ಈ ಪುಟವನ್ನು ಪ್ರಕಟಿಸಲಾಗಿದೆ

ಅರಮನೆ

೧೯೩


ಅತ್ತ ಕೂಡ್ಲಿಗಿ ಪಟ್ಟಣದೊಳಗ ಜರುಗುತಲಿದ್ದ ವರ್ತಮಾನಗಳು
ಮನೆಗೊಂದೊಂದರಂತೆ ಯಿದ್ದವು ಸಿವನೇ.. ತಮ್ಮನ್ನು ಯಾಕ ಮಾಫು
ಮಾಡಬೇಕೆಂದರೆ... ಯಂಬಂಥ ವಕ್ಕಣಿಕೆಗಳುಳ್ಳ ಮನವಿ ಸುರುಳಿಗಳನು
ಹಿಡಕೊಂಡು ಅಮ್ಮನಕೇರಿ, ಗೋಲ್ರಟ್ಟಿ, ಸಾಲಟಿಗಿ, ಜಮ್ಮೋಬನಹಳ್ಳಿ, ಮಾರಲ
ಮಡಕಿಯೇ ಮೊದಲಾದ ಗ್ರಾಮಗಳ ರಾಜರುಗಳು ಯಡ್ಡವರ್ಡನನ್ನು
ಕಾಣಲೋಸುಗ ಧರುಮಛತ್ರಗಳಲ್ಲಿ ಬೀಡುಬಿಟ್ಟಿದ್ದರು. ಆ ಸೀಮೆಯೊಳಗಂಥ
ಯಿದ್ಯಮಾನವು ಯೀ ಸೀಮೆ ವಳಗ ಯಿಂಥ ಯಿದ್ಯಾಮಾನವು ಯಂದು
ಪ್ರವಾಸ ಮುಗಿಸಿ ಸಜೀವವಾಗಿ ವಾಪಾಸು ಬಂದಿದ್ದಂಥವರು ಹತ್ತಾರು ಮಂದಿ
ಕುತೂಹಲಿಗರ ನಡುವೆ ಆಕರ್ಸಕರಾಗಿದ್ದರು. ತ್ರಾಣಯಿದ್ದವರ ಸುದ್ದಿ ಕೇಳುತ
ನಿತ್ರಾಣಗೊಂಡಂಥವರು ತಾವು ಬಲಶಾಲಿಗಳಾದೆವೆಂದು ಭ್ರಮಿಸುತಲಿದ್ದರು
ಹಲವು ಕಡೇಕ.. ಅವಧೂತೆಯ ಪಟ್ಟಕ್ಕೆ ಮೂರೇ ಮೂರು ಮಯ್ಲಿ ದೂರ
ಯಿದ್ದ ಜೆನ್ನಿಫರಮ್ಮ ಅಪ್ಪಟ ಸಸ್ಯಾಹಾರಿಯಾಗಿದ್ದ ಜೆನ್ನಿಫರಮ್ಮ ವುಂಡು
ವುಪಾಸಿಣಿಯಂತಿದ್ದ ಜೆನ್ನಿಫರಮ್ಮ ಬಳಸಿ ಬೊಮ್ಮಚಾರಿಣಿಯಂತಿದ್ದ ಜೆನ್ನಿಫರಮ್ಮ
ಬಂಗಲೆಯಿಂದ ಆಗೊಮ್ಮೆ ಹೀಗೊಮ್ಮೆ ಹೊರಬಂದು ಮಂದಿಗೆ ಸೋಭಾಯ
ಮಾನವಾಗಿ ಕಾಣಿಸಿಕೊಳ್ಳು ತಲಿದ್ದಳು. ಸದರಿ ಪಟ್ಟಣದೊಳಗ ಯಾದೇ ಮದುವೆ,
ಮುಂಜಿ, ಮರಣ ಸೂತಕಯಿರಲಿ.. ಅಲ್ಲಿಗೆ ತಾನು ಮಾಮೂಲು ಮನುಷ್ಯಳಂಗೆ
ಹೋಗಿ ಭಾಗವಹಿಸಿ ರೋಮಾಂಚನ ವನ್ನುಂಟು ಮಾಡುತಲಿದ್ದಳು. ಆಕೆಯ
ಅನುಪಮ ಹಾಜರಾತಿಗೆಂದೇ ಕೆಲವರು ತಮ್ಮ ತಮ್ಮ ಮನೆಯೊಳಗ ವಂದಲ್ಲಾ
ವಂದು ಸುಭ ಕಾರೈವನ್ನು ಹಮ್ಮಿಕೊಳ್ಳುತಲಿದ್ದುದೂವುಂಟು. ವಂದು ಪಕ್ಷ
ಆಕೆ ಬರಲಿಲ್ಲಂದರ ಯಾರೊಬ್ಬರು ಬ್ಯಾಸರ ಮಾಡಿಕೊಳ್ಳು ತಲಿರಲಿಲ್ಲ.
ಮದುಮಕ್ಕಳು ತಾವೇ ಬಂಗಲೆಗೆ ಹೋಗಿ ಆಕೆಯಿಂದ ಆಸೀರುವಾದ, ಸಣಪುಟ್ಟ
ಕಾಣಿಕೆ ಪಡೆಯುತಲಿದ್ದರು. ಬಾಣಂತಿಯರು ಅಲ್ಲಿಗೆ ಹೋಗಿ ತಮ್ಮ
ಕೂಸುಗಳನ್ನಾ ತಾಯಿಗೆ ತೋರಿಸಿ ಆಸೀರುವಾದ ಪಡೆಯುತಲಿದ್ದರು. ಹಿಂಗಾಗಿ
ತನ್ನ ಪತ್ನಿಯಿಂದಾಗಿ ತಮ್ಮ ಪ್ರತಿಷಿ«ತ ನಿವಾಸವು ಬಂಗಲೆತನ ಕಳಕೊಂಡು
ಚಾವಡಿ ರೂಪ ಪಡೆಯುತ್ತಿರುವುದಲ್ಲಾ ಯಂದು ಲಯಸನ ಮಾಡುತ ಯಡ್ಡವರನು
ಸುಮ್ಮಕ ಕಮ್ಮಿಕಟ್ಟಿ ಕೂಕಂಡಿಯಿರಲಿಲ್ಲ... ನೀವು ಸೂಕ್ಷ್ಮ ಮನಸ್ತತ್ವವುಳ್ಳ ನಿಮ್ಮ
ಪತ್ನಿಯನ್ನು ಕುದುರೆಡವಿಗೆ ಕರಕೊಂಡಯ್ಯಬಾರದಿತ್ತು. ಅಲ್ಲಿನ ಘನಘೋರ
ದ್ರುಸ್ಯಗಳನ್ನು ನೋಡಿದ ಪರಿಣಾಮವಾಗಿ ಆ ತಾಯಿಯನ್ನು ವಯರಾಗ್ಯವು