ಈ ಪುಟವನ್ನು ಪರಿಶೀಲಿಸಲಾಗಿದೆ

ಮುನ್ನುಡಿ

ಪುಸ್ತಕಗಳಿಗೆ ಮುನ್ನುಡಿ ಯಾಕೆ ? ಪುಸ್ತಕ ಬರೆದು ಪ್ರಕಟಿಸುವ ಕಷ್ಟ ತೆಗೆದುಕೊಂಡವನೇ ಮುನ್ನುಡಿ ಬರೆದರೆ ಅದೊಂದು ರೀತಿ. ಅವನು ತಾನು ಪಟ್ಟ ಪಾಡನ್ನು ತೋಡಿಕೊಳ್ಳುವುದಕ್ಕೆ ಅದೊಂದು ಸಾಧನ ಅಂದುಕೊಳ್ಳಬಹುದು. ಆದರೆ ಪಾಡುಪಡದವನೊಬ್ಬನಿಂದ ಮುನ್ನುಡಿ ಬರೆಸುವುದು ಏನು ಸೊಗಸು ? ಮದುವೆಗಳಲ್ಲಿ ಮದುವಣಗಿತ್ತಿಯನ್ನು ಮಂಟಪಕ್ಕೆ ಕರೆತರುವ ಸೋದರಮಾವನ ಪಾತ್ರ ಮುನ್ನುಡಿಕಾರನದ್ದೇ ? ಅಥವಾ ತಂಪು ಪಾನೀಯಗಳನ್ನು ಈಗೀಗ ಎಳನೀರನ್ನು ಕೂಡ ಕುಡಿಯುವುದಕ್ಕೆ ಒದಗಿಸುವ ಹುಲ್ಲು ನಳಿಗೆಯ ಹಾಗೆ ಪುಸ್ತಕಕ್ಕೊಂದು ಮುನ್ನುಡಿಯೇ ?

ನಾನು ಕೇಳುವ ಅನೇಕ ಪ್ರಶ್ನೆಗಳಿಗೆ ನನಗೇ ಉತ್ತರ ಗೊತ್ತಿಲ್ಲದಿರುವ ಹಾಗೆ ಈ ಪ್ರಶ್ನೆಗಳಿಗೂ ಉತ್ತರ ನಾನರಿಯೆ. ಆದರೂ ನನ್ನ ಮಿತ್ರ ಜಿ. ಟಿ. ನಾರಾಯಣರಾಯರು ಕೇಳಿಕೊಂಡೊಡನೆ ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಒಪ್ಪಿಕೊಂಡೆ. ವಯಸ್ಸಾಗಿ, ಹೂರಣವುಳ್ಳ ಬರವಣಿಗೆಯ ಶಕ್ತಿ ಕಳೆದುಕೊಂಡವರಿಗೆ ತಾವಿನ್ನೂ ಜೀವಂತರಾಗಿದ್ದೇವೆಂದು ತಮಗೇ ಖಾತ್ರಿ ಮಾಡಿಕೊಳ್ಳುವುದಕ್ಕೆ ಮುನ್ನುಡಿ ಬರೆಯುವ ಸಂದರ್ಭ ಸಿಕ್ಕಿದರೆ ಅದು ಸುವರ್ಣ ಸಂದರ್ಭ ! ಜಿಟಿಯವರು ಈ ಸದಾಶಯದಿಂದ ನನ್ನನ್ನು ಮುನ್ನುಡಿಕಾರನ ಪಟ್ಟಕ್ಕೇರಿಸಿಲ್ಲವೆಂದು ನಾನು ಆಶಿಸುತ್ತೇನೆ.

ಹಾಗಿದ್ದರೂ ಪರವಾ ಇಲ್ಲ. ಈ ಪುಸ್ತಕವನ್ನು ಪ್ರಕಟನಪೂರ್ವದಲ್ಲಿ ಓದುವ ಸಂದರ್ಭ ದೊರೆತದ್ದು ನನಗೆ ಸಂತೋಷ ತಂದಿದೆ. ನಾನೂರು ಪುಟಗಳ ಈ ಬೃಹದ್ಗ್ರಂಥಕ್ಕಾಗಿ ಲೇಖಕರು ತುಂಬಾ ದುಡಿದಿದ್ದಾರೆಂಬುದು ಸ್ಪಷ್ಟವೇ ಇದೆ. ಕನ್ನಡದಲ್ಲಿ ಹಲವು ವಿಜ್ಞಾನ ಲೇಖನ, ಪುಸ್ತಕಗಳ ಕರ್ತರವರು. ಚೊಕ್ಕ ಕೆಲಸ ಮಾಡುವವರು. ಪರಿಣಾಮವಾಗಿ ಈ ಶತಮಾನದ ಅತ್ಯಂತ ಪ್ರಭಾವೀ ವಿಜ್ಞಾನಿಯ ಜೀವನವನ್ನು ಕುರಿತು ಅರಿಯಬೇಕಾದದ್ದನ್ನೆಲ್ಲ ಒಳಗೊಂಡ ಒಂದು ಗ್ರಂಥವನ್ನು ಕನ್ನಡದಲ್ಲಿ ಕಾಣುತ್ತಿದ್ದೇವೆ.

ಐನ್‌ಸ್ಟೈನರು ಪ್ರಪಂಚದಲ್ಲಿ ಬಹಳ ಅಪರೂಪವಾಗಿ 'ಅವತರಿಸುವ' ಪ್ರಚಂಡ ಬುದ್ದಿಯ ವಿಜ್ಞಾನಿಗಳಲ್ಲಿ ಒಬ್ಬರು, ಬಹುಶಃ ಐದು ಅಥವಾ ಹತ್ತು ಶತಮಾನಗಳಿಗೊಮ್ಮೆ, ಪಡುವಣ ದೇಶಗಳಲ್ಲಿ ಅರಸಿದರೆ ಕ್ರಿಸ್ತಪೂರ್ವದ ಆರ್ಕಿಮಿಡೀಸ್, ಮೂರು ಚಿಲ್ಲರೆ ಶತಮಾನಗಳ ಹಿಂದೆ ಹುಟ್ಟಿದ ನ್ಯೂಟನ್ ನಿಶ್ಚಿತವಾಗಿಯೂ ಈ ವರ್ಗದಲ್ಲಿ ಸೇರುತ್ತಾರೆ. ಜಿಟಿಯವರು ಎಲ್ಲ ವಿಜ್ಞಾನಗಳ ಅಂತಿಮ ಆಶಯವಾದ ಗಣಿತಶಾಸ್ತ್ರದಲ್ಲಿ ಶೂನ್ಯವನ್ನು ಕಂಡುಹಿಡಿದ ಭಾರತೀಯನನ್ನು ಈ ವರ್ಗದಲ್ಲಿ ಉಮೇದ್ವಾರನನ್ನಾಗಿ ನಿಲ್ಲಿಸಿರುವಂತಿದೆ. ದುರ್ದೈವದಿಂದ ಅವನು ಯಾರೋ ನಮಗೆ ತಿಳಿಯದಿದ್ದರೂ 'ಶೂನ್ಯ ಸಂಪಾದನೆ ಮಾಡಿದವನ ಆವಿಷ್ಕರಣದಿಂದ ಆದ ಕ್ರಾಂತಿ ಪರಮಾಣು- ಚ್ಛೇದನದಂಥ ತತ್‌ಕ್ಷಣದ ಪರಿಣಾಮವನ್ನು ತಾರದಿದ್ದರೂ ಮನುಷ್ಯನ ಊಹನೆ ಭಾವನೆಗಳ ಪರಿಮಾಣಾತ್ಮಕ ಅಭಿವ್ಯಂಜನೆಯನ್ನು ನಂಬಲಾರದಷ್ಟು ಸರಳಗೊಳಿಸಿದ ಆ ಅಜ್ಞಾತ ಮಹಾನು ಭಾವನನ್ನು ಪ್ರಪಂಚದ ಪ್ರಥಮ ವರ್ಗದ ಮಿದುಳುಗಳಲ್ಲಿ ಗಣಿಸಬೇಕಾದೀತು. ಇಟೆಲಿಯ ಲಿಯೊನಾರ್ಡೊ ಡ ವಿಂಚಿಯನ್ನು ಈ ಸಾಲಿನಲ್ಲಿ ಹೆಸರಿಸುವ ಚಪಲ ಬರುತ್ತದೆ. ಆದರೆ ಆತನ ಮಿದುಳು ಆರ್ಕಿಮಿಡೀಸ್‌ ಅಥವಾ ನ್ಯೂಟನ್ನನವುಗಳಿಗಿಂತ ಭಿನ್ನ ಸ್ವರೂಪದ್ದೋ ಅನಿಸುತ್ತದೆ. ಅಥವಾ ಅವನು ಕಾಲ ತಪ್ಪಿ, ನೂರಿನ್ನೂರು ವರ್ಷ ಮುಂಚಿತವಾಗಿ ಹುಟ್ಟಿ ಕೆಟ್ಟನೋ ಏನೋ! ಮಾನವೇತಿಹಾಸದಲ್ಲಿ ಕಾಲ ದೇಶ ತಪ್ಪಿ ಹುಟ್ಟುವುದು, ಸಕಾಲಕ್ಕೆ ಮುಂಚೆ ದಾರ್ಶನಿಕ ವೈಜ್ಞಾನಿಕ