ಈ ಪುಟವನ್ನು ಪರಿಶೀಲಿಸಲಾಗಿದೆ

ಜಿ. ಟಿ. ನಾರಾಯಣರಾವ್ (೧೯೨೬-೨೦೦೮)

ಮಡಿಕೇರಿಯ ಜಿ. ಟಿ. ನಾರಾಯಣರಾವ್ ಮದ್ರಾಸು ವಿಶ್ವ ವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಗಳಿಸಿ (೧೯೪೭) ಮದ್ರಾಸು, ಮಂಗಳೂರು, ಮಡಿಕೇರಿ ಮತ್ತು ಬೆಂಗಳೂರು ನಗರಗಳಲ್ಲಿಯ ವಿವಿಧ ಕಾಲೇಜುಗಳಲ್ಲಿ ಗಣಿತೋಪನ್ಯಾಸಕರಾಗಿ (೧೯೪೭-೬೯) ಮತ್ತು ಅದೇ ಅವಧಿಯಲ್ಲಿ ಎನ್‌ಸಿಸಿ ಅಧಿಕಾರಿಯಾಗಿ (ಬಳ್ಳಾರಿಯಲ್ಲಿ ಎರಡು ವರ್ಷ ಪೂರ್ಣಾವಧಿಯ ಅಧಿಕಾರವೂ ಸೇರಿ) ಕೂಡ ಸೇವೆ ಸಲ್ಲಿಸಿದ್ದರು. ೧೯೬೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಹ್ವಾನ ಮನ್ನಿಸಿ ಅಲ್ಲಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕತ್ವ ವಹಿಸಿಕೊಂಡರು. ವಯಸ್ಸು ೬೦ ತುಂಬಿದಾಗ ಸೇವಾ ನಿಯಮಾನುಸಾರ ವೃತ್ತಿಯಿಂದ ನಿವೃತ್ತರಾದರು (೧೯೮೬). ವಿದ್ಯಾರ್ಥಿ ದಿನಗಳಂದು ಆರಂಭವಾದ ಕನ್ನಡದಲ್ಲಿ ಕಗ್ಗ ಹೊಸೆವ ಗೀಳು ಮುಂದೆ ಸಣ್ಣ ಕಥಾರಚನೆಯತ್ತ ಹೊರಳಿ ಉಭಯ ಕ್ಷೇತ್ರಗಳಲ್ಲಿಯೂ ಭ್ರಮನಿರಸನಗೊಂಡು ೧೯೪೯ರ ಸುಮಾರಿಗೆ ಕನ್ನಡ ಜನಪ್ರಿಯ ವಿಜ್ಞಾನ ಲೇಖನ ಬರವಣಿಗೆಯಲ್ಲಿ ಸ್ವಂತ ಅಭಿವ್ಯಕ್ತಿ ಮಾಧ್ಯಮವನ್ನು ಕಂಡುಕೊಂಡಿತು. ಇತ್ತ ಹುಟ್ಟಿನಿಂದಲೇ ಅಂಕುರಿಸಿದ್ದ ಸಂಗೀತ ಪ್ರೇಮ ಕ್ರಮೇಣ ವರ್ಧಿಸಿ ಸಂಗೀತ ಶ್ರವಣ ಇವರ ಅತ್ಯಂತ ಪ್ರೀತಿಯ ಹವ್ಯಾಸವೇ ಆಗಿತ್ತು. ಎಂದೇ ಇವರ ಬಾಳಿನ ಸೂತ್ರ,/ “ಸಂಗೀತವೆನ್ನುಸಿರು, ಸಾಹಿತ್ಯವೆನ್ನೊಡಲು, ವಿಜ್ಞಾನವೆನ್ನಶನ, ಅಧ್ಯಾತ್ಮದೆಡೆ ಗಮನ.” ಇಲ್ಲಿಯ ತನಕ ಇವರ ಸುಮಾರು ೭೦ ಕೃತಿಗಳೂ, ಅಸಂಖ್ಯಾತ ಲೇಖನಗಳೂ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿವೆ. ಗಮನಾರ್ಹವಾದ ಕೆಲವು: ಐನ್‌ಸ್ಟೈನ್ ಬಾಳಿದರಿಲ್ಲಿ, ಸುಬ್ರಹ್ಮಣ್ಯನ್ ಚಂದ್ರಶೇಖರ್, ವೈಜ್ಞಾನಿಕ ಮನೋಧರ್ಮ, ಎನ್‌ಸಿಸಿ ದಿನಗಳು, ಮುಗಿಯದ ಪಯಣ (ಆತ್ಮಚರಿತ್ರೆ, ೨೦೦೬), ಸಂಗೀತ ರಸನಿಮಿಷಗಳು. ಇಂಗ್ಲಿಷ್ ಕೃತಿಗಳು: Scientific Temper, With The Great Minds, Crossing the Dateline.

***

೧೯ನೇ ಶತಮಾನದ ಉದ್ದಾಮ ವಿಜ್ಞಾನಿಗಳು ಕಂಡುಹಿಡಿದ ತಥ್ಯಗಳು ನ್ಯೂಟನ್ ನಿರ್ಮಿಸಿದ “ವಿಶ್ವ'ವನ್ನು ಕದಲಿಸಿ ಭೌತಶಾಸ್ತ್ರಪ್ರಪಂಚವನ್ನು ಗೊಂದಲದಲ್ಲಿ ಕೆಡಹಿದ್ದಾಗ ಐನ್‌ಸ್ಟೈನರು ಹೊಸದೊಂದು ಕಾಣೆಯ ಸೂತ್ರಕ್ಕೆ ವಿಶ್ವವನ್ನು ಒಳಪಡಿಸಿ 'ಅನರ್ಥ'ಗಳಿಗೆ 'ಅರ್ಥ'ದಾನ ಮಾಡಿದರು. ಅವರ ವಿಶೇಷ ಸಾಪೇಕ್ಷತಾ ಸಿದ್ಧಾಂತ ಮತ್ತು ಅನಂತರ ರೂಪಿಸಿದ ಸಾರ್ವತ್ರಿಕ ಸಾಪೇಕ್ಷತಾಸಿದ್ಧಾಂತವನ್ನು ಎಷ್ಟು ಮಟ್ಟಿಗೆ ವಿಜ್ಞಾನವೆಂದು ಹೇಳಬಹುದೋ ಅಷ್ಟೇ ಮಟ್ಟಿಗೆ 'ದರ್ಶನ'ವೆಂದೂ ಕರೆಯಬಹುದು. ಪದಾರ್ಥ ಮತ್ತು ಶಕ್ತಿಯನ್ನು ಕಾಲ ಮತ್ತು ದೇಶವನ್ನು ಒಂದೇ ಮಹಾ'ಋತ'ದ ಅಂಕೆಯಲ್ಲಿ ನೆಲೆಗೊಳಿಸಿದ ಅವರ ಕಾರ್ಯ ಕ್ವಾಂಟಮ್ ಭೌತಶಾಸ್ತ್ರದಿಂದ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ಬಗೆಯನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತ್ರತವಾಗಿ ವಿವೇಚಿಸಿದ್ದಾರೆ.

––ಮುನ್ನುಡಿಯಿಂದ


ರೂ.೭೦

ಅತ್ರಿ ಬುಕ್ ಸೆಂಟರ್
೪ ಶರಾವತಿ ಕಟ್ಟಡ ಬಲ್ಮಠ ಮಂಗಳೂರು ೫೭೫ ೦೦೧
ದೂರವಾಣಿ ೦೮೨೪ ೨೪೨೫೧೬೧, ೨೪೯೨೩೯೭