ಈ ಪುಟವನ್ನು ಪ್ರಕಟಿಸಲಾಗಿದೆ

೩೦

ಪುಣ್ಯ ಮಿದು ಕೃಷ್ಣ ಚರಿತಾಮೃತಂ ಸುಕವೀಂದ್ರ
ಗಣ್ಯಮಿದು ಶೃ೦ಗಾರ ಕುಸುಮತರು ತುರುಗಿದಾ
ರಣ್ಯಮಿದು ನವರಸ ಪ್ರೌಢಿ ಲಾಲಿತ್ಯ ನಾನಾ ವಿಚಿತ್ರಾರ್ಥಂಗಳ
ಗಣ್ಯಮಿದು ಶಾರದೆಯ ಸಮ್ಮೋಹನಾಂಗ ಲಾ
ವಣ್ಯಮಿದು ಭಾವಕರ ಕಿವಿಗೊಡವಿಗೊದಗಿದ ಹಿ
ರಣ್ಯಮಿದು ಭೂತಳದೊಳೆನೆ ವಿರಾಜಿಪುದು ಲಕ್ಷ್ಮೀ ಪತಿಯ ಕಾವ್ಯ ರಚನೆ

ರತ್ನಾಕರ

ಕಬ್ಬಿಗರೋದು ಗಬ್ಬನ ಹಾಡುಗಬ್ಬವ
ಕಬ್ಬದೊಳೊರೆವರಿವೆರಡು
ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ
ಕಬ್ಬ ಹೇಳೆಲೆ ಸರಸ್ವತಿಯೆ

ಅಯ್ಯಯ್ಯಾ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚದಿಯೆನೆ ತೆಲುಗ
ಅಯ್ಯಯ್ಯ ಎಂಚಪೊರ್ಲಾ೦ಡೆ೦ದು ತುಳುವರು
ಮೆಯ್ಯುಬ್ಬಿ ಕೇಳಬೇಕಣ್ಣಾ

ರಳಕುಳ ಶಿಥಿಲ ಸಮಾಸ ಮು೦ತಾದವ
ರೊಳಗಿಲ್ಲಿ ಕೆಲವುಳ್ಳ ರುಂಟು
ಕೆಲವಿಲ್ಲಾದರು ಇಲ್ಲವೇಕೆ೦ದರವರ ಕೋ
ಟಲೆಯೇಕೆ ಹಾಡುಗಬ್ಬದೊಳು

ಸಕಲ ಲಕ್ಷಣವು ವಸ್ತುಕಕೆ ವರ್ಣಕಕಿಷ್ಟು
ವಿಕಳವಾದರು ದೋಷವಿಲ್ಲ
ಸಕಲ ಲಕ್ಷಣಕಾಗಿ ಬಿರುಸುಮಾಡಿದರೆ ಪು
ಸ್ತಕದ ಬದನೆಕಾಯಹುದು