ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ


ಸರಿಹೋಲುವ ಸಂತರೂ ಕನ್ನಡಿಗರಲ್ಲಿ ಇಲ್ಲದಿಲ್ಲ. ಪ್ರಭುವು ಕ್ರಿಸ್ತನನ್ನೂ, ಬಸವಣ್ಣನು ಸೇಂಟಪಾಲನನ್ನೂ, ಚೆನ್ನ ಬಸವನು ಲ್ಯೂಥರನನ್ನೂ ಹೋಲುವನು ಎನ್ನಲಡ್ಡಿ ಯಿಲ್ಲ. ಮಹಾರಾಷ್ಟ್ರದ ಸಂತರೆಡೆ ಸಾರಿದರೆ ಅಲ್ಲಿಯ ಈ ಬಗೆಯ ಹೋಲಿಕೆಯು ಕಾಣದಿರದು. ಬಸವನು ತುಕಾರಾಮನಿಗೆ ಸಮಾನನು. ಚೆನ್ನ ಬಸವನ ಸಂಘಟನಾಶಕ್ತಿಯ, ಪ್ರಚಾರಪ್ರಭುತ್ವವೂ ರಾಮದಾಸರ ಆ ಬಗೆಯ ಸಾಮರ್ಥ್ಯವನ್ನು ಹೋಲುವದು. ಜಗನ್ನಾಥದಾಸರು ಹಾಗು ನಿಜಗುಣಿಗಳು ಪಾಂಡಿತ್ಯದಲ್ಲಿಯೂ ಸಾಹಿತ್ಯದ ವಿಪುಲತೆಯಲ್ಲಿಯೂ ಏಕನಾಥರಿಗೆ ಸಮಾನರು. ಕನಕದಾಸನು ಒಂದು ಬಗೆಯಿಂದ ಚೋಖಾಮೇಳನನ್ನು ಹೋಲು ವನು. ಅನುಭಾವದಲ್ಲಿ, ಕಾವ್ಯ ನಿರ್ಮಿತಿಯಲ್ಲಿ ಅವರೀರ್ವರಲ್ಲಿ ಅಂತರವಿದೆ ನಿಜ! ಆದರೂ ಅವರಿಬ್ಬರೂ ಒಳ್ಳೆಯ ಅನುಭಾವಿಗಳೆಂಬುದರಲ್ಲಿ ಸಂದೇಹವಿಲ್ಲ. ಕಾಖಂಡಿಕೆಯು ಮಹಿಪತಿಸ್ವಾಮಿಗಳು ಗ್ಯಾರದ ಮಹಿಪತಿಗಳನ್ನು ಹೋಲುವರು. ಇಬ್ಬರೂ ಹಿರಿಯ ವಿದ್ವಾಂಸರು, ದೊಡ್ಡ ಕವಿಗಳು, ಮಹಾನ್ ಅನುಭಾವಿಗಳು. ದುರ್ದೈವದಿಂದ ಇಬ್ಬರ ಸಾಹಿತ್ಯದ ಪ್ರಕಾಶನವೂ ಅಭ್ಯಾ ಸವೂ ಇನ್ನೂ ಸರಿಯಾಗಿ ಆಗಿರುವುದಿಲ್ಲ; ಆದುದರಿಂದ ಇಬ್ಬರೂ ತುಂಬ ಅಜ್ಞಾತರಾಗಿಯೇ ಉಳಿದಿರುವರು. ಇದೇ ಬಗೆಯ ಹೋಲಿಕೆಯನ್ನು ಹಿಂದೀ ಹಾಗೂ ಕನ್ನಡ ಸಂತರಲ್ಲಿಯೂ ಕಾಣಬಹುದು. ಹಿಂದೀ ಸಾಹಿತ್ಯದಲ್ಲಿ ತುಲಸೀ ದಾಸರಿಗಿರುವ ಸ್ಥಾನವು ಕನ್ನಡದಲ್ಲಿ ಪುರಂದರದಾಸರಿಗುಂಟು. ಸಾಹಿತ್ಯದ ದೃಷ್ಟಿಯಿಂದ ಇಬ್ಬರೂ ಸಮಾನರಿದ್ದರೂ, ಅನುಭಾವದಲ್ಲಿ ಪುರಂದರದಾಸರು ತುಲಸೀದಾಸರನ್ನೂ ಮೀರಿರುವರೆನ್ನಬಹುದು. ತುಲಸೀದಾಸರಂತೆ ಅವರು ಸಗುಣಭಕ್ತಿಯಿಂದ ತಮ್ಮ ಸಾಧನವನ್ನು ಪ್ರಾರಂಭಿಸಿದರೂ ಮುಂದವರು ಹಿರಿಯ ಯೋಗಿಗಳಾದರು. ವಿಜಯದಾಸರು ಸೂರದಾಸರನ್ನೂ, ಕನಕದಾಸರು ರೈದಾಸರನ್ನೂ, ಶರೀಫ ಸಾಹೇಬರು ಕೆಲ ಅಂಶಗಳಲ್ಲಿ ಕಬೀರದಾಸರನ್ನೂ, ಸರ್ಪಭೂಷಣರು ಚರಣದಾಸರನ್ನೂ ಹೋಲುವರು.


"ಈ ರೀತಿ ಕನ್ನಡ ಅನುಭಾವಿಗಳು ಜಗತ್ತಿನ ಅನುಭಾವಿಗಳಲ್ಲಿ ಬಹು ಉನ್ನತವಾದ ಸ್ಥಾನವನ್ನು ಪಡೆದಿರುವರು. ಜಗತ್ತಿನ ಅನುಭಾವಕ್ಕೆ ಒಳ್ಳೆಯ ಬೆಲೆಯುಳ್ಳ ಕಾಣಿಕೆಯನ್ನು ಸಲ್ಲಿಸಿರುವರು," ಎಂದು ಡಾ| ರಾನಡೆಯವರು ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಮಾಡಿರುವರು.