ದೇವರ ಪೂಜಿಸಿ
ಕಾಯಗೊಂಡು ಹುಟ್ಟಿ
ಪುತ್ರ ಮಿತ್ರ ಕಳತ್ರತ್ರಯ ಧನಧಾನ್ಯ ಷಡುಚಂದನಾದಿ ಭೋಗಾದಿಭೋಗಂಗಳ ಪಡೆದು ಭೋಗಿಸಿ ಸುಖಿಸಿಹೆನೆಂಬೆಯೆಲೆ ಮರುಳು ಮಾನವ
ಕಾಯವೇ ದುಃಖದಾಗರವೆಂದು ಅರಿಯೆಯಲ್ಲ? ಕಾಯವೇ ಸಕಲಧರ್ಮಕರ್ಮಕ್ಕಾಶ್ರಯವೆಂದರಿಯೆಯಲ್ಲ? ಪುಣ್ಯ ಪಾಪವಶದಿಂದ ಸ್ವರ್ಗನರಕಕ್ಕೆಡೆಯಾಡುತ್ತಿಪ್ಪುದನರಿಯೆಯಲ್ಲ? ಹುಟ್ಟುವುದು ಮಹಾದುಃಖ; ಹುಟ್ಟಿ ಸಂಸಾರಶರಧಿಯೊಳು ಬದುಕುವುದು ದುಃಖ. ಸಾವ ಸಂಕಟವನದ ನಾನೇನೆಂಬೆನಯ್ಯಾ
ಅದು ಅಗಣಿತ ದುಃಖ. ಆವಾವ ಪರಿಯಲ್ಲಿ ತಿಳಿದುನೋಡಲು
ಈ ಮೂರು ಪರಿಯ ದುಃಖ ಮುಖ್ಯವಾದ ಅನಂತ ದುಃಖ ನೋಡಾ. ಈ ಕಾಯದ ಕಂಥೆಯ ತೊಟ್ಟು ಕರ್ಮದೊಳಗಿರದೆ
ಮಾಯಾಮೋಹನ ತಾಳ್ದು ಮತ್ತನಾಗಿರದೆ
ಪಂಚೇಂದ್ರಿಯಂಗಳ ಸುಖಕ್ಕೆ ಮೆಚ್ಚಿ ಮರುಳಾಗದೆ
ಪಂಚವದನನ ನೆನೆನೆನೆದು ಸಂಸಾರಪ್ರಪಂಚವ ತಪ್ಪಿಸಿಕೊಂಬ ಸುಬುದ್ಧಿಯ ಕಲಿಸಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.