ಈ ಪುಟವನ್ನು ಪ್ರಕಟಿಸಲಾಗಿದೆ

ರಾತ್ರಿ ಊಟವಾಯಿತು. ಕೃಪಾ ಅಡಿಕೆಯನ್ನು ತಂದಿಟ್ಟುಕೊಂಡು ತಿನ್ನುತ್ತಾ 'ನೀನೇಕೆ ತೆಗೆದುಕೊಳ್ಳುವುದಿಲ್ಲ ಸರಸೀ,' ಎಂದಳು. ನಾನೆರಡು ಎಲೆಗಳಿಗೆ ಸುಣ್ಣ ಹಾಕಿ ಒಂದನ್ನು ಬಾಯಲ್ಲಿಟ್ಟುಕೊಂಡೆ. ಅಷ್ಟರಲ್ಲಿ ಅವನೂ ಅಲ್ಲಿಗೆ ಬಂದ. ಕೃಪೆಯು ಅಡಕೆಲೆಯ ತಟ್ಟೆಯನ್ನು ಒಳಗಿಡಲು ಹೋದಾಗ ನನ್ನ ಕೈಲಿದ್ದ ಎಲೆಯನ್ನು ನಾನವನ ಕೈಗಿತ್ತೆ. ಆಗವನು ನನ್ನ ಕೈಗಳೆರಡನ್ನೂ ಹಿಡಿದುಕೊಂಡು 'ಕ್ಷಮೆಯ ಗುರುತೇ ಇದು?' ಎಂದು ಕೇಳಿದ. 'ಅಪರಾಧ ಮಾಡಿದರಲ್ಲವೇ ಕ್ಷಮೆ?' ಎಂದು ನಾನಂದೆ. ಅವನು ನನ್ನ ಮಾತು ಕೇಳಿ 'ಸರಸ, ದೇವರು ನಿನ್ನನ್ನು ಕಾಪಾಡಿ-ಇದೇ ನನ್ನ ಪ್ರಾರ್ಥನೆ' ಎಂದು ಹೇಳಿ ನನ್ನೆರಡು ಕೈಗಳನ್ನೂ ತನ್ನ ಕಣ್ಣುಗಳಿಗೊತ್ತಿಕೊಂಡು ಹೊರಗೆ ಹೊರಟು ಹೋದ.

ಮರುದಿನ ಬೆಳಗ್ಗೆ ನಾನು ಮುಖ ತೊಳೆಯುವುದಕ್ಕೆ ಹೋದಾಗ ಅವನು ಮಲ್ಲಿಗೆಯ ಮಂಟಪದ ಹತ್ತಿರ ನಿಂತಿದ್ದ. ನನ್ನನ್ನು ನೋಡಿ 'ಹೂ ಕುಯಿದು ಕೊಡಲೇ ಸರಸ' ಎಂದು ಕೇಳಿದ. ನಾನು ಮುಖ ತೊಳೆದುಕೊಳ್ಳುವಾಗ ಅವನು ಹೂವೆಲ್ಲಾ ಕುಂದು ಒಂದು ಎಲೆಯ ದೊನ್ನೆಯಲ್ಲಿಟ್ಟು ಮುಖ ತೊಳೆದೊಡನೆ ನನ್ನ ಕೈಗೆ ಕೊಟ್ಟ.. ನಾನೇನು ಹೇಳಬೇಕೆಂದು ತೋರಲಿಲ್ಲ...ಅವನ ಮುಖವನ್ನು ನೋಡಿದೆ.. ನಟ್ಟ ದೃಷ್ಟಿಯಿಂದ ನನ್ನನ್ನು ನೋಡುತ್ತಾ 'ಸರಸಿ, ಹತ್ತು ಗಂಟೆಗೆ ನಾನು ಹೊರಡುವೆನು. ನಿನ್ನನ್ನು ಬಿಟ್ಟು ಹೇಗಿರಲಿ ಹೇಳು ? ಕಾಗದ ಬರೆಯುವಿಯಾ?' ಎಂದು ಕೇಳಿದ. ನನಗೆ ಮಾತನಾಡಲಾಗಲಿಲ್ಲ. ಕಣ್ಣೀರು ತುಂಬಿ ಕಣ್ಣೀ ಕಾಣಿಸಲಿಲ್ಲ. ಆಗವನು ತನ್ನ ಕೈಚೌಕದಿಂದ ನನ್ನ ಕಣ್ಣುಗಳನ್ನೊರಸಿ 'ಅಳಬೇಡ ಸರಸಾ ನೀನತ್ತರೆ ನನಗೆ ಬಹಳ ದುಃಖವಾಗುವುದು. ನಿನ್ನ ಪ್ರತಿಯೊಂದು ತೊಟ್ಟು-ಕಣ್ಣೀರೂ ನನ್ನ ಹೃದಯವನ್ನು ಚುಚ್ಚುವದು-ಕಾಗದವನ್ನು ಬರೆಯುತ್ತೇನೆಂದು ನಗುತ್ತಾ ಹೇಳು' ಎಂದ. ಅದಕ್ಕೆ ನಾನೇನು ಹೇಳಿದೆನೋ ಅದೀಗ ನನಗೆ ಜ್ಞಾಪಕವಿಲ್ಲ. ಏನಾದರೇನು, ನಾನು ಏನೆಂದರೇನು ? ಅವನು ನನ್ನನ್ನು ಪ್ರೀತಿಸುತ್ತಾನೆ ಅದಕ್ಕಿಂತ ಹೆಚ್ಚು ನನಗೆ ಇನ್ನೇನು ಬೇಕು?

೧೦೩