ಈ ಪುಟವನ್ನು ಪ್ರಕಟಿಸಲಾಗಿದೆ

ii

ಘಟ್ಟಗಳ ಅಡ್ಡಗೋಡೆಯ ಹಿಂದೆ ಇದ್ದ ವರ ದೃಷ್ಟಿಗೆ ಬೀಳದಿದ್ದುದು ಆಶ್ಚರ್ಯವಲ್ಲ! ಆದರೂ ಈ ಕಥೆಗಳು ಈ ಶತಮಾನದ ಆದಿಯಲ್ಲಿಯೇ ಅಚ್ಚಾಗುತ್ತಿದ್ದ "ಸುವಾಸಿನಿ" ಮಾಸ ಪತ್ರಿಕೆಯಲ್ಲಿ ಬೆಳಕನ್ನು ಕಂಡುವು. ಕಾರಣಾಂತರದಿಂದ ಅವುಗಳ ಆಸ್ತಿಕ್ಯದ ಮರವೆಯಾಗಿದ್ದರೂ, ಶ್ರೀಮಾನ್ ಪಂಜೆ ಮಂಗೇಶರಾಯರ ಈ ಐತಿಹಾಸಿಕ ಕಥೆಗಳು ಕರ್ಣಾಟಕದ ಜನರಲ್ಲಿ ವಿಶೇಷವಾದ ಮನೋರಂಜನೆಯನ್ನು ಮಾಡಿವೆ. ಇವರ ಹಾಸ್ಯಗರ್ಭಿತವಾದ “ಭಾರತ ಶ್ರವಣ" “ನನ್ನ ಚಿಕ್ಕಪ್ಪ” “ನನ್ನ ಚಿಕ್ಕ ತಾಯಿ” “ನನ್ನ ಹೆಂಡತಿ" ಮುಂತಾದ ಹಲವು ಕಥೆಗಳ ವಾಚಕರಲ್ಲಿ ತುಂಬ ವಿನೋದವನ್ನು ಹುಟ್ಟಿಸುತ್ತಿದ್ದುವು. ಇವನ್ನೆಲ್ಲ ಗ್ರಂಥರೂಪವಾಗಿ, ಒಮ್ಮೆ ಪ್ರಕಟಿಸ ಬೇಕೆಂದು ಆಸೆಯು ನಮ್ಮಲ್ಲಿ ಎಂದೋ ಮೂಡಿತ್ತು. ಆದರೆ ವಿನಯಪರರಾದ ಶ್ರೀಮಾನ್ ಮಂಗೇಶರಾಯರು ಇದಕ್ಕೆಲ್ಲ ಸಮ್ಮತಿಸದೆ “ಬೇಡ ಬೇಡ”ವೆಂದೇ ನಮ್ಮ ಕೈತಡೆದರು. ಆದ್ದರಿಂದ ಈ ಮೊದಲೇ ಇದನ್ನು ಪ್ರಕಟಿಸಲಾಗಲಿಲ್ಲ. ಸಾಹಿತ್ಯ ಸಮ್ಮೇಲನದ ಅಧ್ಯಕ್ಷರಾಗಿ ಶ್ರೀಮಾನ್ ಪಂಜೆ ಮಂಗೇಶರಾಯರು ಆರಿಸಲ್ಪಟ್ಟ ಕಾಲದಲ್ಲಿಯಾದರೂ ಈ ಕಥೆಗಳನ್ನು ಪ್ರಕಟಿಸಬೇಕೆಂದು ನಮ್ಮಲ್ಲಿ ಇನ್ನೊಮ್ಮೆ ಉತ್ಸಾಹವು ತಲೆದೋರಿತು. ಆದರೆ 'ಸುವಾಸಿನಿ'ಯ ಹಳೆಯ ಸಂಚಿಕೆಗಳು ದೊರಕುವುದೇ ಕಷ್ಟವಾದುದರಿಂದ, ಇವನ್ನು ಪ್ರಕಟಿಸುವುದಕ್ಕೆ ಇಷ್ಟು ವಿಳಂಬವಾಯಿತು. ಆದರೆ ಈಗಲೂ ಇದನ್ನು ಪ್ರಕಟಿಸಲಿಕ್ಕೆ ಶ್ರೀ| ಮಂಗೇಶರಾಯರು ಒಪ್ಪಲಾರರು ಎಂಬ ಸಂದೇಹ ಬಂದುದರಿಂದ, ಅವರ ಅಪ್ಪಣೆ ಕೇಳದೆಯೇ ಪ್ರಕಟಿಸಿದ್ದಕ್ಕಾಗಿ ಅವರ ಕ್ಷಮಾಪಣೆಯನ್ನು ಬೇಡುತ್ತೇವೆ.

ಕನ್ನಡಿಗರ ಯಥೋಚಿತ ಪ್ರೋತ್ಸಾಹದೊಂದಿಗೆ, ಶ್ರೀಮಾನ್ ಪಂಜೆಯವರ “ಸುವಾಸಿನಿ”ಯ ಇತರ ಕಥೆಗಳನ್ನೂ ಪ್ರಕಟಿಸಬೇಕೆಂಬ ಉದ್ದೇಶವಿದೆ, ಕನ್ನಡಿಗರು ನೆರವಾಗಲಿ.