ಈ ಪುಟವನ್ನು ಪ್ರಕಟಿಸಲಾಗಿದೆ

೭೮

ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟ ವ್ಯಾಘ್ರನು ಹೊಂಚುತಿರುವನು
ನಟ್ಟ ನಡುವಿರು ಕಂದನೆ

ತಬ್ಬಲಿ ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ


ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆ ಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನ ಪಡೆವೆನು
ಎನ್ನು ತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

೩.ಮಾನವಮಿ ಪದ


ಆಶ್ವಯುಜ ಶುದ್ದ ಮಾನವಮಿ ಬರಲೆಂದು
ಶಾಶ್ವತದಿ ಹರಸಿದೆವು ಬಾಲಕರು ಬಂದು
ಈಶ ನಿನಗತ್ಯಧಿಕ ಸುಖವ ಕೊಡಲೆಂದು
ಲೇಸಾಗಿ ಹರಸಿದೆವು ಬಾಲಕರು ಬಂದು