೧೨
ಪರಂತಪ ವಿಜಯ

ಆದರೆ, ಈ ನಮ್ಮಗಳ ಆಟದ ವಿಷಯದಲ್ಲಾಗಲಿ-ನನ್ನ ಪ್ರಾಣರಕ್ಷಣೆಯ ವಿಷಯದಲ್ಲಾಗಲಿ-ನೀನು ಸ್ವಲ್ಪವೂ ಪ್ರವರ್ತಿಸಬೇಡ. ನಾನು ನಿನಗೆ ಹೇಳಿರುವ ಕಾರ್ಯಗಳನ್ನು ಮಾತ್ರ ಜಾಗ್ರತೆಯಿಂದ ನಡೆಯಿಸು. ಎಂದು ಹೇಳಿ, ಮಾಧವನು ದ್ಯೂತ ಗೃಹಕ್ಕೆ ಹೊರಟುಹೋದನು.

ಅಧ್ಯಾಯ ೨.

ಮಾಧವನು ಹೊರಟು ಹೋದಮೇಲೆ, ಪರಂತಪನ ಮನಸ್ಸಿನಲ್ಲಿ ಹೀಗೆ ಚಿತ್ರ ವಿಚಿತ್ರಗಳಾದ ಆಲೋಚನೆಗಳು ಅಂಕುರಿಸಿದವು.

ಮಾಧವನು ಹುಚ್ಚನೆ ? ಎಂದಿಗೂ ಹುಚ್ಚನಂತೆ ತೋರುವುದಿಲ್ಲ. ಅಥವಾ, ದ್ಯೂತವೆಂಬುದು, ಅದರಲ್ಲಿ ಆಸಕ್ತರಾದವರಿಗೆ ಮಿತಿಮೀರಿದ ಒಂದು ವಿಧವಾದ ಹುಚ್ಚು ಹಿಡಿಸುವುದುಂಟು. ಇಂಥ ಉನ್ಮಾದವೆನಾದರೂ ಇವನಲ್ಲಿ ಉದ್ಭವಿಸಿರಬಹುದೆ ? ಅದನ್ನೂ ಹೇಳು ವುದಕ್ಕಾಗುವುದಿಲ್ಲ. ಏಕೆಂದರೆ-ಇವನ ಐಶ್ವರ್ಯವು ಅಪರಿಮಿತವಾಗಿರು ವುದರಿಂದ, ನೀಚಕೃತ್ಯದಿಂದ ಧನಾರ್ಜನೆಯನ್ನು ಮಾಡಬೇಕೆಂಬ ಅಭಿಲಾಷೆ ಯಿವನಲ್ಲುಂಟಾಗಿರಲಾರದು. ಇದಲ್ಲದೆ, ಇವನು ದ್ಯೂತಾಸಕ್ತನಾಗಿದ್ದಾಗ್ಗೂ, ಕಪಟದ್ಯೂತವನನ್ನಾಡಿ ಜನಗಳನ್ನು ಕೆಡಿಸತಕ್ಕವರಲ್ಲಿ ಇವನ ದ್ವೇಷವು ಅನ್ಯಾದೃಶವಾಗಿರುವುದನ್ನು ನೋಡಿದರೆ ಪರಮಾಶ್ಚರ್ಯವಾಗುವುದು. ಇವನಿಗೆ ಧರ್ಮದ್ಯೂತವಿಶಾರದನೆಂಬ ಬಿರುದು ಒಪ್ಪುವುದು, ಇವನು ಅಧರ್ಮ ದ್ಯೂತಾಸಕ್ತರನ್ನು ನಿಗ್ರಹಿಸುವುದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊನೆಗೆ ಪ್ರಾಣವನ್ನೂ ಕಳೆದುಕೊಳ್ಳುವುದರಲ್ಲಿ ಸಿದ್ಧನಾಗಿರುವನು. 
ಅಧ್ಯಾಯ ೨
೧೩

ಆಹಾ ! ಇವನು ಲೋಕವಿಲಕ್ಷಣನಾವ ಮನುಷ್ಯನು. ಇವನ ಮಾತುಗಳಿಂದ, ದುರಾತ್ಮನಾದ ದುರ್ಬುದ್ಧಿಯು ಕಪಟ ದ್ಯೂತಾಸಕ್ತನೆಂಬುದಲ್ಲದೆ- ಘಾತುಕನಾಗಿಯೂ ಇರುವನೆಂದು ತಿಳಿಯಬರುವುದು. ಇದಲ್ಲದೆ, ಮಾಧವನು ಈ ರಾತ್ರಿಯ ದ್ಯೂತದಲ್ಲಿ ತನಗೇನಾದರೂ ಅಪಾಯ ಸಂಭವಿಸಬಹುದೆಂದು ಹೇಳಿರುವನು. ಆದುದರಿಂದ ಸರ್ವಪ್ರಯತ್ನದಿಂದಲೂ ಮಾಧವನಿಗೆ ಆ ವಿಪತ್ತನ್ನು ತಪ್ಪಿಸಬೇಕಲ್ಲದೆ, ಘಾತುಕನಾದ ಆ ದುರ್ಬುದ್ಧಿಯ ಸೊಕ್ಕನ್ನಡಗಿಸಿ ಅವನನ್ನು ಯಮಾಲಯಕ್ಕೆ ಕಳುಹಿಸಬೇಕಾಗಿರುವುದು. ಒಳ್ಳೆಯದಿರಲಿ ; ಇದಕ್ಕೆ ತಕ್ಕ ಕೃಷಿಯನ್ನು ಮಾಡುವೆನು.
ಹೀಗೆ ತನ್ನ ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ಸಮೀಪದಲ್ಲಿದ್ದ ಭೋಜನಶಾಲೆಯಲ್ಲಿ ಭೋಜನವನ್ನು ತೀರಿಸಿಕೊಂಡು, ಪರಂತಪನು ದ್ಯೂತ ಗೃಹಕ್ಕೆ ಪ್ರವೇಶಿಸಿದನು. ಅಲ್ಲಿ ದುರ್ಬುದ್ಧಿಯೊಡನೆ ಮಾಧವನು ದ್ಯೂತವಾಡುವುದಕ್ಕೆ ಸಿದ್ಧನಾಗಿದ್ದನು. ದುರ್ಬುದ್ಧಿಯ ಕಡೆಯ ಕೆಲವು ಜನಗಳೂ, ಉದಾಸೀನರಾದ ಕೆಲವು ಜನಗಳೂ ಸೇರಿ ಇದ್ದರು. ಕೂಡಲೆ ಆಟಕ್ಕೆ ಉಪಕ್ರಮವಾಯಿತು. ಇತ್ತಲಾಗಿ, ಪರಂತಪನು ಬಾರುಮಾಡಲ್ಪಟ್ಟ ರಿವಾಲ್ವರನ್ನು ಸಿದ್ಧಪಡಿಸಿಕೊಂಡು ದ್ಯೂತವಾಡುತ್ತಿರುವ ಅವರಿಬ್ಬರ ಸಂಭಾಷಣೆಯನ್ನು ಕೇಳುತ್ತ ಸ್ವಲ್ಪ ದೂರದಲ್ಲಿ ಕುಳಿತಿದ್ದನು. ಮಾಧವನಾದರೋ, ಆಗಿನ ದ್ಯೂತದಲ್ಲಿ ದುರ್ಬುದ್ಧಿಯ ಮೋಸಕ್ಕೆ ಸ್ವಲ್ಪವೂ ಅವಕಾಶಕೊಡದೆ, ಪ್ರತಿಯೊಂದು ಆಟವನ್ನೂ ಅಲ್ಲಿದ್ದ ಸಮಸ್ತ ಜನರಿಗೂ ಸಮ್ಮತವಾಗಿರುವಂತೆ ಆಡುತ್ತಿದ್ದನು. ಇವನ ಕೌಶಲ್ಯದಿಂದಲೋ, ಅಥವಾ ದೈವಗತಿಯಿಂದಲೋ, ಜಯಲಕ್ಷ್ಮಿಯು ಇವನನ್ನೇ ವರಿಸಿದಳು. ಅನೇಕ ಜನಗಳಿಗೆ ಮೋಸಪಡಿಸಿ ಅಧರ್ಮದಿಂದ ಗೆದ್ದಿದ್ದ ಆ ದುರ್ಬುದ್ಧಿಯ ದ್ರವ್ಯದಲ್ಲಿ ಅರ್ಧ ಭಾಗವನ್ನು ಮಾಧವನು ಗೆದ್ದನು. ಒಡನೆಯೆ ದುರ್ಬುದ್ಧಿಗೆ ಸಂತಾಪವೂ ಮಾಧವನ ಮೇಲೆ ಕ್ರೋಧವೂ ಹೆಚ್ಚುತಬಂದುವು.

