೩೦

ಪರಂತಪ ವಿಜಯ


ಸಹೋದರನ ಪುತ್ರನಾದ ಶಂಬರನೂ, ಇದರಲ್ಲಿಯೇ ವಾಸಮಾಡುತಿದ್ದರು. ಪರಂತಪನು, ಮಾಧವನು ಹೇಳಿದ್ದ ಮೇರೆಗೆ, ಅವನ ಶವವನ್ನು ಪೆಟ್ಟಿಗೆಯಲ್ಲಿ ಹಾಕಿ ಭದ್ರಪಡಿಸಿಕೊಂಡು ಬಂದು, ಕಲ್ಯಾಣಪುರವನ್ನು ಸೇರಿದನು. ಅಪ್ಪರಲ್ಲಿಯೇ, ಅಲ್ಲಿ ಅವನನ್ನೇ ನಿರೀಕ್ಷಿಸುತ್ತಿದ್ದ ಇವನ ಭೃತ್ಯನಾದ ಮಂಜೀರಕನು ಇದಿರುಗೊಂಡು ಬಂದು, ಇವನನ್ನು ಕರೆದುಕೊಂಡು ಹೋಗಿ, ತಾನು ಮೊದಲು ಗೊತ್ತು ಮಾಡಿದ್ದ ಬಿಡಾರದಲ್ಲಿ ಇಳಿಸಿದನು. ಪರಂತಪನು, ತನ್ನಲ್ಲಿದ್ದ ದ್ರವ್ಯವನ್ನೆಲ್ಲ ರಹಸ್ಯವಾಗಿ ಅಲ್ಲಿಯೇ ಒಂದು ಸ್ಥಳದಲ್ಲಿಟ್ಟು, ಮಾಧವನ ಶವವನ್ನು ತೆಗೆಸಿಕೊಂಡು ಸುಮಿತ್ರನ ಮನೆಗೆ ಹೋದನು. ಆಗ ತಾನೆ ಕತ್ತಲೆಯಾಗುತಿದ್ದಿತು. ಆ ಸುಮಿತ್ರನ ಮನೆಯಲ್ಲಿ, ಮಹೋತ್ಸವ ಸೂಚಕವಾದ ಅನೇಕ ದೀಪಗಳನ್ನು ಹತ್ತಿಸಿದ್ದರು; ಅನೇಕ ಜನಗಳು ರಥಾ ರೂಢರಾಗಿ ಆ ಸುಮಿತ್ರನ ಮನೆಯ ಬಾಗಿಲಿಗೆ ಬರುತ್ತಿದ್ದರು. ಪರಂತಪನು ಇದನ್ನೆಲ್ಲ ನೋಡಿ, ಆ ಮಹೋತ್ಸವಕ್ಕೆ ಕಾರಣವೇನೆಂದು ಅಲ್ಲಲ್ಲಿ ವಿಚಾರಿಸಲು, ಆ ರಾತ್ರಿ ಚಂದ್ರಮುಖಿಯನ್ನು ಶಂಬರನಿಗೆ ಕೊಡುವುದಾಗಿ ನಿಶ್ಚಿತಾರ್ಥವಾಗುವುದೆಂದು ತಿಳಿಯಿತು. ಆಗ ಪರಂತಪನು, ಇಂಥ ಮಹೋತ್ಸವಕಾಲದಲ್ಲಿ ಸುಮಿತ್ರನಿಗೆ ಈ ಅಶುಭ ಸಮಾಚಾರವನ್ನು ಹೇಳಿ ಅವನ ಮನಸ್ಸನ್ನು ಸಂಕಟಪಡಿಸುವುದು ಸರಿಯಲ್ಲವೆಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಹಿಂದಿರುಗಿ ತನ್ನ ಬಿಡಾರಕ್ಕೆ ಹೋದನು. ಅದರೆ, ಇವನು ಮೊದಲೇ ಗ೦ಧರ್ವಪಯರಿಯಿಂದ-ಮಾಧವನು ಸ್ವರ್ಗಸ್ಥ ನಾದನೆಂದೂ, ಅವನ ಶವವನ್ನು ತಾನೇ ತೆಗೆದಕೊಂಡು ಬರುವುದಾಗಿಯ ಸುಮಿತ್ರನಿಗೆ ಬರೆದಿದ್ದ ಲೇಖನವು ಮಾತ್ರ ಆ ಕಾಲಕ್ಕೆ ಸರಿಯಾಗಿ ಸಮಿತ್ರನ ಕೈಗೆ ತಲುಪಿತು. ಅಷ್ಟರೊಳಗಾಗಿಯೇ, ನಿಶ್ಚಿತಾರ್ಥ ಮಹೋತ್ಸವಕ್ಕಾಗಿ ಅನೇಕ ಬಂಧುಮಿತ್ರರು ಬಂದು ಸೇರಿದರು. ಸುಮಿತ್ರನು, ಆಗತಾನೆ ಬಂದಿದ್ದ ಲೇಖನವನ್ನು ಒಡೆದು ನೋಡಿ, ಕೊಡಲೆ ಸಿಡಿಲಿನಿಂದ ಹೊಡೆಯಲ್ಪಟ್ಟ ವೃಕ್ಷದಂತೆ ಮೂರ್ಛೆಯಿಂದ ಕೆಳಗೆ ಬಿದ್ದನು. ಸಭೆಯಲ್ಲಿದ್ದವರೆಲ್ಲರೂ, ಕಾರಣ ತಿಳಿಯದೆ ಸಂಭ್ರಾಂತರಾಗಿ, ಹಾಹಾಕಾರಮಾಡುತಿದ್ದರು. ಆಗ ಆ ಶಂಬರನು, ಬಹಳ ಗಾಬರಿಯಿಂದ ಬಂದು ಆ ಕಾಗದವನ್ನು ಓದಿದನು. ಇವನಿಗೆ ಆ ಕಾಗದನ್ನು ನೋಡುವಾಗಲೇ, ಸಂತೋಷದಿಂದ ಮುಖವು ವಿಕ

ಅಧ್ಯಾಯ ೪

೩೧


ಸಿತವಾಗುತ್ತ ಬಂದಿತು. ಆದರೆ, ಆ ಸಂತೋಷವನ್ನು ತೋರ್ಪಡಿಸದೆ ಬಹಳ ದುಃಖವನ್ನಭಿನಯಿಸುತ "ಅಯ್ಯೋ ! ಇನ್ನೇನು ಗತಿ ! ನನ್ನ ಚಿಕ್ಕಪ್ಪನಿಗೆ ಇಂಥ ಅಪಮೃತ್ಯು ಸಂಭವಿಸಿತಲ್ಲಾ! ಹಾ!ಹಾ!"ಎಂದು ನೆಲದಮೇಲೆ ಬಿದ್ದು ಹೊರಳಿ ಹೊರಳಿ ಗಟ್ಟಿಯಾಗಿ ಅಳುವುದನ್ನುಪಕ್ರಮಿಸಿದನು. ಇದನ್ನು ಕೇಳಿದ ಕೂಡಲೆ, ಚಂದ್ರಮುಖಿಯು ಕೂಡ ಅತ್ಯಂತ ಶೋಕಾವೇಗದಿಂದ ಸ್ತಬ್ದಳಾಗಿ ಸ್ವಲ್ಪ ಹೊತ್ತಿನ ಮೇಲೆ ಚೇತರಿಸಿಕೊಂಡು ದುಃಖಿಸುತಿರಲು, ಸುಮಿತ್ರನು ಅವಳನ್ನು ಸಮಾಧಾನಪಡಿಸುತಿದ್ದನು. ಇದನ್ನೆಲ್ಲ ನೋಡಿ,

ಅಲ್ಲಿ ಬಂದಿದ್ದ ಜನರೆಲ್ಲರೂ ಸಂತಾಪ ಪಡುತ್ತ, ಸುಮಿತ್ರನಿಗೆ ದುಃಖೋಪಶಮನಾರ್ಥವಾಗಿ ಹೇಳಬೇಕಾದ ಮಾತುಗಳನ್ನೆಲ್ಲ ಹೇಳಿ, ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು. ಸುಮಿತ್ರನು ಸಹೋದರನ ಗುಣಾತಿಶಯಗಳನ್ನು ಆಗಾಗ್ಗೆ ಸ್ಮರಿಸಿಕೊಂಡು, ಆತನಿಗೆ ಉಂಟಾದ ಅಕಾಲ ಮರಣಕ್ಕಾಗಿ ದುಃಖಿಸುತ್ತ, ಇವನ ಮರಣವಿಷಯಕಗಳಾದ ಪೂರ್ವೋತ್ತರಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂದು, ಪರಂತಪನನ್ನೇ ಇದಿರು ನೋಡುತಿದ್ದನು. ಪರಂತಪನು ಮಾರನೆಯ ದಿನ ಸುಮಿತ್ರನ ಬಳಿಗೆ ಹೋಗಿ, ಕಾಮಮೋಹಿನಿಯ ವೃತ್ತಾಂತ ವಿನಾ-ಗಂಧರ್ವಪುರಿಯಲ್ಲಿ ನಡೆವ ಇತರ ವೃತ್ತಾಂತವೆಲ್ಲವನ್ನೂ ಹೇಳಿ, ಮಾಧವನು ಕೊಟ್ಟಿದ್ದ ವಜ್ರದ ಉಂಗುರವನ್ನೂ ತೋರಿಸಿದನು. ಸುಮಿತ್ರನು ಅದನ್ನು ನೋಡಿ, ಅಂತಸ್ವಾಸದಿಂದ ಕಣ್ಣೀರನ್ನು ಸುರಿಯಿಸಿ, "ಅಯ್ಯಾ ! ಪರಂತಪ ! ನಾನು ಮಾಧವನ ಇಷ್ಟದಂತೆ ನಡೆಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ, ಈಗ ನಿನ್ನಿಂದ ನನಗೆ ಒಂದು ಉಪಕಾರವಾಗಬೇಕಾಗಿದೆ. ನನಗೆ ಕಾಮಮೋಹಿನಿಯೆಂಬ ಸಾಕು ಮಗಳೊಬ್ಬಳಿರುವಳು. ಅವಳನ್ನು ನನ್ನ ತಮ್ಮನ ಮಗನಾದ ಶಂಬರನಿಗೆ ಕೊಟ್ಟು ವಿವಾಹ ಮಾಡಬೇಕೆಂದಿರುವೆನು. ಈ ಕಾರ್ಯವು ನೆರವೇರುವವರೆಗೂ, ಮಾಧವನು ತನ್ನ ಆಸ್ತಿಯೆಲ್ಲವನ್ನೂ ನಿನಗೆ ಬರೆದಿರುವ ಅಂಶವನ್ನು ಮಾತ್ರ ನೀನು ಹೊರಪಡಿಸಕೂಡದು. ಇಲ್ಲದಿದ್ದರೆ, ಈ ವಿವಾಹಕಾರ್ಯಕ್ಕೆ ವಿಘ್ನವಾಗುವುದು" ಎಂದು ಹೇಳಲು, ಅದಕ್ಕೆ ಪರಂತಪನು "ನಾನಾಗಿ ಈ ಪ್ರಸ್ತಾವವನ್ನು ಎಂದಿಗೂ ಮಾಡತಕ್ಕನಲ್ಲ; ಆದರೆ, ಈ ಮಾಧವನು ತನ್ನ ಆಸ್ತಿಯ ವಿಷಯದಲ್ಲಿ ಹೇಗೆ ವಿನಿಯೋಗ ಮಾಡಿರು 

೩೨

ಪರಂತಪ ವಿಜಯ


ವನೆಂದು ಯಾರಾದರೂ ಕೇಳಿದರೆ, ನಾನು ಸುಳ್ಳು ಹೇಳುವುದಕ್ಕಾಗುವುದಿಲ್ಲ” ಎಂದು ಹೇಳಿದನು. ಕೂಡಲೆ, ಸುಮಿತ್ರನು ತನ್ನ ಬಂಧು ಮಿತ್ರರೊಡನೆ ಸೇರಿ, ಯಥಾವಿಧಿಯಾಗಿ ಮಾಧವನಿಗೆ ಉತ್ತರಕ್ರಿಯೆಗಳನ್ನು ನಡೆಸಿ, ಪರಂತಪನನ್ನು ತನ್ನ ಸಹೋದರನೊಡನೆ ನಿರ್ವಿಶೇಷವಾಗಿ ನೋಡುತ್ತ ತನ್ನ ಮನೆಯಲ್ಲಿಟ್ಟುಗೊಂಡು ಉಪಚರಿಸುತ್ತಿದ್ದನು. ಶಂಬರನೂ ಕಾಮಮೋಹಿನಿಯೂ ಸಹ ಅಲ್ಲಿಯೇ ಇದ್ದರು. ಕ್ರಮ ಕ್ರಮವಾಗಿ ಪರಂತಪನಿಗೂ ಕಾಮಮೋಹಿನಿಗೂ ಪರಸ್ಪರ ಗೌರವವು ಹೆಚ್ಚುತಿದ್ದಿತು. ಅಲ್ಪ ಕಾಲದೊಳಗಾಗಿಯೇ ಈ ಗೌರವವು ಸ್ನೇಹ ರೂಪವಾಗಿ ಪರಿಣಮಿಸಿತು. ಕೊನೆಗೆ ಈ ಸ್ನೇಹವೇ ಇವರಿಬ್ಬರಲ್ಲಿಯ ಪರಸ್ಪರಾನುರಾಗ ರೂಪವನ್ನು ಹೊಂದಿತು. ಇವರಿಬ್ಬರಲ್ಲಿಯ ಶೃಂಗಾರ ಚೇಷ್ಟೆಗಳು ತರಂಗ ತರಂಗವಾಗಿ ಉದ್ಭವಿಸುತ್ತಿದ್ದುವು. ಹೀಗಿರುವಲ್ಲಿ, ಒಂದು ದಿನ ಪರಂತಪನು ಸಂಧ್ಯಾಕಾಲದಲ್ಲಿ ಸಂಚಾರಾರ್ಥವಾಗಿ ಹೋಗಿ ಬರುತ್ತಿರುವಾಗ, ಸುಮಿತ್ರನ ಉಪವನಕ್ಕೆ ಬಂದು ಅಲ್ಲಿ ಪುಷ್ಪಭರಿತಗಳಾದ ಲತೆಗಳ ರಾಮಣೀಯಕವನ್ನು ನೋಡಿ ಆನಂದಿಸುತ್ತಿರಲು, ಕಾಮಮೋಹಿನಿಯೂ ಪುಪ್ಪಾಪಚಯ ವ್ಯಾಜದಿಂದ ಅಲ್ಲಿಗೆ ಬಂದಳು.

ಕಾಮಮೋಹಿನಿ-ಮಹನೀಯನಾದ ಪರಂತಪನೆ! ನಾನು ನಿನ್ನಲ್ಲಿ ಕೆಲವು ವಿಜ್ಞಾಪನೆಗಳನ್ನು ತಿಳಿಯಿಸಬೇಕೆಂದು ಬಹು ದಿವಸಗಳಿಂದ ನಿರೀಕ್ಷಿಸುತಿದ್ದೆನು. ಆದರೆ ದೈವಕೃಪೆಯಿಂದ ಈಗ ಅವಕಾಶ ಸಿಕ್ಕಿರುವುದು. ನೀನು ಹೇಳಿದ ಮಾಧವನ ವೃತ್ತಾಂತವು ನನಗೆ ಬಹು ಸಂಕಟಕರವಾಗಿರುವುದು. ಆತನ ಅಕಾಲ ಮರಣಕ್ಕೆ, ಮಂದ ಭಾಗ್ಯಳಾದ ನಾನೇ ಮುಖ್ಯ ಕಾರಣ ಭೂತಳೆಂದು ಹೇಳಬೇಕಾಗಿದೆ. ಹೇಗೆಂದರೆ, ಅವನು ನನ್ನಲ್ಲಿ ಬಹು ಅನುರಾಗ ವುಳ್ಳವನಾಗಿದ್ದನು. ನನಗೂ ಅವನಲ್ಲಿ ಅನುರಾಗವು ಹೆಚ್ಚುತ್ತಿದ್ದಾಗ್ಗೂ ಶಂಬರನ ದುರ್ಬೋಧನೆಯಿಂದ ನಾನು ಅವನ ವಿಷಯದಲ್ಲಿ ಉದಾಸೀನೆಯಾದೆನು. ನನ್ನ ಭಾವವನ್ನು ತಿಳಿದಕೂಡಲೆ, ಅವನು ಈ ಪಟ್ಟಣವನ್ನು ಬಿಟ್ಟು ಹೊರಟುಹೋದನು. ಶಂಬರನು ಮಾಧವನ ವಿಷಯದಲ್ಲಿ ಜುಗುಪ್ಸೆ ಹುಟ್ಟಿಸಿದ್ದು ನನ್ನ ಮೃತ್ಯುವಿಗೇ ಎಂದು ಈಗ ನಿಜವಾಗಿ ನಂಬಬೇಕಾಗಿದೆ. ಈ ನೀಚನೇ ನನ್ನನ್ನು ವಿವಾಹ ಮಾಡಿಕೊಳ್ಳಬೇಕೆಂದು ಸಂಪೂರ್ಣ ಪ್ರಯತ್ನದಲ್ಲಿದ್ದಾನೆ. ಇದಕ್ಕನುಕೂಲವಾಗಿ, ಸುಮಿತ್ರನೂ ಇವನನ್ನೇ 

