ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ. ಬಲೆಯ ಬೀಸುವ ಗಂಡರಾರೂ ಇಲ್ಲ
ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ. ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ. ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು
ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು. ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?) ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು. ಹತ್ತೆ ಸಾರಿದ ಮೃಗವ ತಾನೆಚ್ಚಡೆ ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು. ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು. ಗುಹೇಶ್ವರಾ ನಿಮ್ಮ ಶರಣ ಕಟ್ಟಿದಿರ ಬಾಣಸದ ಮನೆಗೆ ಬಂದನು.