ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೯

ಈ ಪುಟವನ್ನು ಪ್ರಕಟಿಸಲಾಗಿದೆ
೨೫೮
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.


ಬೀರಬಲ-ಸರಕಾರ ? ನಾನು ಹೇಳಿದ ಸಂಖ್ಯೆಯು ಅಸತ್ಯವಾದದ್ದಲ್ಲ ನಿಜವಿರುತ್ತದೆ.

ಬಾದಶಹ-ನೀನು ಹೇಳಿದಸಂಖ್ಯೆಯಲ್ಲಿ ಒಂದು ನ್ಯೂನಾಧಿಕವಾಗಿ ಕಂಡುಬಂದರೆ ನಿನಗೆ ಹದಿನೈದುಸಾವಿರದ ಮುನ್ನೂರಾ ಅರವತ್ತು ರೂಪಾಯಿಗಳನ್ನು ದಂಡಮಾಡಲಾದೀತು ವಿಚಾರ ಮಾಡಿಕೊಂಡು ಹೇಳು ?

ಬೀರಬಲ-ನಾನು ಈಗ ಹೇಳಿದಗಣನೆಗೆ ಸರಿಯಾಗಿ ಕಾಗೆಗಳು ಇರುವದು ನಿಜವು; ನಾನು ಮಿಥ್ಯಾವಾದಿಯಲ್ಲ ನೀವು ಒಂದುವೇಳೆ ಲೆಕ್ಕಮಾಡಿ ನೋಡಲಾಗಿ ಒಂದೆರಡು ನ್ಯೂನಾಧಿಕವಾಗಿ ಕಂಡುಬಂದರೆ ಅದಕ್ಕೆ ನಾನು ಅಪರಾಧಿಯಾಗುವದಿಲ್ಲ, ಯಾಕಂದರೆ ನಾನು ಹೇಳಿದ ಸಂಖ್ಯೆಗಿಂತ ಹೆಚ್ಚು ಕಂಡುಬಂದರೆ ಪರಸ್ಥಳದಿಂದ ಬಂದಿರಬಹುದು; ಕಡಿಮೆಯಾಗಿ ತೋರಿದರೆ ಪರಸ್ಥಳಕ್ಕೆ ಹೋಗಿರಬಹುದು; ಯಾಕಂದರೆ- ಪಕ್ಷಿಗಳು ಪ್ರತಿದಿವಸ ಹೊರಗೆ ಹೋಗುವವು ಎಷ್ಟೋ ಇರುವವು. ಬರುವಂಥವು ಎಷ್ಟೋಇರುವವು. ಹೀಗೆ ಆದಲ್ಲಿ ನಾನೇನು ಮಾಡಬೇಕು ? ” ಎಂದನು. ಬೀರಬಲನ ಸಮಯೋಚಿತ ಉತ್ತರವನ್ನು ಕೇಳಿ ಬಾದಶಹನು ಸಂಭ್ರಮವನ್ನು ಹೊಂದಿದನು.

-(೧೫೦, ಅಂಧಕಾರ.)-

ಒಂದು ದಿವಸ ಬಾದಶಹನು. ಬೀರಬಲ್ಲ ! ಈ ಜಗತ್ತಿನಲ್ಲಿ ಎಲ್ಲರದೃಷ್ಟಿಗೂ ಗೋಚರವಾಗುವ ಒಂದು ವಸ್ತುವದೆ; ಆದರೆ ಅದು ಚಂದ್ರಮನ ನೇತ್ರಗಳಿಗೆ ಗೋಚರಿಸುವದಿಲ್ಲ; ಅಂಥ ಪದಾರ್ಥವು ಯಾವದು!" ಎಂದು ಪ್ರಶ್ನೆ ಮಾಡಿದನು.

ಬೀರಬಲ- "ಅಂಧಕಾರ"

-(೧೫೧. ರೇಷ್ಮೆಯು ಚಿಕ್ಕದಾಯಿತು.)-

ಒಂದುದಿವಸ ಬಾದಶಹನು ಒಂದು ಕಾಗದದ ಮೇಲೆ ಮಸಿಯಿಂದ ಒಂದು ರೇಖೆಯನ್ನು ಎಳೆದು ಬೀರಬಲನನ್ನು ಕುರಿತು - "ಈ ಕಾಗದವನ್ನು ಹರಿಯಬಾರದು, ರೇಖೆಯನ್ನು ಕೆಡಿಸಬಾರದು, ಹೀಗೆ ಮಾಡಿ ತೋರಿಸು" ಎಂದನು. ಆಕೂಡಲೆ ಬೀರಬಲನು ಲೆಕ್ಕಣಿಕೆಯನ್ನು ತೆಗೆದುಕೊಂಡು ಮೊದಲಿನ ರೇಖೆಯ ಹತ್ತರವೇ ಮತ್ತೊಂದನ್ನು ಸ್ವಲ್ಪ ಅಧಿಕವಾಗಿ ಎಳೆದು, "ಭೂಪಾಲ, ತಮ್ಮ ರೇಖೆಯು ಈಗ ಚಿಕ್ಕದಾಯಿತಲ್ಲವೇ" ಎಂದು ಕೇಳಿದನು. ಬಾದಶಹನು ಪ್ರಸನ್ನನಾದನು.