ಈ ಪುಟವನ್ನು ಪರಿಶೀಲಿಸಲಾಗಿದೆ

೨೫೬

ಅರಮನೆ


ಮೂಲಕ ಗುರಿ ತಲುಪುವದಷ್ಟೇ ತನ್ನ ಕರ್ತವ್ಯ.. ರಕ್ತತರ್ಪಣ, ತಲ್ಲಣಗಳ ನಡುವೆ
ತನ್ನ ಸರಕಾರ ಮುಂದಡಿ ಯಿರಿಸುತ್ತ ನಡೆಯಬೇಕಿರುವುದು ಅನಿವಾರ್ಯ. ಸಯ್ನಿಕ
ಸಾಯಪದ್ಧತಿಯ ಕಬಂಧಬಾಹೊಳಗೆ ಬಂಧಿತನಾದಂಥ ಬನಗಾನಪಲ್ಲಿಯ
ನವಾಬ ತನ್ನ ಅಧೀನದ ಯೀ ನಾಲ್ಕೂ ಪರಗಣ ಪ್ರಾಂತಗಳನ್ನು ಕುಂಪಣಿ
ಸರಕಾರದ ಸುಪರ್ದಿಗೆ ವಪ್ಪಿಸುವಾಗ ನಿವೇದಿಸಿಕೊಂಡಿದ್ದಂಥ ಮಾತುಗಳನ್ನು
ಕ್ಯಾಂಪ್‌ಬೆಲ್ ಕಣ್ಣಿಗೆ ಕಟ್ಟುವಂತೆ ಹೇಳಿದ್ದು ತನಗಿನ್ನೂ ನೆನಪಿರುವುದು.
ಸತಮಾನಗಳಿಂದ ಪಾಳ್ಳೇಗಾರಿಕೆ ಪ್ರಬಲಗೊಂಡಿರುವ ಸದರಿ ಪ್ರದೇಶದ ಆಡಳಿತ
ಸುಲಭವಲ್ಲವೆಂದೂ, ಸದರೀ ಯಿಸ್ತಾರವಾದ ಭೂಪ್ರದೇಸದೊಳಗ ಯಿನ್ನೂರಕ್ಕೂ
ಮಿಕ್ಕು ಪಾಳೇಗಾಂಡ್ಲು ಯಿರುವರೆಂದೂ, ಅವರನ್ನು ಬಗ್ಗುಬಡಿಯಲು ಸಮರ್ಥ
ಅಧಿಕಾರಿಯ ಜರೂರತ್ತು ಯಿರುವುದೆಂದೂ.. ಯಿತ್ಯಾದಿ.. ಯಿತ್ಯಾದಿ..
ಶ್ರೀರಂಗಪಟ್ಟಣದ ಯುದ್ಧದಿಂದ ಬೇಸತ್ತಿದ್ದ ತನಗೆ ಬಡ್ತಿ ನೀಡಿ
ವರ್ಗಾವಣೆಗೊಂಡಂಥ ದತ್ತಮಂಡಲದ ಜಿಲ್ಲೆಗಳಿಗೆ ಕಲೆಟ್ಟರನನ್ನಾಗಿ ಸರಕಾರ
ನೇಮಕ ಮಾಡಿದ್ದು ಹಳೆಯ ಯಿಚಾರ. ಕುಂಪಣಿ ಸರಕಾರದ ಸಾಮ್ರಾಜ್ಯಶಾಹಿ
ದಾಹಕ್ಕೆ ವಂದೊಂದು ಪ್ರದೇಸವನ್ನು ಬಗ್ಗುಬಡಿದು ಬಲಿಕೊಡುವುದೇ ತನ್ನ
ಕರ್ತವ್ಯ.. ಅದನ್ನು ತಾನು ಕಾಯಾ-ವಾಚಾ-ಮನಸಾ ನಿರ್ವಹಣೆ ಮಾಡುತ್ತ
ಬಂದಿರುವುದಂತೂ ನಿಜ.. ದಿನಕ್ಕೊಂದು ಸಲವಾದರೂ ಯೇಸು
ಪ್ರಭುವಿನದುರು ಮಂಡೆಯೂರಿ ಪಾಪ ನಿವೇದನೆ ಮಾಡಿಕೊಂಡು
ಹಗರಾಗುತ್ತಿರುವುದೂ ನಿಜ.. ತನ್ನ ಅಧಿಕಾರಾವಧಿಯಲ್ಲಿ ಯಾವುದು
ನಡೆಯಕೂಡದೆಂದು ಅಂದುಕೊಳ್ಳುವೆನೋ ಮತ ಮತ್ತೆ ಅದೇ
ಘಟಿಸುತ್ತಿರುವುದಲ್ಲಾ... ತಾನು ಗಂಜಿಹಳ್ಳಿ ಸುಂಕಿರೆಡ್ಡಿ, ಪೆಸಲದಿನ್ನೆ ನಾರಪ್ಪರಂಥ
ಮಿತ್ರದ್ರೋಹಿಗಳ ಮಾತು ಕೇಳಬಾರದಿತ್ತು.. ಮುತುಕೂರು ಗವುಡಪ್ಪನ ಆರ್ಥಿಕ
ಪರಿಸ್ಥಿತಿಯನ್ನು ಹಾಳುಗೆಡುವಲು ಕಂದಾಯದ ಹೊರೆಯನ್ನು ದ್ವಿಗುಣ
ಗೊಳಿಸಬಾರದಿತ್ತು. ಅದರಲ್ಲಿ ತಪ್ಪೇನುಂಟು? ಕುಂಪಣಿ ಸರಕಾರದ ಬೊಕ್ಕಸದ
ಯೋಗಕ್ಷೇಮದ ಹೊಣೆ ತನ್ನಂಥ ಅಧಿಕಾರಿಗಳನ್ನು ತಾನೆ?
ಅತ್ತ ಸಂತಮುನುಸೋಬಯ್ಯನೆಂದೇ ಗುಂತಕಲ್ಲು ಪಟ್ಟಣದೊಳಗ
ಜನಾದರಣವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಲೇಯಿದ್ದ ಡಿಸೆಕ್ಕನು
ಜಮೀಂದಾರು ಗೆಲುವರೆಡ್ಡಿ ವುದಾರವಾಗಿ ನೀಡಿದ್ದ ಆರೆಕರೆ ಜೆಗೇವಳಗ
ಮಿಷನರಿ ಸಂಬಂಧೀ ಕಟ್ಟಡಗಳನ್ನು ವಂದೊಂದಾಗಿ ಯಬ್ಬಿಸುವುದರಲ್ಲಿ