ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

ಕನ್ನಡ ನಾಡು ಎಚ್ಚತ್ತು ಕೂಡಿಕೊಳ್ಳುತ್ತಿರುವ ದೊಡ್ಡ ಸಡಗರದಲ್ಲಿ ಕನ್ನಡ ನಾಡಿನ ಹೆಮ್ಮೆಯನ್ನು ಹಾಡಿರುವ ಕವಿಗಳಿಂದ ಆಯ್ದ ತಿರಳೊಂದನ್ನು ಹಂಚಬೇಕೆಂಬ ಬಯಕೆ ಬಹು ಕಾಲದಿಂದ ಕಡೆದು ಕುದಿಯುತ್ತಿತ್ತು. ಕನ್ನಡ ತಾಯ ಪಾದದಲ್ಲಿ ಹಿಂದಿನ ಹಿರಿಯ ಕವಿಗಳೂ ಈಗಿನ ಕವಿಗಳೂ ಒಪ್ಪಿಸಿದ ಹೂವುಗಳನ್ನು ಬಾಚಿ ತೆಗೆದು, ಮೂವತ್ತು ವರ್ಷಗಳಿಂದ ನನ್ನ ಎದೆಯಲ್ಲಿ ತುಂಬಿ ಚಿಮ್ಮುತ್ತಿದ್ದುವುಗಳನ್ನು ಇಲ್ಲಿ ದಂಡೆಗಟ್ಟಿದ್ದೇನೆ. (ನನ್ನವೂ ಕೆಲವು ಹೂವನ್ನು ನನ್ನೊಡನೆ ಈ ಆಸೆಯನ್ನು ಕಾರ್ಯರೂಪಕ್ಕೆ ತಂದ ನನ್ನ ಕೆಳೆಯರು ಇದರಲ್ಲಿ ಸೇರಿಸಿದ್ದಾರೆ. ಅದು ಅವರ ಪ್ರೀತಿ.) ತಾಯಡಿಯ ಹೂವುಗಳಿವು : ನಾನು ನಾರು: ಕನ್ನಡದ ಸತ್ತ್ವವೂ ತಿರುಳೂ ಪೋಣಿಕೆಯ ಕಣ್ಣು, ಕನ್ನಡಿಗರ, ಅದರಲ್ಲೂ ಮಕ್ಕಳ, ಹೆಣ್ಣು ಮಕ್ಕಳ, ಒಕ್ಕಲು ಮಕ್ಕಳ ಮೆಚ್ಚುಗೆಯೇ ನಾನು ಎದಿರುನೋಡುವ ದೊಡ್ಡ ಫಲ. ಅವರಲ್ಲೆಲ್ಲಾ ಕನ್ನಡದ ಹೆಮ್ಮೆ ಹರಡಲಿ. ಅವರಿಂದ ಕನ್ನಡ ಬೆಳಗಲಿ.

೭ನೆಯ ಶತಮಾನದಿಂದ ೨೦ನೆಯ ಶತಮಾನದ ಇಂದಿನವರೆಗಿನ ಕನ್ನಡ ಬೆಳೆಯನ್ನು (೧) ಶಾಸನಗಳು, (೨) ಪೂರ್ವ ಸಾಹಿತ್ಯ, (೩) ನಾಡಪದಗಳು, (೪) ಇಂದಿನ ಹೊಸ ಕವಿತೆ-ಈ ನಾಲ್ಕು ತೆನೆಗಳಲ್ಲಿ ತೋರಿಸಿದ್ದೇನೆ. ಕಾಲ ಕಾಲದ ಭಾಷೆಯ ಮಾರ್ಪಾಟುಗಳು, ಛಂದಸ್ಸಿನ ಬಗೆಬಗೆಯ ಕುಣಿತ, ಕನ್ನಡ ನಾಡಿನ ಸೊಬಗು, ಹೃದಯ, ಧರ್ಮಗಳು, ಮಹಾವ್ಯಕ್ತಿಗಳು, ಜೀವಗುರಿಗಳು, ಬೇರೆ ಬೇರೆ ಪ್ರಾಂತಪ್ರೇಮಗಳು- ಒಂದು ಮಾತಿನಲ್ಲಿ, ಹಿಂದಿನ ಮಹತ್ತ್ವದ ಸಂಸ್ಕಾರ ಮತ್ತು ಸಂಸ್ಕೃತಿ, ಇಂದಿನ ಮಹತ್ವದ ಧ್ಯೇಯ ಮತ್ತು ಯೋಜನೆಗಳು, ನಾಡ ನಾಡಿಯ ಮಿಡಿತ- ನನಗೆ ತಿಳಿದಂತೆ ಯಾವ ಯಾವುದು ಕನ್ನಡ ಬಾವುಟ ದಡಿಯಲ್ಲಿ ಹೊಮ್ಮಿದ ಎರಡು ಸಾವಿರ ವರ್ಷದ ಜೀವಾಳವೋ ಅದನ್ನೆ ತೆನೆ ಗಳಾಗಿ ಆಯ್ದು ತೆಕ್ಕೆಮಾಡಿ ಕನ್ನಡಿಗರ ಕೈಗೆ ಒಪ್ಪಿಸಿದ್ದೇನೆ. ಇದರಲ್ಲಿ ಹೆಸರು ಹೇಳಬಹುದಾದ ಪ್ರತಿಯೊಬ್ಬ ಕನ್ನಡ ಕವಿಯೂ ಬಂದಿರುವನೆಂದಾಗಲಿ, ಬಂದಿರುವ ಕವಿಯ, ಇಲ್ಲ, ಕಾವ್ಯದ ಉತ್ತಮ ಭಾಗವನ್ನೆ ಎಲ್ಲ ಕಡೆಯೂ ಆಯ್ಕೆ ದೆಯೆಂದಾಗಲಿ ಹೇಳುವುದಕ್ಕಿಲ್ಲ. ಈ ವರ್ಷದ ಪರಿಷತ್ತಿನ ವಸಂತೋತ್ಸವದ ಹೊತ್ತಿಗೆ ಸಿದ್ದ ಪಡಿಸುವ ಆತುರದಿಂದಲೂ ಕಡಮೆ ತಿಳಿವಳಿಕೆಯ ದೋಷದಿಂದಲೂ ಬಗೆಬಗೆಯ ಕುಂದು ಕೊರತೆಗಳುಂಟೆಂಬುದನ್ನು ಬಲ್ಲೆ. ಅವನ್ನು ತಿದ್ದಿ ದಾರಿತೋರಬೇಕೆಂದು ಕನ್ನಡ ಪ್ರೇಮಿಗಳಲ್ಲಿ ಬಿನ್ನೈಸಿ ಕೊಳ್ಳುತ್ತೇನೆ.

ಈ ಸಂಗ್ರಹ ಕಾರ್ಯದಲ್ಲಿ ನೆರವಾದ ನನ್ನ ಶಿಷ್ಯರು ಶ್ರೀ||ವಿ. ಸೀತಾ ರಾಮಯ್ಯನವರನ್ನೂ ಶ್ರೀ|| ಕೆ. ವಿ. ರಾಘವಾಚಾರ್ಯರನ್ನು ಎಂದೆಂದೂ ಸಂತೋಷದಿಂದ ನೆನೆಯುತ್ತೇನೆ. ಅವರಿಲ್ಲದೆ ಇದು ನನ್ನ ಮನಸ್ಸಿನಲ್ಲಿಯೇ