ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹ ಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಸ್ಟಿ ನಿಯಮದೊಳಗವನೆ ಭೋಗಿ ||ಉಳುವಾ ಯೋಗಿಯ ನೋಡಲ್ಲಿ||
ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||ಉಳುವಾ ಯೋಗಿಯ ನೋಡಲ್ಲಿ||
ಯಾರು ಅರಿಯದ ನೇಗಿಲ ಯೋಗಿಯು ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||ಉಳುವಾ ಯೋಗಿಯ ನೋಡಲ್ಲಿ||