ಅಧ್ಯಾಯ ೪

೩೩


ವಿವಾಹಮಾಡಿಕೊಳ್ಳಬೇಕೆಂದು ನನ್ನನ್ನು ಬಲಾತ್ಕರಿಸುತ್ತಿದ್ದಾನೆ. ಈ ಶಂಬರನು ಬಹು ದುರಾತ್ಮನು. ಇವನನ್ನು ವರಿಸುವುದಕ್ಕಿಂತ ಮರಣವೇ ಉತ್ತಮವೆಂದು ನಾನು ಭಾವಿಸಿದ್ದೇನೆ. ಈಗಲೂ, ವಿವಾಹಕಾಲಕ್ಕೆ ಸರಿಯಾಗಿ ವಿಷಪಾನವನ್ನು ಮಾಡಿ ಈ ಜೀವವನ್ನು ಕಳೆದುಕೊಳ್ಳಬೇಕೆಂದು, ನಾನು ದೃಢಸಂಕಲ್ಪಳಾಗಿದ್ದೇನೆ. ಶಂಬರನು ಸರ್ವಥಾ ನನಗೆ ಅನುರೂಪನಲ್ಲ. ಆದುದರಿಂದ, ಅದರಲ್ಲಿ ನನಗೆ ಇಷ್ಟವಿಲ್ಲ. ಮಾಧವನು ಸತ್ಯಸಂಧನು ; ಸಕಲ ವಿದ್ಯಾವಿಶಾರದನು; ಧರ್ಮಿಷ್ಟನು; ಗುಣನಿಧಿ, ಇಂಥವನನ್ನು ಬಿಟ್ಟು, ಗುಣ ಹೀನನಾಗಿಯೂ ನಿರಕ್ಷರಕುಕ್ಷಿಯಾಗಿಯೂ ನೀಚನಾಗಿಯೂ ಇರುವ ಈ ಶಂಬರನನ್ನು ವಿವಾಹಮಾಡಿಕೊಳ್ಳ ತಕ್ಕ ದುರವಸ್ಥೆ ನನಗೆ ಪ್ರಾಪ್ತವಾಗಿದೆ. ಇದನ್ನು ತಪ್ಪಿಸಿಕೊಳ್ಳುವುದಕ್ಕೆ ಉಪಾಯವೇ ತೋರಲಿಲ್ಲ. ಆದುದರಿಂದ, ಈ ವಿಷಯದಲ್ಲಿ ನೀನೆನಗೆ ಸಹಾಯಮಾಡಿ ಪ್ರಾಣದಾನವನ್ನು ಮಾಡಿದ ಉಪಕಾರಕ್ಕೆ ಭಾಗಿಯಾಗಬೇಕೆಂದು ನಿನ್ನನ್ನು ಪ್ರಾರ್ಥಿಸಿಕೊಳ್ಳುತ್ತೇನೆ.
ಪರಂತಪ-ಅರ್ಯಳೇ! ಚಿಂತಿಸಬೇಡ. ನಿನ್ನನ್ನು ಈ ಕಷ್ಟದಿಂದ ಬಿಡಿಸುವ ಭಾರವು ನನ್ನದಾಗಿರಲಿ. ನೀನು ಮಾಧವನ ಗುಣಗಳ ವಿಷಯದಲ್ಲಿ ಹೇಳಿದ್ದೆಲ್ಲ ನಿಜ. ಅಂಥವನು ಲಭಿಸದೆ ಹೋದುದು ನಿನ್ನ ದೌರ್ಭಾಗ್ಯವೇ ಸರಿ. ಸ್ತ್ರೀಯರಿಗೆ ಅಂಥ ಪತಿಗಳು ದೊರೆಯಬೇಕಾದರೆ ಜನ್ಮಾಂತರಗಳಲ್ಲಿ ಬಹು ಸುಕೃತಗಳನ್ನು ಮಾಡಿರಬೇಕು. ಆದರೆ, ಮೀರಿದ ಕೆಲಸಕ್ಕೆ ಎಷ್ಟು ಚಿಂತಿಸಿದರೆ ತಾನೆ ಏನು ಪ್ರಯೋಜನ? ಮಾಧವನು ಲೋಕಾಂತರವನ್ನೈದಿದನು. ಆತನು ಮಾಡಿದ ಧರ್ಮಕಾರ್ಯಗಳು ಮಾತ್ರ ದಿಗಂತ ವಿಶ್ರಾಂತಗಳಾಗಿ ನಿಲ್ಲುವುವು. ಆತನು ಪ್ರಾಣೋತ್ಕ್ರಮಣ ಕಾಲದಲ್ಲಿಯೂ ನಿನ್ನ ಗುಣಾತಿಶಯಗಳನ್ನೇ ಸ್ಮರಿಸಿಕೊಂಡು, ನಿನ್ನ ಔದಾಸೀನ್ಯಕ್ಕೆ ಆ ನೀಚನಾದ ಶಂಬರನ ದುರ್ಬೋಧನೆಯೇ ಕಾರಣವೆಂದು ತಿಳಿದು, ನಿನಗೆ ಕೊಡುವುದಕ್ಕಾಗಿ ೫೦ ಲಕ್ಷ ದ್ರವ್ಯಗಳನ್ನು ನನ್ನ ವಶಕ್ಕೆ ಕೊಟ್ಟಿರುವನು. ಆ ದ್ರವ್ಯವನ್ನು ಕೊಡುವೆನು. ಅದರಿಂದ ನೀನು ಪರಾಧೀನಳಾಗದೆ ಸ್ವತಂತ್ರವಾಗಿ ಜೀವಿಸುತ್ತ ಸುಖವಾಗಿರಬಹುದು.

ಕಾಮಮೋಹಿನಿ-ನಾನು ನಿರ್ಭಾಗ್ಯಳು. ನನ್ನ ದೌರ್ಮಾತ್ಯಕ್ಕೂ ಔದಾಸೀನ್ಯಕ್ಕೂ ತಕ್ಕ ಫಲವನ್ನು ಈಗ ನಾನು ಅನುಭವಿಸಬೇಕಾಯಿತು. ಇವು

