ದ್ವಿಜರಿಗೆ ಕೊಟ್ಟು ಹಲಬರು ಕೆಟ್ಟರು
ಉದ್ಧರಿಸುವನೊಬ್ಬ
ಶಿವಶರಣ ಸಾಲದೆ ನಾರಾಯಣ ವೃದ್ಧಬ್ರಾಹ್ಮಣನಾಗಿ ಬಂದು ಬಲಿಯ ಭೂಮಿಯ ಬೇಡಿದ
ಕೊಟ್ಟ ಬಲಿ ಬಂಧನಕ್ಕೆ ಸಿಕ್ಕಿದ. ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ
ಕೊಟ್ಟ ದಾಸ ತವನಿಧಿಯ ಪಡೆದ. ಕಪಟದಿಂದ ನಾರಾಯಣ ಹಾರುವನಾಗಿ ಬಂದು ಕರ್ಣನ ಕವಚವ ಬೇಡಿದ
ಕೊಟ್ಟ ಕರ್ಣ ಕಳದಲ್ಲಿ ಮಡಿದ. ಕಾಮಾರಿ ಜಂಗಮವಾಗಿ ಬಂದು ಸಿರಿಯಾಳನ ಮಗನ ಬೇಡಿದ
ಕೊಟ್ಟ ಸಿರಿಯಾಳಸೆಟ್ಟಿ ಕಂಚಿಯಪುರ ಕೈಲಾಸಕ್ಕೊಯ್ದ. ನಾರಾಯಣ ಹಾರುವನಾಗಿ ಬಂದು ನಾಗಾರ್ಜುನನ ಶಿರವ ಬೇಡಿದ
ಕೊಟ್ಟ ನಾಗಾರ್ಜುನನ ಶಿರಹೋಯಿತ್ತು. ಶಿವನು ಜಂಗಮವಾಗಿ ಬಂದು ಸಿಂಧುಬಲ್ಲಾಳ ವಧುವ ಬೇಡಿದ
ಕೊಟ್ಟ ಸಿಂಧುಬಲ್ಲಾಳ ಸ್ವಯಲಿಂಗವಾದ. ಇದು ಕಾರಣ ಇಲ್ಲಿಯೂ ಲೇಸು
ಅಲ್ಲಿಯೂ ಲೇಸು; ಕೊಡಿರೇ
ನಮ್ಮ ಕೂಡಲಸಂಗನ ಶರಣರಿಗೆ.