ಪರತರ ಪರಮ ಸಮರಸಸ್ವರೂಪವಾದ ತಾರಕಬ್ರಹ್ಮವು ಅಂತರ್ಲಕ್ಷ್ಯವೆಂದು ಬಹಿರ್ಲಕ್ಷ್ಯವೆಂದು ಮಧ್ಯಲಕ್ಷ್ಯವೆಂದು ತ್ರಿವಿಧಮಪ್ಪುದು. ಅದರಲ್ಲಿ ಮೊದಲು ಅಂತರ್ಲಕ್ಷ್ಯವೆಂತೆನೆ : ಮೂಲಾಧಾರದಿಂದೆ ಬ್ರಹ್ಮರಂಧ್ರ ಪರಿಯಂತರಮಾಗಿ ಕೋಟಿಮಿಂಚುಗಳಿಗೆ ಸದೃಶವಾದ ಬಿಂದುವನು ಮನಸ್ಸಿನಿಂದ ಧ್ಯಾನಿಸುವುದು. ಮತ್ತಂ
ಗೋಲಾಟಮಂಡಲವೆನಿಸುವ ಲಲಾಟದುಪರಿಭಾಗದಲ್ಲಿ ಮಿನುಗುತಿರ್ದ ನಕ್ಷತ್ರಾಕಾರವನು ಮನಸ್ಸಿನಿಂದೆ ಸ್ಮರಿಸುವುದು. ಮತ್ತಂ
ಶ್ರವಣಂಗಳೆರಡನು ಬೆರಳಿನಿಂದೆ ಮಿಗಿಲಾಗಿ ಒತ್ತಲಾಗಿ ಕಪಾಲಕುಹರದಲ್ಲಿ ಘಮುಘಮುಧ್ವಾನಸ್ವರೂಪಮಾದ ಪ್ರಣವಘೋಷವನಾಲಿಪುದು. ಮತ್ತಂ
ಲೋಚನಂಗಳ ಮಧ್ಯದ ಕರಿಯ ನಕ್ಷತ್ರರೂಪಮಂ ಲಕ್ಷಿಪುದೇ ಅಂತರ್ಲಕ್ಷ್ಯವಯ್ಯಾ ಅಖಂಡೇಶ್ವರಾ.