ಈ ಪುಟವನ್ನು ಪರಿಶೀಲಿಸಲಾಗಿದೆ

xiv

ಕಾರ್ಯಗಳು ಅದ್ಭುತ. ಈ ಮಹಾಕಥನಗಳು ನಿರಾಯಾಸವಾಗಿ ಆಯಾಯಾ ಸಮುದಾಯಗಳ/ಜನಾಂಗಗಳ ಇತಿಹಾಸ, ಧಾರ್ಮಿಕ-ನೈತಿಕ ಸಂಹಿತೆ, ಸಾಂಸ್ಕೃತಿಕ ದಾಖಲೆ ಮತ್ತು ಶೃಂಗಾರ-ವೀರ-ಕರುಣಾದಿ ರಸಗಳನ್ನೊಳಗೊಳ್ಳುವ ಸಾಹಿತ್ಯಕ ಕಥನಗಳು ಇವೆಲ್ಲವೂಆಗುತ್ತದೆ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಇವುಗಳ ನಿರೂಪಣಾ ಧಾಟಿ ದೇವದೇವತೆಗಳ ಮಹತ್ಕಾರ್ಯಗಳಾಗಲಿ ಅವರ ನಡುವಿನ ಕ್ಷುಲ್ಲಕ ಕಲಹಗಳಾಗಲಿ, ಅತಿ ಮಾನವರ ಸಾಹಸ ಕೃತ್ಯಗಳಾಗಲಿ ಹುಲುಮಾನವರ ಹಾಸ್ಯಾಸ್ಪದ ದೌರ್ಬಲ್ಯಗಳಾಗಲಿ, ಮಾನವ ಜಗತ್ತಿನ ನೋವು-ನಲಿವುಗಳಾಗಲಿ, ಪ್ರಾಣಿ-ಕ್ರಿಮಿ-ಕೀಟಗಳ ಕಷ್ಟ-ಕಾರ್ಪಣ್ಯಗಳಾಗಲಿ, ಒಂದೇ ಸಮಾನ ಧಾಟಿ ಯಲ್ಲಿ ಈ ಕಾವ್ಯಗಳ ನಿರೂಪಣೆ ಪ್ರಾರಂಭದಿಂದ ಮುಕ್ತಾಯದವರೆಗೂ ಸಾಗುತ್ತದೆ. ವಿಶ್ವಸೃಷ್ಟಿಯಿಂದ ಪ್ರಾರಂಭವಾಗುವ ಈ ಕಾವ್ಯಗಳ ಆಕೃತಿ ಮುಕ್ತವಾಗಿರುತ್ತದೆ; ಪೀಳಿಗೆಯಿಂದ ಪೀಳಿಗೆಗೆ, ಗಾಯಕನಿಂದ ಗಾಯಕನಿಗೆ, ಈ ಕಾವ್ಯಗಳು ಬೆಳೆಯುತ್ತವೆ, ಬದಲಾಗುತ್ತವೆ. ಕುಂವೀ ಅವರ 'ಅರಮನೆ' ಕಾದಂಬರಿಯ ಮಾದರಿ ಈ ಬಗೆಯ ಮೌಖಿಕ ಮಹಾಕಾವ್ಯಗಳು. ಆ ಕಾರಣದಿಂದಲೇ ಅವರು ತಮ್ಮ ಕೃತಿಯನ್ನು "ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಕಥಾನಕ" ಎಂದು ನಿರ್ದೇಶಿಸುತ್ತಾರೆ.

ಆಕೃತಿ, ಧಾಟಿ-ಶೈಲಿ ಇವುಗಳ ನೆಲೆಯಲ್ಲಿ ಈ ಕೃತಿಯ ಮಾದರಿ ಮೌಖಿಕ ಮಹಾಕಾವ್ಯಗಳು, ಮತ್ತು ಈ ಆಯ್ಕೆ ಪ್ರಜ್ಞಾಪೂರ್ವಕ ಎಂಬುದು ಪ್ರಾಸಂಗಿಕವಾಗಿ ಅಲ್ಲಲ್ಲಿ ಈ ಕಾದಂಬರಿಯಲ್ಲಿ ಬರುವ ವಿವರಣೆ-ವ್ಯಾಖ್ಯಾನಗಳಿಂದ ಸ್ಪಷ್ಟವಾಗುತ್ತದೆ. ಒಂದು ಸಂದರ್ಭದಲ್ಲಿ ನಿರೂಪಕ-ಕಥನಕಾರ ಹೀಗೆ ಚಿಂತಿಸುತ್ತಾನೆ. “..ಯಿದ್ದದ್ದು ಯಿದ್ದಂಗ ಹೇಳಿದರ ಕೇಳುಗರನೆಲ್ಲಿಂದ ತರೋದು? ಮಾತಂದರ ಮಾಮೂಲಿ ಮಾತೇನ? ದಯವಕ್ಕ, ಅಲವುಕಿಕಕ್ಕ, ಆಸ್ತೀಕಕ್ಕೆ ಸಂಬಂಧಿಸಿದ್ದಯ್ತೆ; ಮಾತಿಗೆ ಬೆಲೆ ಬರೋದು ವಾಸ್ತವವನ್ನು ಮೆಟ್ಟಿದಾಗ ಮಾತ್ರ. ಆಗ ಮಾತ್ರ ಕಣ್ಣು ಮುಚ್ಚಿ ನೋಡಲಿಕ್ಕಾಯ್ತದ. ಕಿವಿ ಮುಚ್ಚಿ ಕೇಳಲಿಕ್ಕಾಯ್ತದ.. ಮೂಗಿನ ಹಂಗು ತೊರೆದು ವಾಸಣೆ ಹಿಡೀಲಿಕ್ಕಾಯ್ತದ.. ವರ್ತಮಾನದ ರೇಜಿಗೆಯಿಂದ ದೂರ ವುಳಿದು ಲೋಕಸಂಚಾರ ಮಾಡಲಕ್ಕಾಯ್ತದ..” (ಪುಟ ೪೩೬)

ಅರಮನೆ ಎಂಬ ಈ ಬೃಹತ್ಕಥನ ಒಂದು ಕಾಲಘಟ್ಟದಲ್ಲಿದ್ದ ಗ್ರಾಮೀಣ ಭಾರತದ ಚಾರಿತ್ರಿಕ -ಧಾರ್ಮಿಕ-ಸಾಂಸ್ಕೃತಿಕ-ಸಾಹಿತ್ಯಕ ಆಯಾಮಗಳನ್ನು ವಸ್ತುನಿಷ«ವಾಗಿ ಆದರೆ ಆತ್ಮೀಯವಾಗಿ ಕಟ್ಟಿ ಕೊಡುತ್ತದೆ. ಈ ಕಾಲಘಟ್ಟ ಯಾವುದೆಂಬುದು ಕಥನದ ಮೊದಲನೆಯ ವಾಕ್ಯದಲ್ಲಿಯೇ ಗುರುತಿಸಲ್ಪಡುತ್ತದೆ: