ನರಲೋಕದ ನರರುಗಳೆಲ್ಲರು ನರಸಂಸಾರಕ್ಕೊಳಗಾದರು. ಸುರಲೋಕದ ಸುರರುಗಳೆಲ್ಲರು ಸುರಸಂಸಾರಕ್ಕೊಳಗಾದರು. ಮುನಿಲೋಕದ ಮುನಿಗಳೆಲ್ಲರು ತಪಃಸಂಸಾರಕ್ಕೊಳಗಾದರು. ರುದ್ರಲೋಕದ ರುದ್ರಗಣಂಗಳೆಲ್ಲರು ರುದ್ರಪದವೆಂಬ ಸಂಸಾರಕ್ಕೊಳಗಾದರು. ಲಿಂಗವ ಧರಿಸಿದವರೆಲ್ಲರು ಲಿಂಗಸಂಸಾರಕ್ಕೊಳಗಾದರು. ಜಂಗಮವ ಪೂಜಿಸಿದವರೆಲ್ಲರು ಸಾಯುಜ್ಯ ಸಂಸಾರಕ್ಕೊಳಗಾದರು. ಪ್ರಸಾದ ಪಾದೋದಕ ಸಂಬಂಧಿಗಳೆಲ್ಲರು ಪ್ರಸಾದ ಸಂಸಾರಕ್ಕೊಳಗಾದರು. ಗುಹೇಶ್ವರಲಿಂಗದಲ್ಲಿ ಸರ್ವ ಸಂಸಾರವಿರಹಿತ ಚನ್ನಬಸವಣ್ಣಂಗೆ
ನಮೋ ನಮೋ ಎಂಬೆನು.