೩೪

ಪರಂತಪ ವಿಜಯ


ನಲ್ಲಿ ನಾನು ಮಾಡಿದ ಔದಾಸೀನ್ಯಕ್ಕೆ ಈಗ ಅವನು ತಕ್ಕ ಪ್ರತೀಕಾರವನ್ನು ಮಾಡಿದನು. ಇನ್ನಾವುದಕ್ಕೂ ನಾನು ಅಷ್ಟು ಚಿಂತಿಸಿ ಸಂತಾಪಪಡುವುದಿಲ್ಲ. ಮಾಧವನು ತನ್ನ ಪ್ರಾಣೋತ್ಕ್ರಮಣ ಕಾಲದಲ್ಲಿಯೂ ಕೂಡ, ನಿರ್ಘಣಳಾಗಿಯೂ ಪಾಪಿನಿಯಾಗಿಯೂ ಇರುವ ನನ್ನನ್ನು ಸ್ಮರಿಸಿಕೊಂಡು, ನಾನು ಅವನಿಗೆ ಮಾಡಿದ ತಿರಸ್ಕಾರವನ್ನು ಮನಸ್ಸಿನಲ್ಲಿಡದೆ, ಈ ದ್ರವ್ಯವನ್ನು ನಿನ್ನ ಮೂಲಕ ಕಳುಹಿಸಿರುವುದೇ, ನನಗೆ ಮರ್ಮೋದ್ಘಾಟನೆ ಮಾಡಿದಂತೆ ದುಸ್ಸಹವಾದ ಸಂತಾಪವನ್ನುಂಟು ಮಾಡುತಿರುವುದು. ಅಯ್ಯಾ ! ಪರಂತಪ ! ನನಗೆ ದ್ರವ್ಯದ ಮೇಲೆ ಸ್ವಲ್ಪವೂ ಅಪೇಕ್ಷೆಯಿಲ್ಲ. ಯಾವ ಸಂಪತ್ತೂ ನನಗೆ ಬೇಕಾಗಿಲ್ಲ. ಆ ದುರಾತ್ಮನಾದ ಶಂಬರನಿಗೆ ಅಧೀನಳಾಗದ ಹಾಗಾದರೆ, ಅದೇ ಸಾಕು. ಸೇವಾವೃತ್ತಿಯಿಂದಲಾದರೂ ಜೀವಿಸುತ್ತ ಕಾಲವನ್ನು ಕಳೆಯುವೆನು. ನನ್ನ ಆಯಃಪರಿಮಾಣ ಮುಗಿಯುವವರೆಗೂ ಮಾಧವನಿಗೆ ದ್ರೋಹ ಮಾಡಿದೆನೆಂಬ ಅನುತಾಪವು ನನಗೆ ಹೋಗತಕ್ಕುದಲ್ಲ. ಮಾಧವನು ನನಗೋಸ್ಕರ ಕೊಟ್ಟಿರ ತಕ್ಕ ದ್ರವ್ಯವನ್ನು ನಿನ್ನ ಶ್ರಮಕ್ಕೆ ಪ್ರತಿಫಲವನ್ನಾಗಿ ಮಾಡಿಕೊಂಡು, ನನಗೆ ಈ ಬಂಧಮೋಚನವನ್ನು ಮಾಡಿದರೆ, ನಾನು ನಿನಗೆ ಮರಣಾಂತವಾಗಿ ಕೃತಜ್ಞಳಾಗಿರುವೆನು.
ಪರಂತಪ-ಪ್ರತಿಫಲವನ್ನಪೇಕ್ಷಿಸದೆ ಪರೋಪಕಾರವನ್ನು ಮಾಡುವುದೇ ಧರ್ಮವು. ಹೀಗಿರುವಲ್ಲಿ, ನಾನು ದೃವ್ಯಾರ್ಥಿಯಾಗಿ ಎಂದಿಗೂ ಉಪಕಾರ ಮಾಡತಕ್ಕವನಲ್ಲ. ಮಾಧವನು ಕೊಟ್ಟಿರುವ ದ್ರವ್ಯವು ನಿನ್ನದಾಗಿದೆ. ಈ ದ್ರವ್ಯ ಸಹಾಯದಿಂದಲೇ ಬಂಧಮೋಚನವನ್ನು ಮಾಡಿಕೊಳ್ಳಬೇಕೆಂಬ ಸಂಕಲ್ಪವು ನಿನಗಿದ್ದರೆ, ಅಂಥ ಧನಾಕಾಂಕ್ಷಿಗಳಾದ ಇತರರು ಯಾರನ್ನಾದರೂ ನೋಡಬಹುದು. ನನ್ನಿಂದಲೇ ಈ ಕಾರ್ಯವಾಗಬೇಕಾಗಿದ್ದರೆ, ನಾನು ಧರ್ಮಾರ್ಥವಾಗಿ ಮಾಡತಕ್ಕವನೇ ಹೊರತು, ಎಂದಿಗೂ ಪ್ರತಿ ಫಲವನ್ನಪೇಕ್ಷಿಸತಕ್ಕವನಲ್ಲ.

ಕಾಮಮೋಹಿನಿ-ಆರ್ಯನೇ! ನನ್ನ ಮಾತುಗಳಿಂದ ನಿನಗೆ ಕ್ರೋಧವುಂಟಾದಂತೆ ತೋರುವುದು. ನನ್ನ ಅಪರಾಧವನ್ನು ಕ್ಷಮಿಸು, ದುಃಖಾತಿಶಯದಿಂದ ನಾನು ಯುಕ್ತಾಯುಕ್ತ ವಿವೇಚನೆಯಿಲ್ಲದೆ ಆಡಿದ ಮಾತಿಗೆ ನೀನು ಕೋಪಿಸಿಕೊಂಡರೆ, ನಿನ್ನ ದಯಾಳುತ್ವವೇನಾಯಿತು ? ಅನಾಥಳಾಗಿ ಸಂಕ

ಅಧ್ಯಾಯ ೪

೩೫


ಟಪಡುತ್ತಿರುವ ನನ್ನನ್ನು ಕಾಪಾಡು. ಸುಮಿತ್ರನು ಈ ನೀಚನಿಗೆ ನನ್ನನ್ನು ಕೊಡುವುದು ನಿಜ. ನಿನ್ನಲ್ಲಿ ನಾನು ಶರಣಾಗತಳಾಗಿರುವೆನು. ಮುಚ್ಚು ಮರೆಯೇಕೆ? ನನ್ನ ಅಂತರಂಗವನ್ನು ಹೇಳುವೆನು,ಕೇಳು. ನೀನು ಇಲ್ಲಿಗೆ ಬಂದುದು ಮೊದಲು, ನನಗೆ ನಿನ್ನ ವಿಷಯದಲ್ಲಿ ಅನುರಾಗವೂ ಗೌರವವೂ ದಿನೇದಿನೇ ವೃದ್ಧಿ ಹೊಂದುತ್ತಿರುವುವು. ಆದುದರಿಂದ, ನೀನು ನನ್ನನ್ನು ವರಿಸಿದ ಪಕ್ಷದಲ್ಲಿ, ನಾನು ಜೀವಿಸಿರುವವರೆಗೂ ಮನೋವಾಕ್ಕಾಯಕರ್ಮಗಳಲ್ಲಿಯೂ ನಿನ್ನ ಇಷ್ಟಾನುವರ್ತಿನಿಯಾಗಿರುವೆನು. ಹೀಗಲ್ಲದೆ ಶಂಬರನನ್ನೇ ವಿವಾಹ ಮಾಡಿಕೊಳ್ಳಬೇಕಾದ ಪಕ್ಷದಲ್ಲಿ, ನಾನು ಆತ್ಮಹತ್ಯೆ ಮಾಡಿಕೊಳ್ಳುವುದೇ ನಿಜ. ಆದುದರಿಂದ, ನನ್ನ ಕಷ್ಟವನ್ನು ನಿವಾರಣೆ ಮಾಡಿ ನನ್ನನ್ನು ಬದುಕಿಸುವುದು ನಿನಗೆ ಸೇರಿದೆ. ಇದು ಮೊದಲುಗೊಂಡು ನನ್ನ ಪ್ರಾಣಮಾನಗಳೆರಡಕ್ಕೂ ನೀನೇ ನಿಯಾಮಕನಾಗಿರುತ್ತೀಯೆ.
ಪರಂತಪ-ಶರಣಾಗತ ರಕ್ಷಣೆ ಮಾಡುವುದಕ್ಕಿಂತ ಉತ್ಕೃಷ್ಟವಾದ ಬೇರೆ ಧರ್ಮವಾವುದೂ ಇಲ್ಲ. ನಿನ್ನನ್ನು ಈ ಕಷ್ಟದಿಂದ ಬಿಡಿಸುವೆನು. ಈ ವಿಷಯದಲ್ಲಿ ನನಗೆ ಎಷ್ಟು ವಿಪತ್ತುಗಳು ಪ್ರಾಪ್ತವಾದಾಗ್ಗೂ ಆಗಲಿ. ಆದರೆ, ನಿನ್ನನ್ನು ವಿವಾಹ ಮಾಡಿಕೊಳ್ಳಬೇಕೆಂಬ ಅಭಿಲಾಷೆಯಿಂದ ನಾನು ಎಂದಿಗೂ, ಈ ಕೆಲಸವನ್ನು ಮಾಡತಕ್ಕವನಲ್ಲ. ಅದು ಹಾಗಿರಲಿ; ಪ್ರಕೃತದಲ್ಲಿ ನಾನು ನಿನ್ನ ಬಂಧನವನ್ನು ಬಿಡಿಸಿ ಕಷ್ಟನಿವಾರಣೆ ಮಾಡುವೆನು. ಅನಂತರದಲ್ಲಿ ನಿನಗೆ ನನಗಿಂತಲೂ ಉತ್ತಮನಾದವನು ಯಾವನಾದರೂ ದೊರೆಯುವನು. ಹಾಗೆ ಯಾರೂ ದೊರೆಯದ ಪಕ್ಷದಲ್ಲಿ, ಆಗ ಪರ್ಯಾಲೋಚಿಸೋಣ. ಆದರೆ ನನಗೆ ಇನ್ನೊಂದು ಅನುಮಾನವು ಭಾಧಿಸುತ್ತಿರುವುದು. ಏನೆಂದರೆ; ನೀನು ಶಂಬರನನ್ನು ವಿವಾಹ ಮಾಡಿಕೊಳ್ಳದಿದ್ದ ಪಕ್ಷದಲ್ಲಿ, ಬಾಲ್ಯದಿಂದ ಇದುವರೆಗೂ ನಿನ್ನನ್ನು ನೋಯಿಸದೆ ಸುಖದಿಂದ ಸಾಕುತ್ತಿದ್ದ ಸುಮಿತ್ರನಿಗೆ ಅತ್ಯಂತ ಕ್ಲೇಶವುಂಟಾಗುವುದು. ಆಗ ನೀನು ಕೃತಘ್ನುಳೆಂಬ ಲೋಕಾಪವಾದಕ್ಕೆ ಗುರಿಯಾಗಬೇಕಾಗುತ್ತದೆಯಲ್ಲವೆ?