ದುರ್ಬುದ್ಧಿ-(ಮಾಧವನ್ನು ಕುರಿತು) ಅಯ್ಯಾ ! ಮಾಧವನೆ : ಈ ದಿನ ಜಯಲಕ್ಷ್ಮಿಯು ನಿನ್ನ ಅಧೀನಳಾಗಿರುವಳು. ಆದರೂ ಚಿಂತೆಯಿಲ್ಲ. ಈಗ ನನ್ನ ಆಸ್ತಿಯಲ್ಲಿ ಅರ್ಧಭಾಗವು ನಿನಗೆ ಸೇರಿಹೋಯಿತು. ಇನ್ನು ಮುಂದೆ ಆಡಬೇಕಾದರೆ, ಸೋತವರು ಗೆದ್ದವರಿಗೆ ತನ್ನ ಸರ್ವಸ್ವ ೧೪
ಪರಂತಪ ವಿಜಯ

ವನ್ನೂ ಒಪ್ಪಿಸಿಬಿಡಬೇಕು. ಈ ನಿರ್ಣಯಕ್ಕೆ ಒಪ್ಪುವುದಾದರೆ, ಮುಂದಕ್ಕೆ ಆಡೋಣ ! ಇಲ್ಲವಾದರೆ ಈ ನಮ್ಮ ದ್ಯೂತವು ಇಷ್ಟಕ್ಕೇ ಸಮಾಪ್ತವಾಗಲಿ.
ಮಾಧವ-(ಸ್ಪಲ್ಪ ಯೋಚಿಸಿ) ಅಯ್ಯಾ ! ದುರ್ಬುದ್ಧಿಯೆ ! ನೀನು ಹೇಳುವುದು ನನಗೆ ಒಪ್ಪಿತು. ಮುಖ್ಯವಾಗಿ ಈ ದ್ಯೂತವೆಂಬುದೇ ಕೆಟ್ಟದ್ದು, ಆದರೂ, ಈ ಕೆಲಸದಲ್ಲಿ ಪ್ರವರ್ತಿಸಿದವರು ಅದರಿಂದಲೇ ಪೂರ್ಣವಾಗಿ ಕೆಡಬೇಕು ; ಅಥವಾ ಸಂಪೂರ್ಣವಾಗಿ ಅದರಿಂದಲೇ ಬದುಕಬೇಕು. ಈಗ ನನ್ನ ಧನವು ನಿನ್ನ ಧನಕ್ಕಿಂತಲೂ ಶತಾಂಶ ಅಧಿಕವಾಗಿರುವುದು. ಆದಾಗ್ಗೂ ಚಿಂತೆಯಿಲ್ಲ. ನೀನು ಗೆದ್ದ ಪಕ್ಷದಲ್ಲಿ, ಈಗ ನಿನ್ನಿಂದ ನಾನು ಗೆದ್ದಿರುವ ದ್ರವ್ಯದೊಡನೆ ನನ್ನ ಸರ್ವಸ್ವವನ್ನೂ ನಿನಗೆ ಒಪ್ಪಿಸಿ, ನಾನು ದೇಶಭ್ರಷ್ಟನಾಗಿ ಹೋಗುತ್ತೇನೆ. ಅಥವಾ ನಾನು ಗೆದ್ದ ಪಕ್ಷದಲ್ಲಿ, ಉಳಿದ ನಿನ್ನ ಆಸ್ತಿಯೆಲ್ಲವೂ ನನಗೆ ಸೇರಲಿ.
