ಈ ಪುಟವನ್ನು ಪ್ರಕಟಿಸಲಾಗಿದೆ
ಸನ್ಯಾಸಿ ರತ್ನ

ರಾಜ, ರತ್ನ ಇಬ್ಬರೂ ಸ್ನೇಹಿತರು. ಒಂದೇ ಕ್ಲಾಸಿನಲ್ಲಿ ಅವನಿಬ್ಬರೂ ಓಡುತ್ತಿದ್ದುದು. ಒಂದೇ ಹಾಸ್ಟೆಲಿನಲ್ಲಿ ಅವರಿಬ್ಬರಿಗೂ ವಾಸ. ಇಬ್ಬರ ಪ್ರಾಯವೂ ಒಂದೇ; ಜಾತಿಯ ಒಂದೇ. ರಾಜ ತಂದೆತಾಯಿಯರಿಗೊಬ್ಬನೇ ಮಗ. ರತ್ನನಿಗೆ ಒಬ್ಬಳು ತಂಗಿ ಇದ್ದಳು. ಒಂದು ವಿಷಯ ಹೊರತು ಬೇರೆಲ್ಲಾ ವಿಷಯಗಳಲ್ಲಿ ಇವರಿಬ್ಬರು ಒಂದು.

ರಾಜನಿಗೆ ರತ್ನನ ತಂಗಿಯನ್ನು ಕೊಡುವುದು ನಿಶ್ಚಯವಾಗಿತ್ತು. ಚಿಕ್ಕಂದಿಸಿಂದಲೂ ರಾಜನಿಗೆ ರತ್ನನ ತಂಗಿ ಸೀತೆಯಲ್ಲಿ ಪ್ರೀತಿ. ಅವಳ ತಂದೆತಾಯಿಯರೂ ರಾಜನಿಗೆ ಮಗಳನ್ನು ಕೊಡಲು ಅನುಮತಿಸಿದ್ದರು. ಸೀತೆಗೂ ಒಪ್ಪಿಗೆ ಇತ್ತು. ಬೇರೇನೂ ಅಭ್ಯಂತರಗಳಿಲ್ಲದುದರಿಂದ ರಾಜ ಬಿ. ಎ. ಆದೊಡನೆಯೇ ಮದುವೆ ಎಂದು ನಿಶ್ಚಯವಾಗಿತ್ತು.

ಈ ವಿಷಯದಲ್ಲಿ ರತ್ನನ ಒಪ್ಪಿಗೆ ಇಲ್ಲ. ರಾಜನಿಗೆ ತಂಗಿಯನ್ನು ಕೊಡಬಾರದೆಂದಲ್ಲ-ರಾಜನೂ ತನ್ನಂತೆಯೇ ಮದುವೆಯಾಗಬಾರದೆಂದು, ಮದುವೆಯ ಸುದ್ದಿ ಎತ್ತಿದರೆ ರತ್ನನಿಗೆ ಕೋಪ ಬರುತ್ತಿತ್ತು. ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡು 'ಥು' ಎನ್ನುತ್ತಿದ್ದ. 'ನಾನು ಸನ್ಯಾಸಿಯಾಗುತ್ತೇನೆ-ಸದಾ ಬ್ರಹ್ಮಚಾರಿಯಾಗಿರುತ್ತೇನೆ. ನನ್ನೊಡನೆ ಮದುವೆಯ ಮಾತೆತ್ತಬೇಡಿ' ಎನ್ನುವುದು-ರತ್ನನ ಉತ್ತರ ಮದುವೆಯ ಪ್ರಸ್ತಾಪಕ್ಕೆ. ಇದೊಂದು ವಿಷಯಕ್ಕಾಗಿ ರಾಜ-ರತ್ನರಿಗೆ ಪ್ರತಿದಿನ ವಾಗ್ವಾದ.