ಪರಿಮಿತಕೆ ನಡೆತಂದು ಪರುಷದ ಸಿಂಹಾಸನದ ಮೇಲೆ ಪರಮಗುರು ಮೂರ್ತಿಗೊಂಡಿರಲು
ಪರಮಾನಂದಜಲದಿಂದ ಪಾದಾರ್ಚನೆಯಂ ಮಾಡಿ
ದಿವ್ಯಸುಗಂಧಮಂ ಲೇಪಿಸಿ
ಅಕ್ಷಯವೆಂಬ ಅಕ್ಷತೆಯನಿಟ್ಟು
ಹೃದಯಕಮಲದ ಪುಷ್ಪದಿಂದ ಪೂಜೆಯ ಮಾಡಿ
ಸುಜ್ಞಾನವಾಸನೆಯೆಂಬ ಧೂಪಮಂ ಬೀಸಿ
ಭಕ್ತಿಸಾರಾಯವೆಂಬ ನೈವೇದ್ಯಮಂ ಸಮರ್ಪಿಸಿ
ಪರಮಹರುಷವನೆ ಹಸ್ತಮಜ್ಜನಕ್ಕೆರೆದು
ತ್ರಿಕರಣಶುದ್ಧವೆಂಬ ತಾಂಬೂಲಮಂ ಕೊಟ್ಟು
ಸಮರಸಸಂಗದಿಂದ ಕೂಡಲಸಂಗಮದೇವರ ಶರಣ ಪ್ರಭುದೇವರ ಕರುಣವೆನಗಾಯಿತ್ತು.