ಇದಕ್ಕೆ ಇಬ್ಬರೂ ಒಪ್ಪಿದರು. ಅದೇ ಅರ್ಥವನ್ನು ಕುರಿತು, ಅಲ್ಲಿದ್ದ ಸಭಿಕರ ಅನುಮತಿಯಿಂದ ಒಂದು ನಿರ್ಣಯ ಪತ್ರಿಕೆಯು ಬರೆಯಲ್ಪಟ್ಟಿತು. ಅದಕ್ಕೆ ಅಲ್ಲಿದ್ದ ಸಮಸ್ತ ಜನರೂ ಸ್ವಹಸ್ತ ಚಿಹ್ನೆಗಳನ್ನು ಹಾಕಿದರು. ಒಡನೆಯೇ ಆಟಕ್ಕೆ ಉಪಕ್ರಮವಾಯಿತು. ಆಗಲೂ ದೈವಗತಿಯಿಂದ ಮಾಧವನಿಗೇ ಜಯವಾಯಿತು. ಕೂಡಲೇ ದುರ್ಬುದ್ಧಿಯು ಅನಿರ್ವಚನೀಯವಾದ ಸಂತಾಪಕ್ಕೆ ಪರವಶನಾಗಿ, ಕೆಲವು ನಿಮಿಷಗಳವರೆಗೂ ಸ್ತಬ್ದನಾಗಿದ್ದು, ಸ್ವಲ್ಪ ಹೊತ್ತಿನಮೇಲೆ ಚೇತರಿಸಿಕೊಂಡು, ಮಾಧವನನ್ನು ಕುರಿತು "ಎಲಾ ದುರಾತ್ಮನಾದ ಮಾಧವನೆ ! ನೀನು ಬಹಳ ವಂಚಕನು. ನಾನಾದರೋ, ಅನೇಕಲಕ್ಷ ಜನಗಳೊಡನೆ ದ್ಯೂತವಾಡಿದವನು; ಆದರೂ ಇದು ವರೆಗೂ ಯಾರಿಗೂ ಸೋತವನಲ್ಲ. ಆದರೆ, ನೀನು ಯಾವದೋ ಒಂದು ವಿಧವಾದ ಚಮತ್ಕಾರದಿಂದ ನನ್ನನ್ನು ವಂಚಿಸಿ ಅಧರ್ಮದ್ಯೂತದಿಂದ ಈ ರೀತಿಯಾಗಿ ನನ್ನನ್ನು ಗೆದ್ದಿರುವಂತೆ ನನಗೆ ಸಂಶಯವುಂಟಾಗಿರುವುದು. ಆದುದರಿಂದ, ಈ ಆಟವು ನನಗೆ ಸರ್ವಥಾ ಸಮರ್ಪಕವಲ್ಲ. ನೀನು ಗೆದ್ದಿರುವುದರಲ್ಲಿ ಯಾವುದನ್ನೂ ನಿನಗೆ ನಾನು ಕೊಡತಕ್ಕವನಲ್ಲ.” ಎಂದನು.
ಮಾಧವ-ಎಲಾ ನೀಚನೆ ! ನಿನ್ನ ಹೆಸರಿಗೆ ಅನುರೂಪವಾದ ಮಾತುಗಳನ್ನಾಡಿದೆ. ನಾನು ವಂಚಕನೆಂಬುದನ್ನೂ, ಅಧರ್ಮದಿಂದ ಆಡತಕ್ಕವ

