೧೩೨
ಸೆರೆಯಿಟ್ಟು ಕಾಡಿದಾ ಖೂಳನನು ಕೊಂದು,
ಅರಸರರಸಿಯರೆಲ್ಲ ಹರಸುತಿರೆ, ಬಂದು,
ಕೈ ಹಿಡಿದ ರಾಣಿಯನು ನಗುತ ಕರೆತಂದು,
ಮುದ್ದಾದ ಮೈಸೂರ ತಾವರೆಯ ತಂದು,
ದೇವಿ ಚಾಮುಂಡಾಂಬೆಯೆದಿರಿನಲಿ ನಿಂದು,
ಕೈ ಮುಗಿದು ಬೇಡಿದನು ಯದುರಾಯನಂದು :
ಕಾಯಿ, ತಾಯಿ, ಕೃಪೆಯ ತೋರಿ,
ನಿನ್ನ ಮಗನನು;
ನಲುಗಿ, ನಿನ್ನ ನೆರಳ ಸೇರಿ
ನಲಿವ ಹೆಣ್ಣನು.
ಧರದೊಲವ ನಮಗೆ ನೀಡು,
ಸತ್ಯ ನಿಲಿಸುವಂತೆ ಮಾಡು,
ಹಿರಿಯ ಮೈತ್ರಿಗಳನ್ನು ಕೂಡು,
ಕರುಣದಿಂದ ಬಿಡದೆ ನೋಡು,
ಕಾಯಿ, ತಾಯಿ, ನಮ್ಮ ನಾಡು,
ನಮ್ಮ ಮನೆಯನು,
ನಡಸಿ, ಬೆಳಸಿ, ಹಿರಿಮಮಾಡು
ನಮ್ಮ ಮನೆಯನು.
೫
ಇಂತೆಂದು ಬೇಡಿದನು ಮೈಸೂರ ಮನೆತನದ ಮೊದಲಿಗನು ಬಾಗಿ,
ಮನಮುಳುಗಿ ಭಕ್ತಿಯಲಿ. ಚಿತ್ರದಾಳುಗಳಂತೆ ನಿಶ್ಯಬ್ದವಾಗಿ,
ಮೂಡುವಚ್ಚರಿ ಹದವ ಹಾರುತ್ತ, ಸಭೆಯೆಲ್ಲ, ಎವೆ ಹೊಯ್ಯದಲ್ಲಿ
ನಿಂದಿಹುದು, ಅಹ! ಅಲುಗಿತಭಯಹಸ್ತದ ಹೂವು; ಸಿಡಿದು ಮುಡಿಯಲ್ಲಿ
ನೆಲಸಿದುದು, ಯದುರಾಯ ಮಕುಟದಲಿ, ದೇವಿಕೆರೆ ಸಂಪಗೆಯದೊಂದು.
ಕೂಗಿದಳು ನೆರವಿಯಲಿ ಮುತೈದೆ, ಬೆದರಿದಳು ಮೈ ಮೇಲೆ ಬಂದು,
ಕೆದರಿದಳು ಬಿರಿದಲೆಯ ನರೆನವಿರ, ಬಿರುಬಿರನೆ ಕಿರುಹಿ, ನಕ್ಕು,
ಕದಡುಬಗೆ ತಿಳಿಯಾಗಿ, ದೂರದೆಸೆ ಬಳಿಯಾಗಿ, ಮು೦ದಹುದ ಹೊಕ್ಕು,
ನುಡಿದಳವಳಂದು-
ಹಣುದುಕಿ ನೋಟವನು ನುಡಿದಳವಳಿಂದು-
ಗಿರಿಯ ನೆತ್ತಿಯ ಮೇಲೆ ಗಂಭೀರ ಘೋಷದಲಿ ಗುಂಪಿನಲಿ ಬಂದು
ಮಳೆ ಕುಡಿವ ಹಕ್ಕಿವೊಲು ಕುಡಿಯುತಿರೆ ಕನ್ನಡದ ಕಲಿಗಳಾ ಸಿರಿಯ,
ಸಾವನದ ಮುತ್ತೈದೆ ಸವಿಗರೆದು ನುಡಿದಳಾ ಮೈಸೂರ ಸಿರಿಯ,
ಕನ್ನಡದ ನಾಡ ಸಿರಿಯ.