pages ೪೫-೬೩

 ಕಥೆ: ನಾಲ್ಕು
ತಪ್ಪು ಎಣಿಕೆ



ಮಾಪತಿ ಉಸಿರು ಬಿಗಿಹಿಡಿದು ಚೀಟಿಯನ್ನೋದಿದರು; ಕೈಗಡಿಯಾರವನ್ನು ದಿಟ್ಟಿಸಿದರು; ಯಾಂತ್ರಿಕವಾಗಿ ತಲೆ ಎತ್ತಿ ಗೋಡೆ ಗಡಿಯಾರವನ್ನು ನೋಡಿದರು. ಇದರಲ್ಲಿ ಇಪ್ಪತ್ತು ನಿಮಿಷ. ಅದರಲ್ಲಿ ಇಪ್ಪತ್ತೆರಡು. ಚೀಟಿಯನ್ನು ಹಿಡಿದಿದ್ದ ಎಡಗೈಯ ಹೆಬ್ಬೆರಳು ತೋರುಬೆರಳುಗಳು ತುಸು ಮಿಸುಕಿದುವು. ಬೇಗನೆ ಹೊರಟುಬಿಡಲೇ?-ಮನಸ್ಸು ಹೊಯ್ದಾಡಿತು. ಎಷ್ಟೆಂದರೂ ಇನ್ನಿರುವುದು ಇಪ್ಪತ್ತೇ ನಿಮಿಷ; ಅಲ್ಲ ಇಪ್ಪತ್ತೆರಡು ನಿಮಿಷ. ಅವರೆದೆ ಡವಡವನೆಂದಿತು. ನೀಳವಾಗಿ ಉಸಿರೆಳೆದು ಬಿಟ್ಟು, ನೆಮ್ಮದಿಯನ್ನು ಮರಳಿಪಡೆಯಲು ಅವರು ಯತ್ನಿಸಿದರು.

ಆ ಚೂರು ಕಾಗದದ ಒಕ್ಕಣೆ:
"ಡಿಯರೆಸ್ಟ್,
ನನ್ನ ಬೆಂಡೋಲೆ ಕಳವಾಗಿದೆ. ಅಡುಗೆಯವನು, ಮುಸುರೆಯವಳು, ಮಾಲಿ–ಎಲ್ಲರನ್ನೂ ಕೇಳಿದ್ದಾಯಿತು. ಯಾರೂ ಕಂಡಿಲ್ಲವಂತೆ. ನನಗೆ ಯಾಕೋ ಭಯ. ತಕ್ಷಣ ಬನ್ನಿ. —ವೀ"

"ಅಸಿಸ್ಟೆಂಟ್ ಕಮಿಾಶನರ ಮನೆಯಲ್ಲಿ ಕಳವು. ಆ ಊರಿಗೆ ಬಂದಿನ್ನೂ ತಿಂಗಳಿಲ್ಲ, ಅಷ್ಟರಲ್ಲೇ ಅಂತಹ ಅನುಭವ.
"ತಕ್ಷಣ ಬನ್ನಿ . . ."
ಇನ್ನು ಹದಿನೆಂಟು ನಿಮಿ‌ಷ.
ಮತ್ತೊಮ್ಮೆ ನೀಳವಾಗಿ ಉಸಿರುಬಿಟ್ಟು ಉಮಾಪತಿ, ಆ ಚೀಟಿಯನ್ನು ನಾಜೂಕಾಗಿ ಒಮ್ಮೆ–ಎರಡು ಸಾರೆ—ಮಡಚಿ, ತಮ್ಮ ಕೋಟಿನ ಒಳಕಿಸೆಯೊಳಕ್ಕೆ ಇಳಿಬಿಟ್ಟರು.
ಪತ್ನಿಯ ಕರೆ ಬಂದುದಕ್ಕೆ ಮುನ್ನ, ಕಚೇರಿಯ ಮುಖ್ಯಸ್ಥ ಸಿದ್ಧಪಡಿಸಿದ ಸುದೀರ್ಘ 'ನೋಟ್' ಒಂದನ್ನು ಅಭ್ಯಸಿಸುತ್ತ ಉಮಾಪತಿ ಕುಳಿತಿದ್ದರು. ಅದು ಕಚೇರಿಯ ಹಂಗಾಮಿ ಜವಾನ ನಾಗಪ್ಪನಿಗೆ ಸಂಬಂಧಿಸಿದ್ದು.
ನಾಗಪ್ಪ, ಹಿಂದಿನ ಸಾಹೇಬರು ನೇಮಿಸಿಕೊಂಡಿದ್ದ ಮನುಷ್ಯ. ತನ್ನ ಸೇವೆಯ ಮೂರೇ ವರ್ಷಗಳಲ್ಲಿ ಆ ಕಚೇರಿಯ ಬಲಾಢ್ಯ ವ್ಯಕ್ತಿಯಾಗಿದ್ದ. ಹೆಬ್ಬೆಟ್ಟು ಗುರುತಿನ ಈ ಧೀರ, ಕಚೇರಿಯ ಸಿಬ್ಬಂದಿಯನ್ನೆಲ್ಲ ಹದ್ದುಬಸ್ತಿನಲ್ಲಿಡಲು ಸಮರ್ಥನಾದ ಬಗೆ ಅದ್ಭುತವಾಗಿತ್ತು.
ಸಾಲುಸಾಲಿಗೂ ಪುನರುಕ್ತಿಯ ಅನುಪಲ್ಲವಿಯಿದ್ದ ಆ ನೋಟ್ ನಲ್ಲಿ ಒಟ್ಟಿನಲ್ಲಿ ಇದ್ದುದಿಷ್ಟು:
ಜವಾನ ನಾಗಪ್ಪ ಯಾರ ಅಂಕೆಗೂ ಒಳಪಡುವುದಿಲ್ಲ. ಅವನು ಉದ್ಧಟ. ಸೇವೆಯ ನಿಯಮಗಳನ್ನುಪಾಲಿಸುವುದಿಲ್ಲ; ಕಚೇರಿಗೆ ಬಂದವರಿಂದ ದುಡ್ಡು ಕಿತ್ತುಕೊಳ್ಳುತ್ತಾನೆ; ಬೆನ್ನ ಹಿಂದಿನಿಂದ ಅಧಿಕಾರಿಗಳನ್ನು ಹೀನಾಯವಾಗಿ ಜರೆಯುತ್ತಾನೆ; ಕುಡುಕ ಬೇರೆ.
ಕಚೇರಿಯ ಮುಖ್ಯಸ್ಥ ನೋಟ್ ಬರೆಯುವುದಕ್ಕೆ ಮುನ್ನ ಸಾಹೇಬರೊಡನೆ ಚರ್ಚಿಸಿದ್ದ.
ಉಮಾಪತಿ ಕೇಳಿದ್ದರು :
"ಹಿಂದಿದ್ದವರ ವಿಶ್ವಾಸಕ್ಕೆ ಇವನು ಪಾತ್ರನಾಗಿದ್ದ-ಎನ್ನುತ್ತಿರಲ್ಲಾ?"
ಮುಖ್ಯಸ್ಥ ಪ್ರಯಾಸಪಡುತ್ತ ಅಂದಿದ್ದ :
" ಆ ವಿಷಯ ನಾನು ಹೆಚ್ಚು ಹೇಳಬಾರದು . . ."
"ಕುಡುಕ ಅಂತೀರಿ. ಇల్లి ಪ್ರೊಹಿಬಿಷನ್ ಇದೆಯಲ್ಲಾ ?"
"ಇದೆ. ಆದರೆ ಕಳ್ಳಭಟ್ಟಿಯವರೆಲ್ಲ ಇವನಿಗೆ ಸ್ನೇಹಿತರು."
ಉಮಾಪತಿಗೆ ನಗುಬಂದಿತ್ತು.
ತನ್ನ ಮಾತನ್ನು ನಂಬದೆ ಸಾಹೇಬರು ನಕ್ಕರೇನೋ ಎಂದು ಕಚೇರಿಯ ಮುಖ್ಯಸ್ಥನಿಗೆ ಗಾಬರಿಯಾಯಿತು.
ಅವನೆಂದ:
"ತಮ್ಮ ವಿಷಯದಲ್ಲೇ ಅವನು ಆಡ್ತಿರೋದನ್ನ ಕೇಳಿದರೆ . . ."
"ಏನಂತೆ ?"
"ಮಿಾಸೆ ಬರದವರೆಲ್ಲ ಈಗ ಆಫೀಸರಾಗ್ತಾರಂತೆ. ಐ.ಎ.ಎಸ್. ಮಾಡ್ಕೊಂಡಾಕ್ಷಣಕ್ಕೆ ಸಾಹೇಬ್‍ಗಿರೀನೋ? ಠುಸ್-ಪುಸ್ ಅಂತ ಇಂಗ್ಲಿಷ್ ಮಾತಾಡಿದರೆ ಕೆಲಸ ನಡಿಯುತ್ತೊ ?-ಅಂತಾನೆ . . . "
ತಮ್ಮ ಭಾವನೆಗಳಿಗೆಲ್ಲ ನಸುನಗೆಯ ಅವಕುಂಠನವೆಳೆದು ಉಮಾಪತಿ ಅಂದಿದ್ದರು.
"ಒಂದು ನೋಟ್ ತಯಾರ್‍ಮಾಡಿ."
ಒಂದು ದಿವಸದ ಅವಧಿಯ ಬಳಿಕ ಆ ನೋಟ್ ಬಂದಿತ್ತು.
ಉಮಾಪತಿ ಆಸನದ ಒರಗುದಿಂಬಿಗೊರಗಿ, ಕುರ್ಚಿಯ ಕೈಗಳ ಮೇಲೆ ತಮ್ಮ ಮೊಣಕೈಗಳನ್ನೂರಿ, ಅಂಗೈಗಳನ್ನೂ ಜೋಡಿಸಿ, ಗೋಡೆ ಗಡಿಯಾರದ ಟಿಕ್-ಟಾಕ್ ಸದ್ದಿಗೆ ತಾಳ ಹಾಕುತ್ತ ಮಡಚಿದ ಬೆರಳುಗಳಿಂದ ತಮ್ಮ ಮೂಗನ್ನು ಮುಟ್ಟುತ್ತಾ ಹೋದರು.
ಇನ್ನು ಹದಿನೈದು ನಿಮಿಷ.
ನಾಳೆಯಿಂದ ಅವರ ಮೊದಲ ಜಮಾಬಂದಿ ಪ್ರವಾಹ. ನಸುಕಿನಲ್ಲೇ ಹೊರಡಬೇಕು. ಹಿಂತಿರುಗುವುದು ಐದು ದಿನಗಳ ಬಳಿಕ.
ಆದರೆ, ಪ್ರವಾಸ ಹೊರಡುವುದಕ್ಕೆ ಮುನ್ನ ಮನೆಯಲ್ಲಿ (ಬಂಗಲೆಯಲ್ಲಿ) ಈ ಚೌರ್ಯದ ಪ್ರಕರಣ...
ವೀಣಾ ಇವತ್ತು ತಲೆಗೆ ಎರೆದುಕೊಂಡಿರಬೇಕು; ಸ್ನಾನದ ಮನೆಯಲ್ಲೇ ಬೆಂಡೋಲೆಗಳನ್ನು ಬಿಟ್ಟಿರಬೇಕು...
ಅಡುಗೆಯವನು–ಮುಸುರೆಯವಳು...ಆಹ!–ಆಕೆ ನಾಗಪ್ಪನ ಸಂಬಂಧಿಕಳು! 'ಅವನ ತಂಗಿ' 'ವಿಧವೆ'–ಎಂದಿದ್ದಳಲ್ಲ ವೀಣಾ?
ಅವರ ದೃಷ್ಟಿ, ತಮ್ಮೆದುರು ಮೇಜಿನ ಮೇಲಿದ್ದ ನೋಟ್ ನತ್ತ ಹರಿಯಿತು.
ಕಚೇರಿಯ ಮುಖ್ಯಸ್ಥ ಒಳಗೆ ಬಂದು ನಿಂತ.
ನಿವೃತ್ತಿಯ ಗೆರೆಯತ್ತ ಕುಂಟುತ್ತ ಸಾಗಿದ್ದ ಆ ವ್ಯಕ್ತಿಯನ್ನು ಉಮಾಪತಿ ದಿಟ್ಟಿಸಿದರು:
(ನಾಗಪ್ಪ ಕೆಟ್ಟವನು. ಆದರೆ ಈತ ಸತ್ಯವಾನನೆ? ಗರ್ಭಗುಡಿಗೇ ಪ್ರವೇಶವಿದ್ದ ಪೂಜಾರಿ ನಾಗಪ್ಪನಿಂದ ಈ ಮರಿದೇವರಿಗೆಲ್ಲ ಸ್ವಲ್ಪ ಅನ್ಯಾಯವಾಗಿರಬೇಕು . . .)