ಅಧ್ಯಾಯ ೨
೧೫

ನೆಂಬುದನ್ನೂ ನಿರ್ಣಯಿಸುವುದಕ್ಕೆ, ಈ ಸಭಿಕರೇ ಸಾಕ್ಷಿಭೂತರಾಗಿರುವ ರಲ್ಲವೆ! ನೀನು ಈಗ ಬರೆದಿರುವ ನಿರ್ಣಯಪತ್ರಿಕೆಯೇ ಪ್ರಬಲವಾದ ಸಾಕ್ಷಿಯಾಗಿರುವುದು. ನಮ್ಮಿಬ್ಬರಲ್ಲಿ ಯಾರು ವಂಚಕರೆಂಬುದನ್ನು ಈ ಸಭಿಕರೇ ನಿರ್ಣಯಿಸಲಿ. ಅಧರ್ಮದ್ಯೂತದಿಂದ ಅನೇಕ ಜನರನ್ನು ವಂಚಿಸಿ ಗಳಿಸಿಟ್ಟಿರುವ ನಿನ್ನ ದ್ರವ್ಯವು, ಎಷ್ಟು ದಿವಸ ನಿನಗೆ ಸಹಕಾರಿಯಾಗಿರುವುದು ? "ಅತ್ಯುತ್ಕಟೈಃ ಪುಣ್ಯಪಾಪೈಃ ಇಹೈವ ಫಲಮಶ್ನುತೇ ” ಎಂಬ ನ್ಯಾಯಕ್ಕನುಸಾರವಾಗಿ, ನೀನು ಮಾಡಿರುವ ಅತಿ ಕ್ರೂರವಾದ ಪಾಪಕೃತ್ಯ ಗಳಿಗೆ ಈಗಲೇ ತಕ್ಕ ಫಲವನ್ನನುಭವಿಸಬೇಕಾಗಿದೆ. ಆದುದರಿಂದ, ಇನ್ನು ಮೇಲೆ ಇಂಥ ಕಪಟಕೃತ್ಯಗಳನ್ನು ಬಿಡು. ಇಂಥ ಲೋಕಾಪವಾದದಲ್ಲಿ ಜೀವಿಸುವುದಕ್ಕಿಂತ ಮರಣವೇ ಉತ್ಕೃಷ್ಟವೆಂದು ಹಿರಿಯರು ಹೇಳುವರು. ಆದುದರಿಂದ, ಪೂರ್ವಾಪರಗಳನ್ನು ಯೋಚಿಸಿ ವಿವೇಕದಿಂದಿರು.
    ಈ ಮಾತನ್ನು ಕೇಳಿದೊಡನೆಯೆ ದುರ್ಬುದ್ಧಿಯು ಅತ್ಯಂತ ಕ್ರೋಧ ಪರವಶನಾಗಿ, ತಾನು ಬಚ್ಚಿಟ್ಟು ಕೊಂಡಿದ್ದ ಕಠಾರಿಯನ್ನು ತೆಗೆದು "ಎಲಾ ! ನೀಚನಾದ ಮಾಧವನೆ : ಸಾಕು. ನಿನ್ನ ನೀತಿಬೋಧನೆಯನ್ನು ಇಷ್ಟಕ್ಕೆ ನಿಲ್ಲಿಸು. ನಿನ್ನ ಆಯುಸ್ಸು ಇಂದಿಗೆ ಮುಗಿಯಿತು.” ಎಂದು ಅವನಮೇಲೆ ಅದನ್ನು ಪ್ರಯೋಗಿಸಿದನು. ಒಡನೆಯೇ ಮಾಧವನು ಮೂರ್ಛಿತನಾಗಿ ಕೆಳಕ್ಕೆ ಬಿದ್ದನು. ಇವನು ಬೀಳುವುದರೊಳಗಾಗಿಯೇ ದೊಡ್ಡ ಶಬ್ದ ವೊಂದು ಕೇಳಿಸಿತು. ಅಲ್ಲಿ ಸೇರಿದ್ದ ಜನರೆಲ್ಲರೂ ಗಾಬರಿಯಿಂದ ಅತ್ತಿತ್ತ ನೋಡುತ್ತಿರುವಷ್ಟರಲ್ಲಿ, ಆ ದುರ್ಬುದ್ಧಿಯು ಭಿನ್ನ ಗಾತ್ರನಾಗಿ ಕೆಳಗೆ ಬಿದ್ದಿದ್ದನು. ಅಷ್ಟರಲ್ಲಿಯೇ ಅಲ್ಲಿ ಕೋಲಾಹಲವು ಪ್ರಬಲವಾಯಿತು. ಬಹು ಜನಗಳು ಬಂದು ಸೇರಿದರು. ದುರ್ಬುದ್ಧಿಗೆ ಇಂಥ ಅಪಾಯವು ಯಾರಿಂದ ಸಂಭವಿಸಿತೆಂದು ಎಲ್ಲೆಲ್ಲಿ ನೋಡಿದರೂ ಗೊತ್ತಾಗದಿರಲು, ಚಿಂತಾಕ್ರಾಂತರಾಗಿ ಅವನ ಕಡೆಯವರು ಅವನನ್ನು ಎತ್ತಿಕೊಂಡು ಹೊರಟು ಹೋದರು.