ಈ ಪುಟವನ್ನು ಪರಿಶೀಲಿಸಲಾಗಿದೆ

xxvi

ಎಂದು ಭಾವಿಸಿ ಪುನಃ ಪುನಃ ಬರೆದಿದ್ದೇನೆ. ಈ ನಡುವೆ ಕೇಂದ್ರಸಾಹಿತ್ಯ
ಅಕಾಡೆಮಿಯ ಬೆಂಗಳೂರಿನ ಪ್ರಾದೇಶಿಕ ಕಾರ್ಯದರ್ಶಿಯವರೂ, ಆತ್ಮೀಯರೂ
ಆದಂಥ ಅಗ್ರಹಾರ ಕೃಷ್ಣಮೂರ್ತಿಯವರು ಕಥೆ ವಾಚನ ಮಾಡುವ ಸಲುವಾಗಿ
ನನ್ನನ್ನು ಕರೆಯಿಸಿಕೊಂಡರು. ನಾನು ಸದರಿ ಕಾದಂಬರಿಯ ಆರಂಭಿಕ ಪುಟಗಳನ್ನು
ವಾಚಿಸಿದೆನು. ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರು ಆ ಭಾಗವನ್ನು
ಇಂಗ್ಲಿಷಿಗೆ ಅನುವಾದಿಸಿದ್ದೂ ಅಲ್ಲದೆ ಅದ್ಭುತ ರೀತಿಯಲ್ಲಿ ಪ್ರೆಜೆಂಟೂ ಮಾಡಿದರು.
ತದನಂತರ ಉಪಸ್ಥಿತರಿದ್ದ ಕನ್ನಡದ ಪ್ರಸಿದ್ದ ಲೇಖಕರಲ್ಲದೆ ಭಾರತೀಯ ಲೇಖಕರು
ಹರ್ಷಿಸಿ ನನ್ನನ್ನು ಅಭಿನಂದಿಸಿದರು. ಅದರಿಂದ ನಾನು ಸಾಕಷ್ಟು
ಉತ್ತೇಜಿತನಾದೆನು. ಅದಾದ ಬಳಿಕ ನಾನೀ ಕಾದಂಬರಿಯನ್ನು ಮೂರು ಸಲ
(ಅಂದರೆ ಹದಿನೈದು ನೂರು ಪುಟಗಳನ್ನು) ಬರೆದಿರಬಹುದು. ಬರೆದ
ಸಲಕ್ಕೊಂದೊಂದು ರೀತಿಯೊಳಗೆ ಕಾದಂಬರಿ ಹೊಸ ಆಕಾರ ಪಡೆಯುತ್ತ
ಹೋಯಿತು. ಬರೆಯುವ ಕ್ರಿಯೆಯಿಂದಾಗಿ ದೈಹಿಕ ಆರೋಗ್ಯ ಕೆಡಿಸಿಕೊಂಡರೂ
ಮಾನಸಿಕವಾಗಿ, ಬೌದ್ಧಿಕಾಗಿ ಮತ್ತು ಭಾಷಿಕವಾಗಿ ಹೆಚ್ಚು ಲಾಭ ಮಾಡಿಕೊಂಡೆನು.
ಇನ್ನೇನು ಫೈನಲೈಜಾಯಿತೆಂದು ಭಾವಿಸಿ ಡಿಟಿಪಿ ಮಾಡಿಸಿದೆನು. ಏಳುನೂರು
ಪುಟ ದಾಟಿತ್ತು. ಮುನ್ನುಡಿ ಬರೆಸುವ ಸಲುವಾಗಿ ಓದಿದ
ಡಾ.ಸಿ.ಎನ್.ರಾಮಚಂದ್ರನ್‌ರವರು ಕಾದಂಬರಿಯ ಆಶಯ ಬದಲಿಸುವಂತೆ
ಸೂಚಿಸಿದರು. ಹಾಗೆಯೇ ಡಾ.ಹೆಚ್.ಎಸ್.ರಾಘವೇಂದ್ರರಾವ್ ಅವರೂ ಕೂಲಂಕಷ
ಓದಿ, ಮೆಚ್ಚಿ ಎಡಿಟ್ ಮಾಡಿಕೊಟ್ಟರು. ಈ ಇಬ್ಬರು ಬಹುಶ್ರುತ ವಿದ್ವಾಂಸರ
ಅಮೂಲ್ಯ ಸಲಹೆಯಂತೆ ಮತ್ತೆ ಕೆಲ ತಿಂಗಳುಗಳ ಕಾಲ ಕೂತು ಪುನಃ ಬರೆದೆನು.
ಹದಿನೈದಿಪ್ಪತ್ತು ವರ್ಷಗಳಿಂದ ನಾನು ಬರೆದ/ನನ್ನಿಂದ ಬರೆಯಿಸಿಕೊಂಡ
ಕಾದಂಬರಿ ಅರಮನೆ ಈಗ ನಿಮ್ಮ ಕೈಯೊಳಗಿದೆ. ಇನ್ನೂ ಎರಡನೂರು
ಪುಟಗಳಷ್ಟಿದ್ದ ಕಥಾನಕವನ್ನು ಬಿಟ್ಟಿದ್ದೇನೆ. ಅದಕ್ಕೆ ಕಾರಣಗಳು ತಮಗೂ
ಗೊತ್ತಿರುವವೆ. ಓದುವ ಅಭಿರುಚಿ ಕಡಿಮೆಯಾಗಿರುವುದು ಒಂದು ಕಾರಣವಾದರೆ
ಇನ್ನೊಂದು ಕಾರಣವೆಂದರೆ ಹೆಬ್ಬೊತ್ತಿಗೆಗಳನ್ನು ತಲೆದಿಂಬಿಗೆ ಪರ್ಯಾಯವಾಗಿ
ಉಪಯೋಗಿಸ ಲಾಗುತ್ತಿದೆ ಎಂಬ ಧ್ವನಿಪೂರ್ಣ ಆರೋಪವನ್ನು ಮಿತ್ರಅಗ್ರಹಾರ
ಲಿಖಿತಪೂರ್ವಕವಾಗಿ ಮಾಡಿರುವರು. ಆದ್ದರಿಂದ ಸದರಿ ಕೃತಿಯನ್ನು ಎಷ್ಟು
ಸಾಧ್ಯಮೋ ಅಷ್ಟು ಹ್ರಸ್ವಗೊಳಿಸಿರುವೆನು. ಇದನ್ನು ಎಷ್ಟು ಸಾಧ್ಯಮೋ ಅಷ್ಟು
ಸುಂದರವಾಗಿ ವಿನ್ಯಾಸಗೊಳಿಸಲು ಪ್ರಯತ್ನಿಸಿರುವೆನು. ಕಾದಂಬರಿಯೊಳಗಿನ ಭಾಷೆ
ಬಳ್ಳಾರಿ ಜಿಲ್ಲೆಯ ಗಡಿ ಅಂಚಿನಲ್ಲಿ ಹರಿಯುತ್ತಿರುವ ವೇದಾವತಿಯ ಇಕ್ಕೆಲದ