ರಂಗರಾಯರೇ ಅಷ್ಟರಲ್ಲಿ ಅಲ್ಲಿಗೆ ಬಂದರು

“ಬನ್ನಿ, ನಾನು... ಬನ್ನಿ, ಬೇರೆ ಊರಿಂದ ಬಂದ ಹಾಗಿದೆ.”

ಬಂದವರು ಮಾತನಾಡಲಿಲ್ಲ, ಮೂವರು ಉಪಾಧ್ಯಾಯರೊಡನೆ ಅವರು ಕೊಠಡಿಯೊಳಕ್ಕೆ ಹೋಗಿ ಕುಳಿತರು: ಬಂದ ಹೊಸಬರನ್ನು ನೋಡಲು ಬಾಗಿಲಬಳಿ ಹುಡುಗರು ಗುಂಪು ಕೂಡದೇ ಇರಲಿಲ್ಲ, ಬಂದವರು ಹುಡುಗರತ್ತ ವ್ಯಗ್ರ ದೃಷ್ಟಿಯನ್ನು ಬೀರಿ ಹುಬ್ಬು ಗಂಟಿಕ್ಕಿದರು--'ಇದು ಶಿಷ್ಟ ಸಂಪ್ರದಾಯವಲ್ಲ'ವೆಂಬಂತೆ.

ರಂಗರಾಯರು ಹುಡುಗರನ್ನು 'ಆಚೆಗೆ ಹೋಗಿ!” ಎಂದು ಬೆದರಿಸಬೇಕಾಯಿತು.

ಬಂದವರು ಹೇಳಿದರು :

"ನಿಮಗೆ ನನ್ನ ಪರಿಚಯವಿಲ್ಲ.”

ಅದು ಸ್ಪಷ್ಟವಾಗಿತ್ತು, ಹಾಗೆಂದು ತಿಳಿಯಪಡಿಸುವ ಅವಶ್ಯಕತೆಯೂ ಇದ್ದಂತೆ ಜಯದೇವನಿಗೆ ತೋರಲಿಲ್ಲ. ನಂಜುಂಡಯ್ಯ ಮೌನವಾಗಿಯೇ ಇದ್ದರು. ಸಿಗರೇಟನ್ನು ಹೊರತೆಗೆಯಲಿಲ್ಲ ಮಾತ್ರ.

"ನಿಜ, ಪರಿಚಯವಿಲ್ಲ” ಎಂದರು ರಂಗರಾಯರು, ಮುಗುಳ್ನಗಲು ಯತ್ನಿಸುತ್ತಾ,"

“ನನ್ನ ಹೆಸರು ವೆಂಕಟರಾವ್” ಎಂದರು ಹೊಸಬರು. ವೆಂಕಟರಾವ್ ಯಾರೆಂಬುದನ್ನು ವಿವರಿಸಲಿಲ್ಲ, ಅವರು ತಮ್ಮ ಉಣ್ಣೆಯ ಕೋಟನ ಒಳ ಜೇಬಿಗೆ ಕೈ ಹಾಕಿ ಉದ್ದನೆಯ ಲಕ್ಕೋಟೆಯೊಂದನ್ನು ಹೊರತೆಗೆದರು. ಫೂ ಎಂದು ಊದಿ ಲಕ್ಕೋಟೆಯ ಬಾಯಗಲಿಸಿ ಗುಂಡು ಸೂಜಿ ಚುಚ್ಚಿದ್ದ ಎರಡು ಹಾಳೆಗಳನ್ನು ಬೆರಳುಗಳಿಂದೆತ್ತಿ ರಂಗರಾಯರಿಗೆ ಕೊಟ್ಟರು.

ಚಾಮರಾಜನಗರದ ಮಾಧ್ಯಮಿಕ ಶಾಲೆಯ ಮುಖೋಪಾಧ್ಯಾಯರಾದ ಎನ್.ವೆಂಕಟರಾಯರನ್ನು ಆ ಊರಿನ ಮಾಧ್ಯಮಿಕ ಶಾಲೆಯ ಮುಖೋಪಾಧ್ಯಾಯರಾಗಿ ವರ್ಗಾಯಿಸಲಾಗಿತ್ತು, ತಕ್ಷಣವೇ ಹೊರಟು ರಂಗರಾಯರನ್ನು ರಿಲೀವ್' ಮಾಡಬೇಕೆಂಬ ಸೂಚನೆಯಿತ್ತು ಅದರಲ್ಲಿ. ಇನ್ನೊಂದು ಹಾಳೆ ರಂಗರಾಯರನ್ನು ಸಂಬೋಧಿಸಿದ್ದ ವರ್ಗದ ಆಜ್ಞೆಯ ಪ್ರತಿ, ಮುನ್ನೂರು ಮೈಲುಗಳಾಚೆ ಕೊಡಗನೂರಿಗೆ ಸಾಮಾನ್ಯ ಉಪಾಧ್ಯಾಯರಾಗಿ ಅವರನ್ನು ಎತ್ತಿ ಹಾಕಿದ್ದರು.

