ಈ ಪುಟವನ್ನು ಪ್ರಕಟಿಸಲಾಗಿದೆ

೧೧೦



ಕೋಡಿಯಿ೦ದುದುರಿ ಹನಿ ಹರಳಾಯಿತು
ಮೋದವೀಯಲಿಂದು.
ಅಣ್ಣ ತಮ್ಮದಿರೆ, ಅಕ್ಕ ತಂಗಿಯರೆ,
ಹೇಳುವಿರೀ ಹೆಸರ;
ಚೆನ್ನವಾಗಿಹುದು ಈಗಳು ಹೆಸರು;
ಬಾಳು ಅಂತೆ ಇಹುದೇ?
ಚೆಲುವು ಹೆಸರುಗಳ ನುಡಿವ ನಾಲಗೆಯ
ಬಾಳುವೆ ಬರಿದಾಯ್ತೇ.
ಕಳೆದುಕೊಂಡೆವೇ ಹಿರಿಮೆಯ ಚಂದ್ರನ,
ಮೂಳವಾಯ್ತೆ, ಬದುಕು.
ಬನ್ನಿ ಅಣ್ಣದಿರೆ ಬನ್ನಿ ತಮ್ಮದಿರೆ
ಬನ್ನಿ ಸೋದರಿಯರೆ;
ಬನ್ನಿರಿ ಎಲ್ಲರು ಆಣೆ ಇಟ್ಟುಕೊಳ್ಳಿ
ಚೆನ್ನ ಮಾಡಿ ಬಾಳ,
ಹೆಸರಿನ ಚೆಲುವನು ನಾಡಿನ ಬದುಕಲಿ
ಮರಳಿ ತೊಳೆಯಿಸಿರಿ;
ಒಸಗೆಯ ತನ್ನಿರಿ ತಾಯ್ಯಾ ಡಿರವಿಗೆ,
ತರಿಸಿ ನಗೆಯ ಮೊಗಕೆ.
ದುಡಿಯುವೆವೆನ್ನಿರಿ ದುಡಿಯಿರಿ ಬನ್ನಿರಿ
ನಾಡಿಗೆ ನುಡಿಗಾಗಿ;
ತೊಡಿರಿ ಹಟವನು ಕೊಡಿ ಕೈಯಾಣೆಯ;
ಆಡುವ ನುಡಿ ನಡೆಸಿ,
ಕತ್ತಲು ಮುಚ್ಚಿಹ ಬಾಳಿರುಳಾಳಕೆ
ಆಸೆಯ ಚಂದ್ರನನು
ಮತ್ತೆ ತನ್ನಿರಿ, ಬೆಳಕಲಿ ನಡೆಯಿರಿ;
ಹೇಸಿ ಸೋ೦ಬತನವ.
ಮುತ್ತು ಮಾಣಿಕವ ಜೋಳದ ತೆರದಲಿ
ಹರಿಯಿಸಿ ನಾಡಿನಲಿ;
ಉತ್ತಮ ಚರಿತೆಯ ಚಿತ್ರ ಪತಾಕೆಯ
ಮೆರೆಯಿಸಿ ಬಾನಿನಲಿ.

ಶ್ರೀನಿವಾಸ

(ಮಾಸ್ತಿ ವೆಂಕಟೇಶ ಐಯಂಗಾರ್)