ಕಾಮಮೋಹಿನಿ- ಈ ಸುಮಿತ್ರನು ನನಗೆ ಮಹೋಪಕಾರ ಮಾಡಿರತಕ್ಕವನೇ ಅಹುದು, ತಂದೆತಾಯಿಗಳ ಮುಖವನ್ನೇ ಕಾಣದ ನನ್ನನ್ನು ತಂದು ಇದುವರೆಗೂ ಅತಿ ಪ್ರೇಮದಿಂದ ಪೋಷಿಸಿದನು. ಇವನೇ ನನ್ನ ಭಾಗಕ್ಕೆ

೪೬

ಪರಂತಪ ವಿಜಯ


ತಾಯಿಯಾಗಿಯೂ ತಂದೆಯಾಗಿಯೂ ಇರುವನು. ಈ ವಿಷಯದಲ್ಲಿ ನಾನು ಎಷ್ಟು ಕೃತಜ್ಞಳಾಗಿದ್ದಾಗ್ಗೂ ಕಡಮೆಯೇ ಸರಿ. ಜೀವಾವಧಿ ಇವನಲ್ಲಿ ನಾನು ಸೇವೆ ಮಾಡುತ್ತಿದ್ದಾಗ್ಗೂ, ಇವನು ಮಾಡಿದ ಉಪಕಾರಕ್ಕೆ ಸರಿಯಾದ ಪ್ರತ್ಯುಪಕಾರವಾಗಲಾರದು. ಆದರೆ, ಮಕ್ಕಳಿಗೆ ತಾಯಿತಂದೆಗಳು ಸಮಸ್ತ ವಿಷಯದಲ್ಲಿಯೂ ಯಾಮಕರಾಗಿದ್ದಾಗ್ಗೂ, ಧರ್ಮಮಾರ್ಗವನ್ನು ಬಿಟ್ಟು ಹೋಗುವುದು ಅವರಿಗೂ ಉಚಿತವಲ್ಲ. ತಾಯಿ ತಂದೆಗಳು ಮಕ್ಕಳನ್ನು ಸಾಕಿದ ಮಾತ್ರದಿಂದಲೇ, ಯುಕ್ತಾಯಕ್ತ ವಿವೇಚನೆಯಿಲ್ಲದೆ ಅವರಿಗೆ ಅನುಚಿತ ಕಾರ್ಯಗಳನ್ನು ಹೇಳಿ ಅದನ್ನು ಮಾಡದಿದ್ದರೆ ಕೃತಘ್ನರೆಂದು ಹೇಳುವುದಕ್ಕಾದೀತೆ? ಈ ಶಂಬರನು ವ್ಯಭಿಚಾರಿಯು ; ಇದರಿಂದ ಅನೇಕ ರೋಗಗಳುಳ್ಳವನಾಗಿರುವನು. ಬಹಳ ಸುಳ್ಳುಗಾರನು, ಚೌರ ಮೊದಲಾದ ಅನೇಕ ದುಷ್ಕೃತ್ಯಗಳನ್ನು ಮಾಡಿ, ಅನೇಕಾವೃತ್ತಿ ರಾಜ್ಯಾಧಿಕಾರಿಗಳಿಂದ ಕ್ರೂರ ಶಿಕ್ಷೆಯನ್ನನುಭವಿಸಿರುತ್ತಾನೆ. ಇಂಥವನನ್ನು ವಿವಾಹಮಾಡಿಕೊಳ್ಳಬೇಕೆಂದು ನನ್ನ ತಂದೆ ನಿರ್ಬಂಧಿಸಬಹುದೆ? ಈ ಮಾತನ್ನು ನಾನು ಹೇಗೆ ತಾನೆ ನಡಯಿಸಲಿ! ಈ ವಿಷಯದಲ್ಲಿ ಇಷ್ಟವಿಲ್ಲವೆಂದು ಹೇಳಿದ ಮಾತ್ರಕ್ಕೆ ನಾನು ಕೃತಘ್ನಳಾಗುವೆನೆ? ಈ ಸುಮಿತ್ರನು ಮಾಡಿರತಕ್ಕೆ ಮಹೋಪಕಾರಗಳನ್ನು ನಾನು ಎಂದಿಗೂ ಮರೆಯತಕ್ಕವಳಲ್ಲ. ನ್ಯಾಯವಾದ ರೀತಿಯಲ್ಲಿ ಹೇಳಿದರೆ, ಅವನಿಗೊಸ್ಕರ ನನ್ನ ಪ್ರಾಣವನ್ನಾದರೂ ಒಪ್ಪಿಸುವುದರಲ್ಲಿ ಸಿದ್ಧಳಾಗಿರುವೆನು; ಆ ನೀಚನಾದ ಶಂಬರನ ಪತ್ನಿಯಾಗಿ ಮಾತ್ರ, ನಾನು ಎಂದಿಗೂ ಇರಲಾರೆನು.

ಪರಂತಪ -ನೀನು ಹೇಳುವ ಮಾತುಗಳು ನನಗೆ ಅತ್ಯಾಶ್ಚರ್ಯಕರಗ೪ಾಗಿರುವುವು. ಸುಮಿತ್ರನು ಬಹಳ ವಿವೇಕಿಯೆಂದು ಕೇಳಿರುತ್ತೇನೆ. ಇದಲ್ಲದೆ, ನಿನ್ನಲ್ಲಿ ಸಂಪೂರ್ಣವಾದ ವಿಶ್ವಾಸವುಳ್ಳವನೆಂದೂ ತೋರುತ್ತದೆ. ಶಂಬರನು ಅಂಥ ದುರ್ಗುಣವುಳ್ಳವನಾಗಿದ್ದರೆ, ಪ್ರಾಣಪ್ರಾಯಳಾದ ನಿನ್ನನ್ನು ಆತನಿಗೆ ಕೊಟ್ಟು ಮದುವೆಮಾಡಬೇಕೆಂದು ಸುಮಿತ್ರನೆಂದಿಗಾದರೂ ಸಂಕಲ್ಪ ಮಾಡುತಿದ್ದನೆ! ಆ ವಿಚಾರವು ಹೇಗಾದರೂ ಇರಲಿ, ನಿನ್ನ ಪ್ರಾರ್ಥನೆಯಂತೆ ಶಂಬರನಿಗೆ ನೀನು ಮದುವೆಯಾಗದಿರುವ ಹಾಗೆ ಮಾಡುವ ಭಾರವು ತನ್ನದಾಗಿದೆ. ಇನ್ನು ಚಿಂತಿಸಬೇಡ, ಹೋಗು.

ಅಧ್ಯಾಯ ೪

೩೭


ಕಾಮಮೋಹಿನಿ-ನನ್ನ ಪ್ರಾರ್ಥನೆಯು ಇಷ್ಟು ಮಾತ್ರವೇ ಅಲ್ಲ; ನನ್ನನ್ನು ನೀನೇ ವಿವಾಹ ಮಾಡಿಕೊಳ್ಳಬೇಕೆಂಬುದೂ ಕೂಡ ನನ್ನ ಮುಖ್ಯ ಕೋರಿಕೆಯಾಗಿರುವುದು. ನಿನ್ನ ಮಾತುಗಳಿಂದ, ನನ್ನನ್ನು ವರಿಸುವುದರಲ್ಲಿ ನಿನಗೆ ಸಮ್ಮತಿಯಿಲ್ಲವೆಂದು ತೋರುತ್ತದೆ. ಹಾಗಿದ್ದ ಪಕ್ಷದಲ್ಲಿ, ನಿನ್ನ ಸಹಾಯದಿಂದ ನನಗೆ ಆಗ ತಕ್ಕ ಉತ್ತರ ಫಲವೆನೂ ತೋರಲಿಲ್ಲ. ನೀನು ಇಲ್ಲಿಗೆ ಬಂದಾರಭ್ಯ, ದೇವರೇ ನಿನ್ನನ್ನು ಇಲ್ಲಿಗೆ ಕರೆದುಕೊಂಡು ಬಂದನೆಂದು, ತಂದೆ ತಾಯಿ ಬಂಧು ಬಳಗಗಳೆಲ್ಲರಿಂದಲೂ ಬಿಡಲ್ಪಟ್ಟು ಅನಾಥೆಯಾಗಿದ್ದಾಗ ನಿನ್ನನ್ನು ನೋಡಿ ನಾನು ಸನಾಥಳೆಂದು ಭಾವಿಸಿದ್ದೆನು. ಈಗ ಶಂಬರನನ್ನು ನಾನು ವರಿಸುವುದು ಇಷ್ಟಪಡದಿದ್ದರೆ, ನನ್ನ ಸಾಕು ತಂದೆಯಾದ ಸುಮಿತ್ರನಿಗೆ ನನ್ನಲ್ಲಿ ಔದಾಸೀನವೂ ಕ್ರೋಧವೂ ಉಂಟಾಗುವುವೇ ಹೊರತು ಮತ್ತೆ ಬೇರೆಯಿಲ್ಲ. ಸಾಮಾನ್ಯವಾಗಿ ಸ್ತ್ರೀಯರು ತಮ್ಮ ಅನುರಾಗಕ್ಕೆ ಪಾತ್ರರಾದ ಪುರುಷರಿಗೆ ಸ್ವಾಭಿಪ್ರಾಯವನ್ನು ವ್ಯಕ್ತವಾಗಿ ತಿಳಿಯಿಸುವುದೇ ಇಲ್ಲ.ಇಂಥ ಸಂಕೋಚವನ್ನೂ ಲಜ್ಜೆಯನ್ನೂ ಬಿಟ್ಟು, ನಿನ್ನ ಗುಣಾತಿಶಯಗಳಿಗೋಸ್ಕರ ನನ್ನನ್ನು ನಾನಾಗಿ ನಿನಗೆ ಒಪ್ಪಿಸಿದೆನು. ಇಂಥ ನನ್ನನ್ನು ನೀನು ತಿರಸ್ಕರಿಸುವ ಪಕ್ಷದಲ್ಲಿ, ನಿನ್ನಿಂದ ನಾನು ಉತ್ತರತ್ರ ವಿಶೇಷವಾದ ಅನರ್ಥಗಳಿಗೆ ಪಾತ್ರಳಾಗಬೇಕೇ ಹೊರತು, ಇತರ ಯಾವ ಪ್ರಯೋಜನವೂ ಆಗಲಾರದು. ಆದುದರಿಂದ, ಇನ್ನೊಂದು ನಿಮಿಷಾರ್ಧದಲ್ಲಿ ಆ ಸುಮಿತ್ರ ಶಂಭರರ ಸಂಕಲ್ಪಗಳನ್ನು ಭಗ್ನಮಾಡಿ ನಾನು ಪ್ರಾಣತ್ಯಾಗವನ್ನು ಮಾಡಿಕೊಳ್ಳುವೆನು.


  ಎಂದು ಹೇಳಿ, ತನ್ನ ಬಳಿಯಲ್ಲಿಟ್ಟುಕೊಂಡಿದ್ದ ವಿಷವನ್ನು ತೆಗೆದು ಬಾಯಿಗೆ ಹಾಕಿಕೊಂಡಳು. ಆ ಕ್ಷಣದಲ್ಲಿಯೇ, ಪರಂತಪ ಅವಳ ಗಂಟಲನ್ನು ಗಟ್ಟಿಯಾಗಿ ಹಿಡಿದುಕೊಂಡು, ಬಲಾತ್ಕಾರದಿಂದ ಆ ವಿಷವನ್ನು ತೆಗೆದು ಒಂದು ಕಾಗದದಲ್ಲಿ ಸುತ್ತಿ ತನ್ನ ಜೇಬಿನಲ್ಲಿ ಹಾಕಿಕೊಂಡು “ಎಲೌ ಮಂಗ೪ಾಂಗಿಯೇ ! ನಿನ್ನ ಸ್ಥೈರ್ಯವೂ ದೃಢಸಂಕಲ್ಪವೂ ನನಗೆ ಅತ್ಯಾಶ್ಚರ್ಯವನ್ನುಂಟುಮಾಡಿದವು. ನಿನ್ನನ್ನು ವರಿಸಕೂಡದೆಂದು ನಾನು ಸಂಕಲ್ಪಿಸಿದವನಲ್ಲ; ನಿನಗೆ ಪುರುಷಾಂತರನಲ್ಲಿ ಅನುರಾಗವಿದ್ದ ಪಕ್ಷದಲ್ಲಿ, ಅದಕ್ಕೆ ಪ್ರತಿ ಬಂಧಕನಾದ ಈ ನಿನ್ನ ವಿಪತ್ತನ್ನು ತಪ್ಪಿಸಿ ನಿನ್ನ ಕೋರಿಕೆಯನ್ನು ಸಫಲ 

೩೮

ಪರಂತಪ ವಿಜಯ


ಗೊಳಿಸಬೇಕೆಂದಿದ್ದೆನು. ನೀನು ಅನ್ಯಾದೃಶವಾದ ಸೌಂದರವುಳ್ಳವಳಾಗಿಯೂ ಅದಕ್ಕೆ ತಕ್ಕ ಗುಣಾತಿಶಯವುಳ್ಳವಳಾಗಿಯೂ ಇರುವೆ, ನನಗಿಂತಲೂ ರೂಪವಂತಾರಾಗಿಯೂ ವಿದ್ಯಾವಂತರಾಗಿಯೂ ಗುಣಾಢ್ಯರಾಗಿಯೂ ಇರತಕ್ಕ ಮಹಾತ್ಮರು ಲೋಕದಲ್ಲಿ ಎಷ್ಟೋ ಜನರಿರುವರು. ನೀನು ಅಂಥವರನ್ನು ವರಿಸಿ ಸಂತೋಷದಿಂದಿರಬಹುದೆಂದು ನಾನು ಹೀಗೆ ಹೇಳಿದೆನೇ ಹೊರತು ನೀನು ನನಗೆ ಅನುರೂಪಳಲ್ಲವೆಂಬುದಾಗಿಯೂ ನಿನಗಿಂತಲೂ ಹೆಚ್ಚಾದ ಬೆರೆ ಸ್ತ್ರೀಯು ನನಗೆ ದೊರಕುತ್ತಾಳೆಂಬ ಅಹಂಕಾರದಿಂದ ಹೇಳಿದವನಲ್ಲ. ಈಗಲೂ ಈ ವಿಷಯವನ್ನು ಚೆನ್ನಾಗಿ ಪರ್ಯಾಲೋಚಿಸು. ನೀನು ನನ್ನ ಆಪ್ತಳಾದ ಹೆಂಡತಿಯಾಗಿದ್ದರೆ ಹೇಗೋ- ಹಾಗೆಯೇ ನಿನ್ನ ವಿಷಯದಲ್ಲಿ ನಾನು ಮಾಡತಕ್ಕ ಸಹಾಯಗಳನ್ನೆಲ್ಲ ಮಾಡುವೆನು. ಈ ಸುಮಿತ್ರ ಶಂಬರರಿಂದ ಉಂಟಾಗಿರುವ ವಿಪತ್ತನ್ನು ತಪ್ಪಿಸುವೆನು. ತರುವಾಯ, ಪಾಣಿಗ್ರಹಣಾರ್ಥವಾಗಿ ನಿನ್ನನ್ನು ವರಿಸಬೇಕೆಂದು ಬರುವವರೆಲ್ಲರನ್ನೂ ಪರೀಕ್ಷಿಸು. ಅವರಲ್ಲಿ ನನಗಿಂತಲೂ ಉತ್ತಮರಾದವರು ಸಿಕ್ಕದಿದ್ದರೆ ನಾನೇ ನಿನ್ನನ್ನು ವರಿಸುತ್ತೇನೆ. ಈ ವಿಷಯದಲ್ಲಿ ಸಂದೇಹವಿಲ್ಲ. ಇದಕ್ಕಾಗಿ ನಿನಗೆ ಬೇಕಾದ ಪ್ರತಿಜ್ಞೆಗಳನ್ನು ಮಾಡಿಕೊಡುತ್ತೇನೆ. ಇನ್ನು ಮಃಖಿಸಬೇಡ.” ಎಂದು ಹೇಳಿದನು.

ಕಾಮಮೋಹಿನಿ - ಎಲೈ ಮಹನೀಯನೆ! ವಿವಾಹಕ್ಕೆ ಅನುರಾಗವೇ ಮುಖ್ಯವಾದುದು. ವಿದ್ಯಾವಂತರಾಗಿಯೂ ರೂಪವಂತರಾಗಿಯೂ ಇದ್ದ ಅನೇಕ ಸಹಸ್ರ ಜನರು, ನನ್ನ ವಿಚಾರವನ್ನು ಕೇಳಿ ಇಲ್ಲಿಗೆ ಬಂದು ಸುಮಿತ್ರನನ್ನು ಪ್ರಾರ್ಥಿಸಿದರು. ಅವರಲ್ಲಿ ಯಾರನ್ನೂ ನನ್ನ ಮನಸ್ಸು ಒಡಂಬಡಲಿಲ್ಲ. ಹೀಗಿರುವಲ್ಲಿ, ಶಂಬರನಿಗೆ ನನ್ನನ್ನು ಕೊಟ್ಟು ವಿವಾಹಮಾಡಬೇಕೆಂದು ಸುಮಿತ್ರನು ಪ್ರಯತ್ನ ಮಾಡಿದನು. ಈತನ ಪ್ರಯತ್ನಕ್ಕೆ ಪ್ರತಿಭಟಿಸುವುದಕ್ಕಿಂತ ದೇಹತ್ಯಾಗವನ್ನು ಮಾಡುವುದೇ ಉತ್ತಮವೆಂದು ನಿಷ್ಕರ್ಷೆ ಮಾಡಿ, ಈ ವಿಷವನ್ನು ತರಿಸಿಕೊಂಡೆನು. ನಿಶ್ಚಿತಾರ್ಥ ಕಾಲದಲ್ಲಿಯೇ ಈ ವಿಷವನ್ನು ತೆಗೆದುಕೊಳ್ಳಬೇಕೆಂದಿದ್ದೆನು. ಮಾಧವನ ಮರಣ ಸಮಾಚಾರ ಬಂದು ಈ ನಿಶ್ಚಿತಾರ್ಥೋತ್ಸವವು ನಿಂತುದುದರಿಂದಲೂ, ಮಾರನೆಯ ದಿವಸವೇ ನಿನ್ನ ದರ್ಶನ ಲಾಭವುಂಟಾಗಿ ಕ್ರಮಕ್ರಮವಾಗಿ ನೀನೇ ನನಗೆ ಅನು

ಅಧ್ಯಾಯ ೪

೩೯


ರೂಪನಾದ ಪತಿಯೆಂದು ಭಾವನೆಯುಂಟಾದುದರಿಂದಲೂ, ನನ್ನಿಂದ ಇದುವರೆಗೆ ದೇಹಧಾರಣೆ ಮಾಡಲ್ಪಟ್ಟಿತು. ನಾನು ಮನೋವಾಕ್ಕಾಯಗಳಿ೦ದಲೂ ನಿನ್ನನ್ನೇ ವರಿಸಿರುತ್ತೇನೆ. ನಿನಗಿದು ಸಮ್ಮತವಾದರೆ ನನ್ನ ಇಷ್ಟ ವನ್ನು ನೆರವೇರಿಸು; ಇಲ್ಲದಿದ್ದರೆ, ಬಲಾತ್ಕಾರದಿಂದ ಕಿತ್ತುಕೊಂಡಿರುವ ನನ್ನ ಶೋಕಪರಿಹಾರಕವಾದ ಈ ಸಿದ್ಧೌಷದವನ್ನು ಕೊಟ್ಟು ಇಲ್ಲಿಂದ ತೆರಳು.

ಪರಂತಪ-ನಿನ್ನ ಸ್ಥೈರ್ಯದಿಂದ ನಾನು ಜಿತನಾದೆನು. ಬಹು ಜನ್ಮ ಸುಕೃತಗಳಿಂದ ನಿನ್ನಂಥ ಗುಣವತಿಯರು ಲಭ್ಯರಾಗುವರು. ನೀನು ಈ ರೀತಿಯಲ್ಲಿ ನನ್ನನ್ನು ವರಿಸುವುದು ನನ್ನ ಭಾಗ್ಯಪರಿಪಾಕವೇ ಸರಿ. ಆದುದರಿಂದ ಈ ನಿಮಿಷ ಮೊದಲುಗೊಂಡು ನಾನು ನಿನ್ನ ಆಜ್ಞಾನುವರ್ತಿಯಾಗಿರುವೆನು. ಸುಮಿತ್ರ ಶಂಬರರಿಬ್ಬರಿಂದ ಉಂಟಾಗಿರುವ ಭಯವನ್ನು ಬಿಡು. ಈಗ ನಿನ್ನ ಅಭಿಮತವನ್ನು ಪ್ರದರ್ಶನಮಾಡಿ ಒಂದು ಕಾಗದವನ್ನು ಬರೆದು ಸುಮಿತ್ರನಿಗೆ ಕಳುಹಿಸಿ, ಈ ಪಟ್ಟಣದಲ್ಲಿ ನಿನಗೆ ಮಿತ್ರರಾದವರು ಯಾರಾದರೂ ಇದ್ದರೆ ಅವರ ಮನೆಯಲ್ಲಿ ಸ್ವಲ್ಪ ಕಾಲ ಅಜ್ಞಾತವಾಸ ಮಾಡಿಕೊ೦ಡಿರು. ನನಗೆ ಸುಮಿತ್ರನಿಂದ ಆಗಬೇಕಾದ ಕೆಲಸಗಳು ಕೆಲವಿವೆ. ಅವು ಗಳನ್ನು ಪೂರಯಿಸಿಕೊಂಡು, ನಾನು ನಿನ್ನ ವಿವಾಹಾರ್ಥವಾಗಿ ಬರುವೆನು.
<.p>

ಕಾಮಮೋಹಿನಿ-ಎಲೈ ಪೂಜ್ಯನೆ! ಆರ್ಯಕೀರ್ತಿಯೆಂಬ ನನ್ನ ಸ್ನೇಹಿತೆಯೊಬ್ಬಳು ಈ ಪಟ್ಟಣದಲ್ಲಿರುವಳು. ಈಕೆಗೆ ವೃದ್ಧರಾದ ತಂದೆ ತಾಯಿಗಳಿರುವರು. ಇವರು ಬಹಳ ಬಡವರು. ಅವರ ಮನೆಯಲ್ಲಿ ಅಜ್ಞಾತವಾಸ ಮಾಡುವುದು ಸುಲಭವೆಂದು ತೋರುತ್ತದೆ. ಅದು ಹಾಗಿರಲಿ : ಸುಮಿತ್ರನ ಮನೆಯಲ್ಲಿ ನಿನಗೇನು ಕೆಲಸ? ಅಲ್ಲಿದ್ದರೆ ನಿನಗೆ ಬಹು ವಿಪತ್ತುಗಳಿಗೆ ಅವಕಾಶವಾಗಬಹುದು. ನಾನು ನಿನ್ನ ಸಂಗಡ ಮಾತನಾಡುತಿದ್ದಾಗಲೆಲ್ಲ, ಶಂಬರನು ಬಹು ಸಂತಾಪಪಡುತ್ತ, ನಿನ್ನ ಮೇಲೆ ವಿಷವನ್ನು ಕಾರುತ್ತಿದ್ದನು. ನನ್ನ ಅಭಿಪ್ರಾಯವು ಅವನಿಗೆ ತಿಳಿದ ಕೂಡಲೆ, ನೀನು ಆ ಮನೆಯಲ್ಲಿದ್ದ ಪಕ್ಷದಲ್ಲಿ, ನಿನಗೆ ಅಪ್ರತಿಕಾರವಾದ ವಿಪತ್ತನ್ನು ಅವನುಂಟುಮಾಡಬಹುದು. ಆದುದರಿಂದ, ನನ್ನ ಈ ಅಭಿಪ್ರಾಯವು ಶಂಬರ ಸುಮಿತ್ರರಿಗೆ ತಿಳಿಯುವುದಕ್ಕೆ ಮುಂಚಿತವಾಗಿಯೇ ನಿನ್ನ ಕಾರ್ಯಗ

೪೦

ಪರಂತಪ ವಿಜಯ


ಳನ್ನು ಸಾಧಿಸಿಕೊಂಡು ಅವನು ಮಾಡುವ ಅನರ್ಥಪ್ರಯೋಗಗಳಿಗೆ ಗುರಿಯಾಗದಿರಬೇಕು.

ಪರಂತಪ-(ಸಾವಿರ ಪೌನುಗಳ ನೋಟನ್ನು ಕೊಟ್ಟು) ಈ ದ್ರವ್ಯವನ್ನು ಆರ್ಯಕೀರ್ತಿಯ ತಂದೆಗೆ ಕೊಡು. ಶೀಘ್ರವಾಗಿ ನಾನು ಬಂದು ಆತನಿಗೆ ಇನ್ನೂ ವಿಶೇಷವಾದ ಬಹುಮಾನಗಳನ್ನು ಮಾಡುವೆನು. ಶಂಬರ ಸುಮಿತ್ರರುಗಳಿಂದ ನಿನಗೆ ಯಾವ ಭಯ ಬಂದಾಗ್ಗೂ, ಅದನ್ನು ನಾನು ನಿಗ್ರಹಿಸಬಲ್ಲೆನು. ಮಾಧವನು ತನ್ನ ಆಸ್ತಿಯನ್ನೆಲ್ಲ ನನ್ನ ಹೆಸರಿಗೆ ಉಯಿಲ್ ಬರೆದು ಕಾಲಾಧೀನನಾದನು. ಈ ಆಸ್ತಿಯನ್ನೆಲ್ಲ ಸ್ವಾಧೀನ ಪಡಿಸಿಕೊಂಡು ಬರುತ್ತೇನೆ. ಕೂಡಲೆ ವಿವಾಹ ಪ್ರಯತ್ನವನ್ನು ಮಾಡೋಣ.