ಕುರುಚಲು ನರೆಗಡ್ಡವನ್ನು ಹಿಂಗೈಯಿಂದ ಒರೆಸಿ ಆತನೆಂದ:
"ಪ್ರವಾಸದ ಸಿಬ್ಬಂದಿಯನ್ನೆಲ್ಲಾ ಗೊತ್ತುಪಡಿಸಿದೇನೆ. ಫೈಲುಗಳನ್ನೆಲ್ಲಾ ಸಾರ್ಟ್ ಮಾಡಿದೇನೆ."
ಉಮಾಪತಿ, ಮೇಜಿನ ಮೇಲೆ ತಾವು ತೆಗೆದಿರಿಸಿದ್ದ ಕೆಲ ಫೈಲುಗಳ ಕಡೆಗೆ ಬೊಟ್ಟು ಮಾಡಿ ಅಂದರು :
"ಇವಿಷ್ಟು ಬಂಗ್ಲೆಗೆ. ಈ ನೋಟ್ ಮೇಲ್ಗಡೇನೇ ಇರ್‍ಲಿ."
“ನೋಟ್ ಸರಿಯಾಗಿದೆಯಾ ಸರ್?”
“ಟೂರಿಂದ ಬಂದ್ಮೇಲೆ ಆರ್ಡರ್ ಪಾಸ್ಮಾಡ್ತೀನಿ."
“ಆಗಲಿ, ಸರ್.”
ಮುಖ್ಯಸ್ಥ ಆಣಿಗೊಳಿಸಿದ ಫೈಲುಗಳ ಕಂತೆಯನ್ನು ಒಯ್ಯಲು ನಾಗಪ್ಪ ಬಂದ. ಯೌವನದ ಸೀಮೆಯನ್ನು ಉಲ್ಲಂಘಿಸಿದ್ದ ಅವನ ಕಣ್ಣುಗಳು ನಿರ್ವಿಕಾರವಾಗಿ ಕಚೇರಿಯ ಮುಖ್ಯಸ್ಥನನ್ನೂ ಸಾಹೇಬರನ್ನೂ ನೋಡಿದುವು. ಕಟ್ಟಿನ ಮೇಲುಭಾಗದಲ್ಲೇ ಇದ್ದ ಒಂಟಿ ಹಾಳೆಯನ್ನು ದಿಟ್ಟಿಸಿದುವು.
ಅವನ ದೃಷ್ಟಿಯ ಚಲನವಲನಗಳನ್ನು ಉಮಾಪತಿ ಗಮನಿಸಿದರು.
ಅದೇನನ್ನೋ ಹುಡುಕುತ್ತಿದ್ದ ಆ ಅನಕ್ಷರಸ್ಥ ಮನುಷ್ಯ ಆ ಕಾಗದದ ಗುರುತು ಹಿಡಿದಂತಿತ್ತು! ಕ್ಷಣಕಾಲ ಬೂದಿ ಸರಿದು ಆತನ ಕಣ್ಣ ಕೆಂಡಗಳು ಮಿನುಗಿದವು.
ಉಮಾಪತಿ ಕೈಗಡಿಯಾರವನ್ನು ನೋಡಿದರು. ಅಲ್ಲಿಂದ ದೃಷ್ಟಿಯನ್ನು ಕಿತ್ತು,ಗಡಿಯಾರದ ಮೇಲೆ ನೆಟ್ಟರು.
“ಸರ್ವೀಸಿಂಗಿಗೆ ಹೋದ ಜೀಪ್ ಬಂತೇನು?”
"ಆಗಲೆ ಬಂತು ಸರ್.”
"ಸರಿ, ಎಲ್ಲಾ ರೆಡಿಮಾಡಿ. ಸಿಬ್ಬಂದಿ ನಾಳೆ ಬೆಳೆಗ್ಗೆ ಐದು ಘಂಟೆಗೆ ಬಂಗ್ಲೆಗೆ ಬರ್‍ಲಿ."
“ ಹೂಂ, ಸರ್.”
"ನಾಗಪ್ಪ, ನೀನು ನನ್ನ ಜೊತೆಗೆ ಈಗ ಬಾ.”
ಹತ್ತಿಕ್ಕಿದ್ದ ಮಾತುಗಳ ಒತ್ತಡಕ್ಕೊಳಗಾಗಿದ್ದ ನಾಗಪ್ಪನ ಗಂಟಲಿನಿಂದ ಗೊಗ್ಗರ ಧ್ವನಿ ಹೊರಟಿತು.
"ಆಗ್ಲಿ ಬುದ್ದಿ.”
ಅವನ ತಲೆ ಮಾತ್ರ ಚಿಟ್‌ಚಿಟೆಂದಿತು.ಬಾ ಎಂದು ಹೇಳುವ ಅಗತ್ಯವೇನಿತ್ತು? ಸಾಹೇಬರನ್ನು ಸಂಜೆ ಯಾವಾಗಲೂ ಬಂಗಲೆಗೆ ಹಿಂಬಾಲಿಸುವುದು ಮೂರು ವರ್ಷಗಳಿಂದ ನಡೆದು ಬ೦ದಿರಲಿಲ್ಲವೆ! ಅದೇನು ಹೊಸ ವ್ಯವಸ್ಥೆಯೆ ನೆನಪು ಮಾಡಿಕೊಡಲು?
ಆತನ ಸೂಕ್ಷ್ಮಬುದ್ದಿ ಇ೦ತಹದೇ ಕಾರಣವಿರಬೇಕೆ೦ದು ಊಹಿಸುತ್ತ, ಕಚೇರಿಯ ಮುಖ್ಯಸ್ಥನ ಮುಖವನ್ನೊಮ್ಮೆ, ತಾನು ಹೊರ ಬೀಳುತ್ತಲಿದ್ದಂತೆ ಇರಿಯುವ ನೋಟದಿಂದ ಆತ ನೋಡಿದ.
ಮುಖಭಾವದಿಂದ ತೋರ್ಪಡಿಸಲಿಲ್ಲವಾದರೂ ಮನಸ್ಸಿನೊಳಗೆ ಆ ಮುಖ್ಯಸ್ಥ ಅಂದುಕೊಂಡ :
"ನೋಟ್‌ಗೆ ಸಂಬಂಧಿಸಿ ಸಾಹೇಬರು ಇವತ್ತು ವಿಚಾರಣೆ ನಡಸ್ತಾರೆ.”
ಗೋಡೆ ಗಡಿಯಾರಕ್ಕೂ ತಮ್ಮದಕ್ಕೂ ಸಾಮ್ಯವಿಲ್ಲದುದನ್ನು ಉಮಾಪತಿ ತಾವು ಅಲ್ಲಿಗೆ ಬಂದ ದಿನದಿಂದಲೂ ಅರಿತಿದ್ದರು. ದಿನವೂ ಎರಡು ನಿಮಿಷ ತಡವಾಗಿಯೇ, ಕಚೇರಿಯ ಸಮಯಸೂಚಿಗನುಸಾರವಾಗಿಯೇ, ಅವರು ಸಂಜೆ ಹೊರಡುತ್ತಿದ್ದರು. ಆದರೆ ಈ ದಿನ ಆ ವ್ಯತಾಸ ಅವರಿಗೆ ಅಸಹನೀಯವಾಗಿ ಕಂಡಿತು.
ಕ್ಷಣಕ್ಷಣಕ್ಕೂ ವಿನಾ ಕಾರಣ ಹೆಚ್ಚು ಹೆಚ್ಚಾಗಿ ಕೆಂಪಡರತೊಡಗಿದ್ದ ಸಾಹೇಬರ ಮುಖವನ್ನು ನೋಡಿ, ಕಚೇರಿಯ ಮುಖ್ಯಸ್ಥ ಕಕ್ಕಾಬಿಕ್ಕಿ ಯಾಗಿ ಅವರ ಸನ್ನಿಧಿಯಿಂದ ಹೊರಟುಬಿಟ್ಟ.
ಆತನನ್ನು ಕೂಗಿ ಕರೆದು ತಮ್ಮ ವಸತಿಯಲ್ಲಾಗಿರುವ ಕಳವಿನ ವಿಷಯ ಹೇಳಬೇಕೆಂದು ಉಮಾಪತಿಯವರಿಗೆ ಅನಿಸಿತು. ಆದರೆ ಮರುಕ್ಷಣವೆ ಮೌನವೇ ಒಳಿತು ಎಂದು ತೋರಿತು.
ಅವರು ಎದ್ದು ಕಿಟಕಿಯ ಬಳಿ ನಿಂತು ವಿಸ್ತಾರವಾಗಿ ದೂರದವರೆಗೂ ಮೈಚಾಚಿದ್ದ ಬಯಲನ್ನು ನೋಡಿದರು. ಅಲ್ಲಿ ಇಲ್ಲಿ ಕೆಲ ಹಸುಗಳು ಸ್ವೇಚ್ಛೆಯಾಗಿ ಮೇಯುತ್ತಿದ್ದುವು. ಸಂಜೆ ಐದರ ಬಳಿಕ ಸಮಿಾಪದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅದು ಆಟದ ಬಯಲು.'ಘಂಟೆ ಹೊಡೆಯೋದನ್ನೇ ಹುಡುಗರು ಕಾಯುತ್ತಿರಬೇಕು.'
ಅವರ ಕೈಗಡಿಯಾರದಲ್ಲಿ ಐದಾಯಿತು. ಉಮಾಪತಿ ಲಗುಬಗೆಯಿಂದ ಹೊರಗೆ ನಿಂತಿದ್ದ ಜೀಪಿನೆಡೆಗೆ ನಡೆದರು.
ವಂದಿಸಲೆಂದು ತಮ್ಮನ್ನು ಹಿಂಬಾಲಿಸಿ ಬಂದ ಕಛೇರಿಯ ಮುಖ್ಯಸ್ಥನಿಗೆ ಅವರೆಂದರು:
"ಆಫೀಸ್ ಗಡಿಯಾರ ಹಿಂದಿದೆ, ಸರಿಪಡಿಸಿ."

****

ಚಲಿಸುತ್ತಿದ್ದ ಜೀಪಿನ ಹಿಂಭಾಗದಲ್ಲಿ ನಾಗಪ್ಪ ಕುಳಿತಿದ್ದ. ಕೊಳೆಯಾಗಿದ್ದ ಖಾದೀ ಸಮವಸ್ತ್ರದ ಬಿಗಿ ಗುಂಡಿಯ ಕೋಟಿನ ಮೇಲಿಂದ ಅವನ ಗಂಟಿಕ್ಕಿದ ಮುಖ ಕಾಣಿಸುತ್ತಿತ್ತು. ಏರುತಗ್ಗುಗಳಲ್ಲಿ ಜೀಪ್ ಕುಪ್ಪಳಿಸಿದಾಗಲೆಲ್ಲಾ, ಅವನ ತುಟಿಗಳು ಬೇರ್ಪಟ್ಟು, ಪರಸ್ಪರ ಬಿಗಿದ ಓರೆಕೋರೆ ಹಲ್ಲುಗಳು ಕಂಡುಬರುತ್ತಿದ್ದುವು.

ಸಿಡುಕು ಮುಖವಾಡದ ಹಿಂದೆ ಅವನ ಮನಸ್ಸು ಮಾತ್ರ ಹಲವು ಹದಿನೆಂಟು ಸಿಕ್ಕುಗಳನ್ನು ಬಿಡಿಸಿ ವಿಚಾರ ಸರಣಿಯನ್ನು ನೇರಗೊಳಿಸಲು ಪ್ರಯತ್ನಿಸುತ್ತಿತ್ತು.
ಇದ್ದಕ್ಕಿದ್ದಹಾಗೆ ಇದೊಳ್ಳೇ ಫಜೀತಿಗಿಟ್ಟುಕೊಂಡಿತಲ್ಲ! ಸಾಹೇಬರು ಬದಲಾದ ಮಾತ್ರಕ್ಕೆ ತನ್ನ ಸ್ಥಾನಮಾನಗಳಲ್ಲಿ ಏರುಪೇರಾಗಬೇಕೆ? ಅವರಿದ್ದಾಗ ಆಫೀಸಿನಲ್ಲೂ ಬಂಗ್ಲೆಯಲ್ಲೂ ತನ್ನದೇ ಆಡಳಿತ ನಡೆದಿತ್ತು. ಅಮ್ಮಾವ್ರು ಮತ್ತು ಸಾಹೇಬರು ಆ ಕಡೆಗೊಂದು ಮುಖ ಈ ಕಡೆಗೊಂದು, ಮುಖ ಆಗಿದ್ದರೂ ಅದೆಷ್ಟು ಪಂಸದಾಗಿ ಅವರಿಬ್ಬರನ್ನೂ ಇಟ್ಟಿದ್ದೆ. ಈಗ ಅವರಿಗೆ ವರ್ಗವಾಗಿ ಈ ಚೋಟುದ್ದ ಸಾಹೇಬ ಬಂದ್ಮೇಲೆ...
ಜೀಪ್ ವೇಗವಾಗಿ ಹೋಗಬಾರದೆ ಎನಿಸುತ್ತಿತ್ತು, ಚಾಲಕನ ಬಲ ಮಗುಲಲ್ಲಿ ಕುಳಿತಿದ್ದ ಉಮಾಪತಿಯವರಿಗೆ. ಆದರೆ ತಮ್ಮ ಅಪೇಕ್ಷೆಯ ಸುಳಿವನ್ನು ಮಾತ್ರ ಚಾಲಕನಿಗೆ ಅವರು ಹತ್ತಗೊಡಲಿಲ್ಲ. ಆಕ್ಸಿಲರೇಟರನ್ನು ಡ್ರೈವರ್ ಒಂದಿಷ್ಟು ಒತ್ತಿದನೆಂದರೆ ಜೀಪಿಗೆ ಆವೇಶ ಬರುವುದೆಂಬುದನ್ನು ಅವರು ಬಲ್ಲರು.
ಕಳೆದುಹೋದ ಬೆಂಡೋಲೆ ದೊರೆತರೆ ಸರಿ. ಇಲ್ಲದೆ ಇದ್ದರೆ? ಬೆಳಗಾಗುತ್ತಲೇ ತಾವು ಪ್ರವಾಸ ಹೊರಡಬೇಕು ಬೇರೆ...
ತಮ್ಮ ತಾಯಿಯಾಗಲೀ ಅಥವಾ ಅತ್ತೆಯೇ ಆಗಲೀ ಸ್ವಲ್ಪ ಕಾಲದ ಮಟ್ಟಿಗೆ ಬಂದಿದ್ದರೆ ಎಷ್ಟು ಒಳಿತಾಗುತ್ತಿತ್ತು! ಆದರೆ ವೀಣಾಗೆ ಇಷ್ಟವಿರಲಿಲ್ಲ. ಮದುವೆಯಾದ ಹೊಸತಿನಲ್ಲಿ ಇಬ್ಬರೇ ಇದ್ದರೆ ಚೆನ್ನು–ಎಂಬುದು ಅವಳ ಅಭಿಪ್ರಾಯವಾಗಿತ್ತು. ಅಭಿಪ್ರಾಯವಲ್ಲ, ಬಯಕೆ. ಇದೂ ಒಂದು ರೀತಿಯಲ್ಲಿ ಮೇಲು-ಎಂದು ಅಂದುಕೊಂಡಿದ್ದರು. ಆದರೆ ವಸ್ತುಸ್ಥಿತಿ....
ನಾಗಪ್ಪ ತನ್ನ ಕಾಲಬುಡದಲ್ಲಿದ್ದ ಕಪ್ಪು ಪೆಟ್ಟಿಗೆಗಳನ್ನು ನೋಡಿದ. ಕಚೇರಿಯ ಕಾಗದ ಪತ್ರಗಳು. ಎದುರು ಸೀಟಿನಲ್ಲಿದ್ದ ಫೈಲುಗಳ ಕಟ್ಟನ್ನು ನೋಡಿದ. ಎಲ್ಲಕ್ಕೂ ಮೇಲೆ ಇರಿಸಿದ್ದ ಆ ನೋಟ್.
ಅದೇನೋ ಕರಾಮತ್ತು ನಡೆದಿದೆ ಎಂದು ಅವನು ಬಲ್ಲ. ಆದರೆ ಈ ಜನ ತನಗೇನು ಮಾಡಬಲ್ಲರು? ತಾನಿಲ್ಲದೆ ಹೇಗೆ ನಡೆದೀತುಕಚೇರಿ?
ಎದುರಿಗಿರುವ ಫೈಲನ್ನು ತಾನು ಎತ್ತಿ ಹೊರಕ್ಕೆಸೆದುಬಿಟ್ಟೆ ಅಂದರೆ?
ಜೀಪು ಬಂಗಲೆಯ ಆವರಣವನ್ನು ಹೊಕ್ಕಿತು. ಇಳಿದು ಮುಂದಕ್ಕೆ ನಡೆದ ಸಾಹೇಬರನ್ನು ಫೈಲುಗಳ ಕಟ್ಟಿನೊಡನೆ ನಾಗಪ್ಪ ಹಿಂಬಾಲಿಸಿದ.
ಪ್ರತಿಯೊಂದೂ ಶಾಂತವಾಗಿತ್ತು. [ಗದ್ದಲವಾಗಲು ಎಳೆಯ ಮಕ್ಕಳಿದ್ದುವೆ ಆ ಮನೆಯಲ್ಲಿ?]
"ನಾಗಪ್ಪ-”ನಡೆಯುತ್ತಲಿದ್ದಂತೆ ತಿರುಗಿ ನೋಡದೆಯೇ ಸಾಹೇಬರೆಂದರು.
"ಬುದ್ದಿ..."
"ಅಮ್ಮಾವ್ರ ಬೆಂಡೋಲೆ ಕಳೆದುಹೋಗಿದೆಯಂತಲ್ಲಪ್ಪ."
“ ಹೌದ್ರಾ ಬುದ್ದಿ? ಅದೆಂಗಾಯ್ತು?”
"ಅದ್ನೇ ಒಂದಿಷ್ಟು ವಿಚಾರಿಸ್ಬೇಕು ಈಗ.”
"ಇಚಾರ್‍ಸನ ಬುದ್ದಿ.”
ಆತ ಅರಸು. ಈತ ಮಹಾಪ್ರಧಾನಿ. ಇವನಲ್ಲವೆ ವಿಚಾರಿಸಬೇಕಾದವನು?
ಅನಂತ ಸಾಧ್ಯತೆಗಳಿದ್ದ ಅಪೂರ್ವ ಅವಕಾಶ.
ಆದರೂ ನಾಗಪ್ಪನಿಗೆ ಸ್ವಲ್ಪ ಕಸಿವಿಸಿ ಎನಿಸಿತು, ತನ್ನ 'ಸಂಬಂಧಿಕ'೪ಾದ ಮುಸುರೆಯ ಮಲ್ಲಿಯನ್ನು ನೆನೆದು.
ಸಾಹೇಬರು ನೇರವಾಗಿ, ವಿಶಾಲ ಬ೦ಗಲೆಯ ಒಳಭಾಗಕ್ಕೆ ನಡೆದರು. ಅವರು ಊಹಿಸಿದ್ದಂತೆಯೇ, ಬೈಠಕುಖಾನೆಯಿಲ್ಲಿ ದಿಕ್ಕುಗೆಟ್ಟವರಂತೆ ಕುಳಿತಿದ್ದರು ಅವರ ಪತ್ನಿ.
ನಾಗಪ್ಪ, ಮಲ್ಲಿಯನ್ನು ಹುಡುಕುತ್ತ ಹಿತ್ತಲ ಬಾಗಿಲಿನೆಡೆಗೆ ಸಾಗಿದ, ಬಂಗಲೆಯನ್ನು బಳಸಿ.
ಘಟನೆಯ ವಿವರೆಗಳನ್ನೆಲ್ಲ ತಿಳಿದ ಉಮಾಪತಿ, ಪತ್ನಿಯೊಡನೆ ಹೊರ ಹಜಾರಕ್ಕೆ ಬಂದರು. ಮೂವರು ಸೇವಕರನ್ನೂ ಕರೆದರು.
"ಸಿಕ್ದವರು ಕೊಟ್ಬಿಡಿ. ನಿಮಗೇನೂ ಶಿಕ್ಷೆ ವಿಧಿಸೋದಿಲ್ಲ. ಇಲ್ದೇಹೋದರೆ ಮಾತ್ರ ನಾನು ತೀವ್ರ ಕ್ರಮ ತಗೋಬೇಕಾಗುತ್ತೆ.”
ತುಸು ಕಂಪಿಸಿದಂತೆ ಕಂಡ ಆ ಅಧಿಕಾರ ವಾಣಿಯನ್ನು ಕೇಳಿದಾಗ ನಾಗಪ್ಪನಿಗೆ ನಗೆ ಬಂತು. ಆದರೂ ಆತ ತುಟಿಗಳನ್ನು ಬಿಗಿ ಹಿಡಿದು ನಿಂತ.
ದೇವರ ಸಾಕ್ಷಿಯಾಗಿ ಆ ಮೂವರೂ ನುಡಿದರು, ತಮಗೆ ಏನೂ ತಿಳೀದು ಅಂತ. ವಿಚಾರಣೆ ಇಷ್ಟು ಸುಲಭವಾಗಿ ಮುಗಿದು ಹೋಯಿತಲ್ಲ ಎ೦ದು ಸಾಹೇಬರು ಅಧೀರರಾಗುವುದಕ್ಕೆ ಮುನ್ನವೇ ನಾಗಪ್ಪನೆಂದ:
" ಒಸಿ ನಾ ಇಚಾರಿಸ್ತೀನಿ ಬುದ್ದಿ. ಲೋ ಸಿದ್ದ, ಬಾ ಇಲ್ಲಿ.”
ಸಿದ್ದ ಮಾಲಿ. ಹುಡುಗ. ಹತ್ತಿರ ಬಂದ ಅವನ ಕತ್ತು ಬಗ್ಗಿಸಿ ನಾಗಪ್ಪ ಎರಡು ಗುದ್ದು ಹಾಕಿದ. ಪ್ರತಿಭಟಿಸಬೇಕೆನಿಸಿತು ಉಮಾಪತಿಯವರಿಗೆ. ಆದರೂ ಅವರು ಅಸಹಾಯರಾಗಿ ಸುಮ್ಮನಿದ್ದರು.
ಸಿದ್ದ ಬೊಬ್ಬಿಟ್ಟ, ಅಷ್ಟೆ.
ನಾಗಪ್ಪ ಅಡುಗೆಯವನ ಕಡೆ ತಿರುಗಿ ಗದರಿದ:
"ನಂಜಪ್ಪನವರೇ, ಸತ್ಯ ಏಳ್ಬುಡಿ! ಈ ನಾಗಪ್ಪನ ಕೈಲಿ ಸಿಕ್ಹಾಕೊಂಡೀರಾ!"
ನಂಜಪ್ಪನೆಂದ:
ಹೆಂಡ್ತಿ ಸತ್ತು ಇಪ್ಪತ್ತು ವರ್ಷ ಆಗೋಯ್ತು. ಯಾರಿಗಪ್ಪ ಕೊಡ್ಲಿ ಬೆಂಡೋಲೇನಾ?”
ನಾಗಪ್ಪ ಅಬ್ಬರಿಸಿದ :
"ಮಲ್ಲಿ! ಸುಳ್ಳೆಳ್ದೆ ಅಂದ್ರೆ ಚಕ್ಳ ಸುಲ್ದೇನು ! ಎಲ್ಲೈತೆ ಬೆಂಡೋಲೆ?"
ಮಲ್ಲಿ ಅವನತ್ತ ನೇರವಾಗಿ ನೋಡದೆ ಉಳಿದವರನ್ನೆಲ್ಲ ಉದ್ದೇಶಿಸಿ ಅ೦ದಳು :
"ಎರಕ್ಕೋಳ್ಳೋವಾಗ್ಲೇ ಕಳೆದ್ಹೋಯ್ತೂಂತ ಅಮ್ಮಾವ್ರು ಯೇಳೋದಾದರೆ ಮೋರೀಲೋ ಮತ್ತೆಲ್ಲೋ ಬಿದ್ದಿರಬೇಕು.”
"ಮೋರೀಲೆಲ್ಲಾ ಆಗ್ಗೆ ಹುಡುಕ್ಲಿಲ್ವೆ?” ಎಂದರು ಸಾಹೇಬರ ಪತ್ನಿ.
"ಇನ್ನೊಂದ್ಸಲ ನೋಡಾನಾ ಬನ್ನಿ.”
ಮಲ್ಲಿಯ ನಾಯಕತ್ವದಲ್ಲಿ ಶೋಧಕರ ತಂಡ ಹೊರಟಿತು. ಸ್ನಾನ ಗೃಹದ ಮೂಲೆ ಮೂಲೆಗಳನ್ನೂ ಶೋಧಿಸಿದ್ದಾಯಿತು. ಎಲ್ಲಿಯೂ ಬೆಂಡೋಲೆ ಸಿಗಲಿಲ್ಲ.
ಅಲ್ಲಿಂದ ಅವರೆಲ್ಲ ಹೊರಬೀಳಬೇಕೆನ್ನುವಷ್ಟರಲ್ಲಿ ಮಲ್ಲಿ ಅಂದಳು :
"ಒಸಿ ತಾಳ್ರಿ. ನೀರಿನ ತೊಟ್ಟಿಯಾಗಿಷ್ಟು ನೋಡಾನ. ಅಕಾ, ಅದೇನು ಕಾಣಿಸ್ತಿರೋದು?”
"ಕಸ,” ಎಂದ ನಂಜಪ್ಪ.
"ಫಳಫಳ ಅಂತೈತೆ.”
"ಏ ಸಿದ್ದಾ, ತೊಟ್ಟಿಗೆ ಜಿಗಿ– ಮುಳುಗ್ನೋಡು,” ಎಂದು ನಾಗಪ್ಪ ಆಜ್ಞಾಪಿಸಿದ.
ಐದಡಿ ಎತ್ತರದ ತೊಟ್ಟಿಯನ್ನೇರಿ ಸಿದ್ದ ಒಳಕ್ಕೆ ಹಾರಿದ. ಮುಳುಗಿ ನೋಡಿದ; ಕೈಯಾಡಿಸಿದ; ಒಂದು ಬೆಂಡೋಲೆಯೊಡನೆ ಮೇಲಕ್ಕೆ ಬಂದ.
“ಹ್ಞಾ! ಅದೇನೇ!” ಎಂದು ಉದ್ಗಾರವೆತ್ತಿದರು ಸಾಹೇಬರ ಮಡದಿ.
"ಇನ್ನೊಂದ್ಸಲ ಮುಳುಗು!” ಎಂದ ನಾಗಪ್ಪ.
ಜೊತೆಯ ಬೆಂಡೋಲೆಯೂ ದೊರಕಿತು.
ಪತ್ನಿ ಹರ್ಷಿತಳಾದುದನ್ನು ಕಂಡು ಉಮಾಪತಿಯವರಿಗೂ ಸಮಾಧಾನವಾಯಿತು.
ನಾಗಪ್ಪ, ಸಾಹೇಬರೊಬ್ಬರೇ ಇದಾಗ ಅವರ ಬಳಿ ಸಾರಿ ನುಡಿದ:
"ಕಳ್ಳ ನನ್ಮಕ್ಳು- ನಂಬೋ ಹಂగిల్ల. ಸಿಕ್ಹಾಕೊಳ್ತೀವಿ ಅಂತ ಹೆದರಿತೊಟ್ಟಿಯೊಳಕ್ಕೆ ಆಕಿದ್ರೂ ಇರಬೋದು. ”
ವೀಣಾ ಮಾತ್ರ, ತಮ್ಮ ಪತಿಯೊಡನೆ ಅಂದರು :
"ತೊಟ್ಟಿಯ ದಂಡೆ ಮೇಲೆ ಬೆಂಡೋಲೇನ ಇಟ್ಟಿದ್ದೆ. ಜಾರಿಬಿದ್ದಿರ್ಬೇಕು. ಸುಮ್ಸುಮ್ನೆ ಎಷ್ಟೊಂದು ಹೆದರ್ಕೊಂಡ್ಬಿಟ್ಟಿ!"

****

ರಾತ್ರಿ ಉಮಾಪತಿ, ಆದಷ್ಟು ಬೇಗನೆ ಹೊರಟು ಬಂದು ಒಂದೆರಡು ತಿಂಗಳ ಮಟ್ಟಿಗೆ ತಮ್ಮೊಡನೆ ಇರಬೇಕೆಂದು ತಮ್ಮ ತಾಯಿಗೆ ಕಾಗದ ಬರೆದರು. ಹೊರಗಿನ ಕೆಲಸಕ್ಕಾಗಿ ಒಬ್ಬಳನ್ನು ಊರಿನಿಂದ ಕರೆದುಕೊಂಡು ಬರಬೇಕೆಂದೂ ತಿಳಿಸಿದರು.
"ಮಲ್ಲಿ ಬೇಡ ಅಂತೀರೇನು?” ಎಂದರು ವೀಣಾ.
"ಬರೆಯೋದು ಬರೆದಿದೇನೆ. ಮುಂದೆ ನೋಡೋಣ,” ಎಂದು ಉತ್ತರವಿತ್ತರು ಉಮಾಪತಿ.
"ಐದು ದಿನ ಒಬ್ಬಳೇ ಹೇಗಿರ್ಲಿ? ನಿಮ್ಮ ಜೊತೆ ನಾನೂ ಬರೋಕಾಗಲ್ವೆ?”
"ಅಸಿಸ್ಟೆಮಟ್ ಕಮೀಶನರು ಅ೦ದರೆ ಹಳೇ ಕಾಲದ ರಾಜರು ಅಂತ ತಿಳಕೊಂಡೆಯೇನು, ರಾಣೀವಾಸವನ್ನು ಕರಕೊಂಡು ಹೋಗೋದಕ್ಕೆ?”
"ಇದು ದೆವ್ವದಂಥ ಮನೆ. ಭಯವಾಗುತ್ತಪ್ಪ!”
"ಭಯವಂತೆ! ಹುಚ್ಚುಚ್ಚಾರ ಆಡ್ಬೇಡ.”
ಅವರು ಹಾಗೆ ಹೇಳುತ್ತಿದ್ದಂತೆಯೇ ಪಕ್ಕದ ಕೊಠಡಿಯಲ್ಲಿ ಏನೋ ಸದ್ದಾಯಿತು.
"ಯಾರದು?” ಎಂದರು ಉಮಾಪತಿ, ಧ್ವನಿ ಏರಿಸಿ.
ಉತ್ತರ ಬರಲಿಲ್ಲ. ಸರಸರನೆ ಯಾರೋ ಹಾದು ಹೋದಂತಾಯಿತು. ಉಮಾಪತಿ ಎದ್ದು ಬಾಗಿಲ ಬಳಿ ನಿಂತು ಅತ್ತಿತ್ತ ನೋಡಿದರು.
"ಬೆಕ್ಕಿರಬೇಕು," ಎಂದರು.
ವೀಣಾ ಅಂದರು:
"ಇದ್ದೀತು. ಬೆಳಗ್ಗೆ ಒಂದು ಬೆಕ್ಕನ್ನ ನೋಡ್ಡೆ. ಹುಲಿಯಷ್ಟು ದೊಡ್ಡದು. ಹಿಂದೆ ಇದ್ದವರು ಸಾಕಿದ್ದರಂತೆ. ಆತ ಎಂಥ ವಿಚಿತ್ರ ಮನುಷ್ಯನೋ ಅಂತೀನಿ"
"ಬೆಳಗ್ಗೆ ನಾನು ಹೋಗ್ತೀನಿ.ಧೈರ್ಯವಾಗಿ ಇದ್ಬಿಡು. ನಿನ್ನ ಬೆಡ್ ರೂಂ ಹೊರಗಡೆ ಮುಸುರೆಯವಳು ಮಲಕ್ಕೊಳ್ಳಿ. ಆ ನಾಗಪ್ಪನಿಗೂ ಇಲ್ಲೇ ಇರೂಂತ ಹೇಳ್ತೀನಿ.”
"ನಾಗಪ್ಪ ಧೈರ್ಯವಂತ."
"ಅವನು ಪ್ರಚಂಡ.. ನೀನು ಮಾತ್ರ ಹುಷಾರಾಗಿರು.”
ಸಾಹೇಬರಾಡಿದ್ದ ಮಾತು ನಾಗಪ್ಪನಿಗೆ ಕೇಳಿಸಿತ್ತು, ಮಾರನೆಯ ದಿನ ಅವರು ಹೊರಟು ಹೋದಮೇಲೆ ಅವನು ಬಹಳ ಹೊತ್ತು ಯೋಚಿಸಿದ. ಇನ್ನು ಕೆಲವೇ ವರ್ಷಗಳೊಳಗೆ ಫಲವತ್ತಾದ ಹೊಲ ಕೊಂಡು ಭವ್ಯವಾದ ಮನೆ ಕಟ್ಟಿಸುವ ಕನಸನ್ನು ಅವನು ಕಂಡಿದ್ದ. ಮನಸ್ಸು ಮಾಡಿದ್ದರೆ ಆ ಮೂರು ವರ್ಷಗಳಲ್ಲೇ ಒಂದಿಷ್ಟು ಉಳಿಸಬಹುದಾಗಿತ್ತು.ಆದರೆ ಖಯಾಲಿ ಖರ್ಚುಗಳಿಗಾಗಿ ಹಣವೆಲ್ಲಾ.ವ್ಯಯವಾಗಿತ್ತು. ಈಗ ಕೆಲಸವೇ ಹೋಯಿತೆಂದರೆ ಬರಿಗೈ.ಭಿಕಾರಿಯಾಗಿ ಬದುಕು ಆರಂಭಿಸಿದ್ದ ಸ್ಥಿತಿಗೇ ಪುನಃ ಪ್ರವೇಶ. ಇದೆಂಥಾ ಸಾಹೇಬ್ರು ಎಂಥಾ ಅಮ್ಮಾವ್ರು. . .ಥುತ್. . .
ಇನ್ನು ಆರು ದಿನವಂತೂ ಈ ಹೆಂಗಸು ತನ್ನ ಕೈದಿಯಿದ್ದ ಹಾಗೆ. ಇವಳ ಕತ್ತು, ಹಿಸುಕಿ ಆಭರಣಗಳನ್ನೆಲ್ಲ ದೋಚಿಕೊಂಡು ಪರಾರಿಯಾಗಬಹುದು. ಆದರೆ ಮನೆಯಲ್ಲಿರುವ ಹೆಂಡತಿ ಮಕ್ಕಳ ಗತಿ? ಅವರ ಹಾದಿ ಅವರು ನೋಡಿಕೊಳ್ಳುತ್ತಾರೆ. ಬೇಕಿದ್ದರೆ ಇವಳೊಬ್ಬಳನ್ನು, . . ಸಿಕ್ಕಿಹಾಕಿಕೊಂಡರೊ? ಫಾಸಿ ಶಿಕ್ಷೆ! ಇಷ್ಟಕ್ಕೂ ಆಭರಣಗಳೇನೂ ಇಲ್ಲಿ ఇల్లದೆ ಹೋದರೆ? ಮಲ್ಲಿ ಹೇಳಲಿಲ್ಲವೇ?–ಒಂದು ದಿನವೂ ಬೆಲೆಬಾಳುವಂಥವನ್ನೇನೂ ಈಕೆ ತೊಟ್ಟುಕೊಂಡಿಲ್ಲ. ಊರಲ್ಲೇ ಬಿಟ್ಟು ಬಂದಿದ್ದರೋ ಏನೋ. ಅಥವಾ ಆಭರಣಗಳೇ ಇಲ್ಲವೋ? ಇದೇ ಈಗ ಆಫೀಸರಾದವನ ಕೈಯಲ್ಲಿ ಇನ್ನೇನಿದ್ದೀತು ?
ಇವರು ಎಂಥ ಜನವೋ? ಇವರ ಚರಿತ್ರೆಯೇನೋ? ಅಮ್ಮಾವ್ರ ಬಾಯಿ ಬಿಡಿಸಲು ಮಲ್ಲಿ ಸಮರ್ಥಳಾಗಿರಲಿಲ್ಲ. ಅಲ್ಲಿ ಯಾವಾಗಲೂ ಬೀಗ ಬಿಗಿದೇ ಇರುತ್ತಿತ್ತು. ನೋಟಕ್ಕೇನೋ ದರ್ಪಿಷ್ಟೇ. ವಾಸ್ತವವಾಗಿ ಪುಕ್ಕಲೇ ಇರಬೇಕು. ಮೈಯಲ್ಲಿ ಇಷ್ಟೂ ಮಾಂಸವಿಲ್ಲದ ಎಳೇಕಡ್ಡಿ. ಮಲ್ಲಿಗೆ ಇವಳೆಲ್ಲಿ ಸಮ. . . .
ವೀಣಾ ಎಚ್ಚರದಿಂದ ಓಡಾಡಿದರು. ಒಂಟಿಯಾಗಿರಬೇಕಾದ ಪರಿಸ್ಥಿತಿ ಮದುವೆಯಾಗಿ ಒಂದು ವರ್ಷವಾಗಿತ್ತು. ಕಲಕತ್ತೆಯಲ್ಲಿ ಗಂಡ ತರಬೇತಿ ಪಡೆಯುತ್ತಿದ್ದಾಗ ನಾಲ್ಕು ತಿಂಗಳು ವೀಣಾ ಅವರ ಬಳಿ ಇದ್ದರು. ಒಂದೇ ಕೊಠಡಿಯ ಗುಬ್ಬಚ್ಚಿ ಸಂಸಾರ ಸ್ಮರಣೀಯವಾಗಿತ್ತು, ಆ ಪುಟ್ಟ ಆವಾಸ ಸ್ಥಾನದ ಅನಂತರ ಈಗ ಈ ದೊಡ್ಡ ಭವನ.ಆನೆ ಹೊಕ್ಕು ಬರಬಹುದಾದ ಬಾಗಿಲುಗಳು. ಬಾಗಿಲುಗಳಷ್ಟೆ ದೊಡ್ಡದಾದ ಕಿಟಿಕಿಗಳು. ಒಳ ಹಜಾರವನ್ನು ದಾಟಿ ಹೊರಗೆ ಬರಲು ಐದು ನಿಮಿಷ ಹಿಡಿಯುತ್ತಿತ್ತು. ಅಂಥ ಹರವು.
ఇಲ್ಲಿ, ಕತ್ತುಹಿಸುಕಿದರೆಂದು ಕಿರಿಚಿಕೊಂಡರೂ ಪ್ರತಿಧ್ವನಿಯಷ್ಟೇ ಕೇಳಿಸಬಹುದು.
ಭಯದಿಂದ ಅವರ ಮೈ ಬೆವತಿತು.
ಒಂಟಿ ಬದುಕಿನ ಮೊದಲ ರಾತ್ರಿ ಅವರಿಗೆ ಬಹಳ ಹೊತ್ತು ನಿದ್ದೆ ಹತ್ತಲಿಲ್ಲ. ಮಂಪರು ಬಂದಾಗ ಒಮ್ಮೆಲೆ ಎಚ್ಚರವಾಯಿತು. ಪಕ್ಕದ ಕೊಠಡಿಯಲ್ಲಿ ಸದ್ದು. ವೀಣಾ ಉಸಿರು ಬಿಗಿ ಹಿಡಿದರು. ಮಲ್ಲಿ ಒಬ್ಬಳೇ ಮಲಗಿದ್ದಳಲ್ಲ? ಯಾರಾದರೂ ಅವಳ ಕತ್ತು ಹಿಸುಕುತ್ತಿರಬಹುದೆ? ಊಹೂಂ. ಅದಲ್ಲ. ಅಯ್ಯೋ! ಮಲ್ಲಿ ಮತ್ತು ಯಾರು? ಯಾರು ಆತ? ಅಡುಗೆಯವನು? ಹುಡುಗ ಸಿದ್ಧ? ಎಂಥ ಹೊಲಸು!
ಮುಂದೆ, ದಿಂಬನ್ನು ಹಲ್ಲುಗಳೆಡೆ ಕಚ್ಚಿ ಮಲಗಿದ ಅವರಿಗೆ ನಿದ್ದೆ ಬರಲು ಬಹಳ ಹೊತ್ತು ಹಿಡಿಯಿತು.
ಬೆಳಗಾದ ಮೇಲೆ ಅವರು ಮಲ್ಲಿಯನ್ನೂ ಇತರರನ್ನೂ ಸೂಕ್ಷ್ಮವಾಗಿ ದಿಟ್ಟಿಸಿದರು. ಏನೂ ಸ್ಪಷ್ಟವಾಗದಿರಲು ಮಲ್ಲಿಯನ್ನು ಕರೆದು ಅವರು ಕೇಳಿದರು :
"ಪಕ್ಕದ ರೂಮ್ನಲ್ಲಿ ನಿನ್ನೆ ನೀನೊಬ್ಬಳೇ ಮಲಗಿದ್ದೆ, ಅಲ್ವೇನೆ?”
ಕತ್ತು ಕೊಂಕಿಸಿ ಮಲ್ಲಿ ಅಂದಳು :
“ಹೂಂ ಅಮ್ಮಾವ್ರೆ.”
"ಯಾರೋ ನಿನ್ಜತೆ ಮಾತಾಡಿದ ಹಾಗಾಯ್ತು.”
"ಅದೇ ? ನಾಗಣ್ಣ. ಒಸಿ ಸುಣ್ಣ ಎಲೆ ಬೇಕೂಂತ ಬಂದಿದ್ದ."
ಇದು ಸುಳ್ಳೆಂಬುದು ಖಚಿತವಾಗಿದ್ದ ವೀಣಾ ಪ್ರಶ್ನಿಸಿದರು :
"ಅವನು ನಿನ್ನ ಅಣ್ಣ ಅಲ್ವಾ?”
“ಹೌದು ! ಅల్ల ಅಂತಾರಾ? "
ಅಮ್ಮಾವ್ರ ಬಾಯಿ ಕಟ್ಟಿಹೋಯಿತು.
ಮಲ್ಲಿ ಮತ್ತೂ ಒಂದು ಮಾತು ಅಂದಳು :
"ನೀವು ಎ೦ಗಾರೂ ಒಬ್ರೇ ಇರ್ತೀರೋ ಅಮ್ಮಾವ್ರೇ ... ದೆವ್ವಗಿವ್ವ ಬರ್ತೇತೇನೋಂತ ಎದರ್ಕೇನೇ ಆಗ್ತೈತೆ."
"ಹೋಗು ನಿನ್ನ ಕೆಲಸ ಮಾಡು.”
ಆ ಹಗಲು ನಾಗಪ್ಪ ಕಛೇರಿಗೆ ಹೋಗಲಿಲ್ಲ. ಅವನಿಗೆ ಬಂಗಲೆ ಡ್ಯೂಟಿ .
ಅಡುಗೆಯ ನಂಜಪ್ಪನನ್ನು ವೀಣಾ ಪ್ರಶ್ನಿಸಿದರು:
"ರಾತ್ರಿ ನಿನಗೇನಾದರೂ ಸಪ್ಪಳ ಕೇಳಿಸ್ತಾ?”
"ಒಮ್ಮೆ ಅಡುಗೆಮನೆ ಬಾಗಿಲು ಹಾಕಿ ಮಲಕೊಂಡೆ ಅಂದ್ರೆ ನನಗೆ ಈ ಲೋಕದ ಗ್ಯಾನಾನೆ ಇರೋದಿಲ್ಲ, ಅಮ್ಮಾವ್ರೆ. .. "ಎ೦ದ ನಂಜಪ್ಪ. ಅದು ನಿಜವಾದ ಸಂಗತಿ .
ಸ್ವಹಿತ ರಕ್ಷಣೆಗಾಗಿ ಮುಂದೆ ತಾನಿಡಬೇಕಾದ ಹೆಜ್ಜೆ ಯಾವ ದಿಕ್ಕಿನಲ್ಲೆಂಬುದನ್ನು ಆ ಸಂಜೆಯೊಳಗಾಗಿ ನಾಗಪ್ಪ ನಿರ್ಧರಿಸಿದ.
ಅಮಾವಾಸ್ಯೆಯನ್ನು ಇದಿರುನೋಡುತ್ತ ಚಂದ್ರ ಆಗಲೇ ಒಂದು ವಾರ ಕಳೆದಿದ್ದ. ನಡು ಇರುಳಿನವರೆಗೂ ಕಗ್ಗತ್ತಲು. ನಾಗಪ್ಪನ ಯೋಜನೆಗೆ ಇದು ಅನುಕೂಲವೇ ಆಗಿತ್ತು
ಆ ರಾತ್ರಿ ವಿಕಾರ ಧ್ವನಿಗಳು ವೀಣಾಗೆ ಕೇಳಿಸಿದುವು. ಛಾವಣಿಯ ಮೇಲೆ ಕಲ್ಲುಗಳು ಬಿದ್ದುವು. ಅವರು ಕಿರಿಚಿಕೊಂಡೆದ್ದು ದೀಪ ಹಾಕಿದರು. ಗಾಢನಿದ್ರೆಯಲ್ಲಿದ್ದಂತೆ ನಟಿಸುತ್ತಿದ್ದ ಮಲ್ಲಿಯನ್ನೆಬ್ಬಿಸಿದರು. ನಾಗಪ್ಪ ಓಡಿ ಬ೦ದ. ಅಮ್ಮಾವ್ರು ಕೊಟ್ಟ ಟಾರ್ಚು ಹಿಡಿದು ಮನೆಯ ಸುತ್ತಲೆಲ್ಲ ಹೋಗಿ ನೋಡಿದ.
" ಏನೂ ಇಲ್ಲ, ಅಮ್ಮಾವ್ರೆ... "
ವೀಣಾ ಒರಗು ಕುರ್ಚಿಯ ಮೇಲೆ ಕುಸಿದು ಕುಳಿತರು.
“ ಅಯ್ಯೋ! ನನ್ನ ಕಿವಿಯಾರೆ ಕೇಳಿದೆನಲ್ಲ ! ”
"ಎದರ್ಬೇಡಿ, ಅಮ್ಮಾನ್ರೆ. ನಾನಿದೀನಿ. ಮನಿಕೊಳ್ಳಿ.”
ಮಲ್ಲಿಯೂ ಒಡತಿಗೆ ಧೈರ್ಯ ಹೇಳಿದಳು.
ಹೊರಗಿನ ದೀಪಗಳೆಲ್ಲ ಮತ್ತೆ ಆರಿದುವಾದರೂ ವೀಣಾ ತಮ್ಮ ಮಲಗುವ ಕೊಠಡಿಯ ಬೆಳಕನ್ನು ಹಾಗೆಯೇ ಇರಗೊಟ್ಟರು. ಭದ್ರವಾಗಿ ಕಣ್ಣ ಮುಚ್ಚಿ ಮಲಗಿದರು. ಅವರ ಶರೀರ ಒಂದೇ ಸಮನೆ ಕಂಪಿಸಿತು. ಸೀರೆ, ಹಾಸಿಗೆಯ ಮೇಲುಹೊದಿಕೆ ಎಲ್ಲವೂ ಬೆವರಿನಿಂದ ತೊಯುಹೋದವು.
ಈ ಸಲ ಹತ್ತಿರದಿಂದಲ್ಲ, ದೂರದಿಂದ ಕರ್ಕಶ ಕೂಗುಗಳು ಕೇಳಿಸಿದುವು. ಬಹಳ ದೂರದಿಂದ ಕಲ್ಲುಗಳೂ ಸದ್ದು ಮಾಡಿದುವು.
ಬೆಳಗಿನವರೆಗೂ ವೀಣಾ ನಿದ್ರಿಸಲಿಲ್ಲ, ಬೆಳಗಾದ ಮೇಲೂ ಅವರಿಗೆ ನಿದ್ದೆ ಬರಲಿಲ್ಲ.
ಹಿತ್ತಲಮೂಲೆಯ ಗುಡಿಸಲಲ್ಲಿ ಮಲಗುತ್ತಿದ್ದ ಸಿದ್ಧನಿಗೂ ಏನೋ ಸದ್ದು ಕೇಳಿಸಿತಂತೆ. ತನಗೂ ಒಮ್ಮೆ ಎಚ್ಚರವಾಯಿತು ಎಂದ ನಂಜಪ್ಪ .
ನಾಗಪ್ಪ ಮೊತಲೂ ನಂಜಪ್ಪನೆದುರು, ಬಳಿಕ ಅಮಾವರೆದುರು, ತನ್ನ ಸಂದೇಹಗಳನ್ನು ತೋಡಿಕೊಂಡ. ಇದೆಲ್ಲಾ ಭೂತ ಚೇಷ್ಟೆಯೇ ಇರಬೇಕೆಂಬ ಶಂಕೆ ಅವನನ್ನು ಬಾಧಿಸಿತ್ತು.
ಸಾಹೇಬರಿಗೆ ಸುದ್ದಿ ಮುಟ್ಟಿಸಬೇಕೆಂದು ವೀಣಾ ಕಾತರಗೊಂಡರು.
ಅವರು ಯಾವ ಹಳ್ಳಿಲವರೋ ಏನೋ! ಅಲ್ದೆ, ಇನ್ನೂ ಒಂದು ವಿಸ್ಯ —” ಎಂದು ನಾಗಪ್ಪ ರಾಗವೆಳೆದ.
ಭೂತಚೇಷ್ಟೆಯೇ ನಿಜವೆಂದಾದರೆ, ಹಾಗೆ ಹೇಳಿ ಕಳುಹಿಸುವುದರಿಂದ ಅನಿಷ್ಟವೇ ಹೆಚ್ಚು, ಭೂತಕ್ಕೆ ಸಿಟ್ಟು ಬರಬಹುದು. ಕಚೇರಿಗೆ ಈ ಸಂಗತಿ ತಿಳಿಸುವೋದು ಸರಿಯಲ್ಲ .
ಇವತ್ತೊಂದು ರಾತ್ರಿ ನೋಡಾನ ಅಮ್ಮಾವ್ರೆ.. ಭೂತೆದ್ದೇ ನಿಜಾ೦ತಾದರೆ ನಾಳೆ ಶಾ೦ತಿ ಮಾಡಾನ. ಭೂತಕ್ಕೇನು ? –ಅದರಪ್ಪನಿಗೆ ನಾನು ಬುದ್ದಿ ಕಲಿಸ್ತಿನಿ.”
ಎಲ್ಲರೂ ಎಚ್ಚರವಿದ್ದು ರಾತ್ರಿ ಅದು. ನಾಗಪ್ಪ ಟಾರ್ಚನ್ನು ಹಿಡಿದು ಗಸ್ತಿ ನಡಸಿಯೇ ಇದ್ದ, ಹನ್ನೊಂದು ದಾಟಿದ ಮೇಲೆ ಹಿಂದಿನ ಇರುಳಿನ ಘಟನೆಗಳ ಪುನರಾವರ್ತನೆಯಾಯಿತು.
ವೀಣಾ ಚೀರಿಕೊಳ್ಳತೊಡಗಿದಂತೆ ನಾಗಪ್ಪ ಧಾವಿಸಿ ಬಂದ. ನಂಜಪ್ಪನೂ ಧೈರ್ಯಮಾಡಿ ಅಡುಗೆ ಮನೆಯ ಬಾಗಿಲು ತೆರೆದು ಓಡಿಬಂದ.
ಅಮ್ಮಾವ್ರು ಮೂರ್ಛೆ ಹೋದರು. ಮಲ್ಲಿ ಅವರ ಮುಖಕ್ಕೆ ನೀರು ಹನಿಸಿ ಪ್ರಜ್ಞೆ ಮರಳುವಂತೆ ಮಾಡಿದಳು.
ನಂಜಪ್ಪನೊಡನೆ ನಾಗಪ್ಪನೆಂದ:
"ಭೂತಚೇಷ್ಟೆಯೇ, ಸಂಸಯ ಇಲ್ಲ. ನನ್ನ ಗುರುತಿನ ಒಬ್ಬ ಮಂತ್ರವಾದಿ ಅವ್ನೆ. ನಾಳೆಯೇ ಕರಸ್ತೀನಿ. ಭೂತ ಇನ್ನು ಯಾವತ್ತೂ ಈ ಕಡೆಗೆ ಹಾಯದ ಹಾಗೆ ಮಾಡ್ತೀನಿ.”
"ಅಷ್ಟು ಮಾಡಪ್ಪ," ಎಂದ ಅಡುಗೆಯವನು.
ತಗ್ಗಿದ ಸ್ವರದಲ್ಲಿ ನಾಗಪ್ಪನೆಂದ :
"ಆದರೆ ಒಸಿ ಖರ್ಚಾಗ್ತದೆ.”
"ಎಷ್ಟು ?"
"ನೂರು ರೂಪಾಯಿ ಆಗ್ಬೋದು.”
"ನಾಗಪ್ಪ, ಏನಾದರೂ ಮಾಡಿ ನನ್ನ ಉಳ್ಸು, ಅವರು ಬರೋತನಕ ನಾನು ಬದುಕಿರ್ತೀನೋ ಇಲ್ವೋ . . . ಖರ್ಚಿನ ಯೋಚ್ನೆ ನೀನು ಮಾಡ್ಬೇಡ.”
"ಇಲ್ಲಾ ಅಮ್ಮಾವ್ರೆ, ಇವತ್ತೇ ಕಡೇ ರಾತ್ರೆ. ಭೂತದ ಆಟ ಆಯ್ತೂಂತ ಇಟ್ಕೊಳ್ಳಿ. ನಾಳೆ ಬೆಳಿಗ್ಗೆನೇ ಎಲ್ಲಾ ಮಾಡಿಸ್ತೀನಿ. ಇನ್ನು ನೀವು ಮನಿಕೊಳ್ಳಿ. ನಾನು ಕಾವಲು ಕುಂತಿರ್ತೀನಿ.”
ವೀಣಾ ಮಲಗಲಿಲ್ಲ. ಕಂಬಳಿ ಹೊದೆದು ನಡುಗುತ್ತ ಕುಳಿತುಕೊಂಡೇ ಉಳಿದ ಇರುಳನ್ನು ಕಳೆದರು.
ನಸುಕು ಹರಿಯುತ್ತಲೇ ನಾಗಪ್ಪ ಚಟುವಟಿಕೆ ತೋರಿದ. ಭೂತಕ್ಕೆ ಶಾ೦ತಿ ಮಾಡುವ ಸಡಗರ. ಅಂದೇ ಆಗಲೇ ಅದಾಗಬೇಕು. ಮಾರನೆಯ ದಿನಕ್ಕೆ ಮುಂದೂಡುವಂತಿರಲಿಲ್ಲ.
ಮಂತ್ರವಾದಿ బంದು బంಗಲೆಯ ಹಿಂబದಿಯಲ್ಲಿ అಕ್ಕಿ, ತೆಂಗಿನಕಾಯಿ, ಕುಂಬಳಕಾಯಿಗಳನ್ನಿರಿಸಿಕೊಂಡು ಹೋಮ ಧೂಮಗಳನ್ನು ಪ್ರಾರಂಭಿಸಿದ.
"ಅಮ್ಮಾವ್ರೆ, ನೀವು ಸ್ನಾನಮಾಡಿ ಒಳಗೆ ಕುಂತ್ಬಿಡಿ. ಎಲ್ಲಾ ಮುಗಿದ್ಮ್ಯಾಕೆ ಬಸ್ಮ ಈಟು ಕೊಡ್ತವ್ನೆ. ಅದನ್ನು ಅಚ್ಕೊಂಡು ಊಟ ಮಾಡಿ ಮನಿಕ್ಕೊಂಡ್ಬಿಡಿ—" ಎ೦ದ ನಾಗಪ್ಪ ಒಡತಿಯೊಡನೆ.
“ನನಗೆ ಭಯವಾಗುತ್ತಪ್ಪ, ಹಣ ಈಗಲೇ ಕೊಟ್ಟಿರ್ತೀನಿ,” ಎಂದರು ವೀಣಾ.
"ಬ್ಯಾಡಿ, ಬಾಡಿ. ಆಮ್ಯಾಕೆ ಕೊಡೀರಂತೆ.”
ಹೊರಗಿನಿಂದ ಹ್ರೀಂ ಹಾಂ ಮಂತ್ರಘೋಷ ಬಿರುಸಾಯಿತು.

****

ಉಮಾಪತಿಯವರ ಮೊದಲ ಜಮಾಬಂದಿ ತೃಪ್ತಿಕರವಾಗಿ ನಡೆಯಿತಷ್ಟೇ ಅಲ್ಲ, ಒಂದೂವರೆ ದಿನ ಮುಂಚಿತವಾಗಿಯೇ ಮುಗಿಯಿತು.
ಬಿಡುವಿದ್ದಾಗಲೆಲ್ಲಾ ಮನೆಯ ಯೋಚನೆಯೇ ಕಾಡುತ್ತಿದ್ದ ಉಮಾಪತಿ, ಮುಂಚಿತವಾಗಿ ಹಿಂದಿರುಗುವುದು ಸರಿಯೋ ತಪ್ಪೋ ಎಂದು ವಿವೇಚಿಸತೊಡಗಿದರು.
ಆ ದಿನ ತೊಡಲೆಂದು ಕೋಟು ತೆಗೆದಿರಿಸಿದಾಗ, ಅದರ ಒಳಜೇಬಿ ನಲ್ಲಿದ್ದ ಚೀಟಿಯೊಂದು ಅವರ ಕೈಗೆ ತಾಕಿತು. ಅದನ್ನು ಹೊರತೆಗೆದರು.
'ವೀ' ಬರೆದುದು.
ಕೊನೆಯಲ್ಲಿತ್ತು :
". . . ನನಗೆ ಯಾಕೋ ಭಯ. ತಕ್ಷಣ ಬನ್ನಿ.”
ಉಮಾಪತಿ ಅಳುಕಿದರು . . .
ಆಹ !ಹಳೆಯ ಚೀಟಿ . 'ಆ' ದಿನದ್ದು.
ಗಾಬರಿಗೊಂಡೆನಲ್ಲಾ ಎಂದು ನಸು ನಕ್ಕರು. ನಾಜೂಕಾಗಿ ಒಮ್ಮೆ– ಎರಡು ಸಾರೆ-ಮಡಚಿ, ಚೀಟಿಯನ್ನು ಮೊದಲಿದ್ದಲ್ಲೇ ಇರಿಸಿದರು.
ಆದರೂ ಚಿಂತೆ ಅವರ ಮನಸ್ಸನ್ನು ಕವಿಯಿತು.
ತನ್ನ ಮುಖ್ಯ ಗುಮಾಸ್ತೆಯನ್ನು ಕರೆದರು.
"ಆಯ್ತಲ್ಲ, ಇನ್ನು ಯಾಕಿರೋಣ ಇಲ್ಲಿ?”
ಸಾಹೇಬರಿಗೆ ಅಮ್ಮಾವ್ರ ನೆನಪಾಗಿರಬೇಕೆಂದುಕೊಂಡ ಗುಮಾಸ್ತೆ ಅಂದ:
"ಹೊರಡ್ಬಹುದು, ಸರ್. ನಾಲ್ವಂತ್ತೆಟೇ ಮೈಲಿ. ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಬಂಗ್ಲೆ ಮುಟ್ಟಬಹುದು.”
"ಸರಿ. ಡ್ರೈವರನ್ನು ಕರೀರಿ.”

****

ಜೀಪಿನ ಸದ್ದು ಕೇಳಿ ನಾಗಪ್ಪ ಕಂಗಾಲಾದ. ಮಂತ್ರವಾದಿಯ ಕೆಲಸ ಮುಗಿಯುತ್ತ ಬ೦ದಿತ್ತು. ಇವತ್ತೇ ಬಂದುಬಿಡಬೇಕೆ ಸಾಹೇಬರು ? ಇದೆಂಥ ಕ್ರೂರ ಆಟ ದೈವದ್ದು !
"ನಿನ್ನ ಕಥೆ ಮುಗೀತು ನಾಗಪ್ಪ,” ಎಂದಿತು ಅವನ ಒಳಮನಸ್ಸು.
" ಛೆ!” ಎಂದ ಆತ, ಕೆಟ್ಟ ಯೋಚನೆಗಳನ್ನೆಲ್ಲ ಝಾಡಿಸಿ.
ಭಯಭಕ್ತಿಗಳನ್ನು ಪ್ರದರ್ಶಿಸುತ್ತ ಸಾಹೇಬರನ್ನು ಅವನು ಇದಿರ್ಗೊಂಡ.
ಪತ್ನಿ ಕಾಣಿಸಲಿಲ್ಲವೆಂದು ಉಮಾಪತಿ ಕೇಳಿದರು :
"ಎಲ್ಲಿ ಅಮ್ಮಾವ್ರು ?"
"ಅವರಿಗೆ–ಅಮ್ಮಾವ್ರಿಗೆ ...”
“ಏನೋ ಅದು ?”
"ರೂಮ್ನಾಗವ್ರೆ... ಇಂಗಾಯ್ತು ಬುದ್ದಿ....ಅದು—"
ನಾಗಪ್ಪನ ಎದೆಗುಂಡಿಗೆ ತೀವ್ರವಾಗಿ ಹೊಡೆದುಕೊಂಡಿತು. ಉಮಾಪತಿಯೂ ಗಾಬರಿಯಾದರು. ಜವಾನನ ವಿವರಣೆಗೆ ಕಾಯದೆ ಒಳಕ್ಕೆ ಧಾವಿಸಿದರು. ಗಂಡ ಬಂದುದು ಅಮ್ಮಾವರಿಗೆ ಮಲ್ಲಿಯಿಂದ ತಿಳಿದಿತ್ತು.
ಒಳಬಂದ ಪ್ರಾಣಪ್ರಿಯನನ್ನು ಇದಿರ್ಗೊಳ್ಳಲೆಂದು ಏಳುವುದಕ್ಕೂ ವೀಣಾ ಅಸಮರ್ಥರಾದರು. ಗಂಟಲೊಣಗಿ ಮಾತು ಹೊರಬರಲಿಲ್ಲ. ಕಂಬನಿ ಮಿಡಿಯುವ ಶಕ್ತಿಯೂ ಅವರಿಗಿರಲಿಲ್ಲ. ನಿದ್ದೆ ಕೆಟ್ಟಿದ್ದ ಮೂರು ಹಗಲು ಮೂರು ಇರುಳುಗಳ ಬಳಿಕ ಅವರು ಪ್ರೇತವಾಗಿದ್ದರು.
ದೀನ ನೋಟದಿಂದ ಗಂಡನನ್ನು ಅವರು ದಿಟ್ಟಿಸಿದರು.
 ಉಮಾಪತಿ, ಕೊಠಡಿಯ ಬಾಗಿಲನ್ನು ಮುಚ್ಚಿದರು.
ಅವರ ತೋಳತೆಕ್ಕೆಯಲ್ಲಿ ವೀಣಾ ನಿಧಾನವಾಗಿ ಚೇತರಿಸಿಕೊಂಡರು. ಬಿಕುತ್ತ ಬಿಕ್ಕುತ್ತ ನಡೆದುದೆಲ್ಲವನ್ನೂ ಗಂಡನಿಗೆ ಅವರು ತಿಳಿಸಿದರು.
"ನಾನು ಸತ್ತೇಹೋಗ್ತಿದ್ದೆ . . . ಅ೦ತೂ ಬಂದಿರಿ . . . ನಾಗಪ್ಪ ಇಲ್ದಿದ್ರೆ ನನ್ನ ಅವಸಾನ ಆಗ್ತಿತ್ತು... ಅಯ್ಯೋ..."
ದಿಙ್ಮೂಢರಾಗಿ ಕುಳಿತ ಉಮಾಪತಿ ಅನೇಕ ಸಾರಿ ನಿಟ್ಟುಸಿರು ಬಿಟ್ಟು ಬಳಿಕ, ಮೆಲ್ಲನೆದ್ದು, ಬಾಗಿಲಿನ ಅಗಣಿಯನ್ನು ತೆಗೆದು, ಬಂಗಲೆಯ ಹಿಂಭಾಗಕ್ಕೆ ನಡೆದರು.
ಶಾಂತಿ ಹೋಮದ ಅವಶೇಷಗಳು ಅಲ್ಲಿದ್ದುವು.
ನಾಗಪ್ಪ ಕೈಜೋಡಿಸಿ ನಿಂತಿದ್ದ.
" ಎಲ್ಲಾ ಮುಗಿಯಿತೇ ?" ಎಂದು ಉಮಾಪತಿ ಶಾಂತವಾಗಿ ಕೇಳಿದರು.
"ಹೂಂ ಬುದ್ದಿ."
['ಗೆದ್ದೆ'-]
" ಅಮ್ಮಾವ್ರಿಗೆ ಪ್ರಸಾದ ಕೊಡಿಸು.”
ಮರೆಯಲ್ಲಿದ್ದ ಮಂತ್ರವಾದಿಯನ್ನು ಉಮಾಪತಿ ದಿಟ್ಟಿಸಿದರು.
ನಾಗಪ್ಪ ಸಾಹೇಬರನ್ನು ಹಿಂಬಾಲಿಸಿ ಭಸ್ಮದೊಡನೆ ಬಂದ.
" ತಗೋ, ವೀಣಾ,' ಎಂದರು ಉಮಾಪತಿ.
ವೀಣಾ ನಡುಗುವ ಬೆರಳುಗಳಿ೦ದ ಚಿಟಿಕೆ ಭಸ್ಮ ತೆಗೆದುಕೊಂಡು ಹಣೆಗೆ ಮುಟ್ಟಿಸಿದರು.
ಉಮಾಪತಿ, ಒಂದು ಚೆಕ್ ಬರೆದುಕೊಟ್ಟ ಡ್ರೈವರನ್ನು ಬ್ಯಾಂಕಿಗೆ ಕಳುಹಿಸಿ ಹಣ ತರಿಸಿದರು.
ನೂರು ರೂಪಾಯಿಗಳನ್ನೆಣಿಸಿ ನೋಟುಗಳನ್ನು ನಾಗಪ್ಪನಿಗೆ ಕೊಡ ಬ೦ದರು.
" ಬ್ಯಾಡಿ ಬುದ್ದೀ. ಮಂತ್ರವಾದಿ ನನ್ನ ಪರಿಚಿತ. ಅವನಿಗೆ ಯೋಳ್ತೀನಿ,” ಎಂದ ನಾಗಪ್ಪ,
" ಛೆ-ಛೆ! ತಗೋ. ಕೊಟ್ಬಿಡು.”
ನಾಗಪ್ಪ ಹಣ ಪಡೆದಮೇಲೆ ಸಾಹೇಬರೆಂದರು:
" ನಾಲ್ಕು ದಿವಸ ಬಹಳ ಕಷ್ಟಪಟ್ಟಿ. ನೀನಿನ್ನು ಮನೆಗೆ ಹೋಗು. ನಾಳೆ ಕಚೇರಿಗೆ ಬಾ.”
ಸಾಹೇಬರ ಸ್ನಾನವಾದ ಮೇಲೆ ದಂಪತಿಗಳು ಊಟಮಾಡಿದರು. ಊಟವಾದೊಡನೆಯೇ ಪವಡಿಸಿದ ವೀಣಾ ಘಂಟೆಗಟ್ಟಲೆ ಎಳೆಯ ಮಗುವಿನಂತೆ ನಿದ್ರಿಸಿದರು. ಉಮಾಪತಿಗೆ ಮಾತ್ರ ಮಂಪರು ಬಾಧೆಯೂ ಇರಲಿಲ್ಲ.

****

ಮಾರನೆಯ ದಿನ ವಿಜಯೀವೀರನಂತೆ ಹೆಜ್ಜೆ ಇಡುತ್ತ ನಾಗಪ್ಪ ಕಚೇರಿಗೆ ಹೋದ.
ಅಲ್ಲಿ ಅವನಿಗಾಗಿ ಸಾಹೇಬರ ಆರ್ಡರು ಕಾದಿತ್ತು.
"ಇದೇನು?” ಎಂದು ಕೇಳಿದ ನಾಗಪ್ಪ.
ಗುಮಾಸ್ತೆಯೊಬ್ಬ ವಿವರಿಸಿದ:
"ನಿನ್ನ ಡಿಸ್ಮಿಸ್ ಮಾಡವ್ರೆ."