ಈ ಪುಟವನ್ನು ಪ್ರಕಟಿಸಲಾಗಿದೆ
VII
ಮಾಯಾವಿಯಾದ ಮಾಧವಿ

ವಳಗಿರಿಯೆಂದರೆ ಬಿಳಿಯ ಪರ್ವತವೆಂದರ್ಥ. ಸದಾಕಾಲವೂ ಹಿಮವು ಗಡ್ಡೆ ಕಟ್ಟಿಕೊಂಡಿರುವುದರಿಂದ ಅದಕ್ಕೆ ಆ ಹೆಸರು ಬಂತು. ಅಜಿತನು ಅಲ್ಲಿ ಮುಟ್ಟಿದಾಗ ಸಾಯಂಕಾಲವಾದುದರಿಂದ, ಅಶ್ವಿನೀ ದೇವತೆಗಳ ಎಲೆಮನೆಯನ್ನು ಹುಡುಕುವುದಕ್ಕಾಗಲಿಲ್ಲ. ಆದುದರಿಂದ ಕಾಡುಮೃಗಗಳ ಬಾಧೆ ಬಾರದಂತೆ ಆತನು ಒಂದು ಮರ ಹತ್ತಿ, ಕೊಂಬೆಗಳ ನಡುವೆ ಅವಿತುಕೊಂಡು, ಆ ರಾತ್ರಿಯನ್ನು ಕಳೆದನು.

ಬೆಳಗಾಗುತ್ತಲೇ ಅಶ್ವಿನೀದೇವತೆಗಳ ಪರ್ಣಶಾಲೆಯನ್ನು ಹುಡುಕಿ ತೆಗೆದು, ಅವರನ್ನು ಕಂಡು, ತನ್ನ ಸಂಗತಿಯನ್ನು ಹೇಳಿಕೊಂಡನು. ಅವರು ಸಂಕಲ್ಪ ಮಂತ್ರವನ್ನು ಉಚ್ಚರಿಸಿ, ತಮ್ಮ ಕಮಂಡಲೋದಕವನ್ನು ಈತನ ತಲೆಯ ಮೇಲೆ ಪ್ರೋಕ್ಷಿಸಿ, ಈತನನ್ನು ಆಕಾಶಗಂಗೆಯಲ್ಲಿ ಸ್ನಾನಮಾಡಿಸಿದರು. ಅನಂತರ ಅವರಿಂದ ಹಲವು ನೀತಿಕಥೆಗಳನ್ನು ಕೇಳುತಿದ್ದು, ಅವರು ಕೊಟ್ಟ ಗಡ್ಡೆಗೆಳಸುಗಳನ್ನು ತಿಂದು, ಅವರಿಗೆ ಸಾಷ್ಟಾಂಗವೆರಗಿ, ಅವರ ಆಶೀರ್ವಾದಗಳನ್ನು ಪಡೆದು, ಹೊತ್ತು ಇಳಿ ಯುವ ಮೊದಲೇ ನೆಟ್ಟಗೆ ಯವನದೇಶದ ಹಾದಿ ಹಿಡಿದು ಹೋದನು.

ಸ್ವಲ್ಪ ಮುಂದೆ ಹೋಗುತ್ತಲೇ ಸರಸ್ವತಿಯ ವಾಸಸ್ಥಾನವಾದ ಪರ್ವತವು ಕಾಣಿಸಿತು. ಅದರ ತಪ್ಪಲಲ್ಲಿಯೇ ಯವನದೇಶದ ರಾಜಧಾನಿ. ಹೊತ್ತು ಮುಳುಗುವುದಕ್ಕೆ ಸರಿಯಾಗಿ ಅಜಿತನು ಆ ಪಟ್ಟಣವನ್ನು ಸೇರಿದನು. ಜನರೆಲ್ಲರೂ ಆತನನ್ನು ಕಂಡು ಹರಸಿ ಕೊಂಡಾಡ ತೊಡಗಿದರು.