ದೇವ ಬಂದ
by ಪುರಂದರದಾಸರು
2692ದೇವ ಬಂದಪುರಂದರದಾಸರು

ರಚನ: ಪುರಂದರದಾಸರು

ದೇವ ಬಂದ ನಮ್ಮಸ್ವಾಮಿ ಬಂದಾನೋ |
ದೇವರ ದೇವಶಿಖಾಮಣಿ ಬಂದಾನೋ || ಪ ||

ಉರಗಶಯನ ಬಂದ ಗರುಡಗಮನ ಬಂದ |
ನರಗೊಲಿದವ ಬಂದ ನಾರಾಯಣ ಬಂದಾನೋ || ೧ ||

ಮಂದರೊದ್ಧಾರ ಬಂದ ಮಾಮನಹರ ಬಂದ |
ಬೃಂದಾವನಪತಿ ಗೋವಿಂದ ಬಂದಾನೋ || ೨ ||

ನಕ್ರಹರನು ಬಂದ ಚಕ್ರಧರನು ಬಂದ |
ಅಕ್ರೂರಗೊಲಿದ ತ್ರಿವಿಕ್ರಮ ಬಂದಾನೋ || ೩ ||

ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ |
ಅಕ್ಷಯಫಲದ ಶ್ರೀಲಕ್ಷ್ಮಿರಮಣ ಬಂದಾನೊ || ೪ ||

ನಿಗಮಗೋಚರ ಬಂದ ನಿತ್ಯತೃಪ್ತನು ಬಂದ |
ನಗೆಮುಖ ಪುರಂದರವಿಠ್ಠಲ ಬಂದಾನೋ || ೫ ||

"https://kn.wikisource.org/w/index.php?title=ದೇವ_ಬಂದ&oldid=4540" ಇಂದ ಪಡೆಯಲ್ಪಟ್ಟಿದೆ