ಈ ಪುಟವನ್ನು ಪ್ರಕಟಿಸಲಾಗಿದೆ

ವಿಜಯಿ ಆದರೆ

೬೫

ನಾನೂ "ಆಗಲಿ !" ಎಂದಷ್ಟೇ ಹೇಳಿ, ಒಳಗೆ ನಡೆದೆ.

+ + + +

ಆ ದಿನದ ವೆಂಕಪ್ಪನನ್ನು ನಾನು ಮರೆಯಲಾರೆ. ಆ ದಿನವನ್ನು, ಅವನೂ ಮರೆಯಲಾರ. ಅದು ಲಿಂಗಣ್ಣನ ಪತ್ರ ಮೊದಲನೆಯ ಬಾರಿಗೆ ಬಂದ ದಿವಸ.
ಅಕ್ಕನ ಮಗ ನಾಯಿ ಮರಿಯೊಡನೆ ಆಡುತ್ತಿದ್ದುದನ್ನು ನಾನು ನೋಡುತ್ತಾ ಆನ೦ದಿಸುತ್ತಿದ್ದೆ. ವೆಂಕಟಪ್ಪ ಓಡುತ್ತಾ ಬಂದ. ಕೈಯಲ್ಲಿ ಒಡೆದ ಲಕೋಟೆಯಿತ್ತು.
"ಲಿಂಗನ ಕಾಗ್ದ" ಎಂದ. ಅವನ ಮುಖದಲ್ಲಿ ವರ್ಣಿಸಲು ಅಸಾಧ್ಯವಾದ ಸಂತುಷ್ಟಿ ತುಂಬಿ ತುಳುಕಾಡುತ್ತಿತ್ತು. ಉದ್ದದ ಅವನ ಮೀಸೆ ಹಾರಾಡುತ್ತಿತ್ತು. ಉದುರದೆ ಉಳಿದಿದ್ದ ಹಲ್ಲುಗಳು ಹೊರ ಕಾಣುತ್ತಿದ್ದುವು. ಸುಕ್ಕುಗಟ್ಟಿ ಜೋಲು ಬಿದ್ದಿದ್ದ ಮುದುಕನ ಮೋರೆ, ಅವನ ಆ ನಗುವಿಗೆ ವಿಲಕ್ಷಣ ಕಳೆ ಕೊಡುತ್ತಿತ್ತು. ದಫೇದಾರನಾಗಿದ್ದಾಗ ಇದ್ದ ದರ್ಪದ ಒಂದಿಷ್ಟು ಕುರುಹೂ ಈಗ ಅವನಲ್ಲಿ ಇರಲಿಲ್ಲ. ವೆಂಕಪ್ಪನ ಪರಿಚಿತರಿಗೆ ಅವನೊಬ್ಬ ಹೊಸ ಮನುಷ್ಯನೇ ಆಗಿದ್ದ.
ನನ್ನ ಬಳಿಗೆ ಬಂದುದನ್ನು ನೋಡಿದಾಗ, ಕಾಗದ ಇಂಗ್ಲಿಷಿನಲ್ಲಿಯೇನೋ ಎಂದುಕೊಂಡೆ. ಆದರೆ ಹಾಗೇನೊ ಇರಲಿಲ್ಲ. ತಾನೊಮ್ಮೆ ಓದಿದ್ದನಾದರೂ, ಉಳಿದವರೂ ಓದಲಿ ಎಂಬ ಅಭಿಲಾಷೆ ಅವನಿಗೆ. ನಾನು ಮನಸ್ಸಿನಲ್ಲೇ ಓದಿದೆ. ಅವನ ಅಪೇಕ್ಷೆಯಂತೆ, ಪುನಃ ಗಟ್ಟಿಯಾಗಿ ಓದಿದೆ. ನಡುನಡುವೆ, ಆತುರದಿಂದ ಹೊಂಗುಟ್ಟುತ್ತಲೇ ಇದ್ದ ವೆಂಕಟ್ಟಪ್ಪ. ಲಿಂಗಣ್ಣ ಪುಣೆಗೆ ಸಃಖವಾಗಿಯೇ ತಲುಪಿದನಂತೆ............ಅವನನ್ನು "ರಿಕ್ರೂಟ್" ಮಾಡಿಕೊಂಡರಂತೆ........ಅವನ "ಬಿಲ್ಡ್"(ಶರೀರ ದಾರ್ಢ್ಯತೆಯ ಕಟ್ಟು) ನೋಡಿ ಮೇಜರಿಗೆ ಸಂತೋಷವಾಯಿತಂತೆ........
ಮುದುಕನ ಕಡೆಗೆ ನೋಡಿದೆ. ಆತ ಕಣ್ಣುಗಳನ್ನು ಅರೆಮುಚ್ಚಿ, ಇಹವನ್ನು ಮರೆತವರಂತೆ, ಭಾವನಾ ಪ್ರಪಂಚದಲ್ಲಿ ಸುತ್ತುತ್ತಿದ್ದವರಂತೆ ಇದ್ದ.
ಇದ್ದೊಬ್ಬನೇ ಮಗ ಲಿಂಗಣ್ಣ! ತನ್ನ ಪುತ್ರವಾತ್ಸಲ್ಯವನ್ನು ಮುದುಕ ತಂದೆ ಬೇರೆ ಹೇಗೆ ಪ್ರದರ್ಶಿಸಬಲ್ಲ?