ಪರಮಾರ್ಥವ ನುಡಿದು ಪರರ ಕೈಯಾಂತು ಬೇಡುವುದು ಕರಕಷ್ಟವಯ್ಯ. ಪುರಾತರಂತೆ ನುಡಿಯಲೇಕೆ? ಕಿರಾತರಂತೆ ನಡೆಯಲೇಕೆ? ಆಸೆಯಿಚ್ಛೆಗೆ ಲೇಸ ನುಡಿವಿರಿ. ಇಚ್ಛೆಯ ನುಡಿವುದು ಉಚ್ಚೆಯ ಕುಡಿವುದು ಸರಿ ಕಾಣಿರೋ. ಇಚ್ಛೆಯ ನುಡಿವನೆ ಶಿವಶರಣನು? ಮಾತಿನಲ್ಲಿ ಬೊಮ್ಮವ ನುಡಿದು ಮನದಲ್ಲಿ ಆಸೆಯ ಸೋನೆ ಕರೆವುತಿಪ್ಪುದು. ಈ ವೇಷವ ಕಂಡೆನಗೆ ಹೇಸಿಕೆಯಾಯಿತ್ತು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.