ನನ್ನ ನುಡಿ
“ವಿಜ್ಞಾನರಂಗದಲ್ಲಿ ತಮ್ಮ ಹೆಸರುಗಳನ್ನು ಶಾಶ್ವತಗೊಳಿಸಿರುವ ಈ ಯುಗದ ಇತರ ಮಹಾವಿಜ್ಞಾನಿಗಳ ಕೊಡುಗೆಗಳನ್ನು ಎಳ್ಳಷ್ಟೂ ಕಡೆಗಣಿಸದೆ ಬೇರೆ ಯಾರನ್ನು ಕುರಿತೂ ಹೇಳ ಲಾಗದ ಒಂದು ಮಾತನ್ನು ಐನ್‌ಸ್ಟೈನರ ವಿಚಾರವಾಗಿ ಧೈರ್ಯದಿಂದ ಹೇಳಬಹುದು. ಇವರ ಮಾನಸಿಕ ಸಂರಚನೆಯಲ್ಲಿದ್ದ ಏನೋ ಒಂದು ವಿಶೇಷತೆ ಇವರ ವ್ಯಕ್ತಿತ್ವಕ್ಕೆ ಎಣೆ ಇಲ್ಲದ ಮೆರುಗು ಪೂಸಿತ್ತು. ಅಳಿಸಲಾಗದ ಶಾಯಿಯಿಂದ ಇವರು ತಮ್ಮ ಹೆಸರನ್ನು ವಿಜ್ಞಾನೇತಿಹಾಸದ ಪುಟಗಳಲ್ಲಿ ದಾಖಲಿಸಿದ್ದಾರೆ. ಪ್ರಪಂಚದಲ್ಲಿ ಮಾನವ ಉಳಿದಿರುವ ತನಕವೂ ಈ ದಾಖಲೆ ಮಸಕಾಗದು. ಅಲುಗಿಸಲಾಗದಂಥ ವಿಶಿಷ್ಟಸಿದ್ಧಿ ಇವರ ಆವಿಷ್ಕಾರಗಳಲ್ಲಿ ಕಂಡುಬರುತ್ತದೆ. ಸಿದ್ಧಾಂತಗಳು ಆಗಮಿಸುತ್ತವೆ, ಸಿದ್ದಾಂತಗಳು ನಿರ್ಗಮಿಸುತ್ತವೆ. ಐನ್‌ಸ್ಟೈನ್ ಆದರೋ ಸಿದ್ಧಾಂತಗಳನ್ನು ರೂಪಿಸುವುದಕ್ಕಿಂತ ಹೆಚ್ಚಿನದನ್ನು ಸಾಧಿಸಿದರು. ಇವರು ವಿಶ್ವದ ಮೌನಸ್ವನ ಗಳನ್ನು ಪರಮಶ್ರದ್ಧೆಯಿಂದ ಆಲಿಸಿ ಅವು ಬಿತ್ತರಿಸುವ ಸಂದೇಶವನ್ನು ಅಚ್ಚಳಿಯದ ಖಚಿತತೆ ಯಿಂದ ಬರೆದಿಟ್ಟರು. ಭೌತಸನ್ನಿವೇಶವೊಂದನ್ನು ಆವರಿಸಿರುವ ವಿವರಗಳಿಂದ ಇನಿತೂ ವಿಚಲಿತ ರಾಗದೆ ಅದರ ತಳದಲ್ಲಿ ಹುದುಗಿರುವ ತತ್ತ್ವವನ್ನು ಪತ್ತೆಹಚ್ಚಿ ಸಮಸ್ಯೆಯ ತಿರುಳಿಗೇ ನೇರ ಹುಗಬಲ್ಲ ಇವರ ಚಿಂತನೆಯ ಧಾಟಿ ಬೆರಗುಗೊಳಿಸುವಂತಿತ್ತು. ಇವರೆಂದೂ ಮೇಲುನೋಟ ದಿಂದ ಮೋಸ ಹೋಗುತ್ತಿರಲಿಲ್ಲ. ಹೀಗಾಗಿ ಇವರ ತೀರ್ಮಾನಗಳು ನಿರಾಕರಿಸಲಾಗದ ಪರಿ ಪೂರ್ಣತೆಯಿಂದ ಕೂಡಿರುವಂಥವು ಎಂಬುದಾಗಿ ಅಂಗೀಕೃತವಾಗಿವೆ. “[ತಂದೆಯವರನ್ನು ಕುರಿತಂತೆ] ನನ್ನ ಮೊದಲ ನೆನಪಿದು. ಆಗ ನನಗೆ ಸುಮಾರು ಮೂರು, ಪ್ರಾಯಶಃ ನಾಲ್ಕು, ವರ್ಷ ವಯಸ್ಸು ಆಗಿದ್ದಿರಬಹುದು. ಅವರು ಬೆಂಕಿಪೆಟ್ಟಿಗೆಗಳಿಂದ ನನಗೊಂದು ಕೇಬಲ್ ಕಾರ್ ತಯಾರಿಸಿಕೊಟ್ಟಿದ್ದರು. ಆ ದಿನಗಳಲ್ಲಿ ನನ್ನ ಬಳಿ ಇದ್ದ ಆಟಿಗೆಗಳ ಪೈಕಿ ಅದೊಂದು ಉತ್ಕೃಷ್ಟವಾದುದಾಗಿತ್ತೆಂದು ನನ್ನ ನಂಬಿಕೆ. ಆ ಕಾರ್ ಓಡುತ್ತಿತ್ತು ! ಒಂದಿಷ್ಟು ದಾರ, ಹಲಕೆಲವು ಬೆಂಕಿಪೆಟ್ಟಿಗೆಗಳು ಮತ್ತು ಇತರ ಕೆಲವು ತುಣುಕುಗಳನ್ನು ಕಲೆಹಾಕಿ ಅತ್ಯಂತ ಸುಂದರ ವಸ್ತುಗಳನ್ನು ಅವರು ನಿರ್ಮಿಸಬಲ್ಲವರಾಗಿದ್ದರು. ನಿಜಕ್ಕೂ ಈ ತೆರನಾಗಿ ವಸ್ತುಗಳನ್ನು ರೂಪಿಸುವುದು ಅವರಿಗೆ ಪ್ರಿಯವಾದ ಹವ್ಯಾಸವಾಗಿತ್ತು. ಹಾಗೆ ಹೇಳುವುದಾದರೆ ತಮ್ಮ ಕೃತಿ ಗಳಲ್ಲಿ ಕೂಡ ಅವರು ಇದೇ ಮನೋಧರ್ಮವನ್ನು ಪ್ರದರ್ಶಿಸುತ್ತಿದ್ದರು. ಉದಾಹರಣೆಗೆ, ಭಾಷಣ ಮಾಡಬೇಕಾಗಿ ಬಂದಾಗ ನಿಷ್ಕೃಷ್ಟವಾಗಿ ತಾವೇನು ಹೇಳಬೇಕೆಂಬುದರ ಬಗ್ಗೆ ಪೂರ್ವ ಭಾವಿಯಾಗಿ ಅವರಿಗೇನೂ ತಿಳಿದಿರುತ್ತಿರಲಿಲ್ಲ. ತಾವು ಹೇಗೆ ಮಾತಾಡಬೇಕು, ನಿರೂಪಣೆ ಎಷ್ಟು ವಿವರವಾಗಿರಬೇಕು ಮುಂತಾದವನ್ನು ತಮ್ಮ ಮೇಲೆ ಸಭಾಸದರು ಬೀರಿದ ಪ್ರಭಾವವನ್ನು ಅನುಸರಿಸಿ ಸಭೆಯಲ್ಲೇ ನಿರ್ಧರಿಸುತ್ತಿದ್ದರು. ಈ ತೆರನಾದ ಸುರೂಪಣೆ (improvization) ಅವರ ವ್ಯಕ್ತಿತ್ವದ ಪ್ರಧಾನ ಲಕ್ಷಣವಾಗಿತ್ತು. ಉಳಿದೆಲ್ಲ ಅಂಶಗಳಲ್ಲಿ ಅವರ ವ್ಯಕ್ತಿತ್ವದ ಪ್ರಧಾನ ಲಕ್ಷಣ ನಾವು ಮಾಮೂಲಾಗಿ ಕಲ್ಪಿಸಿಕೊಳ್ಳುವ ವಿಜ್ಞಾನಿಯದಕ್ಕಿಂತಲೂ ಹೆಚ್ಚಾಗಿ ಕಲಾವಿದನದಾಗಿತ್ತು. ಉದಾಹರಣೆಗೆ, ಒಳ್ಳೆಯ ಸಿದ್ಧಾಂತವೊಂದಕ್ಕೆ ಇಲ್ಲವೇ ಒಳ್ಳೆಯ ಕೆಲಸವೊಂದಕ್ಕೆ ಲಭಿಸಬಹು ದಾದ ಪರಮಪ್ರಶಂಸೆ ಎಂದರೆ ಅದು ಸಮರ್ಪಕವಾಗಿದೆ ಎಂಬುದಲ್ಲ ; ಬದಲು ಸುಂದರವಾಗಿದೆ ೧. ಕಾರ್ನಿಲಿಯಸ್ ಲ್ಯಾಂಕ್ಲೋಸ್