ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೫೩

ಈ ಪುಟವನ್ನು ಪರಿಶೀಲಿಸಲಾಗಿದೆ
೩೮೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.



ತನ್ನು ಕೇಳಿ ಬಾದಶಹನು ಲಜ್ಜಿತನಾದನು,

-(೨೩೯ ನನ್ನ ವಾದ್ಯವು ಪೃಥಕ್ಕಾಗಿ ನುಡಿಯುವದಿಲ್ಲ.)-

ಒಂದಾನೊಂದು ಸಮಯದಲ್ಲಿ ಬಾದಶಹನು ಬೀರಬಲನನ್ನು ಗಾಯನ ವಾದನ ಶಾಲೆಯ ಮುಖ್ಯಸ್ಥನನ್ನಾಗಿ ನಿಯಮಿಸಿದನು, ಆದರೆ ಆ ವಿದ್ಯೆಯಲ್ಲಿ ಬೀರಬಲನಿಗೆ ಕಿಂಚಿತ್ತಾದರೂ ಅಭಿರುಚಿಯಿಲ್ಲ. ಒಂದು ದಿವಸ ಗಾಯಕರ ಸಮ್ಮೇಳನವು ಆರಂಭವಾಯಿತು ಎಲ್ಲರೂ ಒಂದೊಂದು ವಾದ್ಯವನು ಬಾರಿಸಹತ್ತಿದರು, ಬೀರಬಲನು ಒಂದು ಹೊರಸಿನ ಕಾಲಿಗೆ ಬಟ್ಟೆಯನ್ನು ಸುತ್ತಿಕೊಂಡು ಬಂದು ಒಂದು ಕಟ್ಟಿಗೆಯಿಂದ ಬಾರಿಸಹತ್ತಿದನು, ಈ ಕೌತುಕವನ್ನು ಕಂಡು ಬಾದಶಹನು ಪ್ರತಿಯೊಬ್ಬನು ಪೃಥಕ್‌ ಪೃಥಕ್ಕಾಗಿ ಬಾರಿಸಿರಿ ! ಎಂದು ಅಪ್ಪಣೆಮಾಡಿದನು, ಎಲ್ಲರೂ ತಮ್ಮ ವಾದನಪಟುತ್ವವನ್ನು ಪ್ರಕಟಗೊಳಿಸಿದರು, ಬೀರಬಲನ ಸರದಿಯು ಬಂದಕೂಡಲೆ ಹುಜೂರ ನನ್ನ ವಾದ್ಯವು ಪೃಥಕ್ಕಾಗಿ ನುಡಿಯುವದಿಲ್ಲ ಎಂದು ಹೇಳಿದನು. ಆ ದಿನ ಮೊದಲ್ಗೊಂಡು ಬಾದಶಹನು ಆ ಅಧಿಕಾರದಿಂದ ಬೀರಬಲನನ್ನು ತಪ್ಪಿಸಿದನು.

- ೨೪೦, ವರ್ತಕನ ಚತುರನಾದ ಮಗನು. -

ಒಂದುದಿವಸ ಬಾದಶಹನು ಗಜಾರೋಹಣ ಮಾಡಿಕೊಂಡು ನಗರದಲ್ಲಿ ಸಂಚಾರಕ್ಕೆ ಹೊರಟಿದ್ದನು ಅವನನ್ನು ನೋಡಿ ಒಬ್ಬ ವರ್ತಕನ ಚಿಕ್ಕ ಮಗನು- ಎಲೋ, ಆನೆಯವನೇ ! ಆನೆಯನ್ನು ಕ್ರಯಕ್ಕೆ ಕೊಡುವಿಯಾ ಎಂದು ಕೇಳಿದನು ಆ ಅಜ್ಞಾನಿಯಾದ ಬಾಲಕನ ಕಥನವನ್ನು ಕೇಳಿ, ಬಾದಶಹನಿಗೆ ಕೋಪವು ಬಂತು ಆದರೂ ಅವನ ಸಹನಮಾಡಿಕೊಂಡು ಸುಮ್ಮನೆ ಹೊರಟು ಹೋದನು ಮರುದಿವಸ ಆ ಬಾಲಕನನ್ನು ಕರೆಯಿಸಿ - ಈ ದಿವಸ ಗಜವನ್ನು ಕ್ರಯಕ್ಕೆ ತೆಗೆದು ಕೊಳ್ಳುವಿಯಾ ? ಎಂದು ಕೇಳಿದನು ಆಗ ಅವನು ಕೈಜೋಡಿಸಿ ನಿಂತುಕೊಂಡು - ಖುದಾವುದ ! ಆ ವರ್ತಕನು ನಿನ್ನೆಯ ದಿವಸವೇ ಹೊರಟು ಹೋದನು ಎಂದು ಉತ್ತರ ಕೊಟ್ಟನು ಈ ಉತ್ತರದಿಂದ ಬಾದಶಹನು ಪ್ರಸನ್ನನಾದನು.

-( ೨೪೧. ಚತುರನಾದ ಚೌಬೆ. )-

ಒಂದುದಿವಸ ಬಾದಶಹನು ಬೀರಬಲನನ್ನು ಕುರಿತು ಮಧುರಾ ಪಟ್ಟಣದಲ್ಲಿಯ ಚೌವೇ ಜನರು, ಸಮಯೋಚಿತ ಉತ್ತರವನ್ನು ಕೊಡುವದರಲ್ಲಿ ಬಹು ಸಮರ್ಥರೆಂದು ಕೇಳಿದ್ದೇನೆ, ಅದರಿಂದ ಈ ಪಟ್ಟಣದಲ್ಲಿ ಯಾರಾದರೂ ಇದ್ದರೆ ನಾಳೆಯ ದಿವಸ ಓಲಗಕ್ಕೆ ಕರೆದುಕೊಂಡು ಬಾ ! ಎಂದು ಅಪ್ಪಣೆ ಮಾಡಿದನು ಅದರಂತೆ ಒಬ್ಬ ಮನುಷ್ಯನನ್ನು ಬೀರಬಲನು ಕರ