ಈ ಪುಟವನ್ನು ಪರಿಶೀಲಿಸಲಾಗಿದೆ
ಕಮಲಕುಮಾರಿ


ವೃದ್ಧೆಯು ಅಳಲು ತೊಡಗಿದಳು,-“ನಿನ್ನ ಹಣೆಯಲ್ಲಿ ಇಷ್ಟು ಬರೆದಿದ್ದಿತೆ?

ಕಮಲೆ! ನೀನಾದರೋ ನನ್ನ ಎಳೆಕೂಸು ನೀನು ಬೇಡಿ ಬೇಡಿ ತಂದುದನ್ನು ನಿನ್ನನ್ನೇ ಪಾಲಿಸಬೇಕಾಗಿದ್ದ ನಾನು ಉಣಬೇಕಾಗಿ ಬಂದಿತೆ" ಎಂದುಕೊಂಡಳು.

ಕಮಲೆ; -ಅಷ್ಟು ನನಗೆ ಸಾಧ್ಯವಾದುದೆಲ್ಲಿ? ನಡೆದು ನಡೆದು ನನ್ನ ಕದಗಳು ಗಾಯವೊಡೆದಿವೆ. ಆದರೂ ಹೊಟ್ಟೆಯ ತುಂಬ ಅನ್ನಕ್ಕೂ ಗತಿದೋರದಾದುದು.

ನಿನ್ನ ಈ ಎರಡೇ ಎಲವುಗಳು ಸರಿಯಾಗಿ ಉಂಡಿರದೆ, ಇನ್ನಷ್ಟು ದಿನ ಬದುಕಿ ಕೊಂಡಿರಲಾಪುವು.

ವೃದ್ಧೆ-ಅಷ್ಟನ್ನವು ನನಗೆ ಹೆಚ್ಚೇ ಸರಿ, ನಾನೇನು ಬಲಿಯನ್ನು ತಿಂಬಾಕೆಯೆ?

ಕಮಲೆ-ನಾನಾದರೆ ಪುನಃ ಭಿಕ್ಷೆಯನ್ನೆತ್ತಿಕೊಂಡು, ಮತ್ತೆ ಉಣ್ಣುವೆನು.

ವೃದ್ಧೆ-ಈಗತಾನೆ ಆ ಕಾಳುಗಳನ್ನು ಬೇಯಿಸಿ, ಅಡುಗೆಮಾಡುವೆನು, ನೀನೊಮ್ಮೆ ಬಾಯ್ತುಂಬ ಉಂಡು ಆ ಮೇಲೆ ಮರುಳಿ ಭಿಕ್ಷೆಗೆಂದು ತೆರಳ ಬಹುದು,

ಕಮೆಲೆ-ಅದಾಗದು

ವೃದ್ಧೆ-ಹಾಗಿದ್ದರೆ, ನಾವಿಬ್ಬರೂ ಇಷ್ಟನ್ನ ಊಣ್ಣುವ.

ಈ ಸಂಭಾಷಣೆಯು ಇಲ್ಲಿಗೆ ಮುಗಿದ ಮೇಲೆ, ಆ ಕೆಲವೇ ಕಾಳುಗಳನ್ನು ಬೇಯಿಸಿದುದಾಯ್ತು. ಕಮಲೆಯು ಸ್ನಾನವನ್ನು ಮುಗಿಸಿಕೊಂಡಳು. ಆಕೆಗಿರುವುದು ಆದೊಂದೇ ಭಿನ್ನವಸ್ತ್ರ ; ಅದನ್ನೇ ಬಿಸಿಲಿನಲ್ಲಿಯೊಣಗಿಸಿಕೊಂಡು, ಮರಳಿ ತಾಯಿಯಿದ್ದೆಡೆಗೆ ಬಂದಳು.

ಕಮಲೆಯ ಮನಸ್ತುಷ್ಟಿಗೆಂದು ಮಾತ್ರ ವೃದ್ಧೆಯು ಊಟಕ್ಕೆ ಕುಳಿತುಕೊಂಡಿದುದಲ್ಲದೆ-ಆಹಾರವು ಅವಳ ಗಂಟಲನ್ನು ದಾಟಿದುದಿಲ್ಲ. ತಾನೇಕೆ ಮಾತೆಯ ಜತೆಯಲ್ಲಿ ಊಟಕ್ಕೆ ಕುಳಿತು ಕೊಂಡನೆಂದು ಕಮಲೆಯು ವ್ಯಥೆಪಟ್ಟಳು, ಹೇಗೆಯೋ ಭೋಜನವು ಮುಗಿದಿತು.