ಈ ಪುಟವನ್ನು ಪ್ರಕಟಿಸಲಾಗಿದೆ

ಮೊರೆಹೊಗಲಿ? ಪುಸ್ತಕವನ್ನೆ? ಅದೂ ಆಯಿತು. ಒಣ ಪುಸ್ತಕಕ್ಕೂ ಚಿಗುರು ಜ್ಞಾಪಕಕ್ಕೂ ಎಲ್ಲಿಯ ಸಾಟಿ ! ಅಮ್ಮ, ಅಣ್ಣ, ಲಲಿತ ನಾಡಿದ್ದು ಊರಿಗೆ ಹೋಗುವರು. ಮನೆಯಲ್ಲಿ ನಾನು ಮಾತ್ರ. ಜ್ಞಾಪಕರ ಹಬ್ಬ-ನನ್ನನ್ನು ಕುಯಿದು ತಿನ್ನಬಹುದು. ವಿಶ್ವನಿಯಮವೇ ಹೀಗೇನು ? ಕಷ್ಟ-ಎತ್ತ ನೋಡಿದರೂ ಕಷ್ಟ. ಯಾವನಿಗೂ ಸುಖವಿಲ್ಲ. ನನಗೂ ಒಂದು ತರದ ಕಷ್ಟ ಬೇಡವೆ ? ಬೇಕು! ಹಾಗಾದರೆ ನಾನೇಕೆ ದುಃಖಿಸಲಿ? ಹೇಳಿದರೆ ಪ್ರಯೋಜನವೇನು? ಸುಮ್ಮನಿರುವುದೇ ಮೇಲೆಂದು ತೋರುವುದು. ಆದರೆ ಸುಮ್ಮನೆಂತಿರಲಿ?

೩-೬-೨೮

ಮನೆಯವರೆಲ್ಲರೂ ಊರಿಗೆ ಹೊಗಿರುವರು. ಮನೆಯಲ್ಲಿ ನಾನೂ ಅಕ್ಕ ಇಬ್ಬರೇ. ಅಕ್ಕನಿಗೆ ಮನೆಗೆಲಸ, ಅದು ಮುಗಿದೊಡನೆ ರಾಮಾಯಣ. ನನಗೆ ಸದಾ ನೆನಪಿನ ಹಬ್ಬ . . ಮರೆಯಲು ನೆನಸಿದಂತೆಲ್ಲಾ ಹೆಚ್ಚುತ್ತಿರುವ ನೆನಪು.. ನಿನ್ನೆ ತಾನೆ ಅವನ ಕಾಗದವು ಬಂದಿದೆ. ಎಂತಹ ಒರಟುಒಕ್ಕಣೆ .. ಪಾಪ ! ನನ್ನ ಹೃದಯಾಂತರಾಳದಲ್ಲಿ ಉರಿಯುತ್ತಿರುವ ಬೆಂಕಿಯನ್ನು ಅವನು ಹೇಗೆ ತಾನೆ ತಿಳಿಯಬಲ್ಲನು? ಅವನ ಕಾಗದವು ಒರಟಾದರೂ ಅದರಲ್ಲಿ ಸವಿ ಇತ್ತು. 'ತುಟಿಗಳು ಡೊಂಕಾದರೂ ಒಲವಿನ ಮುತ್ತು- ಆ ಮುತ್ತಿನ ನಲಿವು ಡೊಂಕೇ?' ಅವನನ್ನು ಪ್ರೀತಿಸುವ ನನಗೆ ಅವನ ಕಾಗದವು ಒರಟಾದರೂ ಸವಿ ಕಮ್ಮಿಯಾಗುವುದೇ ?

ಅವನು ವಾರಕ್ಕೊಮ್ಮೆ ನನಗೆ ಬರೆಯುವನು. ಪ್ರತಿದಿನ, ಪ್ರತಿ ನಿಮಿಷ ಅವನ ಕಾಗದ ಬಂದರೂ ನನಗೆ ತೃಪ್ತಿಯಿಲ್ಲ. ಇನ್ನು ವಾರಕ್ಕೊಂದು ಬಾರಿ ಬರೆಯುವ ನಾಲ್ಕು ಗೆರೆಗಳಿಂದ ನನ್ನ ಹೃದಯದ ತಾಪವು ಶಾಂತವಾಗುವುದೇ ? ಏನನ್ನು ಯೋಚಿಸುತ್ತಿರುವೆ ಎಂದು ಅಕ್ಕ ಕೇಳುತ್ತಾಳೆ. ನಾನೇನೆಂದು ಪ್ರತ್ಯುತ್ತರ ಕೊಡಲಿ? ಸುಳ್ಳು ಹೇಳಲೇ? ಸ್ವಾಭಾವಿಕವಾಗಿ ನಾನು ಸುಳ್ಳು ಹೇಳುವುದು ಅಪರೂಪ.

೯೯