ಭೀತಿಯನ್ನು ನಿವಾರಿಸಿದ ಹೊರತು ನಾನು ಹಿಂದಿರುಗಲೊಲ್ಲೆನು !” ಎಂದು ಖಂಡಿತವಾಗಿ ಹೇಳಿಬಿಟ್ಟನು.
ಆಗ ಅರಿಂದಮೆಯು “ಆದರೆ, ಅದನ್ನು ಹೇಗೆ ಕೊಲ್ಲ ಬಲ್ಲೆ?” ಎಂದು ಕೇಳಿದಳು.
ಅದಕ್ಕೆ ಅಜಿತನು “ಹೇಗೆಂದು ನಾನರಿಯೆ. ಆದರೆ ನನ್ನಿಂದಲೂ ಅದು ಬಲಶಾಲಿಯನ್ನಬೇಕಾದರೆ ವಿಚಿತ್ರ ಪ್ರಾಣಿಯಾಗಿರಬೇಕು” ಎಂದನು.
ಇದನ್ನು ಕೇಳಿದೊಡನೆಯೆ ಆಕೆಯ ಪ್ರೀತಿಯು ಮತ್ತಷ್ಟು ಹೆಚ್ಚಾಯಿತು. ಆಗಲಿ ! ಅದನ್ನು ನೀನು ಕೊಂದೆ ಎಂತಲೇ ಹೇಳೋಣ ; ಆ ಮೇಲೆ ಕೋಟೆಯಿಂದ ಹೊರಗೆ ಹೇಗೆ ಬರುವೆ ?” ಎಂದು ಕೇಳಿದಳು.
"ಅದೊಂದೂ ನನಗೆ ತಿಳಿಯದು, ಆದರೆ ಆ ಮೃಗದ ಮಾಂಸವನ್ನು ತಿಂದು ಮುಗಿಯುವ ತನಕವೂ ನನಗೆ ಹಾದಿ ಕಂಡುಹಿಡಿಯುವುದಕ್ಕೆ ಆಗದೆ ಹೋದರೆ, ಅದು ಬಹು ಅದ್ಭುತ ಕೋಟೆಯಾಗಿರಬೇಕು” ಎಂದು ಹೇಳಿದನು.
ಇದನ್ನು ಕೇಳಿಯಂತೂ ಆಕೆಗುಂಟಾದ ಅನುರಾಗವು ಅಷ್ಟಿಷ್ಟಲ್ಲ. "ವೀರನೆ, ಹಾಗಲ್ಲ, ನಾನೆಷ್ಟಾದರೂ ಅಬಲೆ ; ಆದರೂ ನಿನಗೆ ಸ್ವಲ್ಪ ಸಹಾಯ ಮಾಡಬಲ್ಲೆ. ಇದೆ, ಈ ಕತ್ತಿಯಿಂದ ಅದನ್ನು ಕೊಲ್ಲಬಹುದು; ಈ ನೂಲಿನ ಉಂಡೆಯಿಂದ ಹಾದಿಯನ್ನು ಕಂಡುಹಿಡಿಯಬಹುದು. ಆದರೆ, ನೀನು ಸುರಕ್ಷಿತವಾಗಿ ಬಂದರೆ, ನನ್ನನ್ನು ಕೂಡಯವನ ದೇಶಕ್ಕೆ ಕರೆದುಕೊಂಡು ಹೋಗುವೆಯಾಗಿ ಮಾತು ಕೊಡಬೇಕು, ನಾನು ಮಾಡಿರುವುದೆಲ್ಲ ನನ್ನ ತಂದೆಗೆ ತಿಳಿಯಿತೆಂದರೆ ನಿಜವಾಗಿಯೂ ನಾನು ಬದುಕುವ ಆಸೆ ಇಲ್ಲ ” ಎಂದು ಹೇಳಿ ಕತ್ತಿಯನ್ನೂ ನೂಲನ್ನೂ ಅಜಿತನಿಗೆ ಕೊಟ್ಟಳು.