ನೋಡಿರೆ ನೋಡಿರೆ ಒಂದು ವಿಚಿತ್ರವ. ಶಿಷ್ಯನೆಂಬ ಹೆಂಡತಿಯ ಶ್ರೀಗುರುವೆಂಬ ಗಂಡನು ಹಸ್ತಮಸ್ತಕಸಂಯೋಗವೆಂಬ ಕೂಟವ ಕೂಡಲು
ಜಿಹ್ವೆಯೆಂಬ ಮೇಢ್ರದಲ್ಲಿ ಷಡಕ್ಷರಮಂತ್ರವೆಂಬ ವೀರ್ಯವು ಚಲನೆಯಾಗಿ
ಆ ಶಿಷ್ಯನೆಂಬ ಹೆಂಡತಿಯ ಕರ್ಣವೆಂಬ ಗರ್ಭಪ್ರವೇಶವಾಗಲು
ಮನ ಬಸುರಾಗಿ
ಕಂಗಳೆಂಬ ಯೋನಿಯಲ್ಲಿ ಲಿಂಗವೆಂಬ ಮಗನ ಹಡೆದು
ಅಂಗೈಯೆಂಬ ತೊಟ್ಟಿಲಲ್ಲಿಕ್ಕಿ ಮಂಗಳಸ್ತೋತ್ರವೆಂಬ ಜೋಗುಳವ ಹಾಡಿ
ಅಖಂಡೇಶ್ವರನೆಂಬ ಹೆಸರಿಟ್ಟರು ನೋಡಾ ! ಇದು ಕಾರಣ
ನೀವೀಗವೆನಗೆ ಮಗನಾದಿರಿ
ನಾ ನಿಮಗೆ ತಾಯಾದೆನಯ್ಯಾ ಅಖಂಡೇಶ್ವರಾ.