ಈ ಪುಟವನ್ನು ಪ್ರಕಟಿಸಲಾಗಿದೆ
ಅಜಿತ ಕುಮಾರ.
೩೯

ಆರಂಭವಾಯಿತು. ಎಲ್ಲರೂ ತಂತಮ್ಮ ಕತ್ತಿಗಳನ್ನು ಹಿರಿದುಕೊಂಡು, ಅಜಿತನನ್ನು ಕಡಿಯುವುದಕ್ಕೆ ಬಂದರು. ಎಂಥೆಂಥ ರಾಕ್ಷಸರನ್ನು ಕೊಂದುಹಾಕಿದ ಅಜಿತನಿಗೆ ಈ ಕುನ್ನಿಗಳೇನು ಲಕ್ಷ್ಯವೆ? "ಒಳ್ಳೆಯ ಮಾತಿನಿಂದ, ಸುಮ್ಮನೆ ಹೊರಟುಹೋಗಿರಿ ! ಕೈಮಾಡಿದಿರೆಂದರೆ ಎಲ್ಲರನ್ನೂ ಸಾಯಬಡಿಯುತ್ತೇನೆ !” ಎಂದು ಗದರಿಸಿದನು. ಆದರೂ ಅವರು ಕೇಳಲಿಲ್ಲ. ಎಲ್ಲರೂ ಒಟ್ಟಾಗಿ ಆತನ ಬಳಿಗೆ ಓಡಿ ಬಂದರು ; ಆದರೆ ಬಲು ಹತ್ತಿರ ಹೋಗುವಷ್ಟು ಧೈರ್ಯವಿರಲಿಲ್ಲ. ನಾಯಿಗಳು ಆನೆಮರಿಯನ್ನು ಕಂಡು ಬೊಗಳುತ್ತ ಹೇಗೆ ದೂರ ನಿಲ್ಲುತ್ತವೋ ಹಾಗೆಯೇ ಇವರು ಕೂಡ, ಬೆಲೆಬಾರದ ಮಾತುಗಳನ್ನು ಆಡುತ್ತ ದೂರ ನಿಂತುಕೊಂಡರು.

ತರುವಾಯ ಅವರಲ್ಲಿ ಒಬ್ಬನು ಬಿಚ್ಚು ಕತ್ತಿಯನ್ನು ಬೀಸಿದನು. ಅದು ಅಜಿತನ ತಲೆಯ ಹತ್ತಿರ ಸುಳಿಯಿತು. ಕೂಡಲೆ ಅಜಿತನೂ ಹೊಡೆಯ ಹತ್ತಿದನು. ಇಪ್ಪತ್ತು ಮಂದಿಗಳ ಇದಿರಿಗೆ ಒಬ್ಬ ! ಆದರೂ ಎಲ್ಲರನ್ನೂ ಕೆಡವಿಬಿಟ್ಟನು. ಕೆಲವರು ಅಲ್ಲಿಯೇ ಹೆಣವಾದರು. ಕೆಲ ವರು ಜೀವದಿಂದ ಉಳಿದರೆ ಸಾಕೆಂದು ಓಡಿಹೋದರು. ಊರವರು ಅವರನ್ನು ಬೆಂಬತ್ತಿ ಹೋಗಿ, ಪಟ್ಟಣದಿಂದ ಗಡಿಪಾರು ಮಾಡಿಬಿಟ್ಟರು. ಈಗ ಚಾವಡಿಯ ಮೇಲೆ ತಂದೆ ಮತ್ತು ಮಗ, ಇಬ್ಬರೇ ಉಳಿದರು. ಅಷ್ಟರಲ್ಲಿ ಊರುಗರು ಬಂದು, ತಮ್ಮ ದೊರೆಗೆ ಮಗನೂ ತಮಗೆ ಯುವರಾಜನೂ ಸಿಕ್ಕಿದನೆಂಬ ಆನಂದದಿಂದ ನೃತ್ಯಗೀತ ಮೊದಲಾದ ವಿನೋದಗಳಿಂದ ಕಾಲಕಳೆದರು.

ಅಜಿತನು ಮಳೆಗಾಲವೆಲ್ಲ ತಂದೆಯೊಡನೆ ಸುಖವಾಗಿದ್ದನು. ಚಳಿಗಾಲ ಕಳೆದು ವಸಂತಕಾಲ ಬರುವ ಸಮಯಕ್ಕೆ, ಅದುವರೆಗೂ ಅರಳಿದ್ದ ಯವನರ ಮುಖವು ಬಾಡಿಹೋಯಿತು. ಎಲ್ಲಿ ನೋಡಿದರೂ ಸಾವಿನ ಮನೆಯಂತೆ ಅಳಲು ಕವಿದಿತ್ತು. ಇದಕ್ಕೇನು ಕಾರಣವೆಂದು ಯಾರೊಡನೆ ಕೇಳಿದರೂ ಯಾರೂ ಹೇಳಲೊಲ್ಲರು.