ಹೃದಯ ಹಿಸುಕಿದಂತಾಗಿ ನೋವಿನ ಕ್ರೋಧದ ಭಾವನೆಗಳು ಮುಖದತ್ತ ಧಾವಿಸಿದರೂ ನಿರ್ವಿಕಾರ ಚಿತ್ತದ ಮುಖವಾಡ ಧರಿಸಲೆತ್ನಿಸುತ್ತಾ, ಬಿಮ್ಮನೆ ತುಟಿ ಬಿಗಿದುಕೊಂಡು ರಂಗರಾಯರು ಮತ್ತೊಮ್ಮೆ ಎರಡೂ ಆಜ್ಞೆಗಳನ್ನೋದಿದರು. ಓದಿದ ಬಳಿಕ ಹಾಳೆಗಳನ್ನು ನಂಜುಂಡಯ್ಯನಿಗೆ ಕೊಟ್ಟರು. ಅವರ ಪಕ್ಕದಲ್ಲೇ ಕುಳಿತಿದ್ದ ಜಯದೇವನೂ ಅದನ್ನೋದಿದ. ನಂಜುಂಡಯ್ಯನಿಗೆ ತೃಪ್ತಿಯಾಯಿತು, ಅತೃಪ್ತಿಯಾಯಿತು ತೃಪ್ತಿ — ಶಂಕರಪ್ಪನ ಪ್ರಭಾವ ಪರಿಣಾಮಕಾರಿಯಾಯಿತೆಂದು, ಅತೃಪ್ತಿ–ಮುಖ್ಯೋಪಾಧ್ಯಾಯನಾಗುವ ತಮ್ಮ ಬಯಕೆ ಫಲಿಸಲಿಲ್ಲವೆಂದು. ಆದರೂ ಅವರು ಮುಗುಳ್ನಗಲೂ ಇಲ್ಲ; ಅಸಮಾಧಾನವನ್ನು ತೋರಿಸಲೂ ಇಲ್ಲ, ಜಯದೇವನಿಗೆ ಮಾತ್ರ ಈ ಪರಿಸ್ಮಿತಿ ಕ್ರೂರವಾಗಿ ವಿಚಿತ್ರವಾಗಿ ತೋರಿತು.

ನಂಜುಂಡಯ್ಯ ಆ ಹಾಳೆಗಳನ್ನು ಮೇಜಿನ ಮೇಲಿಡುತ್ತಿದ್ದಂತೆ ರಂಗರಾಯರೆಂದರು :

“ನನಗಿನ್ನೂ ಅನುಜ್ಞೆ ಬಂದಿಲ್ಲ.”

ತಾವು ತಂದ ಆಜ್ಞಾಪತ್ರದ ಪ್ರಭಾವವನ್ನು ತೂಗಿನೋಢಲು ಅಪೇಕ್ಷಿಸಿ, ಮೂವರನ್ನೂ ನೆಟ್ಟದೃಷ್ಟಿಯಿಂದಲೇ ನೋಡುತಿದ್ದ ವೆಂಕಟರಾಯರು ವ್ಯಕ್ತಪಡಿಸಿದ ಪ್ರತಿಕ್ರಿಯೆಯೊಂದೇ;

“ಐ ಸೀ”

“ಬೇರೆ ಜಿಲ್ಲೆಯಿಂದ್ಲೇ ನೀವು ಬಂದಹಾಗಾಯ್ತು,”

"ಹೂಂ"

“ಸಂಸ್ಥಾನದ ವಿದ್ಯಾಧಿಕಾರಿಯ ಕಚೇರಿಯಿಂದ್ಲೇ ಆಜ್ಞೆ ಹೊರಟಿದೆ.

“ಹೌದು. ವಿಷಯವೇ ಅಂಥಾದ್ದು.”

“ಓಹೊ ! ವಿಷಯ ತಮಗೂ ಗೊತ್ತಿದೆ ಹಾಗಾದರೆ.”

“ಹೋದ ಬೇಸಗೇಲಿ ಬೆಂಗಳೂರಿಗೆ ಹೋಗಿದ್ದೆ, ಅಲ್ಲಿ ತಿಳೀತು.”

“ಜಿಲ್ಲಾ ವಿದ್ಯಾಧಿಕಾರಿಯೂ ಸಹಿ ಮಾಡಿದಾರೆ, ಅಲ್ವೆ?”

“ಹೂ೦."

ಮತ್ತೆ ಮೌನ ನೆಲೆಸಿತು.

*ಚಾರ್ಜ್ ಯಾವತ್ತು ತಗೋತೀರ?” ಎಂದು ರಂಗರಾಯರು ಕೇಳಿದರು.

“ಈ ಕ್ಷಣವೇ ತಗೋಳೋಣ ಅಂತಿದ್ರೂ ನಿಮಗೆ ಇನ್ನೂ ಆಜ್ಞೆಯೇ ಬಂದಿಲ್ವಲ್ಲಾ !”

“ಪರವಾಗಿಲ್ಲ, ಪೋಸ್ಟಿನಲ್ಲಿ ಇವತ್ತೇನೋ ಬಂದಿಲ್ಲ; ಆದರೆ ನಾಳೆ ಬರಬಹುದು.."

ಒಮ್ಮೆಲೆ ಒಂದು ವಿಚಾರ ರಂಗರಾಯರಿಗೆ ಹೊಳೆಯಿತು. ವರ್ಗದ ವಿಷಯ ಮುಂಚಿತವಾಗಿ ತನಗೆ ತಿಳಿಯಬಾರದೆಂದೇ ಆಜ್ಞಾಪತ್ರವನ್ನು ಬೇಗನೆ ಕಳುಹಿಸದೆ ಇರಬಹುದೆ? ಹಾಗೂ ಇರಬಹುದೆ?

ವೆಂಕಟರಾಯರು ಮಾತ್ರ ಹಾಗೆ ಆ ಕ್ಷಣವೆ ಚಾರ್ಜ್ ವಹಿಸಿಕೊಳ್ಳಲು ಸಿದ್ಧರಿರಲಿಲ್ಲ.

“ಅದು ಹ್ಯಾಗೆ ಸಾಧ್ಯ? ನಿಮಗೂ ಆಜ್ಞೆ ಬರೋವರೆಗೆ ಕಾದಿರ್ತೀನಿ.”

ರಂಗರಾಯರೆದ್ದು ಕಿಟಕಿಯ ಬಳಿ ನಿಂತು ಸ್ವಲ್ಪ ಹೊತ್ತು ಶೂನ್ಯ ನೋಟ ಬೀರಿದರು. ಅದೇ ಆಗ ನಿಂತಿದ್ದ ಮಳೆ ಮತ್ತೆ ಬರುವ ಸೂಚನೆಗಳಿದ್ದುವು. ಬೆಳಗು ಮುಂಜಾವವೊ ಮುಚ್ಚಂಜೆಯೊ ಎಂದು ಸಂದೇಹ. ಬರುವ ಹಾಗೆ ಮೋಡ ದಟ್ಟನೆ ಕವಿದು ಬೆಳಕು ಮಾಯವಾಗಿತು.

ಅದು ಅಸಹನೀಯವಾದ ಮೌನ.. ಸಿಗರೇಟನ್ನಾದರೂ ನಂಜುಂಡಯ್ಯ ಸೇದಬಾರದೆ-ಎಂದುಕೊಂಡ ಜಯದೇವ, ಅವರು ಯಾಕೋ ಸಿಗರೇಟನ್ನು ಹೊರತೆಗೆಯಲೇ ಇಲ್ಲ. ದೃಷ್ಟಿಯನ್ನು ಕಿರಿದುಗೊಳಿಸಿ ಹೊಸ ಮುಖ್ಯೋಪಾಧ್ಯಾಯರನ್ನು ಪರೀಕ್ಷಿಸುತ್ತ ಜಯದೇವ ಕುಳಿತ.

ರಂಗರಾಯರು ಮತ್ತೆ ವೆಂಕಟರಾಯರತ್ತ ಮುಖ ತಿರುಗಿಸಿ ಹೇಳಿದರು:

“ಕ್ಷಮಿಸಿ. ನಿಮಗೆ ನಿಮ್ಮ ಸಹೋದ್ಯೋಗಿಗಳ ಪರಿಚಯ ನಾನು ಮಾಡಿಕೊಡಲೇ ಇಲ್ಲ.”

ನಂಜುಂಡಯ್ಯ ಮತ್ತು ಜಯದೇವನತ್ತ ನೋಡುತ್ತ, ರಾಯಭಾರಿಗಳನ್ನು ಸ್ವೀಕರಿಸುವ ರಾಷ್ಟ್ರಾಧಿಸನ ಹಾಗೆ ವೆಂಕಟರಾಯರು ತುಟಿಗಳ ಕೊನೆಯಿಂದಲೆ ಮುಗಳ್ನಕ್ಕರು.

ಔಪಚಾರಿಕವಾದ ವ೦ದನೆ-ಮರುವಂದನೆಗಳಾದುವು

“ಬನ್ನಿ ಸ್ನಾನ-ಊಟ ಮಾಡ್ಕೊಂಡು ಬರೋಣ” ಎಂದು ರಂಗರಾಯರು ಹೊಸಬರನ್ನು ಕರೆದರು. "

“ನೀವು ಯಾವಾಗಲೂ ಇಷ್ಟು ಹೊತ್ತಿಗೆ ಊಟಕ್ಕೆ ಹೋಗ್ತೀರೇನು?

ಆ ಪ್ರಶ್ನೆಯಲ್ಲಿ ಆಶ್ಚರ್ಯವಿರಲಿಲ್ಲ, ಅಣಕವಿತ್ತು, ಆಳವಾದ ಅರ್ಥವಿತ್ತು, ಶಾಲೆಯ ಕೆಲಸದ ನಡುವೆ ಊಟಕ್ಕೆ ಹೋಗುವುದು ಜವಾಬ್ದಾರಿಯ ವರ್ತನೆಯಲ್ಲವೆ೦ಬ ಧ್ವನಿಯಿತ್ತು.

ರಂಗರಾಯರಿಗೆ ಅದು ಹೊಳೆಯದೆ ಹೋಗಲಿಲ್ಲ, ಆದರೂ ಅದನ್ನು ಗಮನಿಸದೆ ಅ೦ದರು :

“ಹೌದು, ನಿಮ್ಮ ಊಟ ಇನ್ನೂ ಆಗಿಲ್ಲ ಅಲ್ವೆ? ಬನ್ನಿ ಹೋಗ್ಬಿಟ್ಟು ಬರೋಣ.”

“ಇಲ್ಲ. ನೀವು ಹೋಗಿ.. ನಾನು ಇಲ್ಲೇ ಎಲ್ಲಾದರೂ ಹೋಟೆಲಿನಲ್ಲಿ ಮುಗಿಸ್ಕೊಂಡು ಬರ್ತೀನಿ."

ಈ ಒರಟುತನ ಜಯದೇವನಿಗೆ ಆರ್ಥವಾಗಲಿಲ್ಲ, ಆ ವರ್ತನೆಯ ಸೂಚಾರ್ಥ ಠಂಗರಾಯರಿಗೆ ಹೊಳೆದು ಅವರು ನೊಂದುಕೊಂಡರು.

“ಉಪಾಧ್ಯಾಯರ ಜಾತಿಯಿ೦ದ ನನಗೇನೂ ಬಹಿಷ್ಕಾರಹಾಕಿಲ್ಲ ತಾನೆ? ನನ್ಮನೇಲಿ ಊಟ ಮಾಡ್ಕೂಡ್ದು ಅಂತ ಮೇಲಿನವರು"

“ಹೆ—ಹ್ಹೆ !" ಎಂದು ವೆಂಕಟರಾಯರು ನಕ್ಕರು. ರಂಗರಾಯರ 'ಮಾತು ಅವರ ಮೇಲೆ ಯಾವ ಪರಿಣಾಮವನ್ನೂ ಮಾಡಿದಂತೆ ತೋರಲಿಲ್ಲ.

“ಬನ್ನಿ ಹಾಗಾದರೆ.”

"ಬೇಡಿ! ನಾನು ಆಗ್ಲೇ ತೀರ್ಮಾನಿಸಿ ಬಿಟ್ಟಿದ್ದೀನಿ. ಊಟ ಹೋಟೆಲಲ್ಲೇ”

ನಂಜುಂಡಯ್ಯನಿಗೆ ಈ ನಿರಾಕರಣೆ ಮೆಚ್ಚುಗೆಯಾಯಿತು.

“ಇರಲಿ ರಂಗರಾವ್.. ಇವರ್ನ ಆನಂದವಿಲಾಸಕ್ಕೆ ಕರಕೊಂಡು ಹೋಗ್ತೀನಿ. ನೀವು ಹೋಗ್ಬನ್ನಿ” ಎಂದು ಅವರು ಹೇಳಿದರು.

ತಮಗಷ್ಟೇ ಕೇಳಿಸುವ ಹಾಗೆ 'ಹೂಂ' ಎನ್ನುತ್ತ ರಂಗರಾಯರು ಹೊರಟು ಹೋದರು. ಜಯದೇವನನ್ನು ಶಾಲೆಯಲ್ಲೆ ಬಿಟ್ಟು ನಂಜುಂಡಯ್ಯ ವೆಂಕಟರಾಯರೊಡನೆ ಹೋಟೆಲಿಗೆ ನಡೆದರು.

ಜಯದೇವ ಕಾಫಿ ತರಿಸಿ ಕುಡಿಯಲಿಲ್ಲ. ಅವನಿಗೆ ಏನೂ ಬೇಡವಾಗಿತ್ತು.

ಹೀಗಾಗುವುದೆಂದು ಆತ ನಿರೀಕ್ಷಿಸಿರಲಿಲ್ಲ. ಯಾರು ಸರಿ? ಯಾರು ತಪ್ಪು! ತಾನು ಉಪಾಧ್ಯಾಯನಾಗಿ ಬಂದಾಗ ತನಗೆ ಮುಗುಳ್ನಗೆಯ ಸ್ವಾಗತ ನೀಡಿದ ಮುಖ್ಯೋಪಾಧ್ಯಾಯ ರಂಗರಾಯರ ಮೇಲೆ ಆರೋಪಗಳು.... ಯೋಗ್ಯರೀತಿಯಲ್ಲಿ ವಿಚಾರಣೆ ನಡೆಸಲಾಗದಂತಹ ಆರೋಪಗಳು.ಅದು ರಾಜಕೀಯಕ್ಕೆ ಸಂಭಂಧಿಸಿದ್ದು. ಸ್ವತಂತ್ರ ಭಾರತ ರಾಜ್ಯಾಂಗದಲ್ಲಿ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಆಸ್ಪದವಿಲ್ಲವೆ ಹಾಗಾದರೆ! ಅಲ್ಲಿ ಬರೆದಿರುವುದೆಲ್ಲಾ ಕಾಗದದ ಮೇಲಿನ ತೋರಿಕೆಯ ಮಾತುಗಳೆ?.... ಜಯದೇವನಿಗೆ ಸ್ವತಃ ರಾಜಕೀಯದಲ್ಲಿ ಅಂತಹ ಆಸಕ್ತಿ ಇರಲಿಲ್ಲವಾದರೂ ಆತ ಯೋಚಿಸಿದ. ರಂಗರಾಯರು ಮತ್ತು ನಂಜುಂಡಯ್ಯನ ನಡುವಿನ ವಿರಸಕ್ಕೆ ಯಾವುದೋ ಸಣ್ಣ ತಪ್ಪು ತಿಳಿವಳಿಕೆಯೇ ಕಾರಣವಿರಬೇಕು. ಅದು ಬೆಳೆದು ಇಬ್ಬರನ್ನೂ ಬೇರೆ ಬೇರೆಯಾಗಿ ಎರಡು ದಿಕ್ಕುಗಳಿಗೆ ಒಯ್ದಿರಬೇಕು....

"ಕಾಫಿ ತರ್ಸೋಲ್ವೆ ಸಾರ್?"

ಆ ಪ್ರಶ್ನೆ ಕೇಳಿ ಜಯದೇವೆ ತಿರುಗಿ ನೋಡಿದ. ವಿರೂಪಾಕ್ಷ ತನ್ನ ಇಬ್ಬರೂ ಸಹಪಾಠಿಗಳೊಡನೆ ನಿಂತಿದ್ದ ಬಾಗಿಲಲ್ಲೆ.

"ಬೇಡ ವಿರೂಪಾಕ್ಷ. ಈಗೇನೂ ಬೇಡ. ಸಾಯಂಕಾಲ ಕುಡೀತೀನಿ."

ಆದರೆ ಆ ಹುಡುಗರು ಅಷ್ಟರಲ್ಲೆ ಹೊರಟು ಹೋಗುವಂತಿರಲಿಲ್ಲ.

"ಅವರು ಯಾರು ಸಾರ್ ಬಂದಿದ್ದು?"

ಒಬ್ಬ ಹಾಗೆ ಕೇಳಿದರೆ ಇನ್ನೊಬ್ಬ ಬೇರೊಂದು ಪ್ರಶ್ನೆ ಕೇಳಿದ:

"ಅವರು ಇನ್ಸ್ ಪೆಕ್ಟ್ರೆ ಸಾರ್?"

ಹೇಳಬಹುದೋ ಹೇಳಬಾರದೋ ಎಂಬ ಅನಿಶ್ಚಯತೆ ಕ್ಷಣಕಾಲ ಜಯದೇವನನ್ನು ಗೊಂದಲಕ್ಕೀಡುಮಾದಿತು. ತನ್ನಿಂದಲೇ ಈ ವಾರ್ತೆ ಹುಡುಗರಿಗೆ ತಿಳಿದರೆ ಮುಂದೆ ನಂಜುಂಡಯ್ಯ ಏನೆನ್ನುವರೊ ಎಂಬ ಶಂಕೆ ಚಾಧಿಸಿತು. ಆದರೂ ಆ ವಿಷಯ ಆಗ ಅಲ್ಲವಾದರೆ ಮತ್ತೆ ಎಲ್ಲರಿಗೂ ತಿಳಿಯಲೇಬೇಕಲ್ಲವೆ?

“ಹೊಸ ಹೆಡ್ಮೇಷ್ಟು ಬಂದಿದ್ದಾರೆ. ರಂಗರಾಯರಿಗೆ ವರ್ಗವಾಯ್ತು.”

“ಓ!"

ವಿರೂಪಾಕ್ಷನ ಮುಖ ವಿವರ್ಣವಾಯಿತು. ತನ್ನ ಅಣ್ಣ ಮುಖ್ಯೋಪಾಧ್ಯಾಯರಾಗುವರೆಂದು ಆತ ಭಾವಿಸಿದ್ದು, ಈಗ ಆತನಿಗೆ ನಿರಾಶೆಯಾಗಿರಬೇಕೆಂಬುದು ಸ್ಪಷ್ಟವಾಗಿತ್ತು, ಜತೆಯಲ್ಲಿದ್ದ ಹುಡುಗರೂ ಅವನ ಮುಖವನ್ನೇ ನೋಡಿದರು. ಅವರಿಗೂ ರಂಗರಾಯರ ಮೇಲಿನ ಆರೋಪಗಳ ವಿಷಯ ತಿಳಿದಿತ್ತೇನೋ ಹಾಗಾದರೆ–?

ಹುಡುಗರು, ಹೊರಗೆ ಬಯಲಲ್ಲಿ ಮರದ ಕೆಳಗೂ ಜಗಲಿಯ ಮೇಲೂ ಆಡುತ್ತಲಿದ್ದವರಿಗೆಲ್ಲ ಸುದ್ದಿ ತಿಳಿಸಲು ಓಡಿಹೋದರು.

ಜಯದೇವ ಮೂಲೆಯಲ್ಲಿ ಬೀರುವಿನ ಮರೆಯಲ್ಲಿ ಇರಿಸಿದ್ದ ತನ್ನ ಸುರುಳಿ ಹಾಸಿಗೆಯನ್ನು ನೋಡಿದ... ಈ ಹೊಸ ಮುಖ್ಯೋಪಾಧ್ಯಾಯರೆಲ್ಲಿ ವಸತಿ , ಮಾಡುವರೊ? ಸಂಸಾರವಂದಿಗನಿರಬೇಕು. ಕುಟುಂಬವನ್ನು ಕರೆದುಕೊಂಡು ಬರುವವರೆಗೆ ಅವರೂ ಕೂಡಾ ಶಾಲೆಯಲ್ಲೆ ಉಳಿಯುವರೇನೊ?

ಬೆಂಗಳೂರಿನಿಂದ ರಾತ್ರೆ ಹೊರಟು ಆ ದಿನ ಅಲ್ಲಿಗೆ ಕೈಗೆತ್ತಿಕೊಂಡು ಜಯದೇವ ಓದತೊಡಗಿದ. ಮೊದಲ ಪುಟದ ಶಿರೋನಾಮೆಗಳನ್ನೆಲ್ಲ ಆತ ಓದಿದಾಯಿತು. ಅದೇನು ಓದುತ್ತಿದ್ದನೆಂಬುದು ಅವನಿಗೇ ತಿಳಿಯಲಿಲ್ಲ... ಅಗ್ರ ಲೇಖನವೂ ಅಷ್ಟೆ... ಆದರೆ ಸ್ಠಳೀಯ ಸುದ್ದಿಗಳ ಪುಟ ಬಂದಾಗ ಅವನ ಆಸಕ್ತಿ ಕೆರಳಿತು. ಸಣ್ಣ ಪುಟ್ಟ ಊರುಗಳ ಸಣ್ಣ ಪುಟ್ಟ ವಿಷಯಗಳನ್ನೆಲ್ಲ ಓದಿದ. ತಾನು ದುಡಿಯಲು ಬಂದಿದ್ದ ಊರಿನ ವಾರ್ತೆಯೇನೊ ಆ ದಿನಪತ್ರಿಕೆಯಲ್ಲಿ ಇರಲಿಲ್ಲ, ಅಷ್ಟು ಮಹತ್ವವಿದ್ದರಲ್ಲವೆ ಆ ಊರಿಗೆ?

ಕಿಲಕಿಲ ನಗು-ಗುಸು ಗುಸು ಮಾತು... ಕೈ ಬಳೆಗಳ ಸದ್ದು ಕೂಡಾ. ಪತ್ರಿಕೆಯೋದುವುದನ್ನು ನಿಲ್ಲಿಸಿ ಜಯದೇವ ತಿರುಗಿ ನೋಡಿದ ನಾಲ್ವರು ಹುಡುಗಿಯರು ಅಲ್ಲಿ ನಿಂತಿದ್ದರು, ನಾಲ್ಕನೆಯ ತರಗತಿಯವರು. ಅವರಲ್ಲಿ ಹೆಚ್ಚು ಬುದ್ಧಿವಂತೆಯಾದ ವಿದ್ಯಾರ್ಥಿನಿ ಪ್ರಭಾಮಣಿ ಕೇಳಿದಳು :

“ಪುರಸೊತ್ತಿದೆಯಾ ಸಾರ್?”

“ಯಾಕಮ್ಮ? ಏನಾಗ್ವೇಕು?

“ಒಂದೆರಡು ವಿಷಯ ಕೇಳ್ಬೇಕಾಗಿತ್ತು.”

"ಬನ್ನಿ ಒಳಕ್ಕೆ.”

ಆ ನಾಲ್ವರೂ ಬಂದು ಜಯದೇವನ ಸಮೀಪದಲ್ಲೆ ನಿಂತುಕೊಂಡರು. ಪ್ರಭಾಮಣಿ ಚಿಕ್ಕ ಹುಡುಗಿ—ಹದಿಮೂರು ಇರಬಹುದು. ಅವಳು ಸೀರೆಯುಟ್ಟಿದ್ದರೂ ಆ ಉಡುಗೆ ಬೊಂಬೆಗೆ ಸೀರೆಯುಡಿಸಿದ ಹಾಗಿತ್ತು, ಉಳಿದಿಬ್ಬರು ಲಂಗ ತೊಟ್ಟಿದ್ದರು. ನಾಲ್ಕನೆಯವಳು ಮಾತ್ರ ದೊಡ್ಡವಳು. ಹದಿನಾಲ್ಕು ದಾಟಿತ್ತೇನೋ, ಉಟ್ಟಿದ್ದ ಸೀರೆ ಮೈ ಸೊಬಗನ್ನು ಹೆಚ್ಚಿಸಿತ್ತು. ಬಣ್ಣ ನಸುಗೆಂಪು, ತು೦ಬಿತುಳುಕುತಿದ್ದ ಆರೋಗ್ಯ, ನಗೆಯು ರೂಪದಲ್ಲಿ ಚೆಲ್ಲಾಟವಾಡಬಯಸುತ್ತಿತ್ತು. ಕಣ್ಣುಗಳು ಚ೦ಚಲವಾಗಿದ್ದುವು.ಜಯದೇವನಿಗೆ ಒಂದು ವಿಧವಾಯಿತು. ಹುಡುಗಿಯರ ಸಾಮಿಪ್ಯ ಅವನಿಗೆ ಹೊಸದಾಗಿರಲಿಲ್ಲ. ಬೆಂಗಳೂರಲ್ಲಿ ಸುನಂದಾ ಆತನೊಡನೆ ಒಡನಾಟವಾಡಿ ಸಂಕೋಚವನ್ನೆಲ್ಲ ತೊಡೆದು ಹಾಕಿದ್ದಳು. ಆದರೂ ಮೂವರನ್ನೂ ಮುಂದೆ ಬಿಟ್ಟು ತಾನೊಬ್ಬಳೇ ಹಿಂದೆ ನಿಂತು ತನ್ನನ್ನು ಸೂಕ್ಷ್ಮವಾಗಿ ನೋಡುತ್ತಿದ್ದ ಆ ಹುಡುಗಿ.. ಆ ನೋಟ.. ಹದಿನಾಲ್ಕಕ್ಕಿಂತಲೂ ಜಾಸ್ತಿಯಾಗಿತ್ತೇನೋ ವಯಸ್ಸು....

"ಏನು ವಿಷಯ ಕೇಳಿ."

"ವೀರಮಾತೆ ವಿಮಲಾ ಪಾಠಕ್ಕೆ ಸಂಬಂಧಿಸಿದ್ದು ಸಾರ್."

"ಯಾಕೆ, ಏನು ಕಷ್ಟವಿದೆ ಆ ಪಾಠದಲ್ಲಿ?"

ಹುಡುಗಿಯರು ಸಂದೇಹವೆಂದು ಅದೇನನ್ನೋ ಕೇಳಿದರು. ಅದು ಹೀಗೆ ಯಾಕೆ ? ಹಾಗೆ ಯಾಕೆ ? 'ಈ ಪದದ ಅರ್ಥವೇನು ಸಾರ್ ? 'ಇದು ನಿಜವಾಗಿಯು ನಡೆದದ್ದೇ ಸಾರ್? 'ಸುಳ್ಳು ಚರಿತ್ರೆ ಬರಿಯೋಕೆ ಆಗಲ್ವೇ ಸಾರ್?'

ತಾನು ಉಪಾಧ್ಯಾಯನೆಂಬುದನ್ನು ಮರೆಯುದೆ ಜಯದೇವ ಎಲ್ಲವನ್ನೂ ವಿವರಿಸಿದ. ವಿವರಿಸುತ್ತ ಗುಂಪಿನಲ್ಲಿದ್ದ ದೊಡ್ಡ ಹುಡುಗಿಯನ್ನು ನೋಡಿದ. ಅಲ್ಲಿದ್ದ ಮೆಚ್ಚುಗೆಯ ದೃಷ್ಟಿ....ಸಂದೇಹ ಕೇಳಲು ಬಂದ ಹುಡುಗಿಯಲ್ಲ ಈಕೆ, ಅದನ್ನು ನೆಪಮಾಡಿಕೊಂಡು ಪ್ರಭಾಮಣಿಯನ್ನು ಮುಂದಿಟ್ಟು ಬಂದಿದ್ದಾಳೆ--ಎಂದು ಜಯದೇವನಿಗೆ ಅನಿಸಿತು.

“ಹೆಡ್ಮೇಷ್ಟ್ರು ಬಂದ್ರು!” ಎಂದಳೊಬ್ಬಳು ಹುಡುಗಿ.

ಆಫೀಸು ಕೊಠಡಿಗೆ ವಿದ್ಯಾರ್ಥಿನಿಯರನ್ನು ಬರಬಿಟ್ಟುದು ತಪ್ಪಾಯಿತೇನೋ ಎಂದು ಜಯದೇವನಿಗೆ ಅಳುಕಿತು.

“ಗಂಟೆ ಬಾರಿಸೋ ಹೊತ್ತಾಯ್ತು, ಕ್ಲಾಸಿಗೆ ಹೋಗಿಮ್ಮಾ”

ಹುಡುಗಿಯರು ಹಿಂತಿರುಗುತಿದ್ದಾಗಲೆ ರಂಗರಾಯರು ಬಂದುಬಿಟ್ಟರು. ಆ ಮುಖದಲ್ಲಿದ್ದ ಶಾಂತತೆ ಜಯದೇವನನ್ನು ಚಕಿತಗೊಳಿಸಿತು.

“ಏನಮ್ಮ, ಪ್ರಭಾ – ಹೊಸ ಮೇಷ್ಟ್ರಿಗೆ ಹಾಯಾಗಿ ಕೂತಿರೋಕು ಬಿಡಲ್ವಲ್ಲೇ ನೀನು?” ಎಂದರು ಅವರು.

“ಏನೋ ಸಂಶಯ ಕೇಳ್ಬೇಕಾಗಿತ್ತು ಸಾರ್.”

ರಂಗರಾಯರು ಜಯದೇವನತ್ತ ತಿರುಗಿ ಹೇಳಿದರು :

“ಹೇಳ್ಕೊಟ್ರಾ, ಜಯದೇವ್? ಈ ಪ್ರಭಾಮಣಿ ಮೊದಲ್ನೇ ತರಗತಿಯಿಂದ ಈವರೆಗೂ ಹೀಗೆಯೇ, ಎಷ್ಟು ಹೇಳ್ಕೊಟ್ಟರೂ ತೃಪ್ತಿಯಿಲ್ಲ ಆವಳಿಗೆ !”

ಜಯದೇವ ಮುಗುಳುನಕ್ಕ.

ರಂಗರಾಯರು ಹೊರಹೊರಡುತ್ತಿದ್ದ ಹುಡುಗಿಯರನ್ನು ತಡೆದರು.

“ನಿಮಗೆ ಗೊತ್ತೇನ್ರೇ? ನನಗೆ ವರ್ಗವಾಯ್ತು, ಬೇರೆ ಊರಿಗೆ ಹೊರಠೋಗ್ತೀನಿ."

ಆ ಸ್ವರ ಕಂಪಿಸುತಿತ್ತು, ಒಳಗಿನ ಕೊರಗನ್ನು ತೋರಿಸಲೆಳಸಿದ ಭಾವನೆಗಳನ್ನೆಲ್ಲ, ಪ್ರಯತ್ನಪೂರ್ವಕವಾಗಿ ಅವರು ತಡೆಹಿಡಿದಿದ್ದರು.

ಆ ಹುಡುಗಿಯರ ಮುಖಗಳು ಕಪ್ಪಿಟ್ಟವು.

“ಇಲ್ಲಿಗೆ ಬೇರೆ ಯಾರು ಬರ್ತಾರೆ ಸಾರ್?”

“ಬಂದ್ದಿಟ್ಟಿದಾರೆ, ನೋಡ್ಲಿಲ್ವೇನು ನೀವು?

ಪ್ರಭಾಮಣಿ “ಇಲ್ಲ” ಎನ್ನುವುದಕ್ಕೂ ವೆಂಕಟರಾಯರೊಡನೆ ಸಂಜುಂಡಯ್ಯ ಬರುತಿದ್ದುದಕ್ಕೂ ಸರಿಹೋಯಿತು. -

“ಅಲ್ನೋಡಿ,” ಎಂದರು ರಂಗರಾಯರು.

ಬರುತಿದ್ದವರನ್ನು ನೋಡುತ್ತಲೆ ಹುಡುಗಿಯರು ಓಡಿಹೋದರು.

“ಬಂದ ಷುರುನಲ್ಲೇ ನಿಮಗೆ ಒಳ್ಳೆ ಅನುಭವ ಆದಹಾಗಾಯ್ತು, ಅಲ್ವೆ ಜಯದೇವ್ ?'

“ಏನೋ ಸಾರ್... ”

ಮತ್ತೇನನ್ನ ಹೇಳಬೇಕೆಂದು ಜಯದೇವನಿಗೆ ತೋಚಲಿಲ್ಲ.

ಅಷ್ಟರಲ್ಲಿ ನಾಲ್ಕನೆಯ ತರಗತಿಯ ಹಿರೇಮಣಿ ಗ೦ಟೆಬಾರಿಸುವ. ಕಬ್ಬಿಣದ ಕೋಲಿನೊಡನೆ ಬಂದ.

"ಟೈಂ ಆಯ್ತೆ ಸಾರ್?”

“ಇನ್ನೂ ಎರಡು ನಿಮಿಷ ಇದೆಯಲ್ಲೋ ?... ಹೂಂ.. ಹೊಡಿ !”

ಶಾಲೆಯ ಗಂಟೆ ಭಾರಿಸಿತು. ಆ ಅಲೆಗಳು ಮೌನವಾಗುವುದಕ್ಕೆ ಮುಂಚೆಯೆ ಹುಡುಗ ಹುಡುಗಿಯರೆಲ್ಲ ತಮ್ಮ ತಮ್ಮ ತರಗತಿಗಳನ್ನು ಸೇರಿಕೊಂಡರು.

ರಂಗರಾಯರೆಂದರು:

“ನಾಳೆ ಬಂದ್ದಿಡುತ್ತೆ ಆಜ್ಞಾಪತ್ರ ಅಂತೂ ಈ ಊರಲ್ಲಿ ಇವತ್ತು ನಾನು ಮಾಡೋ ಪಾಠವೇ ಕೊನೇದು'

ಜಯದೇವನಿಗೆ ಬಲು ಖೇದವೆನಿಸಿತು.