ಈ ಪುಟವನ್ನು ಪ್ರಕಟಿಸಲಾಗಿದೆ

ಮುಗಿಯುವಾಗ ಮನೆಯೊಂದು ಹೊಸ ಕಳೆ ತಳೆದಿತ್ತು. ವಾಣಿಗಂತೂ ರೂಪ ಬದಲಾದ ತನ್ನ ಮನೆಯನ್ನು ನೋಡಿ ಹಿಡಿಸಲಾರದಷ್ಟು ಆಶ್ಚರ್ಯ-ಆನಂದ.

ಅವಳದು ಜನ್ಮತಃ ದಾಸ ಪ್ರವೃತ್ತಿ. ಯಾವ ಕೆಲಸವನ್ನಾದರೂ ನಾಳೆ ಮಾಡಿದರಾಯ್ತು ಎನ್ನುವ ಪ್ರಕೃತಿ. ನಾಳೆ ನಾಳೆ ಎಂದು ಯಾವಾಗಲೂ ಅವಳ ಕೆಲಸಗಳು ನಾಳೆಗಾಗಿ ಬಿಟ್ಟಿರುತ್ತಿದ್ದುವು. ಅದರಿಂದ ಸಹಜವಾಗಿಯೇ ಅವಳ ಮನೆ ಎಂದೂ ಅಂದಿನಷ್ಟು ಸುಂದರವಾಗಿ ತೋರಿರಲಿಲ್ಲ.

ಆ ದಿನ ಸಾಯಂಕಾಲ ರತ್ನ ಸ್ವಲ್ಪ ಬೇಗನೆ ಬಂದ. ಅವನಿಗೂ ತನ್ನ ಮನೆಯ ಸುವ್ಯವಸ್ಥಿತ ರೀತಿಯನ್ನು ನೋಡಿ ಬಹಳ ಆಶ್ಚರ್ಯವಾಗದಿರಲಿಲ್ಲ. ಆದರೆ ಕಾಫಿ ಕುಡಿದು ಮುಗಿಯುವ ಮೊದಲೇ ವಾಣಿಯ ಬಾಯಿಯಿಂದ ಮನೆಯ ಆ ರೂಪಿಗೆ ಕಾರಣಳಾದವಳು ನೆರೆಮನೆಯ ಇಂದು ಎಂದು ತಿಳಿಯಿತು. ತಿಳಿದು-'ನನ್ನ ವಾಣಿಯೂ ಗೃಹಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುವಂತಾಗಿದ್ದರೆ' ಎಂದೆನ್ನಿಸಿತವನಿಗೆ. ತನ್ನ ಬಯಕೆಗಳು ಪೂರ್ತಿಯಾಗುವದು ತಾನು ಬಯಸಿದಷ್ಟು ಸುಲಭವಲ್ಲ ಎಂಬುದು ರತ್ನನ ಐದು ವರ್ಷಗಳ ದಾಂಪತ್ಯ ಜೀವನದ ಅನುಭವ. ಆದರೆ ಇನ್ನೂ ರತ್ನನಿಗೆ 'ಹಾಗಾಗಿದ್ದರೆ-ಹೀಗಾಗಿದ್ದರೆ' ಎಂದು ಅಂದುಕೊಳ್ಳದಿರುವಷ್ಟು ನಿರಾಸೆಯಾಗಿರಲಿಲ್ಲ.

ರತ್ನ ಕೆಲಸ ತೀರಿಸಿ ದಣಿದು ಬರುವಾಗ ವಾಣಿ ಇಂದುವಿನ ಮನೆಯಲ್ಲಿ ಹರಟೆಹೊಡೆಯುತ್ತ ಕೂತುಬಿಡುತ್ತಿದ್ದಳು. ರತ್ನ ಬಂದ ಮೇಲೆ ಓಡಿ ಹೋಗಿ ಮತ್ತೆ ಕಾಫಿ ಮಾಡಬೇಕು. ವಾಣಿಯ ಕಾಫಿಯಾಗುವುದರೊಳಗೆ ರತ್ನನನ್ನು ಕೂಗಲು ಯಾರಾದರೂ ಬಂದೇಬರುವರು. ಎಷ್ಟೋ ಸಾರಿ ಅವನು ಏನನ್ನೂ ತೆಗೆದುಕೊಳ್ಳದೆ ಹಾಗೆಯೇ ಹೊರಟುಹೋಗಿ ಬಿಡಬೇಕಾಗುತ್ತಿತ್ತು. ಆ ಮೇಲೆ ಸ್ವಲ್ಪ ಹೊತ್ತು 'ಅಯ್ಯೋ, ಬೇಗನೆ ಕಾಫಿ ತಿಂಡಿ ಮಾಡಿಟ್ಟಿರಬೇಕಿತ್ತು' ಎಂದು ವಾಣಿ ನೊಂದುಕೊಳ್ಳುತ್ತಿದ್ದಳೇನೋ ನಿಜ; ಆದರೆ ಅದು ಸ್ವಲ್ಪ ಹೊತ್ತು ಮಾತ್ರ. ಮರುದಿನ ಯಥಾ