ಕಾಮಮೋಹಿನಿ - ಎಲೈ ಪರಂತಪನೆ ! ನಿನ್ನ ಮಾತುಗಳು ಬಹಳ ಭಯವನ್ನುಂಟುಮಾಡುತ್ತವೆ. ಮಾಧವನ ಐಶ್ವರ್ಯವು ಕುಬೇರನ ಐಶ್ವರ್ಯಕ್ಕೆ ಸಮಾನವಾದುದು. ಲೋಕದಲ್ಲಿ ಸಂಪತ್ತುಗಳು ವಿಪತ್ತುಗಳಡನೆ ಸೇರಿರುವುವು. ಶಂಬರನು ಮಾಧವನ ಆಸ್ತಿಗೆಲ್ಲ ತಾನೆ ಹಕ್ಕುದಾರನೆಂದು ತಿಳಿದುಕೊಂಡಿದ್ದಾನೆ. ಸುಮಿತ್ರನು ಇವನ ಪಕ್ಷವಾಗಿದ್ದಾನೆ. ಈ ದ್ರವ್ಯಕ್ಕೆ ನೀನು ಆಸೆಪಟ್ಟರೆ, ದುಸ್ಸಹವಾದ ಕಷ್ಟಕ್ಕೆ ಗುರಿಯಾಗುವೆ. ನಮಗೆ ದ್ರವ್ಯದ ಮೇಲಿನ ಆಸೆ ಬೇಡ. ಐಶ್ವರ್ಯಗಳು ಹೆಚ್ಚಿದಹಾಗೆಲ್ಲ ತಾಪತ್ರಯಗಳು ಹೆಚ್ಚುವುವು. ಐಶ್ವರ್ಯವಂತರಾಗಿರುವುದಕ್ಕಿಂತ, ದೇಹಶ್ರಮದಿಂದಲೂ ಬುದ್ಧಿ ಚಾತುರ್ಯದಿಂದಲೂ ಧರ್ಮಲೋಪವಿಲ್ಲದೆ ದೊರೆತಷ್ಟು ಸಂಪಾದಿಸಿಕೊಂಡು ಬಡವರಂತೆ ಜೀವಿಸಿಕೊಂಡಿರುವುದುತ್ತಮ. ಈ ಸಂಪತ್ತನ್ನೆಲ್ಲ ಶಂಬರ ನಿಗೆ ಬಿಟ್ಟು ಬಿಡು. ಈ ಸಂಪತ್ತಿನಿಂದ ಉಂಟಾಗತಕ್ಕ ಸೌಖ್ಯಕ್ಕಿಂತ ಹೆಚ್ಚಾದ ಸೌಖ್ಯವನ್ನು ನಾನು ನಿನಗೆ ಉಂಟುಮಾಡುವೆನು.

ಪರಂತಪ-ಈ ವುಯಿಲಿನ ಸಮಾಚಾರವನ್ನು ನಾನು ಸುಮಿತ್ರನಿಗೆ ಹೇಳಿದೆನು. ಆತನು ಈ ಆಸ್ತಿಯನ್ನೆಲ್ಲ ನನ್ನ ವಶ ಮಾಡುವುದಕ್ಕೆ ಒಪ್ಪಿ ಕೊಂಡಿದ್ದಾನೆ. ಶಂಬರನಿಂದ ನನಗೆ ಯಾವ ಭಯವೂ ಇಲ್ಲ. ಈ ಸಂಪತ್ತುಗಳನ್ನು ಸಾಧಿಸುವೆನು. ಹೀಗೆ ಸಾಧಿಸುವುದು, ದ್ರವ್ಯದ ಮೇಲಣ ಆಶೆಯಿಂದಲ್ಲ; ಮಾಧವನು ಉತ್ಕ್ರಮಣಕಾಲದಲ್ಲಿ ನನ್ನಿಂದ ಮಾಡಿಸಿ ಕೊಂಡಿರುವ ಕೆಲವು ಪ್ರತಿಜ್ಞೆಗಳಿಗೋಸ್ಕರ ಈ ಕೆಲಸವನ್ನು ಮಾಡಬೇ

ಅಧ್ಯಾಯ ೫

೪೧


ಕಾಗಿದೆ. ಈ ವಿಷಯದಲ್ಲಿ ಯಾವ ಅಪಾಯವೂ ಬರದಂತೆ ನೋಡಿಕೊಳ್ಳುತ್ತೇನೆ. ನೀನು ಯಾವುದಕ್ಕೂ ಭಯಪಡದೆ ಅಜ್ಞಾತವಾಸವನ್ನು ಮಾಡುತ್ತಿರು. ಸುಮಿತ್ರನು ಬರತಕ್ಕ ವೇಳೆಯಾಯಿತು. ಸಲ್ಲಾಪಕ್ಕೆ ವಿಶೇಷ ಕಾಲವಿಲ್ಲ. ನೀನು ಜಾಗ್ರತೆಯಾಗಿ ನಿನ್ನ ಆಪ್ತ ಸ್ನೇಹಿತಳ ಮನೆಯನ್ನು ಸೇರು.

ಕಾಮಮೋಹಿನಿ-ನಿನ್ನ ಆಜ್ಞೆಯಂತೆ ನಡೆಯುವೆನು. ದೇವರು ನಿನಗೆ ಏನೂ ವಿಪತ್ತು ಬರದಂತೆ ಕಾಪಾಡಲಿ.
  

ಎಂದು ಹೇಳಿ, ಕಾಮಮೋಹಿನಿಯು ಯಾರಿಗೂ ತಿಳಿಯದಂತೆ ಆರ್ಯಕೀರ್ತಿಯ ಮನೆಗೆ ಹೊರಟುಹೋದಳು. ಪರಂತಪನೂ ಸುಮಿತ್ರನ ಮನೆಗೆ ಹೊರಟುಹೋದನು.

ಅಧ್ಯಾಯ ೫.



  

ಈ ರೀತಿಯಲ್ಲಿ ಕಾಮಮೋಹಿನಿಯು ಸಾಕುತಂದೆಯ ಮನೆ ಯನ್ನು ಬಿಟ್ಟು ಹೊರಟುಹೋದ ದಿನವೇ, ಶಂಬರನಿಗೆ ಇವಳನ್ನು ಕೊಟ್ಟು ವಿವಾಹಮಾಡುವುದಾಗಿ ನಿಶ್ಚಿತಾರ್ಥವನ್ನು ಗೊತ್ತುಮಾಡಿ, ಅನೇಕ ಬಂಧುಮಿತ್ರರು ಗಳಿಗೆ ಲಗ್ನಪತ್ರಿಕೆಗಳು ಕಳುಹಿಸಲ್ಪಟ್ಟಿದ್ದವು. ಇವಳು ಹೊರಟುಹೋದ ಸ್ವಲ್ಪ ಹೊತ್ತಿನೊಳಗಾಗಿ, ಈ ಶುಭಕಾರ್ಯಕ್ಕೋಸ್ಕರ ಕರೆಯಲ್ಪಟ್ಟಿದ್ದ ಜನಗಳು ಒಬ್ಬೊಬ್ಬರಾಗಿ ಬರುವದಕ್ಕುಪಕ್ರಮವಾಯಿತು.

ಪರಂತಪನು, ಹೀಗೆ ಬರುವ ಅತಿಥಿಗಳನ್ನು ಎದುರುಗೊಳ್ಳುತ್ತ ಅವರೊಡನೆ ಮಾತನಾಡುತ್ತಿದ್ದನು. ಆಗತಾನೆ ಒಬ್ಬ ಜವಾನನು ಎರಡು ಕಾಗದಗಳನ್ನು ತಂದು ಸುಮಿತ್ರನ ಜವಾನನ ಕೈಯಲ್ಲಿ ಕೊಟ್ಟು ಹೊರಟು ಹೋದನು. ಪರಂತಪನು, ಆ ಮೇಲುವಿಲಾಸಗಳನ್ನು ದೂರದಿಂದಲೇ ನೋಡಿ ಇವು ಕಾಮಮೋಹಿನಿಯ ಕಾಗದಗಳು; ಇವುಗಳನ್ನು ನೋಡಿದ