ನಾಸ್ತಿಕ ಕೊಟ್ಟ ದೇವರು/ನಂ. ೨೦೮ ಮತು ನೀಲಿ ಬುಶ್ ಕೋಟು

pages ೧೪೨-೧೫೪

ಕಥೆ: ಹನ್ನೊಂದು
ನಂ.೨೦೮ ಮತ್ತು
ನೀಲಿ ಬುಶ್ ಕೋಟು



ರಡನೆಯ ಗಂಟೆ ಹೊತ್ತಿಗೆ ಶಾರದಾ, ಎಂದಿನಂತೆ ಒಳ ಅಂಗಳವನ್ನು ಸೇರಿದ್ದಳು. ಮೂರನೆಯ ಗಂಟೆ ಬಾರಿಸಲು ಅಮೇಲೆ ಉಳಿದುದು ಐದೇ ನಿಮಿಷ.
ಗೇಟಿನ ಹೊರಗೆ ಮೇಜಿನ ಬಳಿ ಒಬ್ಬ ನಿಂತಿದ್ದ; ಇನ್ನೊಬ್ಬ ಕುಳಿತಿದ್ದ.
೪೬ನೆಯ ನಂಬರ್ ಹಾಜರಿಯಾಯಿತು.
"೨೦೮," ಎಂದಳು ಶಾರದಾ.
ಇಬ್ಬರೂ ಮುಖವೆತ್ತಿ ಮಂದಹಾಸ ಸೂಸಿದರು. ಪ್ರತಿಯಾಗಿ ಆಕೆಯೂ ಮುಗುಳ್ನಕ್ಕಳು.
ಕುಳಿತಿದ್ದಾತ ಹಾಜರಿ ಬರೆದ; ನಿಂತಿದ್ದಾತ ಎದುರಿನ ಗೋಡೆಯ ಮೇಲಿನ ಹಲಗೆಯತ್ತ ತಿರುಗಿ, ೨೦೮ನೆಯ ನಂಬರಿನ ಬಿಲ್ಲೆಯನ್ನು ತೆಗೆದು ಮೇಜಿನ ಮೇಲಿರಿಸಿದ. [ಕೈಗೆ ಕೊಡುವುದರಿಂದ ಬೆರಳಿಗೆ ಬೆರಳು ತಗಲಿ ಆಕಸ್ಮಿಕಗಳಾಗುತ್ತವೆ. ಹಾಗಾಗದಿರುವಂತೆ ಮೇಜಿನ ಮೇಲೆಯೇ ಬಿಲ್ಲೆಗಳನ್ನಿಡಬೇಕೆಂದು ಯಜಮಾನರ ಆಜ್ಞೆಯಾಗಿತ್ತು.]
ಅದನ್ನಾಕೆ ಮೇಜಿನ ಮೇಲಿಂದ ಎತ್ತಿಕೊಂಡಳು. ಗೇಟನ್ನು ಹಾದು ಹೊಲಿಗೆಯ ಕಟ್ಟಡವಿದ್ದ ದಿಕ್ಕಿಗೆ ಸಾಗಿದಳು.
ಆಮೇಲೆ ಬೇರೊಂದು ನಂಬರ್.
ವಾರದಲ್ಲಿ ಆರು ದಿನ ಪ್ರತಿ ದಿವಸವು ಹೀಗೆಯೇ ನಂಬರ್ ಹೇಳುವುದು, ಮುಗುಳುನಗುವುದು, ಮೇಜಿನ ಮೇಲಿಂದ ಬಿಲ್ಲೆ ಎತ್ತಿಕೊಳ್ಳುವುದು, ಒಳಕ್ಕೆ ಹೋಗುವುದು. ದುಡಿತ—ಎಂಟರಿಂದ ಹನ್ನೆರಡರವರೆಗೆ; ಒಂದರಿಂದ ಐದರ ವರೆಗೆ...

****

ಶಾರದೆ ನಾಲ್ಕನೆಯ ಫಾರ್ಮ್ ಓದಿರುವ ವಿದ್ಯಾವಂತೆ. ಆಕೆ ಅಲ್ಲಿಗೇ ತನ್ನ ಓದನ್ನು ನಿಲ್ಲಿಸಿ, ತನ್ನ ಬೆನ್ನಲ್ಲೇ ಅದೇ ತರಗತಿಗೆ ಬಂದ ತಮ್ಮನಿಗೆ ಹಾದಿ ಬಿಟ್ಟುಕೊಟ್ಟಳು.

ಐವತ್ತು ರೂಪಾಯಿ ಸಂಪಾದನೆಯ ತಂದೆ [ಕಾಹಿಲೆಯವಳಾದ ತಾಯಿ] ಮದುವೆಗಾಗಿ ತುಂಬ ಚಡಪಡಿಸಿದರು. ಕೈಹಿಡಿಯುವ ಪುಣ್ಯಾತ್ಮ ಕಾಣಿಸಿಕೊಳ್ಳಲಿಲ್ಲ.
ಹಾಗೆ ಕಾಯುತ್ತ, ಕಾಯುತ್ತ, ಮನೆಗೆ ಸಂಪಾದನೆಗೆ ಸಹಾಯವಾಗಲೆಂದು, ಶಾರದಾ ಹೊಲಿಗೆ ಕಲಿತಳು. ನೆರೆಹೊರೆಯವರ ಹಸುಗೂಸುಗಳಿಗೆ ಪೋಷಾಕು ಹೊಲಿಯುವ ಸಿಂಪಿಗಳಾದಳು ಆಕೆ. ಮಗಳಿಗಾಗಿ ಚಿಕ್ಕದೊಂದು ಹೊಲಿಗೆಯ ಯಂತ್ರ ಕೊಳ್ಳಬೇಕೆಂದು ತಂದೆ ಯತ್ನಿಸಿದರು. ಕಂತಿನ ಮೇಲೆ ಯಂತ್ರ ದೊರೆಯುವ ಏರ್ಪಾಟೇನೋ ಇತ್ತು. ಆದರೆ, ಅವರ ಪಾಲಿಗೆ ಸಾಕಷ್ಟು ಸುಲಭ ಕಂತುಗಳಾಗಿರಲಿಲ್ಲ ಅವು. ಹೀಗಾಗಿ, ಯಂತ್ರದ ಯೋಚನೆಯನ್ನೇ ಆವರು ಬಿಟ್ಟುಕೊಟ್ಟರು.
ಆ ಬಳಿಕ ಉಗುಳುನುಂಗಿಕೊಂಡು ಆಕೆಯ ತಂದೆ, 'ತಯಾರಿ ಪೋಷಾಕಿನ' ಚಿಕ್ಕ ಕಾರಖಾನೆಯೊಂದರಲ್ಲಿ ಮಗಳನ್ನು ಕೆಲಸಕ್ಕೆ ಸೇರಿಸಿದರು. ಮಡಿವಂತರ ಮನೆತನದ ಹುಡುಗಿ ಶಾರದಾ, ದುಡಿಯುವ ಹೆಣ್ಣಾದಳು.

****

ಆ ಕೆಲಸ ಶಾರದೆಗೆ ದೊರೆತು ಇಪ್ಪತ್ತು ದಿನಗಳಾಗಿದ್ದುವಷ್ಟೆ- ಮತ್ತೂ ಹತ್ತು ದಿನ ದುಡುದರಾಯಿತು, ಮೂವತ್ತೆರಡು ರೂಪಾಯಿ ಸಂಬಳ ದೊರೆಯುವುದು.
ಬೇರೆ ದಿನಗಳಲ್ಲಾಗಿದ್ದರೆ ಆ ಮೂವತ್ತೆರಡರಿಂದ ಎಷ್ಟನ್ನೋ ಸಾಧಿಸುವುದು ಸಾಧ್ಯವಿತ್ತು. ಆದರೆ ಈಗ ಹಾಗಿರಲಿಲ್ಲ. ಅವಳ ಒಡಹುಟ್ಟಿದವನು ವಿಷಮಜ್ವರದಿಂದ ಹಾಸಿಗೆ ಹಿಡಿದಿದ್ದ.
[ಪರೀಕ್ಷೆ ಮುಗಿದ ಮೇಲೆ ಕಾಹಿಲೆ ಬಂದಿತ್ತು ಸದ್ಯಃ !
ತಂದೆ ಯೋಚಿಸಿದ್ದರು:
'ಮುಂದಿನ ವರ್ಷ ಮ್ಯಾಟ್ರಿಕ್. ಅದಾದ ಮೇಲೆ ಇವನು ಸಂಪಾದನೆ ಮಾಡಬೇಕು. ಬೇಗನೆ ಇವನಿಗೊಂದು ಹುಡುಗಿಯನ್ನು ತ೦ದಾದರೂ ಶಾರದೆಯನ್ನು ಇನ್ನೊಬ್ಬರ ಮನೆಗೆ ದಾಟಿಸಬೇಕು...
'ಅಂತೂ ಹುಡುಗ ಬೇಸಗೆಯ ರಜೆಯಲ್ಲೇ ಕಾಹಿಲೆ ಬಿದ್ದುದು ಒಳಿತಾಯ್ತು.]
ಆ ಕಾಹಿಲೆಯಿ೦ದಾಗಿ ಈಗ ಎಷ್ಟೊಂದು ಖರ್ಚು! ದಿನಕ್ಕೆ ಎರಡು ರೂಪಾಯಿಯಾದರೂ ಬೇಕೇಬೇಕಿತ್ತು. ಹಾಗೆ ಆಸ್ಪತ್ರೆಯಲ್ಲಿ ಹದಿನೈದು ದಿವಸ ಎಂದರೆ, ಒಟ್ಟು ವೆಚ್ಚ ಮೂವತ್ತು ರೂಪಾಯಿ. ಜತೆಯಲ್ಲಿ ಜಟಕಾ ಬಾಡಿಗೆ, ಇತ್ಯಾದಿ . . . ಈ ತಿಂಗಳಲ್ಲೇ ಶಾರದೆಗೆ ಕೆಲಸ ಸಿಗದೇ ಹೋಗಿದ್ದರೆ ತುಂಬ ತೊಂದರೆಯಾಗುತ್ತಿತ್ತು. ಅವಳ ತಮ್ಮನ ಆರೈಕೆ ಮಾಡುವುದೂ ಸಾಧ್ಯವಾಗುತ್ತಿತ್ತೋ ಇಲ್ಲವೋ . . .
ಶಾರದೆಗೆ ತಮ್ಮನೆಂದರೆ ಬಲು ಪ್ರೀತಿ. ಆತನಿಗೂ ಅಷ್ಟೇ, ಅಕ್ಕನೆಂದರಾಯಿತು . . . ಕಾರಖಾನೆಯ ಕೆಲಸ ಮುಗಿಸಿ ಈಗ ದಿನಾಲೂ ಸಂಜೆ ಆರರೊಳಗೆ ಶಾರದ ಆಸ್ಪತ್ರೆ ಸೇರುತ್ತಿದ್ದಳು. ಒಂದೆರಡು ದಿನಗಳಿಂದ ಗುಣಮುಖನಾಗತೊಡಗಿದ್ದ ತಮ್ಮನ ಬಳಿ ಕುಳಿತು, ಮುಂಗುರುಳು ನೇವರಿಸುತ್ತ, ನಗೆಮಾತನಾಡುತ್ತ, ತಾಯಿ ತಂದ ಕಿತ್ತಳೆಹಣ್ಣಿನ ಒಂದರ್ಧವನ್ನು ತಮ್ಮನಿಗೆ ಕೊಟ್ಟು ಇನ್ನೊಂದರ್ಧವನ್ನು ತಾನು ತಿಂದು, ತುಸು ಹೊತ್ತು ಕಳೆಯುತ್ತಿದ್ದಳು. ಆಮೇಲೆ ಬೇಗಬೇಗನೆ ನಡೆದು, ಹೆಂಗಸರ ಓಡಾಟವಿನ್ನೂ ಬೀದಿಯಲ್ಲಿ ಇದ್ದಾಗಲೇ, ಚೆನ್ನಾಗಿ ಕತ್ತಲಾಗುವುದಕ್ಕೆ ಮುಂಚೆಯೇ, ಒಂದೂವರೆ ಮೈಲಿ ದೂರದ ಮನೆ ಸೇರುತ್ತಿದ್ದಳು.
ಆ ಬಳಿಕ ರಾತ್ರೆಯ ಅಡುಗೆ . . .

****

ಆಕೆಯ ಹಾಗೆಯೇ ಆಕೆಯ ತಮ್ಮನೂ ಸ್ಫುರದ್ರೂಪಿ. ಒಳ್ಳೆಯ ಬಟ್ಟೆಬರೆ ಹಾಕಿಕೊ೦ಡ ಆತನ ಓರಗೆಯವರನ್ನು ಬೀದಿಯಲ್ಲಿ ಕಂಡಾಗ, ತನ್ನ ತಮ್ಮನಿಗೂ ಇಂಥವೇ ಬಟ್ಟೆಗಳಿದ್ದರೆ ಎಂದು ಶಾರದೆಗೆ ಆಸೆಯಾಗುತ್ತಿತ್ತು.
ತಮ್ಮನಿಗಾಗಿ ಆವರೆಗೆ ಕೋಟು ಹೊಲಿಸಿಯೇ ಇರಲಿಲ್ಲ. ಬಿನ್ನಿ ಆರಿವೆಯ ಒಂದು ಪ್ಯಾಂಟನ್ನೇನೋ ಆ ವರ್ಷ ಹೊಲಿಸಿತ್ತು. ಆದರೆ, ಶರಟನ್ನು ಪ್ಯಾಂಟಿನೊಳಹಾಕಲು ಲಜ್ಜೆ ಅವನಿಗೆ. ಯಾವಾಗಲೂ ಹೊರಗೇ ಇಳಿಬಿಟ್ಟು ಶಾಲೆಗೆ ಹೋಗುತ್ತಿದ್ದ.
ಸಾಮಾನ್ಯವಾಗಿ, ಏನಾದರೂ ಬೇಕೆಂದು ಎಂದೂ ಕೇಳುವವನಲ್ಲ ಆತ. ತಿಂಗಳಿಗೊಮ್ಮೆ ಅಕ್ಕ ಮತ್ತು ತಮ್ಮ ಜತೆಯಾಗಿಯೇ ಸಿನಿಮಾ ನೋಡಲು ಹೋಗುತ್ತಿದ್ದರು. ಜತೆಯಾಗಿಯೇ ವಾರಕ್ಕೊಮ್ಮೆ ಒಂದಾಣೆಯ ಹುರಿಗಾಳು ಕೊಳ್ಳುತ್ತಿದ್ದರು.
ಹೀಗಿದ್ದರೂ, ನೀಲಿ ಬುಶ್ ಕೋಟಿನ ನೆನಪೊಂದು ಒಮ್ಮೆ ಅವರ ಜೀವನದೊಳಕ್ಕೆ ನುಸುಳಿಕೊಂಡಿತು. ಆ ದಿನ ಎದುರಿನ ಮಹಡಿಮನೆಯ ಚಂದ್ರಹಾಸ, "ಲೋ ನಾಣಿ, ಬರ್ತ್ತಿಯೇನಯ್ಯ ಕೊಂಚ ?" ಎಂದು ಕೂಗಿದ. ಹೊಲಿಸಿದ್ದ ಹೊಸ ಉಡುಪುಗಳ ರಾಶಿಯನ್ನು ತೋರಿಸಿ ಮೆಚ್ಚುಗೆಗಳಿಸಲೆಂದೇ ಆ ಆಹ್ವಾನವನ್ನು ಆತ ನೀಡಿದ್ದ.
ನಾಣಿ ಹಿಂತಿರುಗಿ ಬಂದಾಗ, ಅಷ್ಟೊಂದು ಉತ್ಸಾಹ ತೋರದೇ ಇದ್ದ ತಮ್ಮನ ಮುಖವನ್ನು ಗಮನಿಸಿ, ಶಾರದಾ ಕೇಳಿದಳು:
"ಯಾತಕ್ಕಂತೆ ಬರಹೇಳಿದ್ದು?"
"ಪ್ರದರ್ಶನ ನೋಡೋಕೆ..."
ಮೂರು ಜತೆ ಲಿನನ್ ಬುಶ್ ಕೋಟು-ಪ್ಯಾಂಟುಗಳು; ಎರಡು ಜತೆ ಉಣ್ಣೆ ಸೂಟುಗಳು; ಶರಟುಗಳು...
ಮುಂದೆ ಆ ದಿನವೆಲ್ಲ ಅಕ್ಕ ತಮ್ಮ ಪರಸ್ಪರ ಮಾತೇ ಆಡಲಿಲ್ಲ. ರಾತ್ರೆ ಮಲಗಿಕೊಂಡಾಗ, "ಈ ಯುಗಾದಿಗೆ ನಿನಗೊಂದು ಉಡುಗೊರೆ ಕೊಡಬೇಕೂಂತಿದೀನಿ, ನಾಣಿ," ಎಂದಳು ಶಾರದಾ.
"ಓಹ್ಹೋ!" ಎಂದು, ನಾಣಿ ನಕ್ಕ.
"ಯಾವ ಬಣ್ಣವೋ ನಿಂಗೆ ಇಷ್ಟ?"
"ನೀಲಿ, ತೆಳು ನೀಲಿ, ಆಕಾಶ ನೀಲಿ..." ಮತ್ತೆ ಅಣಕದ ನಗು.
ಇಲ್ಲ; ಯುಗಾದಿಗೆ ಆ ಉಡುಗೊರೆ ಬರಲೇ ಇಲ್ಲ. ಅದಕ್ಕೆ ಬೇಕಾಗಿದ್ದ ಒಂಬತ್ತೂವರೆ ರೂಪಾಯಿ ಜಮೆಯಾಗಬೇಕು ಎಲ್ಲಿಂದ?
ಉಗಾದಿ ಕಳೆದು ಹೋಯಿತು. ಉಡುಗೊರೆಯನ್ನೊಂದು ತಮಾಷೆಯಾಗಿಯೇ ಪರಿಗಣಿಸಿದ್ದ ನಾಣಿ, ಅಕ್ಕನನ್ನು ಅಣಕಿಸುತ್ತಲೇ ಇದ್ದ. ಅವಳ ಪಾಲಿಗೆ ಮಾತ್ರ ಇದು ಪರಿಹಾಸ್ಯದ ಮಾತಾಗಿರಲಿಲ್ಲ. ಎಂತಲೇ ಆಕೆಗೆ ಅಸಹನೀಯ ವೇದನೆಯಾಗಿತ್ತಿತ್ತು. ಒಂಟಿಯಾಗಿದ್ದಾಗ ಅಸಹಾಯತೆಯ ಕಣ್ಣು ಹನಿಯನ್ನೂ ಅವಳು ಉರುಳಗೊಟ್ಟಳು . . .
ಅದೇ ಪ್ರೀತಿಯ ಸೋದರ ಆಸ್ಪತ್ರೆಯ ಮಂಚದ ಮೇಲೆ ಮಲಗಿದ್ದ ಈಗ. ಈ ಸಂದರ್ಭದಲ್ಲಿ ಆ ಉಡುಗೊರೆಯನ್ನು ತಾನು ಕೊಡುವುದು. ಸಾಧ್ಯವಾದರೆ? ಓ, ಸಾಧ್ಯವಾದರೆ?
ಆದರೆ, ಸಾಧ್ಯಗೊಳಿಸುವ ಹಾದಿ ಯಾವುದು ?

****

ಉದ್ದನೆಯ ಕಟ್ಟಡದಲ್ಲಿ ನೂರಾರು ಗಂಡಾಳುಗಳು, ಒಂದೇ ಸಾರಿಗೆ, ಐವತ್ತು ಅರುವತ್ತು ಪದಗಳ ಬಣ್ಣ ಬಣ್ಣದ ಅರಿವೆಯ ಮೇಲೆ ವಿದ್ಯುತ್ ಕತ್ತರಿ ಯಂತ್ರವನ್ನು ಪ್ರಯೋಗಿಸುತ್ತಿದ್ದರು. ಇನೊಂದು ಉರುಳುಯಂತ್ರ, ಬಟ್ಟೆಯನ್ನು ನೀಟಾಗಿ ಒಂದರ ಮೇಲೊಂದು ಹಾಸುತ್ತಿತ್ತು. ಸುಂಯ್ ಎಂದು ಮೀಟುತ್ತಿತ್ತು ವಿದ್ಯುತ್ ಯಂತ್ರ. ವಿವಿಧ ಆಕೃತಿಗಳ ಮಾದರಿಗಳ ಸಾಮೂಹಿಕ ಉತ್ಪನ್ನ—ನೂರು ನೂರರ ಸಂಖ್ಯೆಯಲ್ಲಿ. ಇನ್ನೊಂದೆಡೆ, ಫ್ಯಾಷನ್ ರೂಂ. ಅಲ್ಲಿ ಮಾದರಿಗಳು ನಿರ್ಮಾಣವಾಗುವುವು - ಮಕ್ಕಳಿಂದ ಮೊದಲಾಗಿ ವಿವಿಧ ವಯೋಮಾನದ ವರೆಗೆ; ಚಡ್ಡಿಯಿಂದ ತೊಡಗಿ ಉಣ್ಣೆಯ ವೇಸ್ಟ್ ಕೋಟಿನ ತನಕ. ಬಲ ಮಗ್ಗುಲಲ್ಲಿ ಯಂತ್ರ ಹೊಲ್ಲಿಗೆಯ ವಿಭಾಗ; ಅದರಾಚೆ ಕೈಹೊಲಿಗೆಯ ಶಾಖೆ. ಶಾರದೆಯನ್ನು ಒಳಗೊಂಡು ಮೂವತ್ತು ಹುಡುಗಿಯರು ದುಡಿಯುವುದು ಅಲ್ಲೇ. ಹೊರ ವಠಾರದಲ್ಲಿ ಕೊನೆಯ 'ಇಸ್ತ್ರಿ ಕೋಣೆ' . . .
ಶಾರದೆಗೆ ಬೇಕಾಗಿದ್ದುದು ಒಂದೇ ಒಂದು ನೀಲಿ ಬುಶ್ ಕೋಟು.
ಸಣ್ಣ ಸೈಜಿನದು, ಪೂರ್ಣ ತೋಳಿನದು . . .
ಕಣ್ಣೀರು ಒತ್ತರಿಸಿ ಬಂತು. ಹುಬ್ಬು ಗಂಟಿಕ್ಕಿತು. ಎಲ್ಲರೂ ತನ್ನನ್ನೇ ನೋಡಿ ನಗುತ್ತಲಿದ್ದಂತೆ ಅವಳಿಗೆ ಭಾಸವಾಯಿತು.
ಯೋಚನೆಗಳು ಮತ್ತೆ ಹರಿದುವು.
ತನ್ನ ಪ್ರೀತಿಯ ತಮ್ಮನಿಗಾಗಿ ಒಂದು ಬುಶ್ ಕೋಟು ಕೊಂಡುಕೊಳ್ಳುವ ಸಾಮರ್ಥ್ಯವೂ ಇಲ್ಲದೆ ಹೋಯಿತಲ್ಲ ತನಗೆ ?
ಕೈ ಬೆರಳುಗಳ ಮಕ್ಕಳ ಫ್ರಾಕುಗಳ ಅಂಗಿಗುಂಡಿಗಳನ್ನು ಹೊಲಿಯುತ್ತಿದ್ದುವು. ಆದರೆ ಅದೆಲ್ಲವೂ ಯಾಂತ್ರಿಕವಾದ ರೀತಿಯಲ್ಲಿ. ತಲೆಬಾಗಿಯೇ ಇತ್ತು. ಸೂಜಿ-ದಾರ ಒಳ ಹೊರಗೆ ಹೋಗಿ ಬರುತ್ತಲೇ ಇತ್ತು.
ಆದರೆ, ಹೃದಯವನ್ನೇ ಹೊಕ್ಕು ಒಳ ಹೋಗಿ ಬರುತ್ತಿದ್ದ, ಸೂಜಿ ಚುಚ್ಚಿದಂತೆ ನೋಯಿಸುತ್ತಲಿದ್ದ, ಆ ವಿಚಾರಗಳೋ . . .
ಆಗದೆ ಉಳಿದು ಹೋದ ತನ್ನ ಮದುವೆ . . . ಹಾಗೆ ಕೆಲಸಕ್ಕೆ ಹೋಗುವುದರಿಂದ ತನಗಾಗಿ ಬರುವ ವರಗಿರಾಕಿಗಳು ಕಡಮೆಯಾಗುವ ಸಂಭವ. ಹೋಗದೆ ಇದ್ದರೊ ? ಉಪವಾಸದ ಭೀತಿ . . .
ತನ್ನ ಸುತ್ತುಮುತ್ತಲೂ ಕುಳಿತಿದ್ಧ ಸಂಗಾತಿಗಳು . . . ಒಬ್ಬೊಬ್ಬರದೂ ಒಂದೊಂದು ಕಥೆ. ಒಡೆದ ನೌಕೆಯ, ಭಗ್ನಮಂದಿರದ, ನೀಚ ಜೀವನದ, ಆತ್ಮಹತ್ಯೆಯ ಆಲೋಚನೆಗಳ, ಕುಟುಂಬ ಘೋಷಣೆಯ ವಿಧವಿಧದ ಕತೆಗಳು.
'ತಯಾರಿ ಘೋಷಾಕಿ'ನ ಆ ಕಾರಖಾನೆಯಲ್ಲಿ ಹಿಂದೆ ಸಾವಿರ ಜನ ದುಡಿಯುತ್ತಿದ್ದರಂತೆ. ಈಗ ಮುನ್ನೂರೂ ಇಲ್ಲ. ಕಳೆದ ತಿಂಗಳಷ್ಟೇ ಎಂಟು ನೂರು ಜನರನ್ನು ವಜಾ ಮಾಡಿದ್ದರಂತೆ. ಆಮೇಲೆ ನೂರು ಜನ ಹೊಸಬರನ್ನು ಕಡಮೆ ಸಂಬಳದ ಮೇಲೆ ಕೆಲಸಕ್ಕೆ ಸೇರಿಸಿಕೊಂಡರಂತೆ. ಶಾರದೆಗೆ ಕೆಲಸ ಸಿಕ್ಕಿದ್ದು ಹಾಗೆ. ಯಾರದೋ ಒಂದು ತುತ್ತನ್ನು ಕಸಿದು . . .
ತುತ್ತು ಅನ್ನಕ್ಕೆ ಹಾದಿಯಾಯಿತು—ಬದುಕಲು ಅಗತ್ಯವಾದ ತುತ್ತು ಅನ್ನ.
ಆದರೆ ತನ್ನ ತಮ್ಮನಿಗೊಂದು ಬುಶ್ ಕೋಟು? ಇದು ಎಂಥ ಬಗೆ ಹರಿಯದ ಸಮಸ್ಯೆ!
ಮತ್ತೆ ಯೋಚನೆಗಳು . . . ಎಷ್ಟು ಸುತ್ತುವರಿದರೂ ಆ ಬಿಂದುವಿಗೇ ಬಂದು ತಲಪುವ ಯೋಚನೆಗಳು . . .
ಯೋಚನೆಗಳೆಲ್ಲ ಹೆಪ್ಪುಗಟ್ಟಿ ಮುಖ ಸಿಂಡರಿಸಿಕೊಂಡು ಕಪ್ಪಿಟ್ಟಿತು.

****

ವಿರಾಮ ವೇಳೆಯಲ್ಲಿ 'ಬುತ್ತಿ'ಗಳನ್ನೆತ್ತಿಕೊಂಡು ಎಲ್ಲರೂ ಕ್ಯಾಂಟೀನಿನ ಪಕ್ಕದಲ್ಲಿದ್ದ ವಠಾರಕ್ಕೆ ಹೋದರು . . .
ಸಾರು—ಮಜ್ಜಿಗೆಯಲ್ಲಿ ಕಲಸಿದ್ದ ಎರಡು ತುತ್ತು ಅನ್ನವನ್ನು ಗಬ ಗಬನೆ ನುಂಗಿ, ಕೊಳಾಯಿಯಿಂದ ನೀರನ್ನು ಕುಡಿದು, ಹೊಲಿಗೆಯ ಕೋಣೆಯೊಳಕ್ಕೆ ಶಾರದಾ ಧಾವಿಸಿದಳು. ನೇರವಾಗಿ ಬರುವ ಬದಲು ಎಡಬದಿಯಿಂದ ಹಾದು ಬಂದಳು . . .
ವಿವಿಧ ಘೋಷಾಕುಗಳು ಯಂತ್ರದ ಹೊಲಿಗೆಯನ್ನು ಮುಗಿಸಿ ಕೈ ಹೊಲಿಗೆಯ ಸ್ಪರ್ಶಕ್ಕಾಗಿ ಕಾದು ಕುಳಿತಿದ್ದುವು. ಒಂದಕ್ಕೊಂದು ಸಮೀಪ ವಾಗಿ ಆ ರಾಶಿಗಳು ವಿರಮಿಸುತ್ತಿದ್ದುವು. ಒಂದಕ್ಕೊಂದು ಸಮೀಪವಾಗಿ ಬರಿಯ ಕುರ್ಚಿಗಳು ನಿದ್ರಿಸುತ್ತಿದ್ದುವು.
ಒಂದು ಕ್ಷಣ ಶಾರದಾ ಹಿಂತಿರುಗಿ ನೋಡಿದಳು. ಶರೀರ ಕಂಪಿಸಿತು; ಮೈ ಬೆವತಿತು; ಚಿಟ್ ಚಿಟ್ಟೆ೦ದು ಮೆದುಳು ಸಿಡಿಯತೊಡಗಿತು; ಮೈಲು ದೂರಕ್ಕೂ ಕೇಳಿಸುವಂತೆ ಎದೆಗುಂಡಿಗೆ ದವಡವಿಸಿತು.
ಆದರೆ, ಕಣ್ಣುಗಳು ಕೆಲಸ ಬಡಸಿದ್ದುವು. ದೃಷ್ಟಿ ಆ ರಾಶಿಯ ಮೇಲೆಯೇ ಕೇಂದ್ರಿಕರಿಸಿತು. ಅದರಲ್ಲಿದ್ದ ಸರಿಯಾದ ಸೈಜಿನ ಆ ನೀಲಿ—
ಕೈಗಳು ಕಳ್ಳತನ ಮಾಡಿದವು.ಆ ಆರೆ ಹೊಲಿದ ನೀಲಿ ಲಿನನ್ ಬುಶ್ ಕೋಟ್ ಮುದುಡಿ ಮುದುಡಿ ಆಕೆಯ ಪುಟ್ಟ ಟಿಫಿನ್ ಕ್ಯಾರಿಯರಿನೊಳಗೆ ಅವಿತುಕೊಂಡಿತು . . .ಕುಸಿದು ಬೀಳುವ ಹಾಗಾಯಿತು ಆಕೆಗೆ. ಕಾಲುಗಳು ಬಲುಹೀನವಾದುವು . . .
. . .ಅಂತೂ ತನ್ನ ಸ್ಥಾನವನ್ನಾಕೆ ಸೇರಿದಳು.
ಸ್ವಲ್ಪ ಹೊತ್ತಿನಲ್ಲೇ ಇತರರೂ ಬಂದರು.
ಏನೋ ಯಾತನೆ ಅನುಭವಿಸುತ್ತಿದ್ದಂತೆ ಕಂಡ ಶಾರದೆಯನ್ನು ಕುರಿತು ಪಕ್ಕದವಳು ಕೇಳಿದಳು :
"ಮೈ ಚೆನ್ನಾಗಿಲ್ವೆ ?"
"ಹೂಂ . . . "
"ಹೊಟ್ಟೆನೋವೆ ?"
"ಹೂಂ . . . "
ಶಾರದೆಯ ಹಣೆಯನ್ನು ಮುಟ್ಟಿ ನೋಡಿದಳಾಕೆ.
"ಅಯ್ಯೋ—ಬೆಚ್ಚಗಿದೆಯಲ್ಲ . . . "
"ಹೂಂ . . . "
. . . ನಾಲ್ಕು ಗಂಟೆಗಳೊಳಗಾಗಿ, ನಡದಿದ್ದ ಘಟನೆ ತಿಳಿದುಹೋಗುವುದು. ಆಗ ಒಬ್ಬೊಬ್ಬರನ್ನೂ ಶೋಧಿಸುವರು. ಪತ್ತೆಯಾಗುವುದು.
—ಹೇಗಾದರೂ ಮಾಡಿ ಅದಕ್ಕಿಂತ ಮುಂಚೆಯೇ ಹೊರಟು ಹೋಗಬೇಕು.
ಕೈಯಿಂದ ಕೆಲಸ ಸಾಗಲೇ ಇಲ್ಲ.
ಮೇಸ್ತ್ರಿಣಿ ಬಂದಾಗ, ಪಕ್ಕದಲ್ಲಿದ್ದಾಕೆ ಎದ್ದು ನಿಂತು ಹೇಳಿದಳು :
"ಶಾರದಮ್ಮನಿಗೆ ಬವಳಿ ಬರ್ತಾ ಇದೆ."
"ಸರಿ!" ಎಂದಳು ಮೇಸ್ತ್ರಿಣಿ, ತಿಳಿವಳಿಕೆಯ ಮುಗುಳ್ನಗೆ ಬೀರಿ ಬವಳಿ ಬರುವುದಕ್ಕೂ ಯೌವನಕ್ಕೂ ಯಾವಾಗಲೂ ಸಂಬಂಧ ಇದ್ದೇ ಇದೆ ಎನ್ನುವ ದೃಢ ಅಭಿಪ್ರಾಯವಿತ್ತು ಆಕೆಗೆ.
ಅವಳು ತೀರ್ಪು ಕೊಟೃಳು :
" ಮೂರು ಗಂಟೆ ಈಗ . . . ಹೋಗಿಬಿಡು. ಅರ್ಧ ದಿನ ಲೀವ್ಹಾ ಕಿಸ್ತೀನಿ. ಸರಿಯಾದ ಔಷಧಿ ತಗೋ. ಬಿಲ್ಲೆ ಕೊಟ್ಬಿಟ್ಟು ಹೊರಟ್ಹೋಗು."
ಬಿಲ್ಲೆಯನ್ನು ಕೊಟ್ಟು ಟಿಫಿನ್ ಕ್ಯಾರಿಯರಿನೊಡನೆ ಶಾರದಾ ಹೊರಟಳು. ಹಾಗೂ ಹೀಗೂ ಕಾಲುಗಳು ಗೇಟನ್ನು ದಾಟಿದುವು.
ಮುಂದೆ ಎಲ್ಲಿಗೆ ಹೋಗಬೇಕು? ಆಸ್ಪತ್ರೆಗೆ? ಇಷ್ಟು ಬೇಗನೆ? ಅಥವಾ ಮನೆಗೆ? ಅದೂ ಇಷ್ಟು ಬೇಗನೆ? ಏನೆಂದು ಉತ್ತರ ಕೊಡಬೇಕು? ಏನೆಂದು?
. . . ಅಯ್ಯೋ ! ಅಮ್ಮಾ - ಅಪ್ಪಾ ! ಓ ನಾಣೀ !
ಆಗ ನಿಜವಾಗಿ ಅವಳಿಗೆ ಬವಳಿ ಬಂದ ಹಾಗಾಯಿತು. ಬೀದಿಯ ಬಳಿಯಲ್ಲೆ ಒಂದು ಕ್ಷಣ ಆಕೆ ನಿಂತಳು. ಕಾಲುಗಳು ಥರಥರನೆ ಕಂಪಿಸಿದುವು. ಮುಖವೆಲ್ಲ ಬಿಳಿಚಿಕೊಂಡಿತು. ಕಣ್ಣೀರು ಕೋಡಿಕಟ್ಟಿ ಹರಿಯಿತು.
. . . ಬೀದಿಯಲ್ಲಿ ಹಾದು ಹೋಗುತ್ತಿದ್ದವರು ಆಕೆಯನ್ನು ನೋಡ ತೊಡಗಿದರು . . .
ಅಯ್ಯೋ - ತಾನು ಮಾಡಿದ್ದೇನು? ಏನು ಮಾಡಿಬಿಟ್ಟೆ ತಾನು?
ಇದಕ್ಕೆ ಪರಿಹಾರ? ಮುಂದೆ? ಅಪ್ಪ - ಅಮ್ಮನಿಗೆ ಗೊತ್ತಾದರೆ?
ನಾಣಿಗೆ ಗೊತ್ತಾದರೆ?
ಮುಂದೆಯೂ ಹೋಗಲಿಲ್ಲ. ಹಿಂದೆಯೂ ಹೋಗಲಿಲ್ಲ. ನಿಂತಲ್ಲೆ ನಿಂತಳು ಆಕೆ . . . ಎರಡು ಕ್ಷಣ ಹಾಗೆಯೇ.
ಆ ಬಳಿಕ ಅವಳು ಹಿಂತಿರುಗಿ, ಯಾಂತ್ರಿಕವಾಗಿ, ಕಾರಖಾನೆಯತ್ತ ನಡೆದಳು.

****

ಹೊರ ಅಂಗಣದ ಬಲಪಾರ್ಶ್ವದಲ್ಲಿತ್ತು ಯಜಮಾನರ ಆಫೀಸು. ನಿತ್ಯದಂತೆ ಅವರೊಬ್ಬರೇ ಇದ್ದರು. ಇಳಿವಯಸ್ಸಿನ, ನರೆಗೂದಲಿನ, ದಯಾಪೂರಿತವೆಂದು ಕಾಣುತ್ತಿದ್ದ ಕಣ್ಣುಗಳ ವ್ಯಕ್ತಿ ಆತ.
ಯಾವ ಧೈರ್ಯದಿಂದಲೋ ಏನೋ ಬಾಗಿಲನ್ನು ತಳ್ಳಿ, ಶಾರದಾ ಒಳಹೋಗಿ, ಅಲ್ಲೇ ನಿಂತಳು. ಕೆಲಸ ಕೇಳಿಕೊಂಡು ಬಂದ ಮೇಲೆ ಯಜಮಾನರ ಮುಂದೆ ಆಕೆ ನಿಂತುದು ಇದೇ ಎರಡನೆಯ ಸಾರಿ.
ಇವಳು ತಮ್ಮ ಕಾರಖಾನೆಯಲ್ಲಿ ಕೆಲಸ ಮಾಡುವಾಕೆಯೇ ಇರಬೇಕೆಂದು ಊಹಿಸಿದರೂ, ಅವರು ಕೇಳಿದರು :
"ಯಾರಮ್ಮ ನೀನು?"
ಶಾರದೆ ಮಾತಾಡಲಿಲ್ಲ. ಮಾತು ಬರಲಿಲ್ಲ.
"ಏನಮ್ಮ ಸಮಾಚಾರ?"
ಏನೆಂದು ಶಾರದೆ ಹೇಳಲಿಲ್ಲ. ಉತ್ತರವಾಗಿ ಶಾರದೆ ಬಿಕ್ಕಿ ಬಿಕ್ಕಿ ಅತ್ತಳು.
ಕಾರಖಾನೆಯೊಳಗೆ ಯಾರೋ ಈಕೆಯನ್ನು ಅವಮಾನಿಸಿರಬೇಕು; ಅಂತಹದೇನೋ ಪ್ರಕರಣ ನಡೆದಿರಬೇಕು - ಎಂದುಕೊಂಡರು ಯಜಮಾನರು. ಹಾಗಾಗುವುದೇನೂ ಅಸಾಧಾರಣ ಸಂಗತಿಯಾಗಿರಲಿಲ್ಲ.
ಒಂದು ಕ್ಷಣ ಅವರು ಸುಮ್ಮನಿದ್ದರು. ಆ ಬಳಿಕ ಧ್ವನಿ ಏರಿಸಿ ಕೇಳಿದರು :
"ಏನದು? ಏನು ಹೇಳು?"
ಶಾರದೆಯ ನಡುಗುತ್ತಿದ್ದ ಕೈಬೆರಳುಗಳು ಟಿಫಿನ್ ಕ್ಯಾರಿಯರನ್ನು ತೆರೆದುವು. ಮೈಮುರಿದುಕೊಂಡಿದ್ದ ನೀಲಿ ಬುಶ್ ಕೋಟು ಹೊರಬಂದು ತನ್ನ ಯಜಮಾನನ ಎದುರಲ್ಲಿ ಬಿದ್ದಿತು.
ಬೆರಗುಗಣ್ಣಿನಿಂದ ಅವರು ಅದನ್ನೇ ನೋಡಿದರು . . .
ಮರುಕ್ಷಣದಲ್ಲೇ ಅವರಿಗೆ ಅರ್ಥವಾಯಿತು. ಹುಬ್ಬು ಹಾರಿಸಿ ರೇಗಾಡಿ ಚೀರಾಡಬೇಕೆಂದು ಅವರಿಗೆನಿಸಿತು.
ಆದರೆ, ಹಾಗೆ ಮಾಡದೆ ಮೇಲಕ್ಕೆದ್ದು, ಅವಳ ಬೆನ್ನು ತಡವಿ, ಕುರ್ಚಿಯ ಮೇಲೆ ಆಕೆಯನ್ನು ಕುಳ್ಳಿರಿಸಿದರು.
" ಹೆದರಬೇಡವಮ್ಮ . . . ನಿನಗೇನೂ ಮಾಡೋದಿಲ್ಲ. ಯಾರಿಗೂ ಹೇಳೋದಿಲ್ಲ."
ಅಭಯದ ಮಾತುಗಳು. ಪುನಃ—
"ಯಾಕೆ, ಬುಶ್ ಕೋಟು ನಿನಗೆ ಬೇಕಾಗಿತ್ತೆ?"
ಆ ಪ್ರಶ್ನೆಯ ಉತ್ತರ, ಆಕೆಯ ಬಾಳಿನ ಕಥೆಯೇ. ಅದನ್ನು ಹೇಳುವುದುಂಟೆ? ಹೇಳಿ ಪೂರೈಸುವುದುಂಟೆ?
"ಯಾರ ಮನೆಯವಳಮ್ಮ ನೀನು?"
ಅಯ್ಯೋ—ತನ್ನ ಹೆತ್ತ ತಂದೆಯ ಹೆಸರನ್ನೂ ಹೇಳಬೇಕೆ ಇನ್ನು?
ಯಜಮಾನರಿಗೆ ತನ್ನ ಬಾಲ್ಯ ನೆನಪಾಯಿತು. ಒಂದು ಕಾಲದಲ್ಲಿಅವರೂ ಕಹಿಜೀವನ ಅನುಭವಿಸಿದ್ದರು. ಬಡತನ ಅವರ ತಮ್ಮನೊಬ್ಬನನ್ನು, 'ಅನೀತಿ' ಎನ್ನಿಸಿಕೊಳ್ಳುವ ಜಾರುಗುಂಡಿಯಲ್ಲಿ ಬಹಳ ಆಳಕ್ಕೆ ತಳ್ಳಿತ್ತು. ಆ ಪ್ರಪಾತದಿಂದ ಆತ ಮತ್ತೆ ಚೇತರಿಸಿಕೊಂಡು ಎದ್ದೇ ಇರಲ್ಲಿಲ್ಲ.
ಮಾರಾಟ ಮಾಡಿ ಸಂಪಾದಿಸುವುದಕ್ಕೆಂದೇನೂ ಈ ಹುಡುಗಿ ಕದ್ದಿರಲಾರಳು; ಆಂಥವರು ಈ ರೀತಿ ಹೊಯ್ದಾಡುವುದೆಂದಿಲ್ಲ—ಎಂದೆಲ್ಲ ಯೋಚಿಸುತ್ತ ಯಜಮಾನರು ಮತ್ತೊಂದು ಮಾತು ಕೇಳಿದರು:
"ತಮ್ಮ ಇದಾನೇನಮ್ಮಾ ನಿನಗೆ?"
"ತಮ್ಮ—ಎಂಬ ಪದ ಕೇಳಿ ಅವಳು ತಲೆ ಎತ್ತಿ ನೋಡಿದಳು.
"ಹೂಂ. . ."
"ಮನೇಲಿದ್ದಾನೆಯೆ?"
"ಆಸ್ಪತ್ರೇಲಿ."
"ಓ. . .!"
ಯಜಮಾನರಿಗೆ ವಿಷಯ ಸ್ಪಷ್ಟವಾಗುತ್ತಾ ಬಂತು.
"ಅವನಿಗೋಸ್ಕರ ತಗೊಂಡಿಯಾ?"
ಹೌದು—ಎನ್ನುವಂತೆ ನೀರು ತುಂಬಿದ್ದ ಶುಭ್ರ ಕಣ್ಣುಗಳೆರಡು ಅವರನ್ನೇ ನೋಡಿದುವು.
"ತಿಳೀತು ಮಗೂ... ನನ್ನ ಕೇಳಿದ್ರೆ ಕೊಡ್ತಿದ್ದೆನಲ್ಲಾ."
ಕೊಡುತ್ತಿದ್ದರೋ ಇಲ್ಲವೋ ಆ ಮಾತು ಬೇರೆ.
ಮು೦ದಿನ ಕ್ರಮದ ಬಗೆಗೆ ಶೀಘ್ರ ನಿರ್ಧಾರಕ್ಕೆ ಬ೦ದು ಯಜಮಾನರು ಕೇಳಿದರು :
"ಎಷ್ಟಮ್ಮಾ ಸ೦ಬಳ ನಿನಗೆ ?"
"...ಮೂವತ್ತೆರಡು."
ಕ್ಷಿಣವಾಗಿದ್ದ ಧ್ವನಿ.
ಯಜಮಾನರು ಮೇಜಿನ ಡ್ರಾಯರನ್ನೆಳೆದರು ; ಏನನ್ನೋ ಹುಡುಕುತ್ತ ಕೈಯಾಡಿಸಿದರು. ಸಾಮಾನ್ಯವಾಗಿ ಅ೦ತಹ ಸ೦ದರ್ಭಗಳಲ್ಲಿ ಕೆಲಸದಿ೦ದಲೇ ವಜಾ ಆಗುತ್ತಿತ್ತು; ಎಲ್ಲರೆದುರಲ್ಲಿ ಛೀಮಾರಿಯಾಗುತಿತ್ತು. ಆದರೆ ಈ ಸಲ ಅವರು ಅವಳಿಗೆ ಸ೦ಬಳವನ್ನು ಕೊಟ್ಟರು. ಅಷ್ಟೇ ಅಲ್ಲ . . .
"ನಿನ್ನ ಹೆಸರೇನಮ್ಮ ?" ಎ೦ದರು.
ತನ್ನ ಕೆಲಸ ಹೋಯಿತೆ೦ದು ಭಾವಿಸಿದ ಆಕೆ, "ಶಾರದಾ," ಎ೦ದಳು.
"ಇಲ್ನೋಡಮ್ಮ ಶಾರದಾ. ನನಗೆ ತು೦ಬ ಸಾಲವಾಗಿದೆ. ನನ್ನ೦ಥ ಪುಟ್ಟ ಮಾಲಿಕರು ಇನ್ನು ಯಾರೂ ಬದುಕೋ ಹಾಗೆಯೇ ಇಲ್ಲ. ಬೊ೦ಬಾಯಿಯ ಮಲಾಮಲ್ ಮಿಲ್ಲಿನ ಸೇಟ್ ಒಬ್ಬರಿಗೆ ಈ ಕಾರಖಾನೇನ ಇನ್ನೊ೦ದು ವಾರದೊಳಗೆ ಮಾರ್ತೀನಿ. . . ಮು೦ದೆ ನಿಮಗೆಲ್ಲ ಸ೦ಬಳ ಕೊಡೋವ್ನು ನಾನಲ್ಲ. . . ಈಗೆ ನಡೆದಿದ್ದನ್ನ ಯಾರಿಗೂ ನಾನು ಹೇಳೋಲ್ಲ. . . ನಾಳೆ ಕೆಲಸಕ್ಕೆ ಬಾ. . .ಏನೂ ಆಗೇ ಇಲ್ಲಾ೦ತ ತಿಳಕೊ೦ಡು ಬಾ. . .ಬರದೇ ಹೋದರೆ ನನಗೆ ಬೇಸರವಾದೀತು...ಒಳ್ಳೇದು. ಹೋಗಮ್ಮ ಹೋಗು...ಇಡೀ ತಿ೦ಗಳ ಸ೦ಬಳ ಕೊಟ್ಟಿದೀನಿ...ಆಸ್ಪತ್ರೆ ಖರ್ಚಿಗಾಗುತ್ತೆ...ಹೋಗು ಮಗೂ..."
ಸೆರಗಿನಿ೦ದ ಕಣ್ಣೊರಸಿಕೊ೦ಡು ಶಾರದಾ ಹೊರಬಿದ್ದಳು.
... ಕ್ರಮಪ್ರಕಾರವಾಗಿ ನಾಲ್ಕು ಗ೦ಟೆಗೆ ಕಳುವಿನ ವರದಿ ಬ೦ತು. ಯಜಮಾನರು ಸ್ವತಃ ಕೈಹೊಲಿಗೆಯ ಕೋಣೆಗೆ ನಡೆದರು. ದುಡಿಯುತ್ತಿದ್ದ ಹೆ೦ಗಸರೆಲ್ಲ ಎದ್ದು ನಿ೦ತರು.
ಯಜಮಾನರು ಕೇಳಿದರು:
"ಯಾವುದು ಶಾರ್ಟ್ ಬ೦ದಿರೋದು—ಬುಶ್ ಕೋಟೇ ?"
"ಹೌದು ಸಾರ್, ಏಳಿತ್ತು. ಈಗ ಆರೇ ಇದೆ."
[ಅವರ ಕೈಯಲ್ಲೇನೋ ಇತ್ತು.]
"ಸರಿ. ವಿರಾಮದ ವೇಳೆ ಮಾದರಿ ನೋಡೋದಕ್ಕೇಂತ ಒಂದನ್ನು ನಾನೇ ತಗೊಂಡು ಹೋಗಿದ್ದೆ. ತಗೊಳ್ಳಿ, ಇಲ್ಲಿದೆ."
ಕೈಯಲ್ಲಿದ್ದ ನೀಲಿ ಬುಶ್ ಕೋಟನ್ನು ಬಟ್ಟೆಗಳ ರಾಶಿಯ ಕಡೆಗೆ ಅವರು ಎಸೆದರು.
ಆ ಮಾತನ್ನು ಕೇಳಿದ ಹೆಂಗಸರು, ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು.
'ಕಳವಿ'ನ ವಿಚಾರಣೆಯಲ್ಲಿ ತನ್ನ ಹಿರಿತನ ತೋರಿಸಲು ಅವಕಾಶ ದೊರೆಯದೆ ಹೋಯಿತಲ್ಲಾ—ಎಂದು ಮೇಸ್ತ್ರಿಣಿ ಮರುಗಿದಳು.

****

ಆ ಸಂಜೆ ಶಾರದಾ ಆಸ್ಪತ್ರೆಗೆ ಹೋದಳು. ಅಲ್ಲಿಂದ ಮನೆಗೆ.
ಮರುದಿನ, ಆರೋಗ್ಯ ಸರಿಯಾಗಿಲ್ಲವೆಂದು ತಿಳಿಸಿ ರಜೆಯ ಅರ್ಜಿಯನ್ನು ಬರೆದಳು.
ನಂಬರ್ ೨೦೮ ಆಮೇಲೆ ಆ ಕಾರಖಾನೆಗೆ ಕೆಲಸಕ್ಕೆ ಹೋಗಲಿಲ್ಲ...
... ಆ ಖಾರಖಾನೆಯೇ ಆ ತಿಂಗಳ ಕೊನೆಯಲ್ಲಿ ಮುಚ್ಚಿಕೊಂಡಿತು.
ಶಾರದೆಯ ತಂದೆ ಮಗಳಿಗಾಗಿ ಬೇರೆ ಕಡೆ ಕೆಲಸ ಹುಡುಕ ತೊಡಗಿದರು.

****

ಆಸ್ಪತ್ರೆಯಿಂದ ಹೊರಬಿದ್ದ ನಾಣಿಗೆ, ಬಿಳಿಯ ಶುಭ್ರತೆಯ ಹುಚ್ಚು ಹಿಡಿದಿತ್ತು.
ಅವನ ರುಚಿ ಬದಲಾಗಿತ್ತು. ನೀಲಿಯಲ್ಲ ಬಿಳಿ—ಅವನಿಗೆ ಪ್ರಿಯವಾಯಿತು.
ಒಂದು ದಿನ ಶಾರದ ಕೇಳಿದಳು:
"ನಾಣಿ, ಅಪ್ಪ ಹನ್ನೆರಡು ರೂಪಾಯಿ ನನ್ನ ಕೈಲೇ ಬಿಟ್ಟಿದ್ದಾರೆ. ಯಾವ ಬಟ್ಟೆ ಹೊಲಿಸೋಣ ನಿಂಗೆ? ”
ನಾಣಿಯೆಂದ:
"ಹನ್ನೆರಡು ಎಲ್ಲಿ ಸಾಕಾಗುತ್ತೆ? ನಿನಗೊಂದು ಬಿಳೀ ಸೀರೆ. ನನಗೊಂದು ಬಿಳೀ ಪಾಯಜಾಮ, ಶರಟು. ಇನ್ನೂ ಒಂದು ಆರೇಳು ರೂಪಾಯಿಯಾದರೂ ಬೇಕು."
"ಹೂಂ."
ಶಾರದಾ, ತುಂಬಿದ ಕಣ್ಣುಗಳಿಂದ ತಮ್ಮನನ್ನೇ ನೋಡಿದಳು. ಕಾಯಿಲೆ ಬಿದ್ದು ಎದ್ದವನು ಎಷ್ಟು ಕೃಶನಾಗಿ ಕಾಣುತ್ತಲಿದ್ದ! ಮತ್ತೆ ಆ ದೇಹ ತುಂಬಿಕೊಳ್ಳಬೇಕು. ಶಾಲೆಯ ಪುನರಾರಂಭವಾಗುವುದರೊಳಗಾದರೂ ನಾಣಿ ಮೈತುಂಬಿಕೊಂಡಿರಬೇಕು...
ತನಗೆ ಬೇರೊಂದು ಕೆಲಸ ಸಿಗಬೇಕು; ತಾನು ಸಂಪಾದಿಸಬೇಕು...
ಆ ಮೇಲೆ ಬಿಳಿಯ ಸೀರೆ, ಬೆಳಿಯ ಪಾಯಜಾಮ, ಬಿಳಿಯ ಶರಟು. . .