ಈ ಪುಟವನ್ನು ಪ್ರಕಟಿಸಲಾಗಿದೆ

೧೬

ತುಂಬುವ ಮೊದಲು ಇಂದುವಿನ ಏಕಾಂತ ಜೀವನ ಸಂಪೂರ್ಣ ಬದಲಾಯಿತು. ಬದಲಾಯಿತು ಅಷ್ಟೆ-

ಅದರಿಂದವಳಿಗೆ ಹೆಚ್ಚಿನ ಶಾಂತಿ ಯಾ ಸುಖದೊರೆಯಿತೆಂದರೆ ತಪ್ಪಾಗುವುದು. ಆ ಮನೆಗೆ ಮೊದಲು ಬಂದಾಗಿದ್ದ ತನ್ನ ಮನೆ, ತಾನು, ಸ್ವಸಂತ್ರವಾಗಿ ಸುಖವಾಗಿದ್ದೇನೆ ಎಂಬ ಅಭಿಮಾನವೂ ತೃಪ್ತಿಯೂ ಈಗಿರಲಿಲ್ಲ. ಅಷ್ಟರಲ್ಲೇ ನಾನು ಸುಖವಾಗಿದ್ದೇನೆ-ಇರಬಲ್ಲೆ ಎಂದಿದ್ದ ಅವಳ ಭಾವನೆಯು ವಾಣಿ ರತ್ನರ ಸಂಸಾರವನ್ನು ನೋಡಿದಂದಿನಿಂದ ತನ್ನ ಜೀವನದಲ್ಲಿ ಒಂದು ದೊಡ್ಡ ಅಭಾವವಿದೆ ಎಂಬುದನ್ನು ಕಂಡುಕೊಂಡಿತ್ತು. ಮೊದಲು ಬಲು ಅಸ್ಪಷ್ಟವಾಗಿ ಮೊಳೆತ ಈ ಭಾವನೆಯು ವಾಣಿ ರತ್ನರಲ್ಲಿ ಹೆಚ್ಚಿನ ಬಳಕೆಯಾದಂತೆಲ್ಲಾ ಚಿಗುರುತ್ತಲೇ ಇತ್ತು. ಮತ್ತೆ ರತ್ನನೂ ಸದಾ ಇವಳನ್ನು ಯೋಚಿಸುತ್ತಿದ್ದುದರಿಂದಲೇನೋ ? ಅವಳ ಮನವು ಇಚ್ಛೆಗೆ ವಿರೋಧವಾಗಿ ರತ್ನನ ಕಡೆ ಒಲಿಯತೊಡಗಿತು.

ಇಂದು ರತ್ನರ ಮನಸ್ಸಿನಲ್ಲಿ ಒಬ್ಬರನೊಬ್ಬರಿಗೆ ತಿಳಿಯದಂತೆ ಈ ರೀತಿಯ ಭಾವನೆಗಳು ಮಡಿ ಮೊಳೆಯುತ್ತಿದ್ದಾಗ, ವಾಣಿಗೆ ಅಕಸ್ಮಾತ್ತಾಗಿ ತೌರುಮನೆಗೆ ಹೋಗುವ ಪ್ರಸಂಗ ಬಂದಿತು. ಬೇಸಿಗೆಯಲ್ಲಿ ಒಂದು ತಿಂಗಳು ರಜಾಪಡೆದು ಗಂಡಹೆಂಡಿರಿಬ್ಬರೂ ಜೊತೆಯಾಗಿ ಹೋಗುವುದೆಂದು ಮೊದಲೇ ನಿಶ್ಚಯವಾಗಿತ್ತು, ಆದರೆ ಅನಿರೀಕ್ಷಿತವಾಗಿ ಅವಳ ತಾಯಿಗೆ ಖಾಯಿಲೆ ಎಂದು ಅವಳಣ್ಣ ಅವಳನ್ನು ಕರೆದುಕೊಂಡು ಹೋಗಲು ಬಂದುಬಿಟ್ಟ. ರತ್ನನಿಗೆ ಆಗ ರಜಾ ಸಿಕ್ಕುವಂತಿರಲಿಲ್ಲ. ಆದುದರಿಂದ ವಾಣಿಯೊಬ್ಬಳೇ ಅಣ್ಣನೊಡನೆ ಹೊರಟು ಹೋದಳು.

ಹುಚ್ಚು ಹುಡುಗಿ ! ಹೋಗುವಾಗ ಇಂದುವಿನೊಡನೆ 'ಇಂದೂ, ಅಮ್ಮನಿಗೆ ಕಾಯಿಲೆ; ವಾಸಿಯಾದೊಡನೆಯೇ ಬಂದುಬಿಡುತ್ತೇನೆ. ನಾನು ಬರುವ ತನಕ ಸ್ವಲ್ಪ ನಮ್ಮನೆಕಡೆ ನೋಡಿಕೊ' ಎಂದಳು. ರತ್ನನೂ ಅಲ್ಲೇ ನಿಂತಿದ್ದ. ಇಂದು ಬೇರೇನೂ ಹೇಳಲಾರದೆ 'ಹೂಂ' ಎಂದಳು. ಆದರೆ ವಾಣಿಯೊಡನೆ 'ಹೂಂ' ಎಂದುದೆಷ್ಟೋ ಅಷ್ಟೇ-ಅವಳು ಹೊರಟುಹೋದ ತರುವಾಯ ಇಂದು ಆ ಕಡೆ ಹೋಗಲಿಲ್ಲ. ಅವಳು ಸ್ವಭಾವತಃ