ಈ ಪುಟವನ್ನು ಪ್ರಕಟಿಸಲಾಗಿದೆ
೧೧೪
ಪುಣ್ಯನಾಗುವೆ ಇಲ್ಲಿ;
ಪೂರ್ಣನಾಗುವೆ ಇಲ್ಲಿ;
ಬೆಟ್ಟದಲ್ಲಿ.
ಬೆಂಗದಿರ ಮುಳುಗುತಿರೆ
ಬೈಗುಗೆಂಪಳಿಯುತಿರೆ,
ಮುಚ್ಚಂಜೆ ಮುಸುಗುತಿರೆ
ಕತ್ತಲೆಯು ಕವಿದುಬರೆ
ಪಯಣಿಗನೆ, ಬಾ, ಇಲ್ಲಿ
ನಿಂತು ನೋಡು!
ಮೂಡಲನು, ಪಡುವಲನು,
ತೆಂಕಲನು, ಬಡಗಲನು,
ಗಗನವನು, ಭೂಮಿಯನು,
ಮನದಣಿಯೆ, ಕಣ್ ತಣಿಯೆ,
ಎದೆಯರಳಿ ಮೈಮರೆಯೆ,
ತೂಣಗೊಂಡವನಂತೆ
ನಿಂತು ನೋಡು!
ಕಂಬನಿಗಳಿಳಿಯುತಿರೆ,
ಮೈನವಿರು ನಿಮಿರುತಿರೆ,
ಎದೆಯಲರು ಅರಳುತಿರೆ,
ಮೇಣಂತರಂಗದಲಿ
ಹೊಸ ಬೆಳಕು ಮೂಡಿಬರೆ,
ಬಣ್ಣನೆಗೆ ಬಾರದಿಹ
ಚೆಲುವನವಲೋಕಿಸಲು
ಮಾತು ಮೈದೆಗೆಯುತಿರೆ,
ಬಾಳೆಲ್ಲ ಹಿಗ್ಗಿ ಬರೆ,
ದೇಹಪಂಜರದಲ್ಲಿ
ಜೀವ ಹೋರಾಡುತಿರೆ,
ಬಾ ಇಲ್ಲಿ, ನೇಹಿಗನೆ,
ಮೌನದಲಿ ಮಮತೆಯಲಿ
ನಿಂತು ನೋಡು!