೯
ರಂಗರಾಯರನ್ನು ಬೀಳ್ಕೊಡುವುದಕ್ಕೋಸ್ಕರ ಊರಿನವರು ಸತ್ಕಾರಕೂಟ ಏರ್ಪಡಿಸಬಹುದೆಂದು ಜಯದೇವ ನಿರೀಕ್ಷಿಸಿದ್ದು ಸುಳ್ಳಾಯಿತು. ಯಾರಾದರೂ ಆ ಮಾತನ್ನೆತ್ತಿದರೆ ನಿರಾಕರಿಸಬೇಕೆಂದು ರಂಗರಾಯರೇನೋ ತೀರ್ಮಾನಿಸಿದ್ದರು. ಆದರೆ ಆ ಮಾತು ಬರಲೇ ಇಲ್ಲ.
ವೆಂಕಟರಾಯರು ಆಗಮಿಸಿದ ಆಜ್ಞಾಪತ್ರ ಬಂದೊಡನೆ ರಂಗರಾಯರು ಅಧಿಕಾರ ವಹಿಸಿಕೊಟ್ಟರು. ಎಲ್ಲ ತರಗತಿಗಳಿಗೂ ಹೋಗಿ, ತಾನು ಹೊರಡುವೆನೆಂದು ಹೇಳಿ ಬಂದರು. ಆಫೀಸು ಕೊಠಡಿಗೆ ಬಂದು ಐದು ನಿಮಿಷ ಮೌನವಾಗಿ ಅಲ್ಲಿಯೆ ಕುಳಿತರು. ಕೊರಳಿನ ನರಗಳು ಊದಿಕೊಂಡಿದುವು. ಮುಖ ಕೆಂಪುಕೆಂಪಾಗಿತ್ತು' ಮಧಾಹ್ನದ ವಿರಾಮ ಕಳೆದು ವೆಂಕಟರಾಯರೂ ನಂಜುಂಡಯ್ಯನೂ ತರಗತಿಗಳಿಗೆ ಹೊರಟೊಡನೆ ರಂಗರಾಯರೆದ್ದರು.
“ಮನೆಗೆ ಹೊರಡ್ತೀರಾ ಸಾರ್ ?” ಎಂದು ಕೇಳಿದ ಜಯದೇವ.
ಅವರು ಹೌದೆಂದು ತಲೆಯಾಡಿಸಿದರು.
“ಊಟಮಾಡ್ಕೊಂಡು ವಾಪ್ಸು ಬರ್ತೀರಾ?”
“ಯಾಕ್ಬರ್ಲಿ ಇನ್ನು?" -
ರಂಗರಾಯರ ಹೃದಯದೊಳಗಾಗುತ್ತಿದ್ದ ಸಂಕಟವನ್ನು ಕಂಡು ಜಯದೇವನಿಗೆ ಕೆಡುಕೆನ್ನಿಸಿತು.
“ಸಾಯಂಕಾಲ ಮನೇಲೆ ಇರ್ತಿರಾ ಸಾರ್ ?
ಇರ್ತೀನಿ ಜಯದೇವ್. ಯಾಕೆ? ಮನೆಗ್ಬರ್ತೀರೇನು? ಶಿಕ್ಷೆ, ಅಂತ ನನ್ನ ವರ್ಗಾಯಿಸಿದಾರೆ. ನೀವಿನ್ನು ನನ್ಜತೇಲಿ ಮಾತಾಡೋದು ಚೆನಾಗಿರುತ್ತೋ ಇಲ್ಲವೊ–”
ಆ ಮಾತಿನಲ್ಲಿ ಸತ್ಯಾಂಶವಿತ್ತು, ಆದರೆ ಅದು, ಜಯದೇವ ಸ್ವೀಕರಿಸಲು ಸಿದ್ಧನಿದ್ದ ಆಹ್ವಾನ.. ಎದ್ದು ನಿಂತು ಅವನೆಂದ:
“ಪರವಾಗಿಲ್ಲ ಸಾರ್.. ನನಗೆ ಯಾರ ಹೆದರಿಕೇನೂ ಇಲ್ಲ-ಹಂಗೂ ಇಲ್ಲ."
ಆ ಮಾತುಗಳಿಗಾಗಿ ಕೃತಜ್ಞ ಎಂಬರ್ಥದ ನೋಟವನ್ನು ಬೀರಿ ರಂಗರಾಯರು ಹೊರಟೇ ಹೋದರು. ಜಯದೇವ ಎರಡನೆ ತರಗತಿಯತ್ತ ಕಾಲು ಹಾಕಿದ.
ತರಗತಿಗಳು ಮುಗಿದು ಉಪಾಧ್ಯಾಯರೆಲ್ಲ ಮತ್ತೆ ಕಲೆತಾಗ ರಂಗರಾಯರ ಪ್ರಸ್ತಾಪವೇ ಬಂತು.
“ಆಸಾಮಿ ಇಷ್ಟೆಲ್ಲ ತೊಂದರೆ ಕೊಟ್ಟ ಅಲ್ವೆ?”
ವೆಂಕಟರಾಯರ ಆ ಧನಿಯಲ್ಲಿ ಮೂದಲಿಕೆಯಿತ್ತು, ರಂಗರಾಯರನ್ನು ಏಕವಚನದಲ್ಲಿ ಆಸಾಮಿ' ಎಂದೆಲ್ಲ ಕರೆದುದು ಜಯದೇವನಿಗೆ ಮೆಚ್ಚಿಗೆಯಾಗಲಿಲ್ಲ.
ನಂಜುಂಡಯ್ಯ ತಾವು ಅನುಭವಿಸಿದ ತೊಂದರೆಯನ್ನು ವಿವರಿಸಿದರು.
“ಏನ್ಮಾಡೋಣ ಹೇಳಿ? ಆರು ತಿಂಗಳು ಹಿಡಿಯಿತು-ಇಷ್ಟಾಗ್ಬೇಕಾದ್ರೆ. ನಮ್ಮ ಡಿ.ಇ.ಒ ಅಂತೂ ಮೃದು ಮನುಷ್ಯ. ಆ ಗುಣಾನ ಉಪಯೋಗಿಸ್ಕೊಂಬಿಟ್ರು ಈ ರಂಗರಾಯರು.ಹೀಗಾಗಿ ತಡವಾಯ್ತು.”
“ವಿದ್ಯಾಸಚಿವರೇ ಸ್ವತಃ ದೂರು ಸ್ವೀಕರಿಸಿ ತನಿಖೆಯಾಗಲೀಂತ ಆಜ್ಞೆ ಕೊಟ್ರಂತೆ.."
"ಹೌದು;ಹೌದು"
“ಡಿ, ಪಿ. ಐ ಆಫೀಸ್ನಲ್ಲಿ ತಿಳೀತು—ಸಸ್ಪೆಂಡ್ ಮಾಡ್ಬೇಕೂಂತ್ಲೆ ಇದ್ರಂತೆ. ಆದರೆ ನಿವೃತ್ತಿ ಹೊಂದೋ ಸಮಯ— ಹಾಳಾಗಿ ಹೋಗ್ಗಿಂತ ಬಿಟ್ಬಿಟ್ರಂತೆ. ”
ಜಯದೇವನಿದ್ದುದನ್ನು ಅಪರಿಬ್ಬರೂ ಗಮನಿಸಲಿಲ್ಲ. ಎಳೆಯನಾದ ಹೊಸಬನಾದ ಜಯದೇವ ತಮ್ಮ ಅಭಿಪ್ರಾಯವನ್ನು ವಿನೀತನಾಗಿ ಒಪ್ಪಿಕೊಳ್ಳಲೇಬೇಕು ಎಂದು ಅವರು ಭಾವಿಸಿದಂತೆ ತೋರಿತು.'ನಿನಗೂ ಒಂದು ಅಭಿಪ್ರಾಯವುಂಟೇ?" ಎಂದು ಜಯದೇವನ್ನನು ಅವರು ಕೇಳಲೂ ಇಲ್ಲ.
ನಂಜುಂಡಯ್ಯ ಒಂದು ಮಾತಂದರು:
"ನನ್ನ ಮನಸ್ನಲ್ಲೇನಿತ್ತು ಗೊತ್ತೆ ಸಾರ್? ಏನಾದರೂ ವಿಚಾರಣೆಯಾಗಿ ಒಂದು ಇಲ್ಲವೆ ಎರಡು ರೂಪಾಯಿ ಜುಲ್ಮಾನೆ ಆಗ್ಬೇಕೂಂತ--"
ಜಯದೇವನಿಗೆ ಆ ಮಾತು ಅಸಹ್ಯಎನಿಸಿತು. ಥೂ-ಥೂ... ವೆಂಕಟರಾಯರು ಕೂಡಾ ಅದನ್ನು ಮೆಚ್ಚಿಕೊಳ್ಳಲಾರರು-ಎಂದು ಅವನ ಮನಸ್ಸು ಸಿಡಿನುಡಿಯಿತು.
ಆದರೆ ಜಯದೇವನ ತಿಳಿವಳಿಕೆಗೆ ನಿಲುಕದ ಎತ್ತರದಲ್ಲಿದ್ದರು ವೆಂಕಟರಾಯರು.
"ಅದು ಅಷ್ಟು ಸುಲಭವಲ್ಲ ನಂಜುಂಡಯ್ಯ. ಅದಕ್ಕೆ ಆ ವ್ಯಕ್ತಿ ಗುರು ತರವಾದ ಆಪರಾಧ ಮಾಡಿರ್ಬೇಕು"
"ಅದು ನಿಜ ಅನ್ನಿ",
“ಅಷ್ಟೇ ಅಲ್ಲ, ಈಗ ಅಸೆಂಬ್ಲೀಲಿ ವಿರೋಧಪಕ್ಷದವರೂ ಕೆಲವರಿದ್ದಾರೆ ನೋಡಿ, ಇಲಾಖೆಯವರು ಹುಷಾರಾಗಿ ಇರದೇ ಇದ್ರೆ, ಆ ಗೋಪಾಲಗೌಡ ಅಂಥವರಿಗೇನಾದರೂ ಈ ವಿಷಯ ತಿಳಿಯಿತೂಂತಿಟ್ಕೊಳ್ಳಿ–ಆಗೇ ಹೋಯ್ತು! ಇನ್ನು ಬೆಂಗಳೂರಿನ ಪತ್ರಿಕೆಗಳೋ –ಅವಕ್ಕೆ ಲ೦ಗು ಲಗಾಮು ಒಂದೂ ಇಲ್ಲ.... "
ಪ್ರಜಾಪ್ರತಿನಿಧಿ ಸಭೆಯ ಅಧಿವೇಶನದಲ್ಲಿ ಬಡ ಉಪಾಧ್ಯಾಯರ ಪ್ರಶ್ನೆ ಬಂದುದನ್ನು, ಪತ್ರಿಕೆಗಳಲ್ಲಿ ಪ್ರಕಟವಾದ ಟೀಕೆ ಟಿಪಣಿಗಳನ್ನು ಜಯದೇವ ಓದಿದ್ದ, ತಾನು ಉಪಾಧ್ಯಾಯನಾಗದೆ ಇದ್ದಾಗಲೂ ಅ೦ತಹ ವಿಷಯದ ಕಡೆಗೆ ಅವನ ಗಮನ ಹೋಗುತ್ತಿತ್ತು. ಬಡ ಉಪಾಧ್ಯಾಯರ ಪರವಾದ ಪ್ರಸ್ತಾಪ ಬಂದಾಗಲೆಲ್ಲ ಅವನಿಗೆ ಸಂತೋಷವಾಗುತ್ತಿತ್ತು. ಆದರೆ ವೆಂಕಟರಾಯರ ದೃಷ್ಟಿಯಲ್ಲಿ ಅದು ಹಾಗಿರಲಿಲ್ಲ....
"ಏನು ಜಯದೇವ್ ಸುಮ್ಮನೆ ಕೂತಿದೀರಲ್ಲ?"
"ನನಗೆ, ಈ ಸಚಿವರು-ಅಸೆಂಬ್ಲಿ ವಿಷಯ-ಏನೂ ಗೊತ್ತಾಗೋದಿಲ್ಲ ಸಾರ್."
“ಅದು ನಿಜ ಅನ್ನಿ, ರಾಜಕೀಯ ಅಂದ್ರೆ ಸಾಮಾನ್ಯ ವಿಷಯವೇನಲ್ಲ!”
ನಂಜುಂಡಯ್ಯನಿಗೆ, ವೆಂಕಟರಾಯರು ಬಂದರೆಂದು ಪರಮ ಸಂತೋಷವಾಗುವುದೇನೂ ಸಾಧ್ಯವಿರಲಿಲ್ಲ, ಕಾರಣ, ಈ ರಾಯರೆಲ್ಲಾ ಒಂದೇ ಜನ. ಆದರೂ ವೆಂಕಟರಾಯರ ಮನಸಿನ ಆಳವನ್ನು ತಿಳಿದುಕೊಳ್ಳಲು ನಂಜುಂಡಯ್ಯ ಕುತೂಹಲಿಯಾದರು. ಅಲ್ಲದೆ ರಂಗರಾಯರ ದೆಸೆಯಿಂದ ಅವರಿಬ್ಬರಲ್ಲಿ ಒಂದು ರೀತಿಯ ಒಮ್ಮತವೂ ಇತ್ತಲ್ಲವೇ? ವೆಂಕಟರಾಯರನ್ನು ತಮಗೆ ಬೇಕಾದವರಾಗಿ ಮಾಡುವುದು ಅಗತ್ಯವಾಗಿಯೂ ಇತ್ತು, ಅದನ್ನು ಸಾಧಿಸಲೆಂದು ನಂಜುಂಡಯ್ಯ ಹೂಬಾಣವನ್ನು ತಮ್ಮ ಹೆದೆಗೇರಿಸಿದರು.
“ನಿಮಗಂತೂ ಈ ರಾಜಕೀಯ ವಿಷಯದಲ್ಲೆಲ್ಲಾ ತುಂಬಾ ಪರಿಶ್ರಮ ಅಂತ ತೋರುತ್ತೆ.”
“ಒಂದು ರೀತೀಲಿ ಹಾಗನ್ಬೌದು ನಂಜುಂಡಯ್ಯ, ಮಲೆನಾಡ್ನಲ್ಲೊಂದು ಗಾದೆ ಇದೆ–ಕಾಲ ಬಂದ ಹಾಗೆ ಕೋಲ ಅಂತ. ಹಾಗೆ ನಾನು. ಮೊದಲಿಂದ್ಲೂ ಅಷ್ಟೆ, ದಿವಾನರ ಕಾಲ್ದಲ್ಲಿ ನಿಷ್ಠಾವಂತನಾದ ರಾಜಭಕ್ತ, ಅದಾಲ್ಮೇಲೆ ರಾಷ್ಟ್ರೀಯವಾದಿ. ಹ್ಯಾಟೆ ನನಗೆ ಮೆಚ್ಚುಗೆ ಆದ್ರೂ ಒಂದೊಂದ್ಸಲ ಬಿಳೀಟೋಪಿನೂ ಹಾಕ್ಕೊಂಡಿದ್ದೀನಿ. ಕಾಲದ್ಜತೇಲಿ ನಾವೂ ಉರುಳ್ಬೇಕು!"
ಇದು ಸಂದರ್ಭಸಾಧನೆ–ಎಂದಿತು ಜಯದೇವನ ಮನಸ್ಸು, ಆದರೆ ವೆಂಕಟರಾಯರ ದೃಷ್ಟಿಯಲ್ಲಿ ಅದು ಆಧುನಿಕ ನವನಾಗರಿಕ ಲಕ್ಷಣ,– ಲೋಕಜ್ಞಾನ.
ತಮಗೆ ತಿಳಿಯದೆಯೇ ಹಾಸ್ಯಾಸ್ಪದವಾಗುವಂತಹ ರೀತಿಯಲ್ಲಿ ವೆಂಕಟರಾಯರು ಆಡಿದ ಮಾತುಗಳನ್ನ ನಂಜುಂಡಯ್ಯ ಅಲ್ಲಗಳೆಯಲಿಲ್ಲವಾದರೂ ತಮ್ಮ ಅಮೂಲ್ಯ ಅಭಿಪ್ರಾಯವನ್ನು ಅವರು ಬೇರೆ ರೀತಿಯಲ್ಲಿ ಮಂಡಿಸಿದರು:
“ಯಾರು ರಾಜ್ಯ ಆಳಿದರೇನು? ನಾವು ವಿದ್ಯಾದಾನ ಮಾಡುತ್ಲೇ ಇರ್ಬೇಕು.”
“ಸರಿಯಾಗಿ ಹೇಳಿದಿರಿ !” ಎಂದರು ವೆಂಕಟರಾಯರು.
ತಮ್ಮ ಮಾತು ಜಯದೇವನ ಮೇಲೇನು ಪರಿಣಾಮ ಮಾಡಿತೆಂದು ನೋಡಲು ನಂಜುಂಡಯ್ಯ ಅವನತ್ತ ತಿರುಗಿದರು. ಆದರೆ ಆ ಮುಖದ ಮೇಲಿದ್ದ ಭಾವನೆ ದೊಡ್ಡ ಶೂನ್ಯವಾಗಿತ್ತು. -
ಕಾಫಿಗೆಂದು, ವಾಯುವಿಹಾರಕ್ಕೆಂದು, ಅವರಿಬ್ಬರೆದ್ದರು. ಮನಸ್ಸಿಲ್ಲದೆ ಹೋದರೂ ಜಯದೇವನೂ ಏಳಬೇಕಾಯಿತು.. ಶಾಲೆಯ ಬಾಗಿಲುಗಳಿಗೆ ಆತ ಬೀಗ ತಗುಲಿಸಿದ.
“ಇದೇನು ಬೀಗದ ಕೈ ನಿಮ್ಮಲ್ಲಿದೆಯಲ್ಲಾ ಮಿ.ಜಯದೇವ್?”
ಆತ ಮಲಗುವುದೇ ಅಲ್ಲೆಂದು ನಂಜುಂಡಯ್ಯ ವೆಂಕಟರಾಯರಿಗೆ ವಿವರಣೆ ಇತ್ತರು. ಆದರೆ ಆ ವಿಷಯ ತಿಳಿದು ಹೊಸ ಮುಖ್ಯೋಪಾಧ್ಯಾ ಯರಿಗೆ ಅಸಮಾಧಾನವಾಯಿತು. ಬರುತಿದ್ದಾಗ ಅವರು ಮನೆ ಮಾಡುವ ತನಕ ಶಾಲೆಯಲ್ಲೆ ಉಳಿದುಕೊಂದರಾಯಿತೆಂದು ಯೋಚಿಸಿದ್ದರೇನೋ ನಿಜ. ಆದರೆ ಜಯದೇವನೂ ಶಾಲೆಯಲ್ಲೇ ಇರುವುದನ್ನೂ ತಿಳಿದಾಗ ಅವರು ತಮ್ಮ ಅಭಿಪ್ರಾಯ ಬದಲಾಯಿಸಿದರು. ಉಪಾಧ್ಯಾಯರು ಶಾಲೆಯಲ್ಲಿ ವಸತಿ ಮಾಡುವುದರ ಔಚಿತ್ಯ-ಅನೌಚಿತ್ಯಗಳ ಪ್ರಶ್ನೆ ಒಡನೆಯೇ ಅವರನ್ನು ಭಾಧಿಸತೊಡಗಿತು. ಆ ಪ್ರಶ್ನೆಗೆ ಉತ್ತರ ಕೊಡುವುದನ್ನೂ ಅವರು ತಡಮಾಡಲಿಲ್ಲ.
"ಉಪಾಧ್ಯಾಯರು ಶಾಲೆಯಲ್ಲೇ ಮಲಕೊಳ್ಳೋದು ಚೆನ್ನಾಗಿರೋದಿಲ್ಲ ಮಿ.ಜಯದೇವ್. ನೀವು ಬೇಗ್ನೆ ಬೇರೆ ಮನೆ ಮಾಡ್ಬೇಕು."
"ಹೌದು, ಹುಡುಕ್ತಾ ಇದೀನಿ."
ಅದು ನಿಜವಾಗಿರಲಿಲ್ಲ. ಆದರೆ ವೆಂಕಟರಾಯರೆದುರು ಅಂಥದೊಂದು ಪುಟ್ಟ ಸುಳ್ಳು ಹೇಳುವುದು ತಪ್ಪಲ್ಲವೆಂದು ಜಯದೇವನಿಗೆ ತೋರಿತು.
ಆ ಮಾತಿನ ಫಲವಾಗಿ ವೆಂಕಟರಾಯರ ವಸತಿಯ ಪ್ರಶ್ನೆಯೂ ಪ್ರಧಾನವಾಗಿರಲಿಲ್ಲ.
ಆಗ ನಂಜುಂಡಯ್ಯನೆಂದರು:
"ನಮ್ಮ ಪಂಚಾಯತ ಬೋರ್ಡು ಅಧ್ಯಕ್ಷರು ಶಂಕರಪ್ಪ ಅಂತ. ನೀವು ಕೇಳಿರ್ಬೇಕು."
"ಕೇಳ್ದೆ ಉಂಟೆ? ಬೆಂಗಳೂರಲ್ಲೇ ಅವರ ವಿಷಯ ತಿಳೀತು."
"ನೀವು ಮನೆಮಾಡೋವರೆಗೂ ತಮ್ಮಲ್ಲೇ ಇರ್ಬೇಕೂಂತ ಶಂಕರಪ್ಪ ಆಗಲೇ ಹೇಳಿದಾರೆ. ಅಲ್ಲಿ ಬೇಕಾದಷ್ಟು ಖಾಲಿ ಕೊಠಡಿಗಳಿವೆ. ಪಕ್ಕದಲ್ಲೇ ಒಂದು ಬ್ರಾಹ್ಮಣರ ಮನೆ ಇದೆ. ಅಲ್ಲಿ ಊಟಕ್ಕೆ ಏರ್ಪಾಡು ಮಾಡ್ತಾರೆ."
"ಆಗಲಿ ಆಗಲಿ, ಹಾಗೇ ಆಗಲಿ. ಆದರೆ ಈ ತಿಂಗಳಲ್ಲೇ ಮನೆ ಮಾಡ್ಬೇಕೂಂತಿದೀನಿ."
"ಅದಕ್ಕೇನಂತೆ? ಹಾಗೇ ಮಾಡಿ"
"ರಂಗರಾಯರು ಇರೋ ಮನೆ ಹೇಗಿದೆ?"
"ಚೆನ್ನಾಗಿದೆ. ಸ್ವಲ್ಪ ರಿಪೇರಿ ಮಾಡಿಸ್ಬೇಕೋ ಏನೋ."
"ಎಷ್ಟೋ ಬಾಡಿಗೆ?"
"ಆರು ರೂಪಾಯಿಯೊ ಏಳು ರೂಪಾಯಿಯೊ ಇರಬೇಕು. ಆದರ ಮಾಲೀಕರಿಗೆ ತಿಳಿಸೋಣ್ವೇನು?"
“ಅವಸರವೇನು? ಒಂದು ತಿಂಗಳಾದ್ಮೇಲೆ ಹೇಳಿದರಾಯ್ತು, ಅಲ್ಲದೆ, ಆ ರಂಗರಾವ್'ಗೆ ನಾನು ಆ ಮನೆಗೆ ಬರ್ತೀನೀಂತ ಗೊತಾಗ್ದೆ ಇರೋದೇ ಮೇಲು.”
“ಗೊತಾದ್ರೂ, ಏನು ಮಹಾ?”
“ಹಾಗಲ್ಲ-ಹಾಗಲ್ಲ.”
“ಯಾವತ್ತು ಹೊರಡುತ್ತೊ ಆಸಾಮಿ.. ನಿಮಗೇನಾದ್ರೂ ಹೇಳಿದ್ರೇ ಜಯದೇವ್?”
“ಇಲ್ವಲ್ಲಾ ನಿಮಗೆ ಹೇಳಿರ್ತಾರೇಂತಿದ್ದೆ.”
ಹೇಗೆ ಹೊರಟುಬಿಟ್ಟಿತ್ತು ಆ ಧೋರಣೆಯ ಮಾತು! ಸಂಜೆ ರಂಗರಾಯರ ಮನೆಗೆ ಬರುವೆನೆಂದಿದ್ದ ಜಯದೇವ, ಆದರೆ ಆ ವಿಷಯವನ್ನು ಇವರಿಬ್ಬರ ಮುಂದೆ ಹೇಳುವುದು ಸಾಧ್ಯವಿತ್ತೆ?
ಆನಂದವಿಲಾಸ ಆ ಮಾತುಗಳಿಗೆಲ್ಲ ಅಲ್ಪವಿರಾಮ ಹಾಕಿತು. ವೆಂಕಟರಾಯರ ಮಾತಿನ ಠೀವಿ, ಹಾವಭಾವ, ಗಟ್ಟಿ ಸ್ವರ ಅಲ್ಲಿದ್ದ ಎಲ್ಲರ ಗಮನವನ್ನೂ ಸೆಳೆಯದಿರಲಿಲ್ಲ, ಇವರು ಹೊಸ ಮುಯ್ಯೋಪಾಧಾಯರು ಎಂದು ಮೊದಲೇ ನಂಜುಂಡಯ್ಯ ಘೋಷಿಸುತ್ತ ಬರದಿದ್ದರೂ ರಂಗರಾಯರಿಗೆ ವರ್ಗವಾಯಿತೆಂಬ ವಿಷಯವನ್ನು ಬಾರಿಬಾರಿಗೂ ಹೇಳುತ್ತ ಬಂದರು.
ಕಾಫಿ ಕುಡಿದು ಹೊರಬೀಳುತ್ತಿದ್ದಾಗ ವೆಂಕಟರಾಯರೆಂದರು:
“ರಂಗರಾವ್ ಇನ್ನೂ ಒಂದೆರಡು ದಿನ ಇಲ್ಲಿ ನಿಂತರೂ ನಿಲ್ಲಬಹುದು. ಹಾಗೇನಾದರೂ ಆತ ಮಾಡಿದ್ರೆ ನಾನು ವರದಿ ಮಾಡ್ಬೇಕಾಗುತ್ತೆ, ಅಲ್ದೆ ಆತ ಇಲ್ಲಿಂದ ಹೊರಡೋಕ್ಮುಂಚೆ ಯಾರು ಯಾರನ್ನು ನೋಡ್ತಾನೆ ಏನೇನು ಮಾಡ್ತಾನೇಂತ ಸ್ವಲ್ಪ ತಿಳಕೋಬೇಕಲ್ಲ.”
“ಅದೇನು ದೊಡ್ಡ ಕೆಲಸ? ನನ್ನ ತಮ್ಮ ವಿರೂಪಾಕ್ಷನಿಗೆ ಹೇಳಿದ್ರೆ, ರಂಗರಾವ್ ಈ ಊರು ಬಿಡೋವರೆಗೂ ಆತನ ಹಿಂದೇನೇ ಇರ್ತಾನೆ.”
ಯಾವ ಯೋಚನೆಯೂ ಇಲ್ಲದೆ ಹೇಗೆ ಹೇಳಿದರು ನಂಜುಂಡಯ್ಯ ! ಮುಗ್ದ ಮನಸಿನ ವಿರೂಪಾಕ್ಷ ಇನ್ನು ವಿದ್ಯಾಗುರುವನ್ನೆ ಹಿಂಬಾಲಿಸುವ ಗೂಢಚಾರನಾಗಬೇಕು! ಆ ರೀತಿ ಕಲುಷಿತವಾಗಿಯೆ ಬೆಳೆಯುವ ಆ ಬಳ್ಳಿ , ಹೆಮ್ಮರವಾದಾಗ ಹೇಗಿರಬೇಡ!
"ಸರಿ ಹಾಗಾದರೆ. ನಾವು ಇನ್ನು ಶಂಕರಪ್ಪನವರಲ್ಲಿಗೆ ಹೋಗೋಣವೋ?"ನಂಜುಂಡಯ್ಯ ಜಯದೇವನ ಮುಖ ನೋಡಿದರು. ಆತ ಶಂಕರಪ್ಪನವರ ಮನೆಗೆ ಬರುವುದು ಅವರಿಗೆ ಇಷ್ಟವಿರಲಿಲ್ಲ. ಜಯದೇವನಿಗೂ ಇಷ್ಟವಿರಲಿಲ್ಲ, ಜಯದೇವನ ವಿಚಿತ್ರ ವ್ಯಕ್ತಿತ್ವದ ವಿಷಯವಾಗಿ ವೆಂಕಟರಾಯರಿಗೆ ತಿಳಿಯ ಹೇಳುವುದೂ ಅಗತ್ಯವೆಂದು ನಂಜುಂಡಯ್ಯ ಭಾವಿಸಿದ್ದರು! ಇವರಿಬ್ಬರಿಂದ ಸದ್ಯ ಬೇರೆಯಾಗಿ ರಂಗರಾಯರನ್ನು ನೋಡಹೋಗಬೇಕೆಂಬುದು ಜಯದೇವನ ಯೋಚನೆಯಾಗಿತ್ತು.
"ಜಯದೇವ, ನೀವೊಂದು ಉಪಕಾರ ಮಾಡಿ, ನಾವಿಬ್ರೂ ಶಂಕರಪ್ಪನವರ ಮನೆಗೆ ಹೋಗ್ತೀವಿ. ನೀವು ಸ್ಕೂಲ್ನಿಂದ ವೆಂಕಟರಾಯರ ಬೆಡ್ಡಿಂಗು ಸೂಟ್ ಕೇಸು ಅದೇನೇನಿದೆಯೋ ಅದೆಲ್ಲಾ ಕಳಿಸ್ಕೊಡಿ. ನಮ್ಮ ವಿದ್ಯಾರ್ಥಿಗಳು ಯಾರಾದರೂ ಸಿಕ್ಕಿದರೆ ಸರಿ. ಇಲ್ದೇ ಹೋದ್ರೆ ಯಾವನಾದರೂ ಕೂಲಿ ಕೈಲಿ ಕೊಟ್ಟು ಕಳಿಸಿ "
... ಕೂಲಿಯ ಕೈಯಲ್ಲಿ ಕಳುಹಿಸುವ ಮಾತಿರಲಿಲ್ಲ. ಸ್ವತಃ ಜಯದೇವನೇ ಹೊರಿಸಿಕೊಂಡು ಬರಬೇಕು. ಹಾಗೆ ತಂದರೆ ದುಡ್ಡು ಕೊಡುವ ಪ್ರಶ್ನೆ...
ಸೂಕ್ಷ್ಮಮತಿಗಳಾಗಿದ್ದರು ವೆಂಕಟರಾಯರು.
“ಅದೊಂದೂ ಬೇಡ ವಮಿ. ನಂಜುಂಡಯ್ಯ, ಹೀಗ್ಮಾಡೋಣ.”
“ಏನು ಹೇಳಿ?
“ನೀವು ಸ್ಕೂಲ್ನಲ್ಲೇ ಇರ್ತೀರಿ ಅಲ್ವೇನಪ್ಪ ಜಯದೇವ್"
ಉತ್ತರ ತಡವರಿಸಿದಂತಾದರೂ ನಿಮಿಷಾರ್ಧದಲ್ಲೆ ಸುಧಾರಿಸಿಕೊಂಡು ಜಯದೇವ ಗಟ್ಟಿಯಾಗಿಯೇ ಹೇಳಿದ:
“ಇರ್ತೀನಿ ಸಾರ್.”
“ಹಾಗಾದ್ರೆ, ಶಂಕರಪ್ಪನವರ ಮನೆಯಿಂದ ಅವರ ಆಳನ್ನ ಕಳಿಸ್ಕೊಡೋಣ. ಆಗ್ದೆ ಮಿ. ನಂಜುಂಡಯ್ಯ?
'ಓಹೋ, ಹಾಗೇ ಆಗಲಿ.”
ಜಯದೇವ ಅವರಿಬ್ಬರನ್ನೂ ಅತ್ತ ಕಳುಹಿಸಿ, ತಾನು ಶಾಲೆಯತ್ತ ನಡೆದ.. ಕಾಲುಗಳು ಪ್ರಯಾಸಪಟ್ಟು ದೇಹವನ್ನು ಒಯ್ಯುತ್ತಿದ್ದಂತೆ ತೋರಿತು.
.ಶಂಕರಪ್ಪನವರ ಆತಿಥ್ಯ, ತಾನು ಬಂದ ಆರಂಭದಲ್ಲಿ ಅಲ್ಲಿ ಕೊಠಡಿ ದೊರೆಯುವ ನುಾತು ಬಂದಿರಲಿಲ್ಲ, ಆದರೆ ಈ ಮುಖ್ಯೋಪಾಧ್ಯಾಯರಿಗೆ ಉಚಿತ ಕೊಠಡಿ, ಪಕ್ಕದ ಬಾಹ್ಮಣರ ಮನೆಯಲ್ಲಿ ಊಟ... ತನಗೆ ಜಾತಿಯಲ್ಲಿ ನಂಬಿಕೆಯಿಲ್ಲವೆಂದುದು ಪ್ರಾಯಶ: ಅವರಿಗೆ ರುಚಿಸಲಿಲ್ಲವೇನೊ! ಹೀಗಾಗಿ ತಾನು ಯಾರಿಗೂ ಬೇಡದವನು !...
... ಇನ್ನು ಈ ಶಾಲೆಯಲ್ಲೂ ವಸತಿ ಇರುವಂತಿಲ್ಲ. ತಾನೂ ಬೇರೆ ಕೊಠಡಿ ಹುಡುಕಬೇಕು...
ಶಾಲೆ ಸೇರಿದ ಜಯದೇವ ಬಾವಿಯಿಂದ ಒಂದು ಕೊಡನೀರು ತಂದು, ಉರಿಯುತಿದ್ದ ಕಣ್ಣಗಳಿಗೆ ತಣ್ಣೀರು ಹನಿಸಿದ. ಹೃದಯ ತಣ್ಣಗಾಗುವುದೇನೋ ನೋಡೋಣವೆಂದು ಒಂದು ಲೋಟ ನೀರು ಕುಡಿದ. ಆನಂದ ವಿಲಾಸದ ದೋಸೆ ತಿಂದು ಹೊಟ್ಟೆ ತುಂಬಿದ್ದ ಹಾಗೆ ತೋರಿತು. 'ಹಸಿವೆಯೇ ಇಲ್ಲ, ಊಟ ಮಾಡದೆ ಇರೋದೇ ಮೇಲು' ಎಂದುಕೊಂಡ. ಬೆಂಗಳೂರಲ್ಲಾಗಿದ್ದರೆ ಹಲವು ಸಾರಿ ವೇಣು-ಸುನಂದೆಯರ ತಾಯಿ ಕೇಳುತ್ತಿದ್ದರು: 'ಊಟ ಆಯ್ತೇ ಜಯಣ್ಣ? ಎಂದು. 'ಹಸಿವಿಲ್ಲ' ಎನ್ನುತಿದ್ದ ಜಯದೇವ, ಆದರೆ ಅವರು, ಬೆಳೆಯೋ ಹುಡುಗ, ಊಟ ಮಾಡೊಲ್ಲ. -ಹಸಿವಿಲ್ಲ ಅಂದ್ರೇನೊ ?' ಎಂದು ಭೀಮಾರಿ ಹಾಕಿ ಸಾರನ್ನ ಮೊಸರನ್ನು ಕಲಸಿಕೊಡುತಿದ್ದಳು... ಇಲ್ಲಿ ಅಂತಹ ಯಾವ 'ತೊಂದರೆ'ಯೂ ಇರಲಿಲ್ಲ
ಕತ್ತಲಾಯಿತೆಂದು ಜಯದೇವ ಬೆಡ್ ಲ್ಯಾಂಪು ಉರಿಸಿದ. 'ಈ ಹೊಗೆ ಕಣ್ಣಿಗೆ ಕೆಟ್ಟದ್ದು', ಬೇರೊಂದು ಕಂದೀಲು ಕೊಳ್ಳಬೇಕು'-ಎಂದು ತೀರ್ಮಾನಿಸಿದ.
ಶಂಕರಪ್ಪನ ಮನೆಯಿಂದ ಆಳು ಬರಲೇ ಇಲ್ಲ. ಬೇಕು ಬೇಕೆಂದೇ, ತಾನು ಎಲ್ಲಿಗೂ- ಅಂದರೆ ರಂಗರಾಯರಲ್ಲಿಗೆ-ಹೋಗಬಾರದೆಂದೇ, ಆಳನ್ನು ಕಳಿಸಲು ತಡಮಾಡುತ್ತಿರುವರೇನೋ ಎಂದು ಜಯದೇವ ಶಂಕಿಸಿದ. ಮರು ಕ್ಷಣವೆ, ಇಷ್ಟೆಲ್ಲಾ, ಆಳವಾಗಿ ಯೋಚಿಸಿ ಊಹಾಪೋಹದ ಸಹಸ್ರ ಮುಳ್ಳುಗಳನ್ನು ತಾನೆ ನಿರ್ಮಿಸಿಕೊಳ್ಳಬಾರದು-ಎಂದು ತನ್ನನ್ನು ತಾನೇ ಟೀಕಿಸಿಕೊಂಡ.
ಅಷ್ಟರಲ್ಲೆ ಹೊರಗೆ ಕರೆದ ಸದ್ದಾಯಿತು:
“ಬುದ್ದೀ. ...”
ಯಾರು ಎಂದು ಕೇಳಬೇಕಾದ ಅಗತ್ಯವಿರಲಿಲ್ಲ, ಜಯದೇವ ಹೊರ ಬರುತ್ತಲೆ ಬಂದವನೆಂದ:
“ಮೇಷ್ಟ್ರು ಕಳಿಸವ್ರೆ.”
ಆಫೀಸು ಕೊಠಡಿಯನ್ನು ತೆರೆದು ವೆಂಕಟರಾಯರ ಸಾಮಾನುಗಳನ್ನು ಹೊರತಂದು ಅಷ್ಟನ್ನು ಆಳು ತಲೆಯ ಮೇಲಿರಿಸಿಕೊಳ್ಳಲು ಜಯದೇವ ನೆರವಾದ.
ಆ ಬಳಿಕ ಕೆಲವು ನಿಮಿಷಗಳಾದ ಮೇಲೆ ತನ್ನ ಹಾಸಿಗೆಯನ್ನು ಹಾಸಿಟ್ಟು, ದೀಪವನ್ನು ಚಿಕ್ಕದಾಗಿ ಉರಿಯಗೊಟ್ಟು, ಬಾಗಿಲಿಗೆ ಬೀಗ ತಗಲಿಸಿ ಜಯದೇವ ಬೇಗ ಬೇಗನೆ ರಂಗರಾಯರ ಮನೆಗೆ ನಡೆದ.
Χ X X
ರಾತ್ರೆ ಅಷ್ಟು ಹೊತ್ತಾದಾಗ, ಇನ್ನು ಜಯದೇವ ಬರುವುದಿಲ್ಲವೆಂದೇ ರಂಗರಾಯರು ಭಾವಿಸಿದ್ದರು.
“ಬರ್ತಾನೇಂತ ಅಡುಗೆ ಮಾಡಿದ್ದು ವ್ಯರ್ಥವಾಯ್ತು” ಎಂದು ಸಾವಿತ್ರಮ್ಮ ಗೊಣಗಿದರು.
ಆ ನಷ್ಟದ ಯೋಚನೆಗಿಂತಲೂ ತಮ್ಮನ್ನು ಕಾಣಲು ಜಯದೇವ ಹಿಂದೇಟು ಹಾಕುತ್ತಿರಬಹುದೆಂಬ ವಿಚಾರ ರಂಗರಾಯರನ್ನು ಸಂಕಟಕ್ಕೆ ಗುರಿಮಾಡಿತು.
ಆದರೆ ಅಂಗಳದಲ್ಲಿ ನಿಂತು ಜಯದೇವ “ಸಾರ್” ಎಂದಾಗ, ರಂಗರಾಯರು ಉತ್ಸಾಹದಿಂದೆದ್ದು ಬಾಗಿಲು ತೆರೆದರು.
“ಬನ್ನಿ ಜಯದೇವ, ನೀವು ಬರೋದೇ ಇಲ್ವೇನೋಂತಿದ್ದೆ.”
“ಯಾಕ್ಸಾರ್ ? ಬರ್ತೀನೀಂತ ಆಗ್ಲೇ ಹೇಳ್ಲಿಲ್ವೆ? ಅವರಿಬ್ಬರನ್ನೂ ಕಳಿಸ್ಕೊಡೋದು ತಡವಾಯ್ತು”
ಮನೆಯ ಗೋಡೆಯಿಂದ ಪಟಗಳು ಮಾಯವಾಗಿದ್ದುವು; ಕಿತ್ತು ಬಂದಿದ್ದುವು ಮೊಳೆಗಳು....
“ಇದೇನ್ಸಾರ್ ? ಯಾವತ್ತು ಹೊರಡ್ತೀರಾ?”
“ನಾಳೆ ಬೆಳಗ್ಗೆ ಜಯದೇವ.”
"ನಾಳೇನೆ! ”
“ಹೌದು; ಎಂಟು ಗಂಟೆಗೆ ಚೆಂದೂರು ಬಸ್ಸು ಬರುತ್ತೆ.”
“ಕೊಡಗನೂರಿಗೇ ನೇರವಾಗಿ ಹೋಗ್ತೀರಾ ?”
“ಇಲ್ಲವಪ್ಪ ಮನೆಯಾಕೇನ ಬೆಂಗಳೂರಲ್ಲಿ ಮಗಳ್ಮನೇಲಿ ಬಿಟ್ಬಿಟ್ಟು ನಾನೊಬ್ಬನೇ ಕೊಡಗನೂರಿಗೆ ಹೊರಡ್ತೀನಿ.. ಹೊಸ ಊರು ಸೇರೋದಕ್ಕೆ ಇನ್ನೂ ಒಂದುವಾರ ಅವಕಾಶವಿದೆಯಲ್ಲ.”
ಮೌನ ಸ್ವಲ್ಪ ಹೊತ್ತು ನೆಲೆಸಿತು.
“ನಿಮ್ಮ ಮನಸ್ಸಿಗೆ ತುಂಬಾ ಬೇಜಾರು ಆಗಿರ್ಬೇಕಲ್ವೆ ಸಾರ್?”
“ಯಾಕೆ ಜಯದೇವ ? ಹಿಂದೇನೂ ಎರಡು ಮೂರು ಸಲ ಉಗುಳು ನುಂಗಿದೇನೆ. ಈ ವಯಸ್ನಲ್ಲಿ ಈಗ ಹೀಗಾಗ್ಬಾರ್ದಾಗಿತ್ತು-ಅಷ್ಟೆ...ಇನ್ನೂ ಒಂದೂಂತಂದ್ರೆ, ಪ್ರತಿ ಸಾರೆಯೂ ನನಗೇ ಅನ್ಯಾಯ ಆಗ್ತಾ ಬಂದಿದೆ.”
“ನ್ಯಾಯ ಅನ್ನೋ ಪದಕ್ಕೆ ಈಗ ಅರ್ಥವುಂಟೆ ಸಾರ್?”
ರಂಗರಾಯರು ನಗಲೆತ್ನಿಸಿದರು. ನ್ಯಾಯದ ಪದ ಹೊಸ ವಿಚಾರಕ್ಕೆ ಆಸ್ಪದ ಕೊಟ್ಟಂತಾಗಿ ಜಯದೇವನೆಂದ:
“ನೀವು ಸುಮ್ನಿರೋದು ಸರಿಯಲ್ಲ ಸಾರ್. ಪ್ರತಿಭಟಿಸ್ಬೇಕು. ಊರಲ್ಲಿ ಒಳ್ಳೆಯವರು ಖಂಡಿತ ಇರ್ತಾರೆ, ವಿದ್ಯಾರ್ಥಿಗಳಿರ್ತಾರೆ.”
ರಂಗರಾಯರು ಬಹಳ ಹೊತ್ತು ಉತ್ತರವೀಯಲಿಲ್ಲ. ಅವರ ಹುಬ್ಬುಗಳು ಯೋಚನೆಯ ಭಾರದಿಂದ ಬಾಗಿದುವು.. ಮತ್ತೆ ಅವರು ಉತ್ತರವಿತ್ತಾಗ ಆ ಮಾತಿನಲ್ಲಿ ಕೊನೆಯ ತೀರ್ಮಾನದ ಧ್ವನಿ ಇತ್ತು.
“ಇಲ್ಲ.ಜಯದೇವ್.. ಅದು ಅಷ್ಟು ಸುಲಭವಲ್ಲ, ಇಲ್ಲಿ ವಾತಾವರಣ ಕೆಟ್ಟು ಹೋಗಿದೆ. ತತ್ವಕ್ಕಾಗಿ ಹೊಡೆದಾಡೋ ಸಾಮರ್ಥ್ಯವೂ ಈಗ ನನಗಿಲ್ಲ, ಇದ್ದುಕೊಳ್ಳಲಿ ಬಿಡಿ. ನಾನು ಹೊರಟು ಹೋಗೋದ್ರಿಂದ ಕೆಲವರಿಗಾದರೂ ಸುಖವಾಗೋದಿದ್ರೆ--"
“ಅದೇನು ಸುಖವೋ....”
ವೆಂಕಟರಾಯರು ಜಯದೇವನ ದೃಷ್ಟಿಯ ಮುಂದೆ ಸುಳಿದರು.ಅವರ ಆಡಳಿತದಲ್ಲಿ ಶಾಲೆಯ–ವಿದ್ಯಾರ್ಥಿಗಳ—ಅಭಿವೃದ್ಧಿಯಾಗುವ ಚಿತ್ರವನ್ನು ಕಲ್ಪಿಸಿಕೊಳ್ಳಲು ಆತ ಯತ್ನಿಸಿದ. ಆ ಚಿತ್ರ ಸ್ಪಷ್ಟವಾಗಿ ಮೂಡಲೇ ಇಲ್ಲ. ಅದು ಮಸಕು ಮಸಕಾಗಿತ್ತು....
ಆ ಸಂಜೆ ವೆಂಕಟರಾಯರು ಮತ್ತು ನಂಜುಂಡಯ್ಯ! ಆಡಿಕೊಂಡಿದ್ದ ಮಾತುಗಳೆಲ್ಲ ಜಯದೇವನ ನೆನಪಿಗೆ ಬಂದುವು. ಅಷ್ಟನ್ನೂ ರಂಗರಾಯರಿಗೆ ಹೇಳಿ ಬಿಡೋಣವೇ–ಎನ್ನಿಸಿತು. ಅದರಿಂದೇನೂ ಪ್ರಯೋಜನವಿಲ್ಲ-ಆಗಿರುವ ನೋವನ್ನು ಮತ್ತೂ ಯಾಕೆ ಕೆದಕಬೇಕು-ಎಂದು ಅತ ಸುಮ್ಮನಾದ.
ಸಾವಿತ್ರಮ್ಮ ಬಂದು ಹೇಳಿದರು :
“ಎಷ್ಟೋ ದಿವಸ ಆದ್ಮೇಲೆ ಬಂದಿದೀರಪ್ಪ ಏಳಿ, ಊಟಕ್ಕೇಳಿ. ಆ ಮೇಲೆ ಮಾತಾಡೀರಂತೆ.” .
ಊಟವಾಯಿತೆಂದು ಸುಳ್ಳಾಡಲು ಬಯಸಿದರೂ ಅದು ಸಾಧ್ಯವಾಗದೆ ಜಯದೇವನೆಂದ:
“ನಂಗೆ ಹಸಿವಿಲ್ಲ ಅಮ್ಮ”
“ಯಾರಾದರೂ ನಗ್ತಾರೆ, ನಿಮ್ಮ ವಯಸ್ನಲ್ಲಿ ಹಾಗಂದ್ರೆ.... ಏಳಿ--ಏಳಿ.... ”
ರಂಗರಾಯರೂ ಹೆಂಡತಿಯ ಮಾತನ್ನ ಹಿತವಚನದೊಡನೆ ಪುಷ್ಟೀಕರಿಸಿದರು:
“ಊಟ ತಿಂಡಿ ಯಾವಾಗಲೂ ಕ್ರಮಬದ್ಧವಾಗಿರ್ಬೇಕು ಜಯದೇವ. ಕಾಹಿಲೆ ಬೀಳ್ಬೇಡೀಪ್ಪಾ"
ಊಟವಾಯಿತು......
ಅನಂತರದ ವಿರಾಮದಲ್ಲಿ ರಂಗರಾಯರೆಂದರು.
“ಉಪಾಧ್ಯಾಯ ವೃತ್ತಿ ಅತ್ಯಂತ ಗೌರವದ್ದು, ಆದರೆ ಇನ್ನೊಮ್ಮೆ ಯುವಕನಾಗಿ ಜೀವನ ಷುರು ಮಾಡೋಕೆ ನನಗೆ ಅವಕಾಶ ಸಿಗ್ತೂಂದ್ರೆ ಖಂಡಿತವಾಗ್ಲೂ ನಾನು ಉಪಾಧ್ಯಾಯನಾಗೋದಿಲ್ಲ.”
ಜಯದೇವನಿಗೆ ಹೃದಯ ಹಿಂಡಿದ ಹಾಗಾಯಿತು:
“ನೀವು ಹಾಗನ್ಬಾರದು. ಈ ರೀತಿ ನೀವಂದ್ರೆ ನನ್ನಂಥ ಯುವಕರು ಯಾಕೆ ವೃತ್ತಿಗೆ ಬಂದಾರು?"
“ಬರದೆ ಏನ್ಮಾಡ್ತಾರೆ? ಯಾವ ಉದ್ಯೋಗವೂ ಸಿಗ್ದೇ ಇದ್ದಾಗ ಈ ಉದ್ಯೋಗಕ್ಕೆ ಬರ್ತಾರೆ. ದೊಡ್ಡ ಆದರ್ಶ ಇಟ್ಕೊಂಡು ಬರೋ ಜನರೂ ಕೆಲವರು ಇರ್ಬಹುದು. ಇಲ್ಲಾಂತ ನಾನು ಅನ್ನೋದಿಲ್ಲ, ಆದರೆ ಅವರೆಲ್ಲ ಯಾವ ಭ್ರಮೇನೂ ಇಟ್ಕೊಳ್ಳದೇನೇ ಬರೋದು ಮೇಲು."
ಜಯದೇವನೊ – ಭ್ರಮೆ ಇಟ್ಟಕೊಂಡೇ ಬಂದಿದ್ದ, ವಿದ್ಯಾ ಸರಸ್ವತಿಯ ಮಂದಿರಕ್ಕೆ ಬಂದಿದ್ದು, ಅನನ್ಯ ಭಕ್ತಿಯಿಂದ.. ಆದರೆ ಬಾಗಿಲು ಎಂದು ಭಾವಿಸಿ ಒಳ ನುಗ್ಗಿದಲ್ಲೇ ಬಂಡೆಕಲ್ಲು ಮೆಲ್ಲನೆ ಮೂಗಿಗೆ ಸೋಂಕಿತ್ತು....
“ಹಾಗಾದ್ರೆ ಇದಕ್ಕೆ ಪರಿಹಾರ ಇಲ್ವೆ ಸಾರ್?”
“ಇದ್ದೀತು ಜಯದೇವ, ಆದರೆ ನನಗಂತೂ ತಿಳೀದು.”
... ಹಾಗೆ ಮಾತು ಮುಂದುವರಿಯಿತು.
ಸಾಮಾನು ಕಟ್ಟಲು ಜಯದೇವ ನೆರವಾದ. ಆ ಮನೆಯಲ್ಲಿ ಎಷ್ಟೊಂದು ಕಡಮೆ ಸಾಮಾನುಗಳಿದ್ದುವು!
ಸಾವಿತ್ರಮ್ಮ ನಗುತ್ತ ಅಂದರು:
“ಏನಪ್ಪಾ, ನೀವು ಮದ್ವೆ ಮಾಡ್ಕೊಂಡು ಸಂಸಾರ ಹೂಡುವಾಗ ಎಷ್ಟು ಕಮ್ಮಿ ಸಾಧ್ಯವೋ ಅಷ್ಟು ಕಮ್ಮಿ ಸಾಮಾನು ಇಟ್ಕೊಳ್ಳಿ. ಆಜ್ಞೆ ಬಂದ ತಕ್ಷಣ ಹೊರಡೋ ಹಾಗಿರ್ಬೇಕು!”
.ನಡುರಾತ್ರೆಯಾಗಿತ್ತು ಜಯದೇವ ಶಾಲೆಯತ್ತ ಹೊರಟಾಗ.
ಬೀದಿಯಲ್ಲಿ ನಿಂತು ರಂಗರಾಯೆರೆಂದರು.
“ನಿಮ್ಮಿಂದ ತುಂಬಾ ಉಪಕಾರವಾಯ್ತು ಜಯದೇವ, ನೀವು ಇನ್ನೊಂದು ಮಾದಬೇಕಾದ್ದು ಮಿಕ್ಕಿದೆ."
“ಏನು ಹೇಳಿ"
“ನನ್ನದೊಂದು ಮಾತು ನಡೆಸಿಕೊಡ್ಬೇಕು. ನಾಳೆ ಬೆಳಗ್ಗೆ ನೀವು ಬಸ್ಸ್ಟ್ಯಾಂಡಿಗೆ ಬರಕೂಡ್ದು ! ನಿಮ್ಮ ಹಿತಕ್ಕಾಗಿಯೇ ಹೇಳ್ತೀದೀನಿ.”
ಜಯದೇವ ಯಾವ ಉತ್ತರವನ್ನೂ ಕೊಡದೆ ನಡೆದ.
ತಡವಾಗಿ ಮಲಗಿದ್ದರೂ ಬೆಳಗ್ಗೆ ಜಯದೇವನಿಗೆ ಬೇಗನೆ ಎಚ್ಚರ ವಾಯಿತು. ಪ್ರಾತರ್ವಿಧಿಗಳನ್ನಾತ ಮುಗಿಸಿದ. ಕಾಫಿಗೆಂದು ಆನಂದ ವಿಲಾಸಕ್ಕೆ ಹೋಗುವುದರ ಬದಲು, ಬಸ್ ನಿಲ್ದಾಣಕ್ಕೆ ನಡೆದರಾಯಿತೆಂದುಕೊಂಡ.
ಆತ ನಿಲ್ದಾಣಕ್ಕೆ ಬಂದಾಗ ಅದು ನಿರ್ಜನವಾಗಿತ್ತು,
ಒಳಗೆ ಕುಳಿತು ಕಾಫಿ ಕೇಳಿದಾಗ ಒಬ್ಬ ಹುಡುಗನೆಂದ:
“ನಮಸ್ಕಾರ ಸಾರ್!”
ತಾನು ಬಂದ ದಿನ ತನ್ನನ್ನು ನೀವು ಮೇಷ್ಟ್ರಲ್ವೆ ಸಾರ್, ಎಂದು ಕೇಳಿದ್ದ ಹುಡುಗ.
“ನಮಸ್ಕಾರವಪ್ಪ, ಚೆನಾಗಿದೀಯಾ?”
“ಹೂಂ ಸಾರ್. ನೀವು ಆ ಮೇಲೆ ಈ ಹೋಟ್ಲಿಗೆ ಬರ್ಲೇ ಇಲ್ಲ.”
“ಊರಲ್ಗೆ ಇರೋವರಿಗೆ ಊರಿನ ಹೋಟ್ಲು, ಬಸ್ ಪ್ರಯಾಣ ಮಾಡೋ ಜನಕ್ಕೆ ಮಾತ್ರ ಬಸ್ ಸ್ಟ್ಯಾಂಡ್ ಹೋಟ್ಲು, ಅಲ್ವಾ?
“ಹಾಗಾದ್ರೆ ಇವತ್ತು ಬಂದಿದೀರಲ್ಲ? ಊರಿಗೆ ಹೋಗ್ತೀರಾ ಸಾರ್?”
“ನಾನಲ್ಲ, ನಮ್ಮ ಸ್ನೇಹಿತರು ಹೋಗ್ತಾರೆ.”
ಒಡನೆಯೇ, ಯಾರು ಹೋಗುವರೆಂದು ಹೇಳುವ ಮನಸಾಯಿತು ಜಯದೇವನಿಗೆ... ರಂಗರಾಯರು ಹೊರಟು ಹೋಗುವ ವಾರ್ತೆ ಆ ಹುಡುಗನ ಮೇಲೇನು ಪರಿಣಾಮ ಮಾಡುವುದೋ ಎಂಬುದನ್ನು ತಿಳಿಯುವ ಕುತೂಹಲವಾಯಿತು.
“ನಿನಗೆ ಗೊತ್ತೇನಪ್ಪ? ಹೆಡ್ ಮೇಷ್ಟ್ರು ರಂಗರಾಯರಿಗೆ ವರ್ಗವಾಯ್ತು, ಈಗ ಹೋಗ್ತಾರೆ.”
“ಓ! ಅವರು ತುಂಬಾ ಒಳ್ಳೆಯವರು...”
“ನಿನಗೆ ಹ್ಯಾಗ್ಗೊತ್ತು?”
“ಮನುಷ್ಕರ್ನ ನೋಡಿದ್ರೆ ತಿಳಿಯೋಲ್ವೆ ಸಾರ್?”
“ಹೊಂ ?”
“ನಾನು ಸ್ಕೂಲ್ಗೆ ಹೋಗಿದ್ದಿದ್ರೆ ಅವರು ನನಗೂ ಹೆಡ್ಮೇಷ್ಟ್ರು ಆಗ್ತಿದ್ದ್ರು...." .
ಅಲ್ಲಿಗೇ ಮಾತು ನಿಲ್ಲಿಸಿ ಜಯದೇವ ಉಪ್ಪಿಟ್ಟು ತಿಂದು ಕಾಫಿ ಕುಡಿದ.
ಸ್ವಲ್ಪ ಹೊತ್ತಿನಲ್ಲೆ ಸಾಮಾನುಗಳನ್ನು ಹೊರಿಸಿಕೊಂಡು ರಂಗರಾಯರು ಸಪತ್ನಿಕರಾಗಿ ಬಂದರು. ಅವರನ್ನು ಕಾಫಿಗೆ ಕರೆಯುವುದಕ್ಕೂ ಬಿಡುವಿಲ್ಲದ ಹಾಗೆ ಚೆಂದೂರು ಬಸು ಬಂತು.
ರಂಗರಾಯರು ಮಾತನಾಡಲೇ ಇಲ್ಲ, ಸಾವಿತ್ರಮ್ಮ ಮಾತ್ರ “ಹೋಗಿ ಬರ್ತೀವಪ್ಪಾ” ಎಂದರು.
ಉದ್ವಿಗ್ನಗೊಂಡಿದ್ದ ಭಾವನೆಗಳನ್ನು ಅದುಮಿ ಹಿಡಿಯುತ್ತಾ ರಂಗ ರಾಯರು ಜಯದೇವನ ಕೈ ಕುಲುಕಿದರು.
ಜಯದೇವನೆಂದ :
“ಆಗಾಗ್ಗೆ ಕಾಗ್ದ ಬರೀರಿ ಸಾರ್.”
*ಹೂಂ ಜಯದೇವ.”
ಬಸ್ಸು ಧೂಳೆಬ್ಬಿಸಿ ಹೊರಟು ಹೋಯಿತು.
ಆವರೆಗೂ ಗೌರವದಿಂದ ರಂಗರಾಯರನ್ನೂ ಬಸ್ಸನ್ನೂ ದೂರದಿಂದಲೇ ನೋಡುತಿದ್ದ ಹುಡುಗ ಜಯದೇವನ ಬಳಿಗೆ ಬಂದು ಕೇಳಿದ:
“ಅದ್ಯಾಕ್ಸಾರ್ ಕಳಿಸ್ಕೊಡೋಕೆ ಬೇರೆ ಯಾರೂ ಬರ್ಲಿಲ್ಲ?”
“ಯಾರಿಗೂ ಗೊತ್ತಿರ್ಲಿಲ್ಲ, ಅಕಸ್ಮಾತ್ ಇವತ್ತೇ ಹೊರಟ್ಬಿಟ